ಸಾಗರ ನಗರದ ದೈವಜ್ಞ ಬ್ರಾಹ್ಮಣ ಸಭಾಭವನದಲ್ಲಿ ವೈಭವದಿಂದ ಜರುಗುತ್ತಿರುವ ಶ್ರೀಗಳವರ 41ನೇ ಚಾತುರ್ಮಾಸ್ಯ ವ್ರತಾಚರಣೆಯ ಧಾರ್ಮಿಕ ಮಹೋತ್ಸವದ ಶುಭ ಸಂದರ್ಭದಲ್ಲಿ, ಕರ್ಕಿ ಶ್ರೀ ಜ್ಞಾನೇಶ್ವರೀ ಪೀಠದ ಪೀಠಾಧಿಪತಿಗಳಾದ ಪರಮಪೂಜ್ಯ ಶ್ರೀ ಶ್ರೀ ಸಚ್ಚಿದಾನಂದ ಜ್ಞಾನೇಶ್ವರ ಭಾರತೀ ಮಹಾಸ್ವಾಮಿಗಳವರು ದೈವಜ್ಞ ಸಮಾಜದ ಹಿರಿಮೆ, ಸಂಸ್ಕೃತಿ ಮತ್ತು ಪಾರಂಪರಿಕ ಮೌಲ್ಯಗಳನ್ನು ಸಾರುವ ‘ದೈವಜ್ಞರು’ ಚಲನಚಿತ್ರದ ಅಧಿಕೃತ ಶೀರ್ಷಿಕೆ (ಟೈಟಲ್) ಹಾಗೂ ಧ್ವನಿಸುರುಳಿಯನ್ನು ಲೋಕಾರ್ಪಣೆಗೊಳಿಸಿ ಆಶೀರ್ವದಿಸಿದರು.

ಈ ಶುಭ ಸಮಾರಂಭದಲ್ಲಿ ಚಿತ್ರತಂಡದ ಪ್ರಯತ್ನವನ್ನು ಕೊಂಡಾಡಿದ ಸ್ವಾಮೀಜಿಯವರು, ದೈವಜ್ಞ ಬ್ರಾಹ್ಮಣ ಸಮಾಜವು ಕಲೆ, ಕರಕುಶಲತೆ ಮತ್ತು ಧಾರ್ಮಿಕ ಪರಂಪರೆಯಲ್ಲಿ ತನ್ನದೇ ಆದ ವಿಶಿಷ್ಟ ಛಾಪು ಮೂಡಿಸಿದೆ ಎಂದು ಬಣ್ಣಿಸಿದರು. ಅಲ್ಲದೆ, ಇಂತಹ ಶ್ರೀಮಂತ ಇತಿಹಾಸ ಹಾಗೂ ಸಾಂಸ್ಕೃತಿಕ ಬೇರುಗಳನ್ನು ಇಂದಿನ ಯುವ ಪೀಳಿಗೆಗೆ ಸಿನಿಮಾದಂತಹ ದೃಶ್ಯ ಮಾಧ್ಯಮದ ಮೂಲಕ ಪರಿಚಯಿಸುತ್ತಿರುವುದು ಅತ್ಯಂತ ಶ್ಲಾಘನೀಯ ಕಾರ್ಯ ಎಂದು ಹರ್ಷ ವ್ಯಕ್ತಪಡಿಸಿ ಚಿತ್ರತಂಡಕ್ಕೆ ಶುಭ ಹಾರೈಸಿದರು.

ಕಾರ್ಯಕ್ರಮದಲ್ಲಿ ಚಿತ್ರದ ಕಥಾಹಂದರ ಹಾಗೂ ಉದ್ದೇಶವನ್ನು ವಿವರಿಸಿದ ನಾಯಕ ನಟ ಹಾಗೂ ನಿರ್ದೇಶಕರಾದ ಅಜಯಕುಮಾರ್ ದೈವಜ್ಞ ಅವರು ಸಿನಿಮಾದ ವಿಶೇಷತೆಗಳ ಬಗ್ಗೆ ಬೆಳಕು ಚೆಲ್ಲಿದರು. ಈ ಸಮಾರಂಭದಲ್ಲಿ ಕಾರವಾರದ ಮಾಜಿ ಶಾಸಕ ಗಂಗಾಧರ್ ಭಟ್, ಸಮಾಜದ ಪ್ರಮುಖರಾದ ಅರುಣ್ ಕುಮಾರ್, ಮಂಜುನಾಥ್ ಪರಮೇಶ್ವರ್ ಶೇಟ್ (ಹೊನ್ನಾವರ), ಮೋಹನ್ ಶೇಟ್, ರವಿ ಗಾಂವ್ಕರ್, ಅಶೋಕ್ ರೇವಣಕರ್, ಸಿಎ ಶಶಿಕಾಂತ್ ಆರ್.ಎಸ್., ಉಲ್ಲಾಸ್ ಹಾಗೂ ಅಶೋಕ್ ಶೇಟ್ ಸೇರಿದಂತೆ ಹಲವು ಗಣ್ಯರು ಮತ್ತು ಸಮಾಜ ಬಾಂಧವರು ಉಪಸ್ಥಿತರಿದ್ದು ಚಿತ್ರತಂಡಕ್ಕೆ ಸಾಥ್ ನೀಡಿ ಯಶಸ್ಸಿಗೆ ಹಾರೈಸಿದರು.












































