ಮಾರಕಾಸ್ತ್ರ ನಟನ ಮತ್ತೊಂದು ಸಿನಿಮಾ…

Picture of Cinibuzz

Cinibuzz

Bureau Report

ಡಾ. ನಟರಾಜ್ ಎನ್ನುವ ವ್ಯಕ್ತಿ ಈ ಹಿಂದೆ ಮಾರಕಾಸ್ತ್ರ ಎನ್ನುವ ಘನಘೋರ ಸಿನಿಮಾವೊಂದನ್ನು ನಿರ್ಮಿಸಿದ್ದರು. ನಿರ್ಮಾಣದ ಜೊತೆಗೆ ನಟನೆ, ನೃತ್ಯ ಎಲ್ಲವನ್ನೂ ಮಾಡಿದ್ದರು. ಹಚ್ಚೂ ಕಡಿಮೆ ನಿವೃತ್ತಿಯ ವಯಸ್ಸಿನ ನಟರಾಜ್ ಈಗ ಪೂರ್ಣ ಪ್ರಮಾಣಷ ಹೀರೋ ಆಗುವ ಪ್ರಯತ್ನ ಮಾಡುತ್ತಿದ್ದಾರೆ. ಬಿಬಿಎಂಪಿಯಲ್ಲಿವರು ಎಂಜಿನಿಯರೋ ಏನೋ ಆಗಿದ್ದಾರಂತೆ. ಇವರೇ ನಿರ್ಮಿಸಿದ್ದ ಮೊದಲ ಸಿನಿಮಾ ಮಾರಕಾಸ್ತ್ರದಲ್ಲಿ ಕೆಲಸ ಮಾಡಿದ ಅನೇಕರು ತಮ್ಮತಮ್ಮ ಲೈಫ್ ಸೆಟಲ್ ಮಾಡಿಕೊಂಡರು. ಗುರುಮೂರ್ತಿ ಸುನಾಮಿ ಅನ್ನೋ ಹುಡುಗ ಈ ಸಿನಿಮಾದ ನಿರ್ದೇಶಕನಾಗಿದ್ದ. ಜೊತೆಗೆ ಧನು ಮಾಸ್ಟರು ಕ್ರಿಯೇಟೀವ್ ಹೆಡ್ ಆಗಿದ್ದರು. ನೂರಾರು ಜನ ಕಲಾವಿದರನ್ನಿಟ್ಟುಕೊಂಡು, ವರ್ಷಗಟ್ಟಲೆ ಶೂಟಿಂಗು ನಡೆಸಿದ್ದ ನಟರಾಜ್ ಏಳೆಂಟು ಕೋಟಿ ಹಣ ವ್ಯಯಿಸಿದ್ದರು. ಹುಂಜ ಸ್ವಾತಿ ಸೊಂಟ ಹಿಡಿದು ಡ್ಯಾನ್ಸು ಮಾಡಿದ್ದೇ ಲಾಭ! ಉಳಿದಂತೆ ನಟರಾಜ್ ಅವರಿಗೆ ಆ ಚಿತ್ರದಿಂದ ಯಾವುದೇ ವರಮಾನ ಗಿಟ್ಟಿರಲಿಲ್ಲ!!

ಈಗ ಇದೇ ನಟರಾಜು ಡಾ. ರಾಜ್ ವೀರ್ ಎನ್ನುವ ಹೊಸ ಹೆಸರನ್ನಿಟ್ಟುಕೊಂಡು ಮತ್ತೆ ಸಿನಿಮಾ ಅಖಾಡಕ್ಕೆ ಕಾಲಿಟ್ಟಿದ್ದಾರೆ. RR 77 ಎನ್ನುವ ಹೆಸರಿನ ಚಿತ್ರಕ್ಕಿವರು ಹೀರೋ ಆಗಿದ್ದಾರೆ. ಕನ್ನಡ ಸಿನಿಮಾಗಳನ್ನು ಜನ ಥೇಟರಿಗೆ ಬಂದು ನೋಡ್ತಿಲ್ಲ ಅಂತಾ ಇಡೀ ಉದ್ಯಮ ಕಣ್ಣೀರಿಡುತ್ತಿದೆ. ಚಿತ್ರರಂಗ ಯಾವೊಬ್ಬರ ಸ್ವತ್ತಲ್ಲ. ಇಲ್ಲಿ ಯಾರು, ಯಾವಾಗ ಬೇಕಾದರೂ ಬಂದು ಸಾಧಿಸಬಹುದು. ಅವರವರಿಗೊಪ್ಪುವ ಪಾತ್ರ ಆಯ್ಕೆ ಮಾಡಿಕೊಂಡು ನಟಿಸಿದರೆ ಯಾರ ತಕರಾರೂ ಇಲ್ಲ. ತಿಥಿ ಎನ್ನುವ ನೆಲದ ಘಮಲಿನ ಸಿನಿಮಾದಲ್ಲಿ ನಟಿಸಿ ಎಂಭತ್ತು ದಾಟಿದ್ದ ಇಬ್ಬರು ನಿಜಕ್ಕೂ ಹೀರೋಗಳೆನಿಸಿಕೊಂಡಿದ್ದರು. ಪ್ರಯತ್ನ, ಶ್ರಮಗಳೆಲ್ಲಾ ನೆಟ್ಟಗಿದ್ದರೆ ಅದರ ಪ್ರತಿಫಲವೂ ಉತ್ತಮವಾಗೇ ಇರುತ್ತದೆ. ಆದರೆ, ಎಷ್ಟೋ ಸಲ ಸಿನಿಮಾ ಇಂಡಸ್ಟ್ರಿಗೆ ಬರುವವರ ಅಥವಾ ಕರೆತರುವವರ ಉದ್ದೇಶವೇ ಸರಿ ಇರೋದಿಲ್ಲ. ಆದರೆ, ಬಹುಮುಖ ಪ್ರತಿಭೆಯ ನಿರ್ದೇಶಕ ಮಂಜು ಕವಿ ಅಂಥವರಲ್ಲ. ಅರವತ್ತಲ್ಲ, ತೊಂಬತ್ತು ವರ್ಷದ ಹಣ್ಣಣ್ಣು ಮುದುಕನನ್ನೂ ಹೀರೋ ಮಾಡಬಲ್ಲ ಟ್ಯಾಲೆಂಟ್‌ ಇವರಲ್ಲಿದೆ.

ಹೀಗೇ ತಲೆ ನೆರೆತಮೇಲೆ ಹೀರೋ ಆದ ವೃದ್ದ ಜೀವವೊಂದು ಇತ್ತೀಚೆಗೆ ತನ್ನ ಸಿನಿಮಾದ ಹಂಡ್ರೆಡ್ ಡೇಸ್ ಕಾರ್ಯಕ್ರಮ ಮಾಡಿತ್ತು. ಈ ಚಿತ್ರವನ್ನು ನೋಡಲು ಯಾವ್ಯಾವ ಥೇಟರುಗಳ ಮುಂದೆ ಜನ ಕ್ಯೂ ನಿಂತಿದ್ದರೋ ಗೊತ್ತಿಲ್ಲ. ಆದರೆ ಆವಯ್ಯ ‘ಕೆ ಜಿ ಎಫ್ ಮತ್ತು ಕಾಂತಾರದ ನಡುವಿನ ಗೆಲುವು ನಮ್ಮದು’ ಅಂತೆಲ್ಲಾ ಮಾತಾಡಿ ಬಾಯಿತೀಟೆ ತೀರಿಸಿಕೊಂಡಿತ್ತು. ಇವರ ಮಾತನ್ನು ಯೂಟ್ಯೂಬಲ್ಲಿ ನೋಡಿದವರೆಲ್ಲಾ ನಗಬಾರದ ಜಾಗದಲ್ಲಿ ನಕ್ಕು ಸುಮ್ಮನಾಗಿದ್ದಾರೆ. ಕಾಸು ಜಾಸ್ತಿ ಇದ್ದರೆ, ಗುಣಮಟ್ಟದ ಸಿನಿಮಾಮೇಲೆ ಇನ್ವೆಸ್ಟ್‌ ಮಾಡಬಹುದಿತ್ತು. ಅದು ಬಿಟ್ಟು ನಾನೇ ಹೀರೋ ಆಗ್ತೀನಿ ಅಂತಾ ಹೊರಟವರಿಗೆ ಏನು ಹೇಳಬೇಕೋ ಗೊತ್ತಿಲ್ಲ. ಇಂಥವರಿಂದ ಚಿತ್ರರಂಗಕ್ಕೆ ಲವಲೇಶದ ಲಾಭವೂ ಇಲ್ಲ. ಬದಲಿಗೆ ಲುಕ್ಸಾನೇ ಹೆಚ್ಚು.

ಈಗಾಗಲೇ ಮಾರಕಾಸ್ತ್ರದಲ್ಲಿ ನಟರಾಜ್‌ ಅವರ ಜೇಬನ್ನು ಸಿಕ್ಕಸಿಕ್ಕವರೆಲ್ಲಾ ಸಿಗಿದುಹಾಕಿದ್ದಾರೆ. ನಟರಾಜ್‌ ಅಲಿಯಾಸ್‌ ಡಾ. ರಾಜ್‌ ವೀರ್‌ ಈ ಸಲವಾದರೂ ಒಂಚೂರು ಹುಷಾರಾಗಿರಲಿ.

ಇನ್ನಷ್ಟು ಓದಿರಿ

Scroll to Top