ಬಾಲಿವುಡ್ ಕಂಡ ಅಪ್ರತಿಮ ಜೋಡಿಗಳಲ್ಲಿ ಶಾರುಖ್ ಖಾನ್ ಮತ್ತು ಕಾಜೋಲ್ ಜೋಡಿ ಯಾವಾಗಲೂ ಮುಂಚೂಣಿಯಲ್ಲಿರುತ್ತದೆ. ಅವರ ಕೆಮಿಸ್ಟ್ರಿಗೆ ಮರುಳಾಗದವರಿಲ್ಲ. ಆದರೆ, ಈ ಸ್ನೇಹದ ಬಳ್ಳಿ ಅರಳಿದ್ದು ಮೊದಲ ನೋಟದಲ್ಲೇನಲ್ಲ, ಬದಲಿಗೆ ಒಂದು ಸಣ್ಣ ಜಗಳ ಮತ್ತು ಮುನಿಸಿನಿಂದ! ಇತ್ತೀಚಿನ ಸಂದರ್ಶನವೊಂದರಲ್ಲಿ, ಕಾಜೋಲ್ ತಾವಿಬ್ಬರೂ ‘ಬಾಜಿಗರ್’ (1992) ಸೆಟ್ನಲ್ಲಿ ಮೊದಲ ಬಾರಿಗೆ ಭೇಟಿಯಾದ ಕ್ಷಣವನ್ನು ನೆನಪಿಸಿಕೊಂಡಿದ್ದು, ಶಾರುಖ್ರನ್ನು ‘ಖಡೂಸ್’ (ಜಗಳಗಂಟ, ದುರಹಂಕಾರಿ) ಎಂದು ಕರೆದಿದ್ದ ಸ್ವಾರಸ್ಯಕರ ಘಟನೆಯನ್ನು ಹಂಚಿಕೊಂಡಿದ್ದಾರೆ.

ಆ ದಿನ ಏನಾಗಿತ್ತು?
ಆಗ ಕಾಜೋಲ್ಗೆ ಕೇವಲ 17ರ ಹರೆಯ. ಹೊಸ ವರ್ಷದ ಪಾರ್ಟಿ ಮುಗಿಸಿ, ‘ಬಾಜಿಗರ್’ ಚಿತ್ರತಂಡದವರೆಲ್ಲರೂ ಜನವರಿ 1ರ ಮುಂಜಾನೆ ನಿದ್ದೆಯ ಮತ್ತಿನಲ್ಲಿದ್ದರು. ಆದರೆ, ರಾತ್ರಿ ಚೆನ್ನಾಗಿ ನಿದ್ದೆ ಮಾಡಿದ್ದ ಕಾಜೋಲ್ ಮಾತ್ರ ಪಟಪಟನೆ ಮಾತನಾಡುತ್ತಾ, ಉತ್ಸಾಹದಿಂದ ಸೆಟ್ನಲ್ಲಿದ್ದರು.
“ವರ್ಷದ ಮೊದಲ ದಿನ ಶೂಟಿಂಗ್ ಮಾಡಿದರೆ, ಇಡೀ ವರ್ಷ ಕೆಲಸ ಮಾಡುತ್ತೇವೆ ಎಂಬುದು ಶಾರುಖ್ ನಂಬಿಕೆ. ಹಾಗಾಗಿ ಎಲ್ಲರೂ ಸೆಟ್ನಲ್ಲಿದ್ದರು, ಆದರೆ ಎಲ್ಲರ ಮುಖದಲ್ಲೂ ಸುಸ್ತು, ನಿದ್ದೆಯ ಕೊರತೆ ಎದ್ದು ಕಾಣುತ್ತಿತ್ತು. ನಾನೊಬ್ಬಳೇ ಬೆಳಿಗ್ಗೆ 11:30ಕ್ಕೆ ಚೈತನ್ಯದ ಚಿಲುಮೆಯಂತಿದ್ದೆ. ನನ್ನ ಬಾಯಿಗೇನು ಬೀಗ ಹಾಕಲು ಬರುವುದಿಲ್ಲ, ಸುಮ್ಮನೆ ಕೂರುವ ಜಾಯಮಾನವೂ ನನ್ನದಲ್ಲ. ಸುತ್ತ ಜನರಿರುವಾಗ ಮೌನವಾಗಿರುವುದೇಕೆ ಎಂಬುದು ನನಗೆ ಅರ್ಥವಾಗುವುದಿಲ್ಲ,” ಎನ್ನುತ್ತಾರೆ ಕಾಜೋಲ್.
ಕಾಜೋಲ್ ಮೇಕಪ್ ಮ್ಯಾನ್, ಹೇರ್ಡ್ರೆಸ್ಸರ್ ಜೊತೆ ಹರಟೆ ಹೊಡೆಯುತ್ತಿದ್ದ. ಸ್ವಲ್ಪ ದೂರದಲ್ಲಿ ಕನ್ನಡಕ ಹಾಕಿಕೊಂಡು ಶಾರುಖ್ ಗಂಭೀರವಾಗಿ ತಮ್ಮ ಸಂಭಾಷಣೆಗಳನ್ನು ಓದಿಕೊಳ್ಳುತ್ತಿದ್ದರು. “ನನ್ನ ಧ್ವನಿ ಮೈಕ್ ಇಲ್ಲದಿದ್ದರೂ ಎಲ್ಲಿಬೇಕಾದರೂ ತಲುಪುತ್ತದೆ. ನನ್ನ ಹರಟೆ ಕೇಳಿ, ಒಂದು ಹಂತದಲ್ಲಿ ಕ್ಯಾಮೆರಾಮ್ಯಾನ್ಗೆ, ‘ರವಿ ದಾದಾ, ಇದ್ಯಾವ ಖಡೂಸ್ ನಟ ನಿಮ್ಮದು? ಮಾತೇ ಆಡುತ್ತಿಲ್ಲ!’ ಎಂದುಬಿಟ್ಟರಂತೆ. ಅಷ್ಟಕ್ಕೇ ಸುಮ್ಮನಾಗದ ಕಾಜೋಲ್, ನೇರವಾಗಿ ಶಾರುಖ್ ಬಳಿ ಹೋಗಿ, “ಹಾಯ್, ಯಾಕೆ ಮಾತನಾಡುತ್ತಿಲ್ಲ? ನೀವು ಯಾವಾಗಲೂ ಇಷ್ಟೇ ‘ಖಡೂಸ್’ ಆಗಿರುತ್ತೀರಾ?” ಎಂದು ಕೇಳಿಯೇಬಿಟ್ಟರು. ಅದಕ್ಕೆ ಶಾರುಖ್, “ದಯವಿಟ್ಟು ಒಂದು ನಿಮಿಷ ಸುಮ್ಮನಿರುತ್ತೀಯಾ? ದೇವರಾಣೆ, ಯಾರಾದರೂ ಈಕೆಯನ್ನು ಸುಮ್ಮನಿರಿಸಿ,” ಎಂದು ಗದರಿದ್ದರಂತೆ.
“ಅವರ ಮಾತು ಕೇಳಿ ನನಗೆ ಬಹಳ ಬೇಸರವಾಯಿತು. ನಾನಿಲ್ಲಿ ಸ್ನೇಹ ಮಾಡಲು ಪ್ರಯತ್ನಿಸುತ್ತಿದ್ದರೆ, ಈತ ಎಷ್ಟು ಕೆಟ್ಟದಾಗಿ ಮಾತನಾಡುತ್ತಿದ್ದಾನೆ ಎಂದುಕೊಂಡೆ. ಆದರೆ ತಮಾಷೆಯೆಂದರೆ, ಆ ಒಂದು ಜಗಳವೇ ನಮ್ಮಿಬ್ಬರ ನಡುವಿನ ಗಾಢ ಸ್ನೇಹಕ್ಕೆ ಅಡಿಪಾಯ ಹಾಕಿತು,” ಎಂದು ಕಾಜೋಲ್ ಆ ದಿನವನ್ನು ನೆನೆಯುತ್ತಾರೆ. ‘ಬಾಜಿಗರ್’ ಚಿತ್ರದ ಒಂದು ರೊಮ್ಯಾಂಟಿಕ್ ದೃಶ್ಯದ ಚಿತ್ರೀಕರಣದ ಮತ್ತೊಂದು ತರಲೆಯ ಕಥೆಯನ್ನೂ ಕಾಜೋಲ್ ಹಂಚಿಕೊಂಡಿದ್ದಾರೆ. ಆ ದೃಶ್ಯದಲ್ಲಿ ಕಾಜೋಲ್ ‘ಆಹ್’ ಎಂಬ ಶೃಂಗಾರಮಯ ಭಾವನೆಯನ್ನು ವ್ಯಕ್ತಪಡಿಸಬೇಕಿತ್ತು. “ಆಗ ನನಗೆ ಕೇವಲ 18 ವರ್ಷ. ಅಂತಹ ಭಾವನೆಗಳನ್ನು ಹೇಗೆ ಅಭಿನಯಿಸುವುದು ಎಂದು ನನಗೆ ತಿಳಿಯುತ್ತಿರಲಿಲ್ಲ. ನೃತ್ಯ ನಿರ್ದೇಶಕಿ ಸರೋಜಾ ಜೀ ಸಾಕಷ್ಟು ಬಾರಿ ಹೇಳಿಕೊಟ್ಟರೂ ನನಗೆ ಆ ಭಾವನೆ ತರಲು ಸಾಧ್ಯವಾಗಲಿಲ್ಲ. ಕೊನೆಗೆ ಅವರು ಶಾರುಖ್ಗೆ ಒಂದು ಉಪಾಯ ಹೇಳಿದರು. ‘ಕ್ಯಾಮೆರಾ ಕ್ಲೋಸಪ್ನಲ್ಲಿರುವಾಗ ಅವಳಿಗೆ ತಿಳಿಯದಂತೆ ಚಿವುಟು, ನಮಗೆ ಬೇಕಾದ ಭಾವನೆ ತಾನಾಗಿಯೇ ಬರುತ್ತದೆ’ ಎಂದರು. ಅಂದು ಆ ಚಿವುಟಿನಿಂದಲೇ ನಾನು ಆ ಭಾವನೆಯನ್ನು ವ್ಯಕ್ತಪಡಿಸಲು ಕಲಿತೆ!” ಎಂದು ಕಾಜೋಲ್ ನಗುತ್ತಾ ಆ ಘಟನೆಯನ್ನು ವಿವರಿಸಿದ್ದಾರೆ.
ಕಾಜೋಲ್ ಭಾವನೆಗಳನ್ನು ಹೊರಹಾಕಿಸಲು ಯಾವ ಯಾವ ನಟರು ಎಲ್ಲೆಲ್ಲಿ ತಿವಿದಿದ್ದಾರೋ? ಚಿವುಟಿದ್ದಾರೋ? ಗೊತ್ತಿಲ್ಲ!











































