ಏನಿದು ಅನ್ಯಾಯ
ಬಹುಶಃ ಇತಿಹಾಸದಲ್ಲೇ ಮೊಟ್ಟ ಮೊದಲ ಬಾರಿಗೆ ಪ್ರೆಸ್‌ಕ್ಲಬ್ ಅಂಗಳಕ್ಕೆ ಪೊಲೀಸರ ಪಹರೆ ಬಿದ್ದಿದೆ. ಇಡೀ ಪತ್ರಕರ್ತ ಸಮುದಾಯ ಹಾಲಿ ಇರುವ ಕಮಿಟಿ ವಿರುದ್ಧ ಯುದ್ಧ ಸಾರಿದೆ… ಈ ಕುರಿತ ಸರಣಿಯ ವರದಿಯ ಮೊದಲ ಕಂತು ಇಲ್ಲಿದೆ….
***
ರಾಜಧಾನಿ ಬೆಂಗಳೂರಿನ ಹಸಿರು ವನ ಕಬ್ಬನ್ ಪಾರ್ಕ್‌ನ ಮಡಿಲಲ್ಲಿ, ವಿಧಾನಸೌಧ, ರಾಜಭವನ ಮತ್ತು ಹೈಕೋರ್ಟ್‌ಗಳ ಆಯಕಟ್ಟಿನ ನೆರಳಲ್ಲೇ ಪ್ರತಿಷ್ಟಾಪನೆಗೊಂಡ ಸಂಸ್ಥೆ ಬೆಂಗಳೂರು ಪ್ರೆಸ್ ಕ್ಲಬ್ . 1960ರ ದಶಕದ ಉತ್ತರಾರ್ಧದಲ್ಲಿ ಪತ್ರಿಕಾರಂಗದ ಧೀಮಂತ ಚೇತನಗಳಾದ ಕೆ. ಎ. ನೆಟ್ಟಕಲ್ಲಪ್ಪ ಹಾಗೂ ಪ್ರಖರ ಪತ್ರಕರ್ತ ಟಿ. ಎಸ್. ರಾಮಚಂದ್ರರಾವ್ ಅವರಂತಹ ಮಹನೀಯರು, ಪತ್ರಕರ್ತರಲ್ಲಿ ವೃತ್ತಿಪರ ಒಗ್ಗಟ್ಟು ಮೂಡಿಸಲು, ಪರಸ್ಪರ ಮುಕ್ತ ಸಂವಾದ ಬೆಳೆಸಲು ಮತ್ತು ಸುದ್ದಿ ಮೂಲಗಳನ್ನು ದಿಟ್ಟವಾಗಿ ಎದುರುಗೊಳ್ಳಲು ಕಟ್ಟಿದ ಪ್ರಜಾಸತ್ತಾತ್ಮಕ ಶಕ್ತಿಕೇಂದ್ರವಿದು. ದಿನನಿತ್ಯ ರಾಜ್ಯ-ದೇಶದ ರಾಜಕೀಯ ಆಗುಹೋಗುಗಳನ್ನು ಜಗತ್ತಿಗೆ ಸಾರುವ ಪತ್ರಿಕಾಗೋಷ್ಠಿಗಳು, ಮುಖ್ಯಮಂತ್ರಿಗಳಿಂದ ಹಿಡಿದು ಸಾಹಿತ್ಯ, ಸಿನಿಮಾ, ಸಮಾಜದ ಗಣ್ಯರವರೆಗೂ ಮುಖಾಮುಖಿಯಾಗುವ ನೇರ ಸಂವಾದಗಳು, ಪ್ರತಿಷ್ಠಿತ ‘ವರ್ಷದ ವ್ಯಕ್ತಿ’ ಪ್ರಶಸ್ತಿ ಸೇರಿದಂತೆ ಅಪ್ರತಿಮ ಪತ್ರಕರ್ತರಿಗೆ ಗೌರವ ಸಲ್ಲಿಸುವ ಮೂಲಕ, ಮುದ್ರಣ ಮಾಧ್ಯಮದಿಂದ ಇಂದಿನ ಡಿಜಿಟಲ್ ಯುಗದವರೆಗೂ ಸಾರ್ವಜನಿಕ ಅಭಿಪ್ರಾಯವನ್ನು ರೂಪಿಸುವ ಪ್ರಮುಖ ಕೊಂಡಿಯಾಗಿ ಈ ವೇದಿಕೆ ಇತಿಹಾಸದುದ್ದಕ್ಕೂ ಮೆರೆದಿದೆ. ಆದರೆ, ಇಡೀ ನಾಡಿಗೆ ನೀತಿಪಾಠ ಹೇಳುವ, ರಾಜಕಾರಣಿಗಳ ಭ್ರಷ್ಟಾಚಾರವನ್ನು ಬೆತ್ತಲೆ ಮಾಡುವ, ಸಂವಿಧಾನ ಮತ್ತು ಕಾನೂನಿನ ಬಗ್ಗೆ ಗಂಟಲು ಹರಿದುಕೊಳ್ಳುವ ಪತ್ರಕರ್ತರ ಸ್ವಂತ ಮನೆಯಲ್ಲೇ ಈಗ ಪ್ರಜಾಪ್ರಭುತ್ವಕ್ಕೆ ಎಳ್ಳುನೀರು ಬಿಡಲಾಗಿದ್ದು, ಹೆಮ್ಮೆಯ ತಾಣ ಇಂದು ಕೆಲವೇ ಕೆಲವು ಸ್ವಾರ್ಥಿಗಳ, ಅಧಿಕಾರದಾಹಿಗಳ ಕಪಿಮುಷ್ಟಿಯಲ್ಲಿ ಸಿಲುಕಿ ಗಬ್ಬೆದ್ದು ನಾರುತ್ತಿದೆ ಎನ್ನುವ ದೊಡ್ಡ ಮಟ್ಟದ ಆರೋಪಗಳು ಕೇಳಿಬರುತ್ತಿವೆ.
ʻʻಮೂಲ ಬೈಲಾ ಪ್ರಕಾರ ವರ್ಷಕ್ಕೊಮ್ಮೆ ಇಲ್ಲವೇ ನಿಯಮಬದ್ಧವಾಗಿ ಚುನಾವಣೆ ನಡೆದು ಹೊಸಬರಿಗೆ ಆಡಳಿತದ ಚುಕ್ಕಾಣಿ ಸಿಗಬೇಕಿದ್ದ ಸಂಸ್ಥೆಯಲ್ಲಿ, ಸದ್ಯ ಗದ್ದುಗೆ ಏರಿ ಕುಳಿತಿರುವ ಅಧ್ಯಕ್ಷ ಶ್ರೀಧರ್ ಮತ್ತು ಅವರ ಕೃಪಾಪೋಷಿತ ಮಂಡಳಿಗೆ ಕುರ್ಚಿಯ ವ್ಯಾಮೋಹ ನೆತ್ತಿಗೇರಿದೆ.ʼʼ ಅನ್ನೋದು ಸದ್ಯದ ವಿವಾದಕ್ಕೆ ಕಾರಣ!
ಪ್ರೆಸ್‌ಕ್ಲಬ್ಬನ್ನೇ ತಮ್ಮ ಖಾಸಗಿ ಜಹಗೀರು ಎಂಬಂತೆ ಆಳಲು ಹೊರಟಿರುವ ಇವರ ಅಧಿಕಾರದ ಹಪಹಪಿಗೆ ಕಳೆದ ಐದು ವರ್ಷಗಳು ಸಾಕ್ಷಿ ನುಡಿಯುತ್ತಿದೆ. ಸದ್ಯ ಬರೋಬ್ಬರಿ ಐದು ವರ್ಷಗಳ ಕಾಲ ಚುನಾವಣೆ ನಡೆಸದೆಯೇ ಕಾಲದೂಡಿದ್ದ ಇದೇ ಅಧ್ಯಕ್ಷರು, ಅಂದು ಸದಸ್ಯರಿಗೆ ಕೈಮುಗಿದು, ‘ತಪ್ಪಾಗಿದೆ, ಎಲ್ಲವನ್ನೂ ಸರಿಪಡಿಸಿ ಕೊಡುತ್ತೇನೆ, ಒಂದೇ ಒಂದು ಅವಕಾಶ ಕೊಡಿ’ ಎಂದು ಗೋಗರೆದು ಕನಿಕರ ಗಿಟ್ಟಿಸಿಕೊಂಡು ಮತ್ತೆ ಅಧಿಕಾರಕ್ಕೇರಿದ್ದರು. ಆದರೆ ಕುರ್ಚಿಯ ಮೇಲೆ ಹಾಲಿ ಆಡಳಿತ ಮಂಡಳಿ, ಚುನಾವಣೆ ನಡೆದು ಮೂರ್ನಾಲ್ಕು ವರ್ಷಗಳೇ ಉರುಳಿದರೂ, ನಿಗಧಿತ ಅವಧಿಯಲ್ಲಿ ಚುನಾವಣೆ ನಡೆಸದೆ ಸಮಯ ದೂಡುತ್ತಿದ್ದಾರೆ. ಸಾಲದೆಂಬಂತೆ, ಇನ್ನು ಮುಂದೆ ಐದು ವರ್ಷಕ್ಕೊಮ್ಮೆ ಮಾತ್ರ ಚುನಾವಣೆ ನಡೆಸುತ್ತೇವೆ ಎಂದು ಬೈಲಾ ತಿದ್ದುಪಡಿಯ ಅಡ್ಡದಾರಿ ಹಿಡಿದು, ಸತತ ಹತ್ತು ವರ್ಷಗಳ ಕಾಲ ತಾವೇ ಸರ್ವಾಧಿಕಾರಿಗಳಾಗಿ ಪ್ರೆಸ್ ಕ್ಲಬ್ ಅಂಗಳದಲ್ಲಿ ಪದ್ಮಾಸನ ಹಾಕಿ ಕೂರಲು ಹವಣಿಸುತ್ತಿದ್ದಾರೆ.
ಸಂಸ್ಥೆಯ ನಿಯಮಾವಳಿಯನ್ನೇ ಕಾಲಕಸ ಮಾಡಿಕೊಂಡಿರುವ ಈ ಕೂಟ, ವರ್ಷಕ್ಕೆ ಕೇವಲ 25 ಜನರಿಗೆ ನೀಡಬೇಕಿದ್ದ ಸದಸ್ಯತ್ವದ ಮಿತಿಯನ್ನು ಮೊದಲು 50ಕ್ಕೆ ಏರಿಸಿ, ಈಗಂತೂ ದುರಾಶೆಗೆ ಬಿದ್ದು ಬರೋಬ್ಬರಿ 130 ರಿಂದ 140 ಜನರಿಗೆ ಅಡ್ಡಾದಿಡ್ಡಿಯಾಗಿ ಸದಸ್ಯತ್ವ ಹಂಚಿ ಅಕ್ರಮದ ಗಂಜಿ ಕೇಂದ್ರ ಮಾಡಿಕೊಂಡಿದೆ. ಆಘಾತಕಾರಿ ಸಂಗತಿಯೆಂದರೆ, ಪತ್ರಿಕಾರಂಗಕ್ಕೂ ತಮಗೂ ಕಿಂಚಿತ್ತೂ ನಂಟಿಲ್ಲದ, ಗಂಭೀರ ಅಪರಾಧ ಪ್ರಕರಣಗಳಲ್ಲಿ ಸಿಲುಕಿಕೊಂಡಿರುವ ಶಾಲಾ ಮಾಸ್ತರರು, ಕ್ರಿಮಿನಲ್ ಕೇಸುಗಳ ಆರೋಪಿಗಳು ಹಾಗೂ ಮಠಾಧೀಶರು, ಶಾಖಾ ಸ್ವಾಮೀಜಿಗಳಿಗೆಲ್ಲ ಪ್ರೆಸ್‌ಕ್ಲಬ್‌ನ ಸದಸ್ಯತ್ವವನ್ನು ಅಕ್ರಮವಾಗಿ ಹಂಚಲಾಗಿದೆ. ಬೆಂಗಳೂರಿನ ಹೊರತು ಪಡಿಸಿ, ವಿವಿಧ ಜಿಲ್ಲೆಗಳಲ್ಲಿ ನೆಲೆಸಿರುವ ಪತ್ರಕರ್ತರಿಗೂ ಬೆಂಗಳೂರು ಪ್ರೆಸ್ ಕ್ಲಬ್ ಸದಸ್ಯತ್ವ ನೀಡಿ ಮತಬ್ಯಾಂಕ್ ಸೃಷ್ಟಿಸಿಕೊಂಡಿದ್ದಾರೆ. ಇದರ ಹಿಂದೆ ಹಣಕಾಸಿನ ವಹಿವಾಟುಗಳು ನಡೆದಿವೆ ಎಂಬ ಆಪಾದನೆಗಳು ಸಾಮಾಜಿಕ ತಾಣಗಳಲ್ಲಿ ಸುದ್ದಿ ಹರಿದಾಡುತ್ತಿವೆ. ಹ ಜಿಲ್ಲಾ ಪತ್ರಕರ್ತರು ಬಂದು ಸಮಾಜವನ್ನು ಎಚ್ಚರಿಸಬೇಕಾದ ಪತ್ರಕರ್ತರ ಕ್ಲಬ್ಬಿನಲ್ಲಿ ಕುಳಿತು ಸ್ವಾಮೀಜಿಗಳು ಮತ್ತು ಕೇಸುಗಳ ಆರೋಪಿಗಳು, ಹೊರಜಿಲ್ಲೆಯ ಪತ್ರಕರ್ತರು, ಸಂಪಾದಕರು ಏನು ವರದಿ ಮಾಡಬೇಕಿದೆ ಅನ್ನೋ ಪ್ರಶ್ನೆಯನ್ನು ಸಾರ್ವಜನಿಕರೂ ಕೇಳುವಂತಾಗಿದೆ. ಹಾಲಿ ಆಡಳಿತ ಮಂಡಳಿ ನೀಡಿರುವ ಸದಸ್ಯತ್ವಗಳನ್ನು ಅಮಾನತಿನಲ್ಲಿಟ್ಟು, ಸರ್ವ ಸದಸ್ಯರ ಸಭೆಗೆ ಆಹ್ವಾನ ನೀಡದೇ ಚುನಾವಣೆ ನಡೆಸಿದರೆ ಮಾತ್ರ, ಪಾರದರ್ಶಕವಾಗಿ ಹೊಸ ಕಮಿಟಿ ಆಯ್ಕೆ ಆಗಲು ಸಾಧ್ಯ. ಇಲ್ಲದಿದ್ದಲಿ, ಯಾವ ಅನ್ಯಾಯ ನಡೆಯಬಾರದೋ ಅದು ಅಕ್ಷರಶಃ ಅಚ್ಚುಕಟ್ಟಾಗಿ ನೆರವೇರಲಿದೆ!
ಒಟ್ಟಾರೆ ಈ ಅನ್ಯಾಯ ಮತ್ತು ಅಧಿಕಾರ ವಿಸ್ತರಣೆಯ ಹುನ್ನಾರದ ವಿರುದ್ಧ ಇಡೀ ಕ್ಲಬ್ಬೇ ಮೂಕಪ್ರೇಕ್ಷಕನಾಗಿದ್ದ ಹೊತ್ತಿನಲ್ಲಿ, ಹಿರಿಯ ಪತ್ರಕರ್ತ ಲಕ್ಷ್ಮೀ ಸಾಗರಸ್ವಾಮಿ ಗೌಡ ಕೆಂಡಾಮಂಡಲವಾಗಿ ಕರ್ನಾಟಕ ಹೈಕೋರ್ಟ್ ಮೆಟ್ಟಿಲೇರಿ (WP No. 29549/2026) ರಾಜ್ಯ ಸರ್ಕಾರ ಹಾಗೂ ಪ್ರೆಸ್ ಕ್ಲಬ್ ಆಡಳಿತದ ವಿರುದ್ಧ ನೇರ ಕಾನೂನು ಸಮರ ಸಾರಿದ್ದಾರೆ.
ಅರ್ಜಿಯ ಗಂಭೀರತೆಯನ್ನು ಪರಿಗಣಿಸಿ ತುರ್ತು ವಿಚಾರಣೆ ನಡೆಸಿದ ಗೌರವಾನ್ವಿತ ನ್ಯಾಯಮೂರ್ತಿ ಸಿ.ಎಂ. ಪೂಣಚ್ಚ ಅವರ ಏಕಸದಸ್ಯ ಪೀಠ, ಆಡಳಿತ ಮಂಡಳಿಯ ಕಿವಿಯನ್ನು ಹಿಂಡಿ ಅತ್ಯಂತ ಖಡಕ್ ಆದ ಮೌಖಿಕ ಆದೇಶವನ್ನು ಹೊರಡಿಸಿದೆ. ಅರ್ಜಿದಾರರ ಪರ ವಕೀಲರು ನ್ಯಾಯಪೀಠದ ಮುಂದೆ ವಾಸ್ತವವನ್ನು ಬೆತ್ತಲೆ ಮಾಡುತ್ತಾ, 2026ರ ಸೆಪ್ಟೆಂಬರ್ 20ರ ಇಂದು ನಿಗದಿಯಾಗಿರುವ ವಿಶೇಷ ಮಹಾಸಭೆಯಲ್ಲಿ ಹಾಲಿ ಆಡಳಿತ ಮಂಡಳಿಯ ಅವಧಿಯನ್ನೇ ಅಕ್ರಮವಾಗಿ ವಿಸ್ತರಿಸುವ ಹಾಗೂ ಸನ್ನಿಹಿತವಾಗಿರುವ ಹೊಸ ಚುನಾವಣೆಗಳನ್ನು ಅನಿರ್ದಿಷ್ಟಾವಧಿಗೆ ಮುಂದೂಡುವ ವ್ಯವಸ್ಥಿತ ಹುನ್ನಾರ ಅಡಗಿದೆ ಎಂದು ನ್ಯಾಯಾಲಯದ ಗಮನಕ್ಕೆ ತಂದರು. ವಾದವನ್ನು ಗಂಭೀರವಾಗಿ ಪರಿಗಣಿಸಿದ ನ್ಯಾಯಮೂರ್ತಿಗಳು, ಸೆಪ್ಟೆಂಬರ್ 20ರ ಆಕ್ಷೇಪಾರ್ಹ ವಿಶೇಷ ಮಹಾಸಭೆಯಲ್ಲಿ ಆಡಳಿತ ಮಂಡಳಿ ಬೈಲಾ ಬದಲಾಯಿಸಿ ಏನೇ ತೀರ್ಮಾನಗಳನ್ನು ಕೈಗೊಂಡರೂ, ಆ ಎಲ್ಲಾ ನಿರ್ಧಾರಗಳೂ ಈ ರಿಟ್ ಅರ್ಜಿಯ ಅಂತಿಮ ತೀರ್ಪಿಗೆ ಒಳಪಟ್ಟಿರುತ್ತವೆ ಎಂದು ಕಡ್ಡಿ ಮುರಿದಂತೆ ಆದೇಶಿಸಿ ಎಚ್ಚರಿಕೆಯ ಚಾಟಿ ಬೀಸಿದ್ದಾರೆ. ಜೊತೆಗೆ ಸರ್ಕಾರದ ಪರ ವಕೀಲರಿಗೆ ನೋಟಿಸ್ ನೀಡಿ, ನಾಲ್ಕನೇ ಪ್ರತಿವಾದಿಗೆ ತುರ್ತು ನೋಟಿಸ್ ಜಾರಿಗೊಳಿಸಿರುವ ನ್ಯಾಯಾಲಯವು ಪ್ರಕರಣದ ಮುಂದಿನ ವಿಚಾರಣೆಯನ್ನು 2026ರ ಅಕ್ಟೋಬರ್ 26ಕ್ಕೆ ನಿಗದಿಪಡಿಸಿದೆ.
ಈ ಬೆಳವಣಿಗೆಯಿಂದಾಗಿ ಮಹಾಸಭೆಯಲ್ಲಿ ತಮಗೆ ಬೇಕಾದಂತೆ ಕಾಯ್ದೆ-ಕಾನೂನುಗಳನ್ನು ತಿದ್ದುಪಡಿ ಮಾಡಿಕೊಂಡು, ಠರಾವು ಪಾಸು ಮಾಡಿ ಅಧಿಕಾರದ ರುಚಿ ಸವಿಯಲು ಕನಸು ಕಾಣುತ್ತಿದ್ದ ಪ್ರಸ್ತುತ ಪದಾಧಿಕಾರಿಗಳಿಗೆ ಗಂಟಲಲ್ಲಿ ನಲ್ಲಿ ಮೂಳೆ ಸಿಕ್ಕಿಕೊಂಡಂತಾಗಿದೆ. ಸಭೆಯಲ್ಲಿ ಗದ್ದಲದ ನಡುವೆ ಕೈಯೆತ್ತಿಸಿ ಕಾನೂನಿನ ಕಣ್ಣಿಗೆ ಮಣ್ಣೆರಚಬಹುದು ಎಂಬ ಇವರ ಲೆಕ್ಕಾಚಾರಕ್ಕೆ ಹೈಕೋರ್ಟ್‌ನ ಈ ಷರತ್ತು ಸರಿಯಾಗಿ ಬ್ರೇಕ್ ಹಾಕಿದೆ. ಪತ್ರಿಕೋದ್ಯಮದ ಮೂಲ ಉದ್ದೇಶ, ನೈತಿಕತೆ ಮತ್ತು ಸಂಸ್ಥೆಯ ಪಾವಿತ್ರ್ಯವನ್ನು ಗಾಳಿಗೆ ತೂರಿ, ಕ್ಲಬ್ ಅನ್ನು ತಮ್ಮ ಜಹಗೀರು ಎಂಬಂತೆ ನಡೆಸಿಕೊಳ್ಳಲು ಯತ್ನಿಸಿದವರ ವಿರುದ್ಧ ಕೆಂಡಾಮಂಡಲವಾಗಿರುವ ಪತ್ರಕರ್ತರು, “ಇಡೀ ಸಮಾಜಕ್ಕೆ ಕನ್ನಡಿ ಹಿಡಿಯುವ ಪತ್ರಕರ್ತರ ಸಂಸ್ಥೆಯಲ್ಲೇ ಇಂತಹ ಸರ್ವಾಧಿಕಾರಿ ಧೋರಣೆಗಳನ್ನು ಸಹಿಸಲು ಸಾಧ್ಯವಿಲ್ಲ; ಪ್ರಜಾಸತ್ತಾತ್ಮಕ ಮೌಲ್ಯಗಳಂತೆ ನಿಗದಿತ ಅವಧಿಗೆ ಚುನಾವಣೆ ನಡೆದೇ ತೀರಬೇಕು” ಎಂದು ಸಮರ ಸಾರಿದ್ದಾರೆ. ಒಟ್ಟಿನಲ್ಲಿ, ಐತಿಹಾಸಿಕ ಪ್ರೆಸ್ ಕ್ಲಬ್‌ನ ಅಂಗಳದಲ್ಲಿ ಹೊತ್ತಿಕೊಂಡಿರುವ ಈ ಬೈಲಾ ಬಂಡಾಯ ಮತ್ತು ಸದಸ್ಯತ್ವ ಹಂಚಿಕೆಯ ಕರಾಳ ದಂಧೆಯ ಕಿಡಿ, ಅಕ್ಟೋಬರ್ 26ರ ಹೈಕೋರ್ಟ್ ವಿಚಾರಣೆಯ ಹೊತ್ತಿಗೆ ಆಡಳಿತ ಮಂಡಳಿಯನ್ನು ಯಾವ ಕಟಕಟೆಯಲ್ಲಿ ನಿಲ್ಲಿಸಲಿದೆ ಎಂಬುದನ್ನು ಇಡೀ ಮಾಧ್ಯಮ ಲೋಕವೇ ಬೆರಗುಗಣ್ಣಿನಿಂದ ನೋಡುತ್ತಿದೆ.
- ಅರುಣ್ ಕುಮಾರ್ ಜಿ












































