#ADate #ADateMovie #KannadaTrailer #ADateKannada

ಮನಸ್ಸಿಗೆ ಒಪ್ಪುವ ಅ ಡೇಟ್!

Picture of Cinibuzz

Cinibuzz

Bureau Report

ಆಪ್ತವಾಗುವ ಅ ಡೇಟ್‌!

ಇದು ಪಕ್ಕಾ ಕಾರ್ಪೊರೇಟ್‌ ಯುಗ. ಇಲ್ಲಿ ಸಂಬಂಧಗಳು, ಮನುಷ್ಯತ್ವ ಮತ್ತು ಮಾನವೀಯತೆಗಳೆಲ್ಲಾ ಟಾರ್ಗೆಟ್‌, ಮೀಟಿಂಗ್‌ ಹಾಗೂ ಡೆಡ್‌ಲೈನ್‌ಗಳ ಗದ್ದಲದಲ್ಲಿ ಕಳೆದುಹೋಗಿವೆ. ಇನ್ನು ಪ್ರೀತಿಯ ವಿಷಯಕ್ಕೆ ಬಂದರೆ, ಅದಕ್ಕಂತೂ ತೀರಾ ಕಡಿಮೆ ವ್ಯಾಲಿಡಿಟಿ. ಯಾವಾಗ ಬೇಕಾದರೂ ಯಾವ ಸಣ್ಣ ನೆಪಕ್ಕಾದರೂ ಅದು ಎಕ್ಸ್‌ಪೈರ್ ಆಗಿಬಿಡಬಹುದು. ಇಂಥದ್ದೇ ಕಾಂಕ್ರೀಟ್ ಕಾಡಿನಲ್ಲಿ ಬದುಕುವ ಒಬ್ಬ ಅಪ್ಪಟ ಕನ್ನಡಿಗ ಕಾರ್ತಿಕ್. ಟೆಕ್ಕಿಯಾಗಿ ಕೋಡಿಂಗ್ ಜಗತ್ತಿನಲ್ಲೇ ಮುಳುಗಿದ್ದರೂ, ಆತನಿಗೆ ಮನುಷ್ಯರ ಮುಖವಾಡ ಕಳಚಿ ಅವರ ಅಸಲಿ ಮನಸ್ಥಿತಿಗಳನ್ನು ಅರಿಯುವ ವಿಪರೀತ ಕುತೂಹಲ. ‘ಯಾರು ಹೇಗೆ?’ ಎಂದು ತಿಳಿದುಕೊಳ್ಳುವ ಹಂಬಲಕ್ಕಾಗಿಯೇ ಊರೂರು ಅಲೆಯುವ ನಿರಂತರ ಪ್ರವಾಸಿ.

ಮತ್ತೊಂದೆಡೆ ಕಥಾನಾಯಕಿ—ಕನ್ನಡವನ್ನು ಚೆನ್ನಾಗಿ ಬಲ್ಲ ದೆಹಲಿ ಮೂಲದ ಹುಡುಗಿ ಮೊನಿಷಾ. ಹೈಟು ಕಡಿಮೆ ಇದ್ದರೂ ಮಾತು ಸ್ಟ್ರೈಟು! ಯಾವುದೋ ಕಹಿ ನೆನಪು, ಹೇಳಿಕೊಳ್ಳಲಾಗದ ಮಾನಸಿಕ ಒತ್ತಡದ ಗೂಡಾಗಿರುವ ಈಕೆಯನ್ನು ಹೇಗಾದರೂ ಮಾಡಿ ಒಂದು ದಿನದ ಮಟ್ಟಿಗೆ ಡೇಟ್‌ಗೆ ಕರೆದೊಯ್ದು, ಇಡೀ ಬೆಂಗಳೂರನ್ನು ಸುತ್ತಿಸಬೇಕೆಂಬುದು ಕಾರ್ತಿಕ್‌ನ ಬಯಕೆ. ಅದು ಸಾಧ್ಯವೂ ಆಗುತ್ತದೆ. ಒಲ್ಲದ ಮನಸ್ಸಿನಿಂದಲೇ ಒಪ್ಪಿ ಬೈಕು ಹತ್ತುವ ಮೊನಿಷಾ ಮತ್ತು ಕಾರ್ತಿಕ್‌ ನಡುವೆ ಬೆಳಗಿನ ಬಿಸಿಲಿನಿಂದ ರಾತ್ರಿಯ ಮಬ್ಬು ಕವಿಯುವ ಹೊತ್ತಿಗೆ ಏನೆಲ್ಲಾ ನಡೆಯುತ್ತದೆ? ಅವಳ ಕಣ್ಣಾಲಿಗಳಲ್ಲಿ ಮಡುಗಟ್ಟಿರುವ ಆ ಗತಕಾಲದ ಕಹಿಯೇನು? ಇಬ್ಬರ ಭಾವನೆಗಳು ಹೇಗೆ ಮುಖಾಮುಖಿಯಾಗುತ್ತವೆ ಎಂಬುದನ್ನು ಸೂಕ್ಷ್ಮವಾಗಿ ಕಟ್ಟಿಕೊಟ್ಟಿರುವ ಚಿತ್ರವೇ ‘ಅ ಡೇಟ್‌’.

ಸಾಫ್ಟ್‌ವೇರ್ ಲೋಕದ ಮಂದಿ ತಮ್ಮ ‘ವೀಕ್‌ಎಂಡ್‌’ ರಜೆಗಳನ್ನು ಬಳಸಿಕೊಂಡು ಸಿನಿಮಾ ಮಾಡಿ ಬಿಡುಗಡೆ ಮಾಡುವುದು ಹೊಸದೇನಲ್ಲ. ಆರಂಭದಲ್ಲಿ ಇದು ಕೂಡ ಅಂಥದ್ದೇ ಮತ್ತೊಂದು ಹವ್ಯಾಸಿ ಪ್ರಯತ್ನವಿರಬಹುದೇ ಎನಿಸುವುದು ಸಹಜ. ಆದರೆ   ಕಥೆ ನಿಧಾನಕ್ಕೆ ಗಂಭೀರ ತಿರುವು ಪಡೆದು ಮನಸ್ಸಿನಾಳಕ್ಕಿಳಿಯುತ್ತದೆ. ಇಡೀ ಸಿನಿಮಾದಲ್ಲಿ ಕಣ್ಣಿಗೆ ಕಾಣುವುದು ಕೇವಲ ಎರಡೇ ಪಾತ್ರಗಳು. ಮೂರನೇ ಪಾತ್ರವೊಂದು ಕಥೆಯ ತಿರುವಿಗೆ ಧ್ವನಿಯಾಗಿ ಬರುತ್ತದಾದರೂ, ಅದನ್ನು ನಿರ್ದೇಶಕರು ಪೂರ್ತಿಯಾಗಿ ಪರದೆಯ ಮೇಲೆ ರಿವೀಲ್ ಮಾಡುವುದೇ ಇಲ್ಲ. ಸಿನಿಮಾ ಮುಗಿದ ಮೇಲೆ ಆ ಪಾತ್ರ ಕಣ್ಣಿಗೆ ಕಾಣಿಸದೇ ಇರುವುದೇ ಚಿತ್ರಕಥೆಯ ದೃಷ್ಟಿಯಿಂದ ಸೂಕ್ತ ಎನಿಸುತ್ತದೆ.

ಇವತ್ತಿನ ಕಾಲಘಟ್ಟದಲ್ಲಿ ಮೆಟ್ರೋಪಾಲಿಟನ್ ಸಂಸ್ಕೃತಿಯಲ್ಲಿ ಹುಟ್ಟಿಕೊಳ್ಳುವ ಕಾಂಪ್ಲಿಕೇಟೆಡ್ ಪ್ರೇಮ ಪ್ರಕರಣಗಳು, ಗಂಡು-ಹೆಣ್ಣಿನ ಒಳಗಿನ ಅಗಾಧ ಮನೋವ್ಯಾಕುಲ, ಅಪನಂಬಿಕೆಯ ಕಹಿ, ಕಳೆದುಹೋದ ಬಕುನ ಅಥವಾ ಪ್ರೀತಿ ಮತ್ತೆ ಸಿಕ್ಕಿಬಿಡಬಹುದೇನೋ ಎನ್ನುವ ತೀವ್ರ ಹಪಹಪಿ, ಕೊನೆಗೆ ಅದು ಸಿಗದಿದ್ದಾಗ ಎದುರಾಗುವ ಹತಾಶೆ… ಇವೆಲ್ಲದರ ನಡುವೆ, “ಇಷ್ಟಕ್ಕೇ ಬದುಕು ಮುಗಿದುಹೋಗುವುದಿಲ್ಲ, ಜಗತ್ತು ತುಂಬಾ ವಿಶಾಲವಾಗಿದೆ; ಅದನ್ನು ಕೇವಲ ನೋವಿನ ಒಂದೇ ಹಿಡಿತಕ್ಕೆ ಸಿಲುಕಿಸಿ ಬದುಕಲು ಸಾಧ್ಯವಿಲ್ಲ” ಎಂದು ಬದುಕಿನ ಹೊಸ ದಾರಿಯನ್ನು ತೆರೆದಿಡುವ ಪ್ರಯತ್ನ ಇಲ್ಲಿದೆ. ಯಾವುದೇ ಕೃತಕತೆ ಇಲ್ಲದೆ ಜೀವನದ ಕಟು ವಾಸ್ತವವನ್ನು ತೆರೆದಿಟ್ಟಿರುವ ಕಾರಣಕ್ಕೇ ಸಿನಿಮಾ ಕ್ಷಣಕ್ಷಣಕ್ಕೂ ಆಪ್ತವಾಗುತ್ತಾ ಹೋಗುತ್ತದೆ. ಪಾತ್ರಗಳು ‘ಡೈಲಾಗ್’ ಹೊಡೆಯುವುದಿಲ್ಲ; ಬದಲಿಗೆ ಸಹಜವಾಗಿ ಸಂಭಾಷಿಸುತ್ತವೆ. ಅದೇ ಈ ಚಿತ್ರದ ಅತಿ ದೊಡ್ಡ ಶಕ್ತಿ.

ಬೆಂಗಳೂರು ಬರಿಯ ನಗರವಾಗಿ ಉಳಿಯದೆ, ಕಥೆಯ ಮತ್ತೊಂದು ಪಾತ್ರವಾಗಿ ಪ್ರಮುಖ ರಸ್ತೆಗಳಿಂದ ಹಿಡಿದು ಒಳಗಿನ ಪುಟ್ಟ ಗಲ್ಲಿಗಳ ತನಕ ಅತ್ಯುತ್ತಮವಾಗಿ ಸೆರೆಯಾಗಿದೆ. ಅಶ್ವಿನಿ ಶೆಣೈ ಮತ್ತು ಸುಜನೀತ್‌ ಶೆಟ್ಟಿ ತಮ್ಮ ಸಹಜ ಅಭಿನಯದ ಮೂಲಕ ಇಡೀ ಚಿತ್ರವನ್ನು ಎಲ್ಲಿಯೂ ಏಕತಾನತೆ ಕಾಡದಂತೆ ಅಚ್ಚುಕಟ್ಟಾಗಿ ಮುನ್ನಡೆಸಿದ್ದಾರೆ. ಮೊದಲಾರ್ಧ ಸ್ವಲ್ಪ ಮಟ್ಟಿಗೆ ನಿಧಾನಗತಿಯಲ್ಲಿ ಸಾಗಿದಂತೆ ಅನ್ನಿಸಿದರೂ, ದ್ವಿತೀಯಾರ್ಧ ಭಾವನೆಗಳ ತೀವ್ರತೆಯೊಂದಿಗೆ ಸಲೀಸಾಗಿ ತೇಲಿಸುತ್ತದೆ.

ಮೋಕ್ಷ ಬೀಟ್ಸ್ ಅವರ ಸಂಗೀತದಲ್ಲಿ ಎಐ ಬಳಕೆ ಕೊಂಚ ಹೆಚ್ಚೇ ಎದ್ದು ಕಾಣಿಸುವುದು ಅಲ್ಲಲ್ಲಿ ಅಪಸ್ವರದಂತೆ ಭಾಸವಾಗುತ್ತದೆ. ಆದರೆ ವಡ್ಡೆ ದೇವೇಂದರ್‌ ರೆಡ್ಡಿ ಅವರ ಛಾಯಾಗ್ರಹಣ ಅತ್ಯುನ್ನತ ಗುಣಮಟ್ಟದಿಂದ ಕೂಡಿದ್ದು, ಬೆಂಗಳೂರಿನ ಓಡಾಟವನ್ನು ಕಣ್ಣಿಗೆ ಕಟ್ಟುವಂತೆ ಶ್ರೀಮಂತವಾಗಿ ಕಟ್ಟಿಕೊಟ್ಟಿದೆ. ಒಟ್ಟಾರೆಯಾಗಿ, ‘ಅ ಡೇಟ್‌’ ಗದ್ದಲಗಳಿಲ್ಲದ, ಮನುಷ್ಯ ಸಂಬಂಧಗಳ ಸಂಕೀರ್ಣತೆಯನ್ನು ತೆರೆದಿಡುವ ಒಂದು ಪ್ರಾಮಾಣಿಕ ಹಾಗೂ ಆಪ್ತ ಸಿನಿಮಾ ಪ್ರಯತ್ನ. ಅಷ್ಟರಮಟ್ಟಿಗೆ ನಿರ್ದೇಶಕ ವಿಮಲ್‌ ರಾಜ್‌ ಗೆಲುವು ಸಾಧಿಸಿದ್ದಾರೆ.

ಇನ್ನಷ್ಟು ಓದಿರಿ

Scroll to Top