ಉಚ್ಚಾಟನೆಯ ಹುಚ್ಚಾಟ!

Picture of Cinibuzz

Cinibuzz

Bureau Report

ಟೇಶಿ ವೆಂಕಟೇಶ್ ಎನ್ನುವ ವಿಚಿತ್ರ ಎಲಿಮೆಂಟೊಂದು ಗಾಂಧಿನಗರದಲ್ಲಿದೆ. ಒಂದು ಕಾಲಕ್ಕೆ ರಾಜೇಂದ್ರ ಸಿಂಗ್ ಬಾಬು ಜೊತೆ ಕೆಲಸ ಮಾಡಿತ್ತಂತೆ. ತಾನೇ ಸ್ವತಂತ್ರ ನಿರ್ದೇಶಕನಾಗಿ ಸೃಷ್ಟಿಸಿರುವ ಕಲಾಕೃತಿಗಳ ಹೆಸರು ಕೇಳಿದರೇನೆ ಪ್ರೇಕ್ಷಕ ಮಹಾಪ್ರಭುಗಳು ಎದೆ ಹಿಡಿದುಕೊಂಡು ಕುಸಿದುಬೀಳುತ್ತಾರೆ. ಬೆಂಗಳೂರ್ ಬಂದ್, ಮೊಂಡ, ಬೆಸ್ಟ್ ಫ್ರೆಂಡ್, ಒಲವಿನ ಓಲೆಯಂಥಾ ಭಯಾನಕ ಸಿನಿಮಾಗಳನ್ನು ಕನ್ನಡ ಕುಲಕೋಟಿಗೆ ಕೊಡುಗೆಯಾಗಿ ನೀಡಿದ್ದು ಶ್ರೀಯುತರೇ. ಮೊಂಡ ಎನ್ನುವ ಸಿನಿಮಾ ರಿಲೀಸಾದಾಗ ಕರ್ನಾಟಕದ ಪ್ರಗತಿಪರ ಚಿಂತಕರು, ಮಹಿಳಾ ಹೋರಾಟಗಾರರು ಟೇಶಿ ಮತ್ತು ಸಾಯಿಕುಮಾರ್ ವಿರುದ್ಧ ಕೈಯಲ್ಲಿ ಕೆರ ಹಿಡಿದು ಮುರಕೊಂಡು ಬಿದ್ದಿದ್ದರು. ಅಷ್ಟು ಹೀನ ದೃಶ್ಯಗಳು, ಡೈಲಾಗುಗಳೆಲ್ಲಾ ಆ ಚಿತ್ರದಲ್ಲಿದ್ದವು. ಯಾಕಾದರೂ ಈ ಸಿನಿಮಾದಲ್ಲಿ ನಟಿಸಿದೆನೋ ಅಂತಾ ಡೈಲಾಗ್ ಕಿಂಗು ಸಾಯಿಕುಮಾರುಗಾರು ತಲೆತಲೆ ಬಡಿದುಕೊಂಡಿದ್ದರು.

ಇದುವರೆಗೂ ಟೇಶಿ ನಿರ್ದೇಶಿಸಿರುವ ಯಾವ ಸಿನಿಮಾಗಳು ಬರ್ಖತ್ತಾಗಿಲ್ಲ. ಕನ್ನಡದ ಸಿನಿಮಾ ಪ್ರೇಕ್ಷಕರ ಮಟ್ಟಿಗಂತೂ ಈತ ಪರಿಚಿತನಲ್ಲ. ಆದರೆ ಚಿತ್ರರಂಗದ ವಲಯದಲ್ಲಿ ಟೇಶಿ ತನ್ನ ಸಿನಿಮಾಗಳ ಮೂಲಕ ಹೆಸರು ಮಾಡಿದ್ದೇನೂ ಇಲ್ಲವಾದರೂ ಕಿತಾಪತಿಗಳ ಕಾರಣಕ್ಕೇ ಬಲು ಫೇಮಸ್ಸು. ಸಿನಿಮಾಗಳ ಟೈಟಲ್ ರಿಜಿಸ್ಟರ್ ಮಾಡಿಟ್ಟುಕೊಂಡು ಮತ್ತಿನ್ಯಾರೋ ಸೀರಿಯಸ್ಸಾಗಿ ಸಿನಿಮಾ ಮಾಡಲು ಬಂದಾಗ ಅಡ್ಡಗಾಲಾಕುವುದು, ವಾಣಿಜ್ಯ ಮಂಡಳಿಯ ಮೇಲೆ ಕಂಪ್ಲೇಂಟು ಕೊಡೋದು ಹೀಗೆ ನಾನಾ ಕಾರಣಗಳಿಗಾಗಿ ಟೇಶಿ ವೆಂಟೇಶ್ ಎನ್ನುವ ಹೆಸರು ಚಾಲ್ತಿಯಲ್ಲಿರುತ್ತದೆ. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಕಾರ್ಯಕಾರಿ ಸಮಿತಿ ಸದಸ್ಯನ ಸ್ಥಾನದಲ್ಲಿ ಕೂರಲು ಸತತ ಏಳು ಬಾರಿ ಸ್ಪರ್ಧಿಸಿ ಸೋತು, ಕಡೆಯಲ್ಲೊಮ್ಮೆ  ಗೆಲುವು ಕಂಡಿದ್ದ ಸಾಹಸಿ ಈತ.

ಇಂಥಾ ಹಿನ್ನೆಲೆಗಳಿರುವ ಟೇಶಿ ವೆಂಕಟೇಶ್ ಈಗ ನಿರ್ದೇಶಕರ ಸಂಘದ ಸ್ವಯಂ ಘೋಷಿತ ಅಧ್ಯಕ್ಷನಾಗಿ ವಕ್ಕರಿಸಿದ್ದಾರೆ. ಮಾತ್ರವಲ್ಲ, ತನ್ನ ಸರ್ವಾಧಿಕಾರಿ ಧೋರಣೆಗಳಿಂದ ಇಡೀ ನಿರ್ದೇಶಕ ಸಮುದಾಯದ ವಿರೋಧಕ್ಕೆ ಕಾರಣರಾಗಿದ್ದಾರೆ. ಆರಂಭದಲ್ಲಿ ಯಾರೆಲ್ಲಾ ಬೆಂಬಲಿಸಿದ್ದರೋ ಅವರೇ ಇವತ್ತು ಯಂಕ್ಟನ ಮಂಗಾಟಕ್ಕೆ ಬೇಸ್ತುಬಿದ್ದು ಸಿಡಿಸಿಡಿ ಎನ್ನುತ್ತಿದ್ದಾರೆ.

ಕನ್ನಡ ಚಿತ್ರರಂಗದ ಮಹತ್ವದ ಮೈಲಿಗಲ್ಲಿನಂತಿರೋ ಕರ್ನಾಟಕ ಚಲನಚಿತ್ರ ನಿರ್ದೇಶಕರ ಸಂಘ ಪುಟ್ಟಣ್ಣ ಕಣಗಾಲ್ ಮತ್ತು ಸಿದ್ದಲಿಂಗಯ್ಯನವರ ದೂರದೃಷ್ಟಿಯ ಫಲವಾಗಿ ೧೯೮೪ರಲ್ಲಿ ಅಸ್ತಿತ್ವಕ್ಕೆ ಬಂದಿತ್ತು. ಆಗಾಗ ಸ್ಥಗಿತಗೊಂಡು, ಇಟ್ಟಾಡುತ್ತಿದ್ದ ಸಂಘಕ್ಕೆ ೨೦೧೭ರಲ್ಲಿ ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ನಾಗೇಂದ್ರ ಪ್ರಸಾದ್, ಉಪಾಧ್ಯಕ್ಷರಾಗಿ ಸಾಧು ಕೋಕಿಲಾ, ರೂಪಾ ಅಯ್ಯರ್, ಖಜಾಂಚಿಯಾಗಿ ಟಿ.ಎನ್. ನಾಗೇಶ್, ನಾಗೇಂದ್ರ ಮಾಗಡಿ ಮತ್ತು ಶರಣ್ ಕಬ್ಬೂರು ಕಾರ್ಯದರ್ಶಿಗಳಾಗಿ ಆಯ್ಕೆಯಾಗಿದ್ದರು. ಮಳವಳ್ಳಿ ಸಾಯಿಕೃಷ್ಣ, ಕವಿರಾಜ್, ವೆಸ್ಲಿ ಬ್ರೌನ್, ಶಶಾಂಕ್ ರಾಜ್, ರವಿ ಶ್ರೀವತ್ಸ ಮುಂತಾದವರು ಕಾರ್ಯಕಾರಿ ಸಮಿತಿಯಲ್ಲಿದ್ದರು.  ನಡುವೆ ಎರಡು ವರ್ಷಗಳ ಕಾಲ ಸ್ಥಗಿತಗೊಂಡಿದ್ದ ಕರ್ನಾಟಕ ಚಲನಚಿತ್ರ ನಿರ್ದೇಶಕರ ಸಂಘಕ್ಕೆ ಜೀವಕಳೆ ಬಂದಿತ್ತು. ಎರಡು ವರ್ಷ ಎಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡಿದ್ದರು. ಆ ಸಮಿತಿಯ ಅಧಿಕಾರಾವಧಿ ಮುಗಿಯೋ ಹೊತ್ತಿಗೆ ಸಣ್ಣ ಮನಸ್ತಾಪಗಳೂ ಹುಟ್ಟಿಕೊಂಡಿದ್ದವು. ಆಗ ಅಲ್ಲಿ ಅತೃಪ್ತ ಸದಸ್ಯರನ್ನು ನೈಸು ಮಾಡಿಕೊಂಡು, ಪುಸಲಾಯಿಸಿ, ಚುನಾವಣೆಯೇ ಇಲ್ಲದೆ ತನ್ನಷ್ಟಕ್ಕೆ ತಾನೇ ಅಧ್ಯಕ್ಷನೆಂದು ಘೋಷಿಸಿಕೊಂಡವರು ಟೇಶಿ ವೆಂಕಟೇಶ್. ಸಾಮಾನ್ಯವಾಗಿ ಚಲನಚಿತ್ರ ನಿರ್ದೇಶಕರ ಸಂಘದ ಸಮಿತಿ ರಚನೆಯಾದಾಗ, ನೂತನ ಅಧ್ಯಕ್ಷರ ಸಮೇತ ಪೂರ್ತಿ ಕಮಿಟಿಯವರನ್ನು ಕರೆದು ಸನ್ಮಾನಿಸುವುದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಸಂಪ್ರದಾಯ. ಆದರೆ ಟೇಶಿ ವೆಂಕಟೇಶ್ ತಂಡಕ್ಕೆ ಅಂಥಾ ಯಾವ ಗೌರವಾದರಗಳೂ ಸಿಗಲಿಲ್ಲ. ಬದಲಿಗೆ ತನ್ನಷ್ಟಕ್ಕೆ ತಾನೇ ಪ್ರೆಸ್ ಮೀಟು ಮಾಡಿ ನಾನೇ ಅಧ್ಯಕ್ಷ ನಾನೇ ಅಧ್ಯಕ್ಷ ಅಂತಾ ಎದೆನಿಗುರಿಸಿದ್ದ.

ಇವತ್ತು, ಈತ ಯಾವ ಸೀಮೆ ಅಧ್ಯಕ್ಷ? ಸಂಸ್ಥೆಯ ನಿಯಮಾನುಸಾರ ಈತ ಆಯ್ಕೆಯೇ ಆಗಿಲ್ಲ. ಅಧ್ಯಕ್ಷ ಸ್ಥಾನದಲ್ಲಿ ಕೂರುವ ಯೋಗ್ಯತೆ ಕೂಡಾ ಈತನಿಗಿಲ್ಲ ಅಂತಾ ಇತರೇ ಸಿನಿಮಾ ನಿರ್ದೇಶಕರು ತಕರಾರು ತೆಗೆದಿದ್ದಾರೆ. ಇದು ನ್ಯಾಯಾಲಯದ ಮಟ್ಟಿಗೂ ಹೋಗಿ ಮುಟ್ಟಿದೆ. ಎಲೆಕ್ಷನ್ನಲ್ಲಿ ಸ್ಪರ್ಧಿಸದೇ ಅಧ್ಯಕ್ಷನಾದರೂ ಕಡೇ ಪಕ್ಷ ಟೇಶಿ ವೆಂಟಕೇಶ್ ನ್ಯಾಯ ನೀತಿಯಿಂದ ಕೆಲಸ ಮಾಡಿಕೊಂಡು ಹೋಗಿದ್ದರೆ, ಸಂಘದ ಹಿತಾಸಕ್ತಿಯನ್ನು ಕಾಯ್ದುಕೊಂಡಿದ್ದರೆ ಯಾವೊಬ್ಬರೂ ಚಕಾರವೆತ್ತುತ್ತಿರಲಿಲ್ಲ. ಮಾತೆತ್ತಿದರೆ ಸಂಘವಿರೋಧಿ ಚಟುವಟಿಕೆ, ಉಚ್ಛಾಟನೆ ಅಂತೆಲ್ಲಾ ಹುಚ್ಚುಚ್ಚಾಗಿ ಎಗರಾಡುವ ಟೇಶಿಯ ಪಡಪೋಶಿ ಆಟಕ್ಕೆ ಸಂಘದ ಸದಸ್ಯರೆಲ್ಲರೂ ತೀವ್ರವಾಗಿ ಪ್ರತಿರೋಧಿಸುತ್ತಿದ್ದಾರೆ. “ಎತ್ತಲೇ ನಿನ್ ಕಂತೆಯಾ… ಸಂಘದ ನಿಯಮಾವಳಿಯನ್ನೇ ಗಾಳಿಗೆ ತೂರಿ ಅಧ್ಯಕ್ಷ ಅನ್ನಿಸಿಕೊಂಡಿರುವ ನೀನ್ಯಾವನು ನಮ್ಮನ್ನು ಉಚ್ಚಾಟಿಸೋಕೆ” ಅಂತಾ ದನಿಯೆತ್ತಿದ್ದಾರೆ.

ಇವೆಲ್ಲದಕ್ಕೂ ಕಾರಣವಾಗಿರೋದು ಕರೋನಾ. ಇವತ್ತು ಇಡೀ ಮನುಕುಲ ಕೊವಿಡ್‌ನಿಂದ ಕಂಗಾಲಾಗಿದೆ. ಸಹಜವಾಗೇ ಕನ್ನಡದ ಸಿನಿಮಾ ನಿರ್ದೇಶಕರು ಕೂಡಾ ಭಯಂಕರ ತೊಂದರೆಗೆ ಸಿಲುಕಿದ್ದಾರೆ. ಕೆಲವಾರು ಹಿಟ್ ಸಿನಿಮಾಗಳನ್ನು ನೀಡಿರುವ ನಿರ್ದೇಶಕರು ಬಿಟ್ಟರೆ, ಬಹುತೇಕ ಡೈರೆಕ್ಟರುಗಳು ಸಂಪಾದನೆಯಿಲ್ಲದೆ ದಿನದೂಡುವುದು ಕಷ್ಟವಾಗಿದೆ. ಈ ಕಾರಣಕ್ಕೆ ಸಂಘದಿಂದ ಸಣ್ಣ ಮಟ್ಟದ ಸಹಾಯ ಬಯಸುತ್ತಿದ್ದಾರೆ. ಈ ಹೊತ್ತಿನಲ್ಲಿ ಸಹಪಾಠಿಗಳ ಕಷ್ಟಕ್ಕೆ ಸ್ಪಂದಿಸಬೇಕಿದ್ದ ಟೇಶಿ ತನ್ನಷ್ಟಕ್ಕೆ ತಾನು ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿರುವುದು ಎಲ್ಲರಲ್ಲೂ ಅಸಮಾಧಾನ ಸೃಷ್ಟಿಸಿದೆ. “ನೀವು ಮಾಡುತ್ತಿರುವ ಕೆಲಸ ಮೇಲ್ನೋಟಕ್ಕೆ ಸಂಘವಿರೋಧಿ ಚಟುವಟಿಕೆಯಂತೆ ಕಾಣುತ್ತಿದೆ. ನಿಮ್ಮನ್ನು ಸಂಘದ ಚಟುವಟಿಕೆಯಿಂದ ದೂರ ಇಡಲಾಗಿದೆ” ಎಂದು ರೂಪಾ ಅಯ್ಯರ್, ಮಳವಳ್ಳಿ ಸಾಯಿಕೃಷ್ಣ, ಧೀರೂ ಮುಂತಾದವರಿಗೆ ವಾಟ್ಸಪ್ಪಿನಲ್ಲೇ ಲೆಟರು ರವಾನೆ ಮಾಡಿಬಿಟ್ಟಿದೆ ಎಂಟೇಸಪ್ಪ!

ಎಂ.ಡಿ. ಕೌಶಿಕ್, ರೂಪಾ ಅಯ್ಯರ್, ನಾಗನಾಥ ಜೋಷಿ ಸೇರಿದಂತೆ ಸಾಕಷ್ಟು ಮಂದಿ ನಿರ್ದೇಶಕರು ಈ ಸಂಘದ ಸಾವಾಸವೇ ಬೇಡ ಅಂತಾ ತಾವೇ ಖುದ್ದಾಗಿ ನಿಂತು ಸಂಕಷ್ಟದಲ್ಲಿರುವ ಸದಸ್ಯರು ಮತ್ತಿತರ ಸಿನಿಮಾ  ಮಂದಿಗೆ ಸಹಕರಿಸುತ್ತಿದ್ದಾರೆ. ತಮ್ಮ ಕೈಲಾದ ಸಹಾಯ ಮಾಡುತ್ತಿದ್ದಾರೆ. ನಿರ್ದೇಶಕರ ಸಂಘದಲ್ಲಿ ಈ ಹಿಂದೆ ಇದ್ದ ಕಮಿಟಿ ಅಕ್ಷರಶಃ ಬೇಡಿ ತಂದು ಖಾತೆಗೆ ಜಮಾ ಮಾಡಿದ್ದ ದುಡ್ಡಲ್ಲಿ ಎರಡೆರಡು ಸಾವಿರ ರುಪಾಯಿ ಕೊಡಲು ಬಿಲ್ಡಪ್ಪು ಕೊಡುತ್ತಿರುವ ಟೇಶಿಯ ವರಸೆ ಕಂಡು ನಿರ್ದೇಶಕ ನಾಗೇಂದ್ರ ಅರಸ್, ಎಂ.ಡಿ ಶ್ರೀಧರ್ ಮುಂತಾದವರು ಲೆಫ್ಟು ರೈಟು ತಗೊಂಡಿದ್ದಾರೆ.

ಇನ್ನಾದರೂ ಕೆಲಸಕ್ಕೆ ಬಾರದ ಪೋಸು ಕೊಡದೆ ಸಂಘದ ಒಳಿತಿಗೆ ಟೇಶಿ ಮತ್ತವರ ಆಪ್ತರು ಶ್ರಮಿಸಲಿ. ಟೇಶಿ ಜೊತೆ ಬಿ.ಆರ್. ಕೇಶವರಂಥ ವಿದ್ಯಾವಂತ ನಿರ್ದೇಶಕರಿದ್ದಾರೆ. ಅವರಾದರೂ ಒಂಚೂರು ತಿಳಿಹೇಳಲಿ.  ಯಾವತ್ತೂ ಬಾರದ ಕೆಟ್ಟ ಕಾಲವಿದು. ಹಲವು ಸಿನಿಮಾ ನಿರ್ದೇಶಕರು ತೀರಾ ಊಟ-ಬಟ್ಟೆಗೂ ಒದ್ದಾಡುವ ಪರಿಸ್ಥಿತಿ ಎದುರಾಗಿದೆ. ಯಾರೋ ಕೊಡುವ ಫುಡ್ ಪ್ಯಾಕೆಟ್ಟು, ದಿನಸಿಗೆ ಇವರು ಕೈ ಒಡ್ಡಲು ಸಾಧ್ಯವಿಲ್ಲ. ಸ್ವತಃ ನಿರ್ದೇಶಕರ ಸಂಘದ ಮೂಲಕ ಎಲ್ಲರೂ ಒಟ್ಟಾಗಿ, ಸರ್ಕಾರ ಇನ್ನಿತರೆ ಸಂಘ ಸಂಸ್ಥೆಗಳಿಂದ ಹಣ ಇತ್ಯಾದಿಗಳನ್ನು ಸಂಗ್ರಹಿಸಿ ಹಂಚುವ ಕಾರ್ಯ ತುರ್ತಾಗಿ ನಡೆಯಬೇಕಿದೆ.

ಇನ್ನಷ್ಟು ಓದಿರಿ

Scroll to Top