ಪ್ರೀತಿಸಿಯೋ, ಹಿರಿಯರು ನಿಶ್ಚಯಿಸಿಯೋ—ಮದುವೆ ಅನ್ನೋದು ಬಹುತೇಕರನ್ನು ಬಂಧಿಸಿರುತ್ತದೆ. ಹೊಸ ಜೀವನದ ಹೊಸ್ತಿಗೆ ಕಾಲಿಟ್ಟ ಹುಡುಗ-ಹುಡುಗಿ ಇಬ್ಬರ ಮನದಲ್ಲೂ ಬದುಕಿನ ಕುರಿತು ನೂರೆಂಟು ಸುಂದರ ಕನಸುಗಳಿರುತ್ತವೆ. ಮದುವೆಯಾಗಿ ಕೆಲವೇ ತಿಂಗಳುಗಳು ಕಳೆಯುವುದರೊಳಗೆ ಸಂಬಂಧಿಕರು, ಅಕ್ಕಪಕ್ಕದವರು ಮುಗಿಬಿದ್ದು, “ಏನೂ ವಿಶೇಷ ಇಲ್ವಾ?” ಎಂದು ಕೇಳುವ ಮಾತುಗಳೇ ಆ ದಂಪತಿಯ ನಗುಮುಖವನ್ನು ಕಸಿದುಕೊಳ್ಳುತ್ತವೆ. ಇನ್ನು ಮನೆಯೊಳಗಂತೂ ಸೊಸೆ ಯಾವಾಗ ʻಸಿಹಿಸುದ್ದಿʼ ನೀಡುತ್ತಾಳೋ ಎನ್ನುವುದೇ ಎಲ್ಲರ ನಿತ್ಯದ ಕುತೂಹಲ ಮತ್ತು ಚರ್ಚೆಯ ವಿಷಯವಾಗಿಬಿಡುತ್ತದೆ.
ಇಂದಿನ ಧಾವಂತದ ಜೀವನಶೈಲಿ ಅಥವಾ ವೈದ್ಯಕೀಯ ಜಟಿಲತೆಗಳಿಂದ ಮಕ್ಕಳಾಗದಿರುವುದು ಸಾಮಾನ್ಯವಾಗುತ್ತಿದ್ದರೂ, ಅದರ ಸಂಪೂರ್ಣ ಹೊಣೆಯನ್ನು, ‘ಅಪರಾಧಿ’ಯೆಂಬ ಹಣೆಪಟ್ಟಿಯನ್ನು ಹೆಣ್ಣಿನ ತಲೆಯ ಮೇಲೆ ಮಾತ್ರ ಕಟ್ಟುವುದು ನಮ್ಮ ವ್ಯವಸ್ಥೆಯ ಕ್ರೌರ್ಯ. ಯಾವುದೇ ಕಾರಣವಿರಲಿ—ಸಮಾಜದ ಕತ್ತಿ ಸದಾ ನೇತಾಡುವುದು ಮಾತ್ರ ಹೆಣ್ಣಿನ ತಲೆಯ ಮೇಲೆಯೇ! ಬಂಜೆತನದ ಹಣೆಪಟ್ಟಿ ಹೊತ್ತು, ಪ್ರತಿಕ್ಷಣವೂ ಹನಿಹನಿಯಾಗಿ ಕರಗುವ ಹೆಣ್ಣಿನ ಮಾನಸಿಕ ಯಾತನೆ ಮತ್ತು ನರಕಯಾತನೆಯನ್ನು ಯಾವ ಅಳತೆಗೋಲಿನಿಂದಲೂ ಅಳೆಯಲು ಸಾಧ್ಯವಿಲ್ಲ. ಇಂಥದ್ದೊಂದು ಅತ್ಯಂತ ಸಂವೇದನಾಶೀಲ ಹಾಗೂ ಆಳವಾಗಿ ಕಾಡುವ ಕಥಾಹಂದರವನ್ನು ಇಟ್ಟುಕೊಂಡು ತೆರೆಗೆ ಬಂದಿರುವ ಅರ್ಥಪೂರ್ಣ ಹಾಗೂ ಮನಮಿಡಿಯುವ ಚಿತ್ರವೇ ‘ಬ್ರಹ್ಮ ಕಮಲ’.

ಸಿದ್ದು ಪೂರ್ಣಚಂದ್ರ ಅವರ ನಿರ್ದೇಶನದಲ್ಲಿ ಮೂಡಿಬಂದಿರುವ ಈ ಚಿತ್ರ ನಮ್ಮೊಳಗಿನ ಮನುಷ್ಯತ್ವವನ್ನು, ಸಮಾಜದ ಕಟ್ಟುಪಾಡುಗಳನ್ನು ನೇರವಾಗಿ ಪ್ರಶ್ನಿಸುತ್ತದೆ. ಪ್ರೀತಿಸಿ ಮದುವೆಯಾದ ಹೆಣ್ಣೊಬ್ಬಳು ಮಗುವಾಗಲಿಲ್ಲ ಎಂಬ ಒಂದೇ ಒಂದು ಕಾರಣಕ್ಕೆ ಸಮಾಜದ ಹೀಯಾಳಿಕೆಗೆ ಗುರಿಯಾಗಿ, ಗಂಡನ ಮನೆಯವರ ನಿಂದನೆಗಳನ್ನು ತಾಳಲಾರದೆ, ಹತ್ತಿರದವರ ಬಳಿಯೂ ಹೋಗಲಾರದೆ ಒಬ್ಬಂಟಿ ಜೀವನ ನಡೆಸುವ ಕಥೆ ಇಲ್ಲಿದೆ. ತಾನು ʻಬಂಜೆʼ ಎನ್ನುವ ಸಮಾಜದ ಅಂಟಿಕೊಂಡ ಕಳಂಕವನ್ನು ಅಳಿಸಲು ಅವಳು ಹೂಡುವ ತಂತ್ರವೇನು? ಆ ಯೋಜನೆ ಕೊನೆಗೆ ಫಲಿಸುತ್ತದಾ? ಎಂಬ ಕುತೂಹಲದ ಜೊತೆಗೆ, ಈ ಇಡೀ ನೋವಿನ ಹಾದಿಯಲ್ಲಿ ಹೆಣ್ಣು ಅನುಭವಿಸುವ ಅತಂತ್ರ ಸ್ಥಿತಿಯನ್ನು ನಿರ್ದೇಶಕರು ಅತ್ಯಂತ ಸೂಕ್ಷ್ಮವಾಗಿ ತೆರೆಮೇಲೆ ತಂದಿದ್ದಾರೆ.
ಇದು ಒಂದು ಕಡೆಯಾದರೆ, ತೀರಾ ಬಡತನ, ಆರ್ಥಿಕ ಸಂಕಷ್ಟದಿಂದ ಹೊರಬರಲು ದುಡ್ಡಿಗಾಗಿ ತನ್ನ ಮಡದಿಯನ್ನು ಬಾಡಿಗೆ ತಾಯಿಯನ್ನಾಗಿಸುವ, ಮಗುವನ್ನು ಹೆತ್ತುಕೊಡುವ ಯಂತ್ರದಂತೆ ಬಳಸುವ ವ್ಯಕ್ತಿಯ ಸ್ಥಿತಿಯನ್ನು ಹಿಡಿದಿಟ್ಟಿದ್ದಾರೆ. ಮನೆ ಕಟ್ಟುವ ವಿಚಾರಕ್ಕೆ ಕಿತ್ತಾಡಿಕೊಂಡು ತನ್ನ ಹೆಂಡತಿ ನನ್ನನ್ನು ಬಿಟ್ಟು ಹೋದಳು ಎಂದು ಹೇಳಿಕೊಳ್ಳುವ ಆಟೋಡ್ರೈವರ್ ಮಾತು ಮನಸ್ಸಿಗೆ ಚುಚ್ಚುತ್ತದೆ. ಮಗುವನ್ನು ಕಳೆದುಕೊಳ್ಳುವ ಮೂಕ ಹೆಣ್ಣಿನ ರೋಧನ… ಹೀಗೆ ಅನೇಕ ವಿಚಾರಗಳನ್ನು ಸಿನಿಮಾದಲ್ಲಿ ಬ್ಲೆಂಡ್ ಮಾಡಿದ್ದಾರೆ.
ಚಿತ್ರದ ಪ್ರತಿಯೊಂದು ಸನ್ನಿವೇಶವೂ ನಿಜ ಜೀವನದ ಪ್ರತಿಬಿಂಬದಂತೆ ಸಹಜವಾಗಿ ಹರಿಯುತ್ತದೆ. ಇಲ್ಲಿ ಯಾವುದೇ ಅತಿರಂಜಿತ ನಾಟಕೀಯತೆ ಇಲ್ಲ, ದೊಡ್ಡ ದೊಡ್ಡ ಸಂಭಾಷಣೆಗಳ ಅಬ್ಬರವಿಲ್ಲ; ಇಲ್ಲಿ ಕಥೆಯ ಸರಳತೆಯೇ ಸಿನಿಮಾದ ದೊಡ್ಡ ಶಕ್ತಿ. ಅದ್ವಿತಿ ಶೆಟ್ಟಿ ಅವರು ತಮ್ಮ ಅಭಿನಯದ ಮೂಲಕ ಪಾತ್ರಕ್ಕೆ ಜೀವತುಂಬಿದ್ದಾರೆ. ಅವರ ಮುಖದಲ್ಲಿ ಕಾಣುವ ನಿಶ್ಶಬ್ದ ನೋವು, ಒಂಟಿತನದ ನೆರಳು, ಎಲ್ಲವನ್ನೂ ಮೌನವಾಗಿ ನುಂಗಿಕೊಳ್ಳುವ ಹತಾಶೆ ಹಾಗೂ ಬದುಕನ್ನು ಹೇಗಾದರೂ ಮಾಡಿ ಹಿಡಿದುಕೊಳ್ಳಬೇಕು ಎನ್ನುವ ಹಟ ಪ್ರೇಕ್ಷಕರ ಎದೆಗೆ ನೇರವಾಗಿ ತಾಗುತ್ತವೆ. ಇನ್ನು ಋತು ಚೈತ್ರ ಮಾತಿಲ್ಲದೆಯೇ ಕಣ್ಣಂಚಲಿ ನೀರು ಜಿನುಗುವಂತೆ ಆಪ್ತವಾಗಿ ನಟಿಸಿದ್ದಾರೆ. ಅವರ ನಟನೆ ಚಿತ್ರದ ನಿಜವಾದ ಜೀವಾಳ. ಸಿನಿಮಾದ ಪ್ರಧಾನ ಆಕರ್ಷಣೆ ಲೋಕೇಂದ್ರ ಸೂರ್ಯ. ಇವರ ಮ್ಯಾನರಿಸಂಗಳೇ ಇಷ್ಟವಾಗುತ್ತವೆ. ಬಾಲ ರಾಜ್ವಾಡಿ, ಮಮತಾ ರಾಹುತ್, ಪ್ರಮೀಳಾ ಸುಬ್ರಮಣ್ಯ ಮುಂತಾದವರ ತಾರಾಗಣ ತಮ್ಮ ಪಾತ್ರಗಳಿಗೆ ಸಂಪೂರ್ಣ ನ್ಯಾಯ ಒದಗಿಸಿದ್ದಾರೆ.
ತಾಂತ್ರಿಕವಾಗಿಯೂ ಈ ಸಿನಿಮಾ ಅಚ್ಚುಕಟ್ಟಾಗಿ ಮೂಡಿಬಂದಿದೆ. ಲೋಕೇಂದ್ರ ಸೂರ್ಯ ಅವರ ನೈಜ ಛಾಯಾಗ್ರಹಣ ಕಥೆಯ ವಾತಾವರಣವನ್ನು ಇನ್ನಷ್ಟು ಗಾಢವಾಗಿಸಿದರೆ, ಅನಂತ್ ಆರ್ಯನ್ ಅವರ ಮನಸ್ಸಿನ ಆಳಕ್ಕಿಳಿಯುವ ಸಂಗೀತ ಮತ್ತು ಹಿನ್ನೆಲೆ ಧ್ವನಿ ಕಥೆಯ ನೋವನ್ನು ಪ್ರೇಕ್ಷಕರ ಮನಸ್ಸಿನಲ್ಲಿ ದಟ್ಟವಾಗಿಸುತ್ತದೆ. ದೀಪು ಅವರ ಸಂಕಲನ ಕಥೆಯ ಹರಿವನ್ನು ಎಡೆಬಿಡದೆ ಅಚ್ಚುಕಟ್ಟಾಗಿ ಕಾಪಾಡಿದೆ. ಪೂರ್ಣ ಚಂದ್ರ ಫಿಲಂಸ್ ಬ್ಯಾನರ್ ಅಡಿಯಲ್ಲಿ ರೂಪುಗೊಂಡಿರುವ ಈ ಚಿತ್ರದ ನಿರ್ಮಾಣ ಮೌಲ್ಯಗಳು ಕಥೆಗೆ ತಕ್ಕಂತೆ ಸರಳವಾಗಿವೆ.
ಸಿನಿಮಾ ಮುಗಿದು ಚಿತ್ರಮಂದಿರದಿಂದ ಹೊರಬಂದ ನಂತರವೂ ನಮ್ಮ ಮನಸ್ಸಿನಲ್ಲಿ ಒಂದು ದೊಡ್ಡ ಪ್ರಶ್ನೆ ಅಂಟಿಕೊಂಡೇ ಇರುತ್ತದೆ—ನಾವು ನಿಜಕ್ಕೂ ಎಷ್ಟು ಕ್ರೂರರಾಗಿದ್ದೇವೆ? ಮಗುವಿಲ್ಲದ ಹೆಣ್ಣನ್ನು ಕೇವಲ ಅವಳ ಗರ್ಭಕೋಶದ ಕೊರತೆಗಾಗಿ ಅಪರಾಧಿಯಂತೆ ನೋಡುವ ನಮ್ಮ ಸಮಾಜದ ಈ ಕುರುಡು ಮನೋಭಾವ ಯಾವಾಗ ಬದಲಾಗುತ್ತದೆ? ‘ಬ್ರಹ್ಮ ಕಮಲ’ ಕೇವಲ ಕಣ್ಣೀರು ತರಿಸುವ ಚಿತ್ರವಲ್ಲ. ಆಳವಾದ ಚಿಂತನೆಯನ್ನು ಹುಟ್ಟಿಸುವಷ್ಟು ಶಕ್ತಿಶಾಲಿಯಾಗಿದೆ…!












































