ಎಲ್ಲ ಅಂದುಕೊಂಡಂತೇ ಆಗಿದ್ದಿದರೆ, ದರ್ಶನ್ ನಟಿಸಿರುವ ಡೆವಿಲ್ ಮುಗೀತಿದ್ದಂತೆ ಶೈಲಜಾ ನಾಗ್ ಅವರ ಮೀಡಿಯಾ ಹೌಸ್ ನಿರ್ಮಾಣದಲ್ಲಿ ವೀರಸಿಂಧೂರ ಲಕ್ಷ್ಮಣ ಸಿನಿಮಾ ಸೆಟ್ಟೇರಿರಬೇಕಿತ್ತು. ದರ್ಶನ್ ರೇಣುಕಾಸ್ವಾಮಿ ಕೊಲೆ ಕೇಸಲ್ಲಿ ಜೈಲುಪಾಲಾಗಿದ್ದರಿಂದ ಎಲ್ಲ ಪ್ಲಾನೂ ತಲೆಕೆಳಗಾಗಿದೆ. ಸದ್ಯ ಇರೋ ಪರಿಸ್ಥಿತಿ ನೋಡಿದರೆ ಮಿಸ್ಟರ್ `ಡಿ’ ಯಾವಾಗ ಹೊರಗೆ ಬರ್ತಾರೋ? ಎನ್ನುವಂತಿದೆ. ಬಂದಮೇಲಷ್ಟೇ ವೀರ, ಧೀರರ ಮಾತೆಲ್ಲಾ!

ಮತ್ತೊಂದು ವಿಚಾರವೆಂದರೆ, ಜೈಲಿಂದ ಜಾಮೀನಿನ ಮೇಲೆ ಹೊರಬಂದಿದ್ದಾಗಲೂ ದರ್ಶನ್ ಅವರನ್ನು ತರುಣ್ ಭೇಟಿ ಮಾಡಿದಂತಿಲ್ಲ. ʻʻತರುಣ್ ಪ್ರಯತ್ನ ಮಾಡಿದರೂ ದರ್ಶನ್ & ಟೀಮ್ ಅವಾಯ್ಡ್ ಮಾಡಿತ್ತುʼʼ ಎನ್ನೋ ಮಾತು ಓಡಾಡುತ್ತಿದೆ. ಅದೆಷ್ಟು ನಿಜವೋ ಸುಳ್ಳೋ ಗೊತ್ತಿಲ್ಲ.
ಸೂಪರ್ ಸ್ಟಾರ್ ಸಿನಿಮಾವೊಂದರ ತಯಾರಿಯಲ್ಲಿದ್ದಾಗ ಇಂಥವೆಲ್ಲಾ ಘಟನೆಗಳಾಗಿದ್ದಿದ್ದರೆ ಬೇರೆ ಯಾರೇ ನಿರ್ದೇಶಕರಾಗಿದ್ದರೂ ಕುಸಿದು ಹೋಗುತ್ತಿದ್ದರು. ಆದರೆ, ನಿರ್ದೇಶಕ ತರುಣ್ ಸುಧೀರ್ ಇದಾರಲ್ಲಾ? ಬಹಳಾ ಗಟ್ಟಿಗ & ಬ್ರಿಲಿಯಂಟ್. ʻʻಅದಿಲ್ಲ ಅಂದ್ರೆ ಇನ್ನೊಂದುʼʼ ಎನ್ನುವಂತೆ ಮೊದಲೇ ಪ್ಲಾನ್ ಮಾಡಿಕೊಂಡಿರ್ತಾರೆ! ಆದರೂ ಅವರಿಗೆ ಮುಂದೇನು ಎನ್ನುವ ಗೊಂದಲ ಕಾಡುತ್ತಿದೆಯಾ?
ಹಾಗೆ ನೋಡದರೆ, ತರುಣ್ ಸುಧೀರ್ ಹಿಟ್ ಸಿನಿಮಾಗಳನ್ನು ಕೊಟ್ಟಿರುವ ನಿರ್ದೇಶಕ. ಹೆಚ್ಚು ದಿನ ಸುಮ್ಮನೇ ಕೂತರೆ ಉಳಿಸಿಕೊಂಡು ಬಂದಿರುವ ಮಾರ್ಕೆಟ್ ಹಾಳಾಗತ್ತೆ. ಹಿಂದಿಯಲ್ಲಿ ಸಿನಿಮಾವೊಂದನ್ನು ಡೈರೆಕ್ಟ್ ಮಾಡಿಕೊಡುವಂತೆ ತರುಣ್ಗೆ ಆಫರ್ ಇರೋದು ನಿಜ. ಆದರೆ, ಅಲ್ಲೆಲ್ಲಾ ಇವರ ಕ್ರಿಯಾಶೀಲತೆಗೆ ಯಾವ ಬೆಲೆಯೂ ಇರೋದಿಲ್ಲ. ಪ್ರೊಡಕ್ಷನ್ ಹೌಸ್ ಕೊಟ್ಟ ಸ್ಕ್ರಿಪ್ಟನ್ನು ಒಂಚೂರೂ ಆಚೀಚೆ ಮಾಡದಂತೆ ನಿರ್ದೇಶನ ಮಾಡಿಕೊಡಬೇಕು. ಅದು ತರುಣ್ಗೆ ಒಗ್ಗೋದು ಕಷ್ಟ. ತೆಲುಗಿನ ರಾಮ್ ಪೋತಿನೇನಿ ಜೊತೆಗೂ ಒಂದು ಪ್ರಾಜೆಕ್ಟ್ ಮಾತುಕತೆ ನಡೆದಿದೆ. ಇದರ ನಡುವೆ ಯುವ ರಾಜ್ ಕುಮಾರ್ಗಾಗಿ ಸಿನಿಮಾ ಮಾಡ್ತಾರೆ ಅನ್ನೋ ಮಾತು ಚಾಲನೆಯಲ್ಲಿದೆ. ಕತೆ ವಿಚಾರವಾಗಿ ಸಾಕಷ್ಟು ಡಿಸ್ಕಷನ್ ನಡೆದಿವೆಯಾದರೂ ಅದಿನ್ನೂ ಯಾವಾಗ ಅಂತಾ ಗೊತ್ತಿಲ್ಲ. ಇದೆಲ್ಲದರ ಜೊತೆಗೆ ಸುದೀಪ್ ಅವರ ಸಿನಿಮಾ ಡೈರೆಕ್ಟ್ ಮಾಡೋದು ಆಲ್ಮೋಸ್ಟ್ ಕನ್ಫರ್ಮ್ ಅನ್ನೋ ವಿಚಾರ ಕೇಳಿಬರುತ್ತಿದೆ. ಮೊನ್ನೆ ದಿನ ತರುಣ್ ಮತ್ತು ಕಿಚ್ಚ ಮೀಟ್ ಮಾಡಿದ್ದರು. ತರುಣ್ ಕಿಚ್ಚನ ಜೊತೆಗಿರೋದು ವಿಡಿಯೋವೊಂದರಲ್ಲೂ ಕಾಣಿಸಿದೆ.
ಕಳೆದ ಮೂರು ವರ್ಷಗಳಿಂದ ಸುದೀಪ್ ಮತ್ತು ತರುಣ್ ಅದೆಷ್ಟು ಸಲ ಈ ರೀತಿ ಮೀಟ್ ಮಾಡಿದ್ದಾರೋ ಗೊತ್ತಿಲ್ಲ. ಸುದೀಪ್ ಅವರಿಗೆ ಕಥೆ ಒಪ್ಪಿಸಿ ಸಿನಿಮಾ ಆರಂಭ ಮಾಡೋದು ಸಲೀಸಂತೂ ಅಲ್ಲ. ಸಿನಿಮಾ ಅಥವಾ ಖಾಸಗೀ ವಿಚಾರದಲ್ಲೀ ತುಂಬಾ ಗುಟ್ಟು ಮೇಂಟೇನ್ ಮಾಡಿ ಎಲ್ಲರೂ ಆಶ್ಚರ್ಯವಾಗುವಂತೆ ಸರ್ಪ್ರೈಸ್ ಕೊಡೋದು ತರುಣ್ ಶೈಲಿ. ತಮ್ಮ ಮುಂದಿನ ಸಿನಿಮಾ ಕುರಿತಾಗಿ ಅಂಥದ್ದೇ ಆಶ್ಚರ್ಯಕರ ವಾರ್ತೆಯೊಂದಿಗೆ ತರುಣ್ ಕಿಶೋರ್ ಸುಧೀರ್ ಎಲ್ಲರ ಮುಂದೆ ಹಾಜರಾಗಬಹುದು!!











































