ಕ್ರೈಂ-ಥ್ರಿಲ್ಲರ್ ತಮಿಳು ವೆಬ್ ಸರಣಿಯಲ್ಲಿ ಸಂಜನಾ

Picture of Cinibuzz

Cinibuzz

Bureau Report

ನಟಿ ಸಂಜನಾ ಗಲ್ರಾನಿ ’ಐವಾರ್’ ಕ್ರೈಂ-ಥ್ರಿಲ್ಲರ್ ತಮಿಳು ವೆಬ್ ಸರಣಿಯಲ್ಲಿ ನಟಿಸುತ್ತಿದ್ದಾರೆ. ವಿಜಯ್ ಮತ್ತು ಹರ್ಷ ನಿರ್ದೇಶಿಸುತ್ತಿರುವ ಸರಣಿ ’ಯಪ್ ಟೀವಿ’ ಮೂಲಕ ಸ್ಟ್ರೀಮ್ ಆಗಲಿದೆ. ಐವರು ವ್ಯಕ್ತಿಗಳ ಬದುಕಿನ ಕತೆ ಹೇಳುವ ಸರಣಿಯಲ್ಲಿ ಅಂಜಲಿ ಪಾತ್ರದಲ್ಲಿ ಕಾಣಿಸಕೊಳ್ಳಲಿದ್ದಾರಂತೆ ಸಂಜನಾ. ಅಶ್ವಿನ್ ಕಾಕುಮನು ಆಕೆಗೆ ಜೋಡಿಯಾಗುತ್ತಿದ್ದಾರೆ. ಹನ್ನೆರೆಡು ವರ್ಷಗಳ ಹಿಂದೆ ’ಒರು ಕಾದಲ್ ಸೀವೀರ್’ ಚಿತ್ರದೊಂದಿಗೆ ಕಾಲಿವುಡ್ ಪ್ರವೇಶಿಸಿದ್ದ ಅವರು ನಂತರ ತಮಿಳಿನಲ್ಲಿ ನಟಿಸಿರಲಿಲ್ಲ. ಇದೀಗ ವೆಬ್ ಸರಣಿಯೊಂದಿಗೆ ಮತ್ತೆ ತಮಿಳಿಗೆ ಹಾರುತ್ತಿದ್ದಾರೆ.

ಸಂಜನಾ ನಟಿಸುತ್ತಿರುವ ’ಸ್ವರ್ಣಖಡ್ಗಂ’ ಐತಿಹಾಸಿಕ ತೆಲುಗು ಧಾರಾವಾಹಿ ಹಲವು ಭಾಷೆಗಳಲ್ಲಿ ಪ್ರಸಾರವಾಗುತ್ತಿದೆ. ತಮಿಳು ವೆಬ್ ಸರಣಿಯ ಅವಕಾಶ ಸಿಗುವಲ್ಲಿ ’ಸ್ವರ್ಣಖಡ್ಗಂ’ ಯಶಸ್ಸಿನ ಪಾಲೂ ಇದೆ. ಇದು ನನ್ನ ಮೊದಲ ತಮಿಳು ವೆಬ್ ಸರಣಿ. ನೋಡುಗರನ್ನು ಕ್ಷಣಕ್ಷಣಕ್ಕೂ ದಂಗುಬಡಿಸುವ ಚಿತ್ರಕಥೆ ಇಲ್ಲಿದೆ. ಸರಣಿ ಬಗ್ಗೆ ಸದ್ಯಕ್ಕೆ ಹೆಚ್ಚಿನ ವಿಷಯವಿಲ್ಲ. ಮುಂದಿನ ದಿನಗಳಲ್ಲಿ ಇತರೆ ಕಲಾವಿದರ ಬಗ್ಗೆ ಮಾಹಿತಿ ಸಿಗಲಿದೆ ಎನ್ನುತ್ತಾರೆ ಸಂಜನಾ.

ಸದ್ಯ ’ಸ್ವರ್ಣಖಡ್ಗಂ’ ಧಾರಾವಾಹಿಯಲ್ಲಿನ ಮಹಾರಾಣಿ ಮಹಾಧಾತ್ರಿ ಪಾತ್ರದಲ್ಲಿ ಸಂಜನಾ ಮಿಂಚುತ್ತಿದ್ದಾರೆ. ಉಳಿದಂತೆ ತೆಲುಗು ಮತ್ತು ಕನ್ನಡ ಚಿತ್ರಗಳು ಅವರ ಕೈಲಿವೆ. ’ಮತ್ತೆ ಮತ್ತೆ’ ಕನ್ನಡ ಚಿತ್ರದಲ್ಲಿ ಅವರಿಗೆ ಯೂಥ್‌ಫುಲ್ ಪಾತ್ರವಿದೆಯಂತೆ. ಬಾಲಿವುಡ್‌ನ ’ಗೋಲ್‌ಮಾಲ್’ ಮಾದರಿಯ ಚಿತ್ರ ಇದಾಗಲಿದೆಯಂತೆ. ಚಿತ್ರದಲ್ಲಿ ನಾನು ನಟಿಯಾಗಿಯೇ ಕಾಣಿಸಿಕೊಳ್ಳುತ್ತಿದ್ದೇನೆ. ಅಭಿಮಾನಿಗಾಗಿ ಮಿಡಿಯುವ ಸರಳ, ಸುಂದರ ಪಾತ್ರವಿದು ಎನ್ನುವುದು ಸಂಜನಾ ವಿಶ್ಲೇಷಣೆ.

#

ಇನ್ನಷ್ಟು ಓದಿರಿ

Scroll to Top