ದರ್ಶನ್‌ ವೆಡ್ಡಿಂಗ್‌ ಪಾರ್ಟಿಯಲ್ಲಿ ಯಾರಿದ್ದರು?

Picture of Cinibuzz

Cinibuzz

Bureau Report

Mr. Rani_Kannada_Movie_Cinibuzz_Review_ArunkumarG_Kannada

ಇದೇ ಒಂದು ವರ್ಷಕ್ಕೆ ಮುಂಚೆ ಪವಿತ್ರಾ ಗೌಡ ಮತ್ತು ದರ್ಶನ್‌ ಪತ್ನಿ ವಿಜಯಲಕ್ಷ್ಮಿ ನಡುವೆ ಸೋಷಿಯಲ್‌ ಮೀಡಿಯಾದಲ್ಲಿ ಬಹಿರಂಗ ಸಮರವೇರ್ಪಟ್ಟಿತ್ತು. ಮದುವೆ ವಾರ್ಷಿಕೋತ್ಸವದ ಸಂದರ್ಭದಲ್ಲಿ ವಿಜಯಲಕ್ಷ್ಮಿ ಒಂದು ಪೋಸ್ಟ್‌ ಹಾಕಿದರೆ, ಅದಕ್ಕೆ ಪ್ರತಿಯಾಗಿ ಪವಿತ್ರಾ ಗೌಡ ದರ್ಶನ್‌ ಜೊತೆಗಿರುವ ಪೋಸ್ಟ್‌ ಹಾಕಿ ಮೆರೆಯುತ್ತಿದ್ದಳು. ಕಾನೂನಿನ ಪ್ರಕಾರ ಪತ್ನಿ ಅನ್ನಿಸಿಕೊಂಡಿದ್ದ ವಿಜಯಲಕ್ಷ್ಮಿ ಇದನ್ನೆಲ್ಲಾ ಕಂಡು ಅದೆಷ್ಟು ನೊಂದಿದ್ದರೋ, ಏನೋ? ವಿಜಯಲಕ್ಷ್ಮಿ ಹಾಕಿದ ಕಣ್ಣೀರು, ಹಿಡಿ ಶಾಪಗಳೆಲ್ಲಾ ಅದ್ಯಾವ ಸ್ಪೀಡಲ್ಲಿ ಕೆಲಸ ಮಾಡಿತ್ತು ಅಂದರೆ, ಒಂದೆರಡು ವಾರ ಕಳೆಯೋ ಹೊತ್ತಲ್ಲಿ ನಡೆಯಬಾರದ್ದೆಲ್ಲಾ ನಡೆದು ಹೋಗಿತ್ತು. ಲಂಗೂ ಲಗಾಮಿಲ್ಲದೇ ಆಡಬಾರದ ಆಟಗಳಾಡಿದ ಪವಿತ್ರಾ ಗೌಡ ಮಾಡಬಾರದ್ದನ್ನೆಲ್ಲಾ ಮಾಡಿಸಿ ದರ್ಶನ್‌ ಮತ್ತವರ ಸುತ್ತ ಇದ್ದ ಹುಡುಗರ ಬದುಕನ್ನು ಬೀದಿಗೆ ತಂದಳು. ಮಾಡಿದ ಕರ್ಮ ಸುಮ್ಮನೇ ಬಿಡತ್ತಾ? ಪವಿತ್ರಾ ಕೂಡಾ ಜೈಲೂಟ ಉಂಡುಬಂದಳು.

ದರ್ಶನ್‌ ಜೈಲಿಗೆ ಹೋದಮೇಲೆ ವಿಜಯಲಕ್ಷ್ಮಿ ಅಕ್ಷರಶಃ ಹೋರಾಟ ನಡೆಸಿದರು. ಯಾವ ಕೋನದಿಂದ ಯೋಚಿಸಿದರೂ ಹೊರಗೆ ಬರಲಾರದಷ್ಟು ಕಠಿಣವಾದ ಕೇಸುಗಳು ಬಿದ್ದಿದ್ದವು. ಪೊಲೀಸರು ಕರಾರುವಕ್ಕಾಗಿ ಫ‍್ರೇಮ್‌ ಮಾಡಿದ್ದರು. ಇನ್ನು ದರ್ಶನ್‌ ಗೆ ಜಾಮೀನು ಸಿಗುವ ಛಾನ್ಸೇ ಇಲ್ಲ ಎನ್ನುವಷ್ಟರ ಮಟ್ಟಿಗೆ ಪುಕಾರುಗಳೆದ್ದವು. ಒಂದು ಹಂತದಲ್ಲಿ ಕಾನೂನು ತಜ್ಞರೂ ಕೈಚೆಲ್ಲಿ ಕೂತರು. ಏನೇ ಆದರೂ ತನ್ನ ಗಂಡನಿಗೆ ಜಾಮೀನು ಸಿಗೋತನಕ ವಿಜಯಕ್ಷ್ಮಿ ಪಟ್ಟು ಬಿಡಲಿಲ್ಲ. ಸದ್ಯಕ್ಕೆ ದರ್ಶನ್‌ ಬೇಲ್‌ ತಗೊಂಡು ಹೊರಬಂದಿದ್ದಾರೆ. ಡೆವಿಲ್ ಸಿನಿಮಾ ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿದ್ದಾರೆ.

ಈ ನಡುವೆ ಮೊನ್ನೆ ಮೇ 18ನೇ ತಾರೀಖು ದರ್ಶನ್‌ ಮತ್ತು ವಿಜಯಲಕ್ಷ್ಮಿಯ ವಿವಾಹ ವಾರ್ಷಿಕೋತ್ಸವ ಭಾಳಾ ಅದ್ಧೂರಿಯಾಗಿ ನಡೆದಿದೆ. ನೆಲಮಂಗಲ ಬಳಿ ಇರುವ ಪ್ರೈವೇಟ್‌ ಗೆಸ್ಟ್‌ ಹೌಸಿನಲ್ಲಿ ಏರ್ಪಾಟಾಗಿದ್ದ ಈ ಪಾರ್ಟಿಯಲ್ಲಿ ದರ್ಶನ್‌ ಮತ್ತು ವಿಜಯಲಕ್ಷ್ಮಿಗೆ ತೀರಾ ಹತ್ತಿರದವರನ್ನು ಮಾತ್ರ ಕರೆಯಲಾಗಿತ್ತು. ಕಾಮಿಡಿ ನಟ ಚಿಕ್ಕಣ್ಣ ಸೇರಿದಂತೆ ಕೆಲವರು ಮಾತ್ರ ಚಿತ್ರರಂಗದವರಾಗಿದ್ದರು. ಡಿ ಬಾಸು ತನ್ನ ಪತ್ನಿ ಸಮೇತ ರಾತ್ರಿ ಪೂರ್ತಿ ಪಾರ್ಟಿ ಮಾಡಿ, ಹಾಡು ಹೇಳಿ, ಕುಣಿದು ಕುಪ್ಪಳಿಸಿ ಎಂಜಾಯ್‌ ಮಾಡಿದೆ. ಈ ಪಾರ್ಟಿಯ ವಿಡಿಯೋವನ್ನು ಸಿನಿಬಜ್‌ Exclusive ಆಗಿ ಪ್ರಸಾರ ಮಾಡಿತ್ತು. ಇದನ್ನೆಲ್ಲಾ ನೋಡಿದವರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಕೆಲವರು ʻʻಕಡೆಗೂ ಕಟ್ಟಿಕೊಂಡ ಹೆಂಡತಿಯ ಜೊತೆ ದರ್ಶನ್‌ ಬದುಕು ನೆಟ್ಟಗಾಯಿತುʼʼ ಎನ್ನುತ್ತಿದ್ದಾರೆ. ಇನ್ನು ಕೆಲವರು ʻʻದರ್ಶನ್‌ಗೆ ಈಗ ಬೆನ್ನು ನೋವೆಲ್ಲಾ ಮರೆತುಹೋಗಿರಬೇಕು. ಜಾಮೀನು ತೆಗೆದುಕೊಂಡು ಹೊರಗಿದ್ದೀನಿ ಅನ್ನೋದನ್ನು ಮರೆತು, ಪಾರ್ಟಿ ಗೀರ್ಟಿ ಮಾಡಿಕೊಂಡು ಜಾಲಿ ಮಾಡ್ತಿದ್ದಾರೆ. ಇವರಿಗೆಲ್ಲಾ ಮನುಷ್ಯತ್ವವೇ ಇಲ್ಲʼʼ ಅಂತಾ ಮಾತಾಡುತ್ತಿದ್ದಾರೆ.

ಯಾರು ಏನೇ ಹೇಳಿಕೊಳ್ಳಲಿ ದರ್ಶನ್‌ ಎನ್ನುವ ದೈತ್ಯ ನಟ ಮತ್ತೆ ಹಳೇ ಫಾರ್ಮಿಗೆ ಬಂದಂತಿದೆ. ನೆಲಮಂಗಲ ಬಳಿಯ ತೋಟದ ಮನೆಯಲ್ಲಿ ಹಿಂದಿ ಶಾಯರಿ ಹೇಳಿಕೊಂಡು, ಪತ್ನಿಯನ್ನು ಹಿಡಿದುಕೊಂಡು ಸ್ಟೆಪ್ಪು ಹಾಕುತ್ತಿದ್ದಾರೆ. ಪವಿತ್ರಾ ಗೌಡ ಕಾಸು ಖರ್ಚು ಮಾಡಿ ಶತೃ ಸಂಹಾರ ಹೋಮ, ವಾಮಾಚಾರ ಮಾಡಿಸೋದರಲ್ಲಿ ಬ್ಯುಸಿಯಾಗಿದ್ದಾಳೆ. ಅದೇನೋ ತೀಟೆ ಮಾಡಲು ಹೋಗಿ, ಬಡಿಸಿಕೊಂಡು ಪ್ರಾಣ ಬಿಟ್ಟ ರೇಣುಕಾಸ್ವಾಮಿಯ ಆತ್ಮ ಗೊಳೋ ಅಂತಾ ರೋಧಿಸುತ್ತಿದೆ… ಪಾಪ… ಹುಟ್ಟುವ ಮೊದಲೇ ಅನಾಥವಾದ ರೇಣುಕಾನ ಎಳೇ ಕಂದಮ್ಮ ತೊಟ್ಟಿಲಲ್ಲಿ ಮಲಗಿಕೊಂಡು ಅಪ್ಪನ ಫೋಟೋವನ್ನು ದಿಟ್ಟಿಸುತ್ತಿದೆ!

ಇನ್ನಷ್ಟು ಓದಿರಿ

Scroll to Top