ಬರೀ ಬಿಲ್ಡಪ್‌ಗಳಿರುವ ಸಿನಿಮಾಗಳ ಮಧ್ಯೆ, ಮಣ್ಣಿನ ವಾಸನೆ, ಹಳ್ಳಿಯ ನೈಜ ಚಿತ್ರಣ ಹಾಗೂ ಭ್ರಷ್ಟ ವ್ಯವಸ್ಥೆಯ ಬೆವರಿಳಿಸುವಂತಹ ಕಥೆಯಿರುವ ಪಕ್ಕಾ ಮಾಸ್ ಅಂಡ್ ಆಕ್ಷನ್ ಸಿನಿಮಾ ‘ವಾರಿಯರ್’.
ಮೊದಲೆಲ್ಲಾ ಪುರುಷಪ್ರಧಾನ ವ್ಯವಸ್ಥೆ ಹೆಣ್ಣನ್ನು ಶೋಷಣೆಗೆ ಒಳಪಡಿಸುತ್ತಿತ್ತು. ಅದರಲ್ಲೂ ಕೌಟುಂಬಿಕ ವಾತಾವರಣದಲ್ಲಿ ಹೆಣ್ಣುಮಕ್ಕಳು ಜೀವಿಸೋದು ಕಷ್ಟಸಾಧ್ಯವಾಗಿತ್ತು. ವರದಕ್ಷಿಣೆ ಪೀಡೆ ಹೆಣ್ಣುಮಕ್ಕಳನ್ನು ಕಣ್ಣೀರಲ್ಲಿ ಕೈತೊಳೆಯುವಂತೆ, ಮಾಡಿದ್ದು ಸುಳ್ಳಲ್ಲ. ಈಗ ಕಾಲ ತುಂಬಾನೇ ಬದಲಾಗಿದೆ. ಈಗ ಹೆಣ್ಣಿನ ಮನೆಯವರ ನಿರೀಕ್ಷೆ ಹೆಚ್ಚಿದೆ. ಹೆಣ್ಣುಮಕ್ಕಳ ಸಂಖ್ಯೆ ಕಡಿಮೆ ಇರೋದು ಬಹುಶಃ ಇದಕ್ಕೆ ಕಾರಣವಿರಬಹುದು. ಹಳ್ಳೀಕಡೆಯಂತೂ ಹೆಣ್ಣೆತ್ತವರು ಯಾವ ಗಂಡನ್ನೂ ಅಷ್ಟು ಸುಲಭಕ್ಕೆ ಒಪ್ಪೋದೇ ಇಲ್ಲ. ಹುಡುಗ ಅದಾಗಿರಬೇಕು, ಇದಾಗಿರಬೇಕು ಅಂತಾ ಪಟ್ಟೀನೇ ಕೊಡ್ತಾರೆ. ಅಂಥ ಒಂದು ಅಂಶವನ್ನೂ ಈ ಚಿತ್ರದಲ್ಲಿ ಸೂಕ್ಷ್ಮವಾಗಿ ಚರ್ಚಿಸಿದ್ದಾರೆ. ಅಸಲಿ ವಿಚಾರ ಇದಲ್ಲ.
ತೀರಾ ಗಂಭೀರವಾದ ವಸ್ತುವೊಂದನ್ನು ಹಳ್ಳಿಯ ಸೊಗಡು ಮತ್ತು ಕಮರ್ಷಿಯಲ್ ಅಂಶಗಳನ್ನು ಬೆರೆಸಿ ಇಲ್ಲಿ ವಿವರಿಸಿದ್ದಾರೆ. ಇಲ್ಲಿ ನಾಯಕ ಕೇವಲ ನಾಲ್ಕು ಜನ ವಿಲನ್‌ಗಳಿಗೆ ಹೊಡೆದು ಹೋಗುವ ಮಾಮೂಲಿ ಹೀರೋ ಅಲ್ಲ; ಇಡೀ ವ್ಯವಸ್ಥೆಯ ವಿರುದ್ಧ ರೊಚ್ಚಿಗೇಳುವ ಅಪ್ಪಟ ಹೋರಾಟಗಾರ. ಚಿತ್ರದ ಸಂಭಾಷಣೆಗಳಿಗಂತೂ ಅತ್ಯಂತ ಗುಣಮಟ್ಟದಿಂದ ಕೂಡಿದೆ. “ಇದು ಹಣೆಬರಹ ಅಲ್ಲ, ನನ್ನ ನಡುವೆ ಇರೋ ಕೆಟ್ಟವ್ಯವಸ್ಥೆ… ದುಷ್ಟರ ಕೊಂದರೆ ಪೂಜೆ ಮಾಡಲಿಕ್ಕೆ ಇದು ದ್ವಾಪರ ಯುಗ ಅಲ್ಲ, ಕಲಿಯುಗ!” ಎಂದು ನಾಯಕ ಗುಡುಗಿದಾಗ ರೋಮಾಂಚನವಾಗುತ್ತದೆ. ಹಾಗೆಯೇ, “ಕಾನೂನನ್ನೇ ಕೊಂಡುಕೊಂಡಂತ ಜನ, ಅಂತವರಿಗೆ ಶಿಕ್ಷೆ ಆಗ್ಬೇಕು” ಎಂಬ ಮಾತು ದುಡ್ಡು ಕೊಟ್ಟು ನ್ಯಾಯ ಖರೀದಿಸುವ ಇಂದಿನ ಭ್ರಷ್ಟ ಸಮಾಜದ ಅಸಲೀಯತ್ತನ್ನು ಅನಾವರಣಗೊಳಿಸುತ್ತದೆ. ಚಿತ್ರದ ಮತ್ತೊಂದು ಪ್ರಬಲ ಅಂಶವೆಂದರೆ ಅದರ ಎಮೋಷನಲ್ ಕನೆಕ್ಟ್. “ನಮ್ಮ ದೇಶದಲ್ಲಿ ಅನ್ನ ಕೊಡೋ ರೈತನಿಗಾಗಲಿ, ದೇಶ ಕಾಯೋ ಸೈನಿಕನಿಗಾಗಲಿ ಬದುಕಿದ್ದಾಗ ಮೂರು ಕಾಸಿನ ಬೆಲೆ ಇಲ್ಲ.. ಅವನ ಸಾವಿಗೆ ಮಾತ್ರ ಬೆಲೆ ಕಟ್ತಾರೆ!” ಎಂಬ ಡೈಲಾಗ್ ಎದೆಗೆ ನಾಟುತ್ತದೆ.
ಇದು ಬರಿಯ ಹೊಡೆದಾಟ, ಆಕ್ಷನ್‌ಗೆ ಮಾತ್ರ ಸೀಮಿತವಾದ ಚಿತ್ರವಲ್ಲ. ಹಳ್ಳಿಯ ಬದುಕು ಹಾಗೂ ಬದಲಾಗಿರುವ ಕೌಟುಂಬಿಕ ಸಂಬಂಧಗಳನ್ನು ಚಿತ್ರದಲ್ಲಿ ತುಂಬಾ ಸಹಜವಾಗಿ ಕಟ್ಟಿಕೊಡಲಾಗಿದೆ. “ಆಗ ಗಂಡೆತ್ತವರಿಗೆ ಅಹಂಕಾರ ಇತ್ತು, ಈಗ ಹೆಣ್ಣೆತ್ತವರಿಗೆ ಅಹಂಕಾರ ಇದೆ” ಎಂಬ ಡೈಲಾಗ್ ಪ್ರೇಕ್ಷಕರನ್ನು ನಗಿಸುತ್ತದೆ. ಅದೇ ರೀತಿ, “ನಾನು ಕಷ್ಟಪಟ್ಟು ಸಿಟೀಲಿ ಓದಿಸ್ತಾ ಇರೋದು ಇಲ್ಲಿ ಕಸ ಬಾಚಿಕೊಂಡಿರೋರಿಗೆ ಹೆಣ್ಣು ಕೊಡಕಾ?” ಎಂಬ ಮಾತು ದುಡ್ಡಿನ ಅಹಂಕಾರ ಹಾಗೂ ವರ್ಗಭೇದವನ್ನು ಎತ್ತಿ ತೋರಿಸುತ್ತದೆ. ಇದರ ಮಧ್ಯೆ ಬರುವ ಚಿರತೆ ದಾಳಿಗೆ ತುತ್ತಾಗುವ ಶಾಲಾ ಬಾಲಕಿಯ ಪ್ರಸಂಗ ಕಥೆಗೆ ಇನ್ನಷ್ಟು ತೂಕ ಹಾಗೂ ಸೂಕ್ಷ್ಮತೆಯನ್ನು ನೀಡಿದೆ. ವಿಬಿ ಫಿಲ್ಮ್ಸ್ ನಿರ್ಮಾಣದಲ್ಲಿ ಅದ್ಧೂರಿಯಾಗಿ ಮೂಡಿಬಂದಿರುವ ಈ ಚಿತ್ರದಲ್ಲಿ ಉಮೇಶ್ ಹೆಬ್ಬಾಳ್, ಬಾಲಾ ರಾಜವಾಡಿ, ರಾಯ್ ಬಡಿಗೇರ್, ಪ್ರಣವ್ ರಾವ್ ಮತ್ತು ಪ್ರಶಾಂತ್ ಸಾಗರ ಅವರಂತಹ ಕಲಾವಿದರು ತಮ್ಮ ಪಾತ್ರಗಳಿಗೆ ಅದ್ಭುತವಾಗಿ ಜೀವ ತುಂಬಿದ್ದಾರೆ.
ಒಟ್ಟಿನಲ್ಲಿ ಹೇಳಬೇಕೆಂದರೆ, ‘ವಾರಿಯರ್’ ಕೇವಲ ಟೈಮ್‌ಪಾಸ್ ಮಸಾಲಾ ಸಿನಿಮಾ ಅಲ್ಲ. ಸಮಾಜದ ಬಗ್ಗೆ ಕಾಳಜಿ ಇಟ್ಟುಕೊಂಡು, ಭ್ರಷ್ಟರ ಬಣ್ಣ ಬಯಲು ಮಾಡುವ ಒಂದು ಪವರ್‌ಫುಲ್ ಸಿನಿಮಾ. ಆಕ್ಷನ್, ಎಮೋಷನ್, ಖಡಕ್ ಡೈಲಾಗ್ಸ್ ಎಲ್ಲವೂ ಹದವಾಗಿ ಬೆರೆತಿರುವ ಈ ಚಿತ್ರ ಪ್ರೇಕ್ಷಕರಿಗೆ ಪಕ್ಕಾ ಪೈಸಾ ವಸೂಲ್ ಮನರಂಜನೆ ನೀಡುತ್ತದೆ. ಭ್ರಷ್ಟ ವ್ಯವಸ್ಥೆಯ ವಿರುದ್ಧದ ಈ ಸಮರವನ್ನು ಹತ್ತಿರದ ಚಿತ್ರಮಂದಿರಗಳಲ್ಲಿ ನೋಡಿ ಆನಂದಿಸಬಹುದು.












































