
ರೆಬೆಲ್ ಸ್ಟಾರ್ ಅಂಬರೀಶ್ ಪುತ್ರ ಅಭಿಶೇಕ್ ಮೊದಲ ಚಿತ್ರ ಅಮರ್. ಖುದ್ದು ಅಂಬಿ ತುಂಬಾ ಕನಸಿಟ್ಟುಕೊಂಡಿದ್ದ ಈ ಚಿತ್ರವೀಗ ಅಂತಿಮ ಘಟ್ಟ ತಲುಪಿಕೊಂಡಿದೆ. ಅಭಿಷೇಕ್ ಅಂತೂ ತನ್ನ ತಂದೆಯ ಕನಸಾಗಿದ್ದ ಈ ಸಿನಿಮಾಕ್ಕಾಗಿ ಮತ್ತಷ್ಟು ಎಫರ್ಟ್ ಹಾಕುತ್ತಿದ್ದಾರೆ. ಇದೀಗ ಚಿತ್ರ ತಂಡ ಪ್ರೇಮಿಗಳ ದಿನದಂದು ವಿಶೇಷವಾದ ಗಿಫ್ಟೊಂದನ್ನು ನೀಡಲು ತಯಾರಾಗಿದೆ!
ಅಂದಹಾಗೆ ಫೆಬ್ರವರಿ ಹದಿನಾಲಕ್ಕರ ಪ್ರೇಮಿಗಳ ದಿನದಂದು ಅಮರ್ ಚಿತ್ರದ ಟೀಸರ್ ಬಿಡುಗಡೆಯಾಗಲಿದೆ. ಈ ಬಗ್ಗೆ ಈಗಾಗಲೇ ಸಂಪೂರ್ಣ ತಯಾರಿ ಮುಗಿದಿದೆ. ಫೆಬ್ರವರಿ ಹದಿಮೂರರಂದು ರಾತ್ರಿ ಹನ್ನೆರಡು ಘಂಟೆಗೆಲ್ಲ ಅಮರ್ ಟೀಸರ್ ಅನಾವರಣಗೊಳ್ಳಲಿದೆ. ನಿರ್ದೇಶಕ ನಾಗಶೇಖರ್ ಈ ಚಿತ್ರದ ವಿಚಾರದಲ್ಲಿ ಪಾದರಸದಂತೆ ಕಾರ್ಯ ನಿರ್ವಹಿಸುತ್ತಿದ್ದಾರೆ. ಆರಂಭದಲ್ಲಿ ನಾಗಶೇಖರ್ ಅವರನ್ನು ನಿರ್ದೇಶನಕ್ಕೆ ಆಯ್ಕೆ ಮಾಡಿದಾಗ ಹಲವರು ಅಪಸ್ವರ ಎತ್ತಿದ್ದರು. ಅಂಬಿ ಅಭಿಮಾನಿಗಳೂ ಕೂಡಾ ಇದು ತಪ್ಪು ನಿರ್ಧಾರ ಅಂತ ಸಾಮಾಜಿಕ ಜಾಲತಾಣಗಳಲ್ಲಿ ಹೇಳಿಕೊಂಡಿದ್ದರು. ಆದರೀಗ ನಾಗಣ್ಣನ ಸ್ಪೀಡು, ಕಾರ್ಯ ವೈಖರಿ ಕಂಡು ಖುದ್ದು ಅಂಬರೀಶ್ ಅವರೇ ಅಚ್ಚರಿಗೊಂಡಿದ್ದರಂತೆ. ಅಂಥಾದ್ದೊಂದು ವೇಗ ನಾಗಶೇಖರ್ ಅವರದ್ದಾಗಿದೆ.
ಆದರೆ ಇದೆಲ್ಲದಕ್ಕಿಂತಲೂ ವಿಶೇಷವಾದ ಇನ್ನೊಂದು ಸಂಗತಿ ಇದೆ. ಈ ಚಿತ್ರ ಬೈಕ್ ರೇಸಿಂಗ್ ಅನ್ನೂ ಪ್ರಧಾನವಾಗಿಟ್ಟುಕೊಂಡಿದೆ ಎಂಬ ವಿಚಾರ ಗೊತ್ತೇ ಇದೆ. ಇಡೀ ಚಿತ್ರ ನೈಜವಾಗಿ ಮೂಡಿ ಬರ ಬೇಕೆಂಬ ಉದ್ದೇಶದಿಂದ ನಾಗಶೇಖರ್ ಹೊಸಾ ಸಾಹಸ ಮಾಡಿದ್ದಾರೆ. ಅದರನ್ವಯ ಈ ಚಿತ್ರದಲ್ಲಿ ಐವತ್ತು ಮಂದಿ ರಿಯಲ್ ಬೈಕ್ ರೇಸರ್ಸ್ ಅಭಿನಯಿಸಿದ್ದಾರಂತೆ! ಇದೀಗ ಚಿತ್ರೀಕರಣದ ಅಂತಿಮ ಹಂತದಲ್ಲಿ ಚಿತ್ರ ತಂಡವಿದೆ. ಫೆಬ್ರವರಿ ಹನ್ನೊಂದಕ್ಕೆಲ್ಲ ಇಡೀ ತಂಡ ವಿದೇಶಕ್ಕೆ ತೆರಳಿ ಚಿತ್ರೀಕರಣದಲ್ಲಿ ಭಾಗಿಯಾಗಲಿದೆ. ಅಭಿಷೇಕ್ ಪಾಲಿಗಿದು ಮೊದಲ ಚಿತ್ರ. ಆದರೆ ಅದು ಗೊತ್ತೇ ಆಗದಂತೆ ನಟಿಸುತ್ತಾ ಬಿಡುವಿಲ್ಲದಂಥಾ ಚಿತ್ರೀಕರಣದಲ್ಲಿ ಉತ್ಸಾಹದಿಂದಲೇ ಭಾಗಿಯಾಗುತ್ತಿರೋ ಅಭಿಷೇಕ್ ಬಗ್ಗೆ ನಿರ್ದೇಶಕ ನಾಗಶೇಖರ್ ಕೂಡಾ ಖುಷಿಗೊಂಡಿದ್ದಾರೆ.
#











































