PARTNER copy

ಪಾರ್ಟ್ನರ್’ ಅಂಗಳದಲ್ಲಿ ‘ಲವಲವಿಕೆ’

Picture of Cinibuzz

Cinibuzz

Bureau Report

ಸ್ಯಾಂಡಲ್‌ವುಡ್‌ನಲ್ಲಿ ವಿಭಿನ್ನ ಕಥಾವಸ್ತು, ಹೊಸಾ ಬಗೆಯ ಮೇಕಿಂಗ್ ಮತ್ತು ಇಂಪಾದ ಹಾಡುಗಳ ಮೂಲಕವೇ ಸದ್ದಿಲ್ಲದೆ ಪ್ರೇಕ್ಷಕರ ಚಿತ್ತ ಕದಿಯುತ್ತಿರುವ ಸಿನಿಮಾ ‘ಪಾರ್ಟ್ನರ್’. ಈ ಹಿಂದೆ ‘ಮಳೆ’, ‘ಧೈರ್ಯಂ’ ಹಾಗೂ ‘ದಿಲ್ ಪಸಂದ್’ ಅಂತಹ ಹಿಟ್ ಚಿತ್ರಗಳನ್ನು ಕಟ್ಟಿಕೊಟ್ಟ ನಿರ್ದೇಶಕ ಶಿವತೇಜಸ್ ಸಾರಥ್ಯದಲ್ಲಿ ಮೂಡಿಬರುತ್ತಿರುವ ಮತ್ತೊಂದು ರೊಮ್ಯಾಂಟಿಕ್ ಫ್ಯಾಮಿಲಿ ಎಂಟರ್‌ಟೈನರ್ ಇದಾಗಿದೆ. ಚಿತ್ರದ ಮೊದಲ ‘ಅಮೋರಾ’ ಹಾಡು ಸೋಷಿಯಲ್ ಮೀಡಿಯಾದಲ್ಲಿ ಧೂಳೆಬ್ಬಿಸಿ ವೈರಲ್ ಆದ ಬೆನ್ನಲ್ಲೇ, ಇದೀಗ ಚಿತ್ರತಂಡ ಎರಡನೇ ಹಾಡಾಗಿ ‘ಲವಲವಿಕೆ’ ಎಂಬ ಮತ್ತೊಂದು ಸೂಪರ್ ಮೆಲೋಡಿಯನ್ನು ಹೊರತಂದು ಸಂಗೀತಪ್ರಿಯರ ಮನಸ್ಸಿಗೆ ಲವಲವಿಕೆ ತುಂಬಿದೆ.

ಇಂದಿನ ಜೆನ್‌ಜಿ ಪೀಳಿಗೆಯ ಲೈಫ್‌ಸ್ಟೈಲ್, ಪ್ರೀತಿ, ಪ್ರೇಮ, ಬ್ರೇಕಪ್ ಹಾಗೂ ಲಿವಿಂಗ್ ರಿಲೇಶನ್‌ಶಿಪ್ ಪರಿಕಲ್ಪನೆಗಳ ಸುತ್ತವೇ ಸಾಗುವ ಈ ಕಥೆಯಲ್ಲಿ, ಕುಟುಂಬಕ್ಕೆ ಹತ್ತಿರವಾಗುವಂತಹ ಒಂದು ಸುಂದರ ಸಂದೇಶವನ್ನು ಶಿವತೇಜಸ್ ಬಹಳ ನವಿರಾಗಿ ಹೆಣೆದಿದ್ದಾರೆ. ನಾಯಕನಾಗಿ ಕೃಷ್ಣ ಅಜಯ್ ರಾವ್ ಹಾಗೂ ನಾಯಕಿಯಾಗಿ ಬೃಂದಾ ಆಚಾರ್ಯ ತೆರೆ ಹಂಚಿಕೊಂಡಿರುವ ಈ ಚಿತ್ರದ ‘ಲವಲವಿಕೆ’ ಗೀತೆಗೆ ಕವಿರಾಜ್ ಸಾಹಿತ್ಯದ ಮೆರುಗು ನೀಡಿದ್ದಾರೆ. ನಕುಲ್ ಅಭಯಂಕರ್ ಅವರ ಆಕರ್ಷಕ ಸಂಗೀತ ಸಂಯೋಜನೆಗೆ ಗಾಯಕರಾದ ಕಾರ್ತಿಕ್ ಮತ್ತು ರಮ್ಯಾ ಅಭ್ಯಂಕರ್ ಇಂಪಾದ ಧ್ವನಿಯಾಗಿದ್ದಾರೆ. ಮುರಳಿ ಮಾಸ್ಟರ್ ಅವರ ನೃತ್ಯ ಸಂಯೋಜನೆ ಹಾಗೂ ಸುಜ್ಞಾನ್ ಅವರ ಕಣ್ಮನ ಸೆಳೆಯುವ ಛಾಯಾಗ್ರಹಣದಲ್ಲಿ ಮೂಡಿಬಂದಿರುವ ಈ ಹಾಡನ್ನು ನಿರ್ಮಾಪಕರ ಆಧ್ಯಾತ್ಮಿಕ ಗುರುಗಳಾದ ರಂಗನಾಥ್ ಹಾಗೂ ಮಂಜುನಾಥ್ ಬಿಡುಗಡೆಗೊಳಿಸಿ ಚಿತ್ರತಂಡಕ್ಕೆ ಶುಭ ಕೋರಿದರು.

ಹಾಡಿನ ರಿಲೀಸ್ ಸಂಭ್ರಮದಲ್ಲಿ ಮಾತನಾಡಿದ ನಿರ್ದೇಶಕ ಶಿವತೇಜಸ್, ಸಿನಿಮಾ ತಾವು ಕಲ್ಪಿಸಿಕೊಂಡಿದ್ದಕ್ಕಿಂತಲೂ ಅದ್ಭುತವಾಗಿ ಮೂಡಿಬಂದಿದೆ ಎಂದರು. ಪ್ರತಿಯೊಂದು ಹಾಡನ್ನೂ ಒಂದೊಂದು ನಿರ್ದಿಷ್ಟ ಕಲರ್ ಪ್ಯಾಟರ್ನ್‌ನಲ್ಲಿ ಬಹಳ ರಿಚ್ ಆಗಿ ಸೆರೆಹಿಡಿಯಲಾಗಿದ್ದು, ಲಕ್ಷ್ಮಿ ಕೃಷ್ಣ ಅವರು ಕಣ್ಣು ಕುಕ್ಕುವಂತಹ ಕಾಸ್ಟ್ಯೂಮ್ ಡಿಸೈನ್ ಮಾಡಿದ್ದಾರೆ. ಪಾಂಡಿಚೇರಿ ಹಾಗೂ ಬೆಂಗಳೂರಿನ ನಯನಮನೋಹರ ತಾಣಗಳಲ್ಲಿ ಚಿತ್ರೀಕರಣಗೊಂಡಿದ್ದು, ಹಿರಿಯ ಕಲಾವಿದರಾದ ರಂಗಾಯಣ ರಘು ಮತ್ತು ಚಿತ್ಕಲಾ ಬಿರಾದಾರ್ ಚಿತ್ರದ ಪ್ರಮುಖ ಆಕರ್ಷಣೆಯಾಗಿದ್ದಾರೆ. ಇತ್ತೀಚೆಗೆ ‘ಪ್ರೇಮದ ಊರಲಿ’ ಚಿತ್ರರಂಗಕ್ಕೆ ಹೊಸಾ ಚೈತನ್ಯ ತಂದಂತೆ, ನಮ್ಮ ಈ ಕೌಟುಂಬಿಕ ಕಥೆಯೂ ಪ್ರೇಕ್ಷಕರ ಮನಗೆದ್ದು ಭರ್ಜರಿ ಯಶಸ್ಸು ಕಾಣಲಿದೆ ಎಂಬ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದರು.

ಹೆಚ್.ಪಿ.ಆರ್. ಎಂಟರ್‌ಪ್ರೈಸಸ್ ಬ್ಯಾನರ್ ಅಡಿಯಲ್ಲಿ ಈ ಚಿತ್ರವನ್ನು ನಿರ್ಮಿಸಿರುವ ಹರೀಶ್ ದೇವಿತಂದ್ರೆ ಅವರು, ತಮಗೆ ಸಿನಿಮಾ ವಿತರಣೆ ಮತ್ತು ಟಿವಿ ವಾಹಿನಿಗಳಲ್ಲಿ ಕೆಲಸ ಮಾಡಿದ ಅಪಾರ ಅನುಭವವಿದ್ದು, ಯಾವುದೇ ಮುಜುಗರವಿಲ್ಲದೆ ಇಡೀ ಕುಟುಂಬ ಸಮೇತ ಕುಳಿತು ಎಂಜಾಯ್ ಮಾಡಬಹುದಾದ ಕ್ಲೀನ್ ಸಿನಿಮಾ ಇದಾಗಿದೆ ಎಂದರು. ಪಕ್ಕಾ ಬ್ಯುಸಿನೆಸ್ ಲೆಕ್ಕಾಚಾರದೊಂದಿಗೆ ನಿರ್ಮಿಸಲಾಗಿರುವ ಈ ಸಿನಿಮಾವನ್ನು ಜನರಿಗೆ ಅತಿ ಹೆಚ್ಚು ತಲುಪಿಸಲು ಭರ್ಜರಿ ಪ್ರಚಾರದ ಯೋಜನೆಗಳನ್ನು ರೂಪಿಸಲಾಗುತ್ತಿದೆ ಎಂದು ತಿಳಿಸಿದರು.

ನಾಯಕ ಕೃಷ್ಣ ಅಜಯ್ ರಾವ್ ಮಾತಿಗೆ ಸಿಕ್ಕಿ, ನಿರ್ದೇಶಕರು ಕಥೆ ಹೇಳಿದಾಗಲೇ ಈ ಕಂಟೆಂಟ್ ನನ್ನ ಮನಸ್ಸಿಗೆ ಗಾಢವಾಗಿ ನಾಟಿತು ಎಂದರು. ಕೇವಲ ಹಾಡುಗಳಷ್ಟೇ ಅಲ್ಲದೆ, ಪ್ರತಿಯೊಂದು ದೃಶ್ಯವೂ ಬಹಳ ಕಲರ್‌ಫುಲ್ ಆಗಿದ್ದು, ಮಾನವೀಯ ಮೌಲ್ಯಗಳು ಹಾಗೂ ಎಮೋಷನ್‌ಗಳನ್ನು ಹೃದಯ ಮುಟ್ಟುವಂತೆ ಕಟ್ಟಿಕೊಡಲಾಗಿದೆ. ನಿರ್ದೇಶಕರ ಜೊತೆಗಿನ ೨೫ ವರ್ಷಗಳ ಸುದೀರ್ಘ ಸ್ನೇಹ ಹಾಗೂ ಶೀರ್ಷಿಕೆಗೆ ತಕ್ಕಂತೆ ಜೊತೆಯಾದ ನಿರ್ಮಾಪಕರ ಬೆಂಬಲ ಚಿತ್ರಕ್ಕೆ ದೊಡ್ಡ ಬಲ ತಂದಿದ್ದು, ಈ ಚಿತ್ರದ ಗೆಲುವಿನ ಮೇಲೆ ತಮಗೆ ನೂರಕ್ಕೆ ನೂರರಷ್ಟು ನಂಬಿಕೆಯಿದೆ ಎಂದು ಹೆಮ್ಮೆಯಿಂದ ನುಡಿದರು.

ಇನ್ನು ನಾಯಕಿ ಬೃಂದಾ ಆಚಾರ್ಯ ಅವರು ಶೂಟಿಂಗ್ ಅನುಭವ ಹಂಚಿಕೊಳ್ಳುತ್ತಾ, ಚಿತ್ರತಂಡದ ನಡುವಿನ ಆಪ್ತ ಒಡನಾಟವೇ ಈ ಚಿತ್ರದ ಜೀವಾಳ ಎಂದರು. ಚಿತ್ರೀಕರಣದ ಆರಂಭದಲ್ಲಿ ಅಜಯ್ ರಾವ್ ಅವರು ಯಾರ ಜೊತೆಗೂ ಹೆಚ್ಚಾಗಿ ಮಾತನಾಡದೆ ಗಂಭೀರವಾಗಿ, ಸಿಡುಕ್ಮೂತಿ ಸಿದ್ದಪ್ಪನ ಥರ ಇರುತ್ತಿದ್ದರು. ಆದರೆ ದಿನಗಳು ಕಳೆದಂತೆ ಎಲ್ಲರೊಂದಿಗೆ ಬೆರೆತು ಸ್ವೀಟ್ ಸಿದ್ದಪ್ಪ ಆಗಿಬಿಟ್ಟರು ಎಂದು ತಮಾಷೆಯಾಗಿ ಬಣ್ಣಿಸಿದರು. ಅದರಲ್ಲೂ ಹಾಡುಗಳ ಚಿತ್ರೀಕರಣದ ವೇಳೆ ನಟನೆಯ ಸೂಕ್ಷ್ಮತೆಗಳನ್ನು ಹೇಳಿಕೊಟ್ಟು ಬಹಳ ಪ್ರೋತ್ಸಾಹಿಸಿದರು ಎಂದು ನಾಯಕನನ್ನು ಮುಕ್ತಕಂಠದಿಂದ ಶ್ಲಾಘಿಸಿದರು. ಕೆ.ಎಂ. ಪ್ರಕಾಶ್ ಅವರ ಚುರುಕಾದ ಸಂಕಲನವಿರುವ ಈ ‘ಪಾರ್ಟ್ನರ್’ ಸಿನಿಮಾ, ತನ್ನ ಪ್ರತಿಯೊಂದು ಅಪ್‌ಡೇಟ್ ಮೂಲಕ ಗಾಂಧಿನಗರದ ಅಂಗಳದಲ್ಲಿ ನಿರೀಕ್ಷೆಯ ಕಾವು ಹೆಚ್ಚಿಸುತ್ತಿದೆ.

ಇನ್ನಷ್ಟು ಓದಿರಿ

Scroll to Top