ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯ ಇತಿಹಾಸದಲ್ಲೇ ಇಂಥದ್ದೊಂದು ಪ್ರಶ್ನೆ ಹಾಗೂ ಅನುಮಾನಗಳು ಹಿಂದೆಂದೂ ಎದ್ದಿರಲಿಲ್ಲವೇನೋ? ಅಂಥದ್ದೊಂದು ಚರ್ಚೆ ಇದೀಗ ಮುನ್ನೆಲೆಗೆ ಬಂದು ಇಡೀ ಚಿತ್ರರಂಗ ಹಾಗೂ ಸಾಹಿತ್ಯ ವಲಯವನ್ನು ಹುಬ್ಬೇರಿಸುವಂತೆ ಮಾಡಿದೆ. ಇತ್ತೀಚೆಗೆ ಗುಜರಾತ್‌ನಲ್ಲಿ ವೈಭವದಿಂದ ಜರುಗಿದ 72ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಸಮಾರಂಭದಲ್ಲಿ ಕನ್ನಡದ ಸಿನಿಮಾ ಸಾಹಿತ್ಯ ವಿಭಾಗದಲ್ಲಿ ಕುಂದಾಪುರ ಮೂಲದ ಲೇಖಕ ಪ್ರದೀಪ್ ಕೆಂಚನೂರು ಅವರ ‘ನಾನಿರುವುದೆ ನಿಮಗಾಗಿ ನಾಡಿರುವುದೆ ನಮಗಾಗಿ – ಕನ್ನಡ ಸಿನಿಮಾದ ತತ್ವ ಮತ್ತು ರಾಜಕೀಯ’ ಎಂಬುದೊಂದು ಕೃತಿಗೆ ಪ್ರಶಸ್ತಿ ದಕ್ಕಿತ್ತು. ಪ್ರದೀಪ್ ಕುಮಾರ್ ಶೆಟ್ಟಿ ಬರಹಗಾರರಾಗಿ, ಪ್ರಕಾಶಕಿಯಾಗಿ ಅವರ ಪತ್ನಿ ಅವಾರ್ಡ್ ಇಸಿಕೊಂಡು ಬಂದಿದ್ದರು.

ಇದರ ಬೆನ್ನಲ್ಲೇ ಹಲವು ಪ್ರಶ್ನೆಗಳು ಉದ್ಭವಿಸಿವೆ. ಶ್ರೀಯುತ ಪ್ರದೀಪ್ ಕುಮಾರ್ ಶೆಟ್ಟರು ಪ್ರಶಸ್ತಿ ಸಮಿತಿಯನ್ನು ಯಾಮಾರಿಸಬಹುದು, ತಮ್ಮ ಪ್ರಭಾವವನ್ನು ಬಳಸಬಹುದು. ಆದರೆ, ಕನ್ನಡದ ಸಿನಿಮಾ ಪತ್ರಕರ್ತರು ಮತ್ತು ಕನ್ನಡಿಗರನ್ನು ಮುಠ್ಠಾಳರು ಅಂದುಕೊಂಡಿದ್ದಾರಾ ಎನ್ನುವುದು ಮೊದಲನೇ ಪ್ರಶ್ನೆ!
ಕರ್ನಾಟಕದ ಯಾವ ಪುಸ್ತಕದ ಅಂಗಡಿಗಳಿರಲಿ, ಇಡೀ ಜಗತ್ತಿನ ಮಾಹಿತಿಯನ್ನೇ ಅಂಗೈಗೆ ತಂದುಕೊಡುವ ಗೂಗಲ್‌ನಲ್ಲೇ ಹುಡುಕಿದರೂ ಕುರುಹು ಸಿಗದ, ಕಡೆಗೆ ಸ್ವತಃ ಲೇಖಕ ಹಾಗೂ ಪ್ರಕಾಶಕರ ಬಳಿಯೂ ಲಭ್ಯವಿರುವುದೇ ಅನುಮಾನವೆನ್ನಲಾದ ಕೃತಿಗೆ ನೇರವಾಗಿ ಕೇಂದ್ರದ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಒಲಿದದ್ದು ಹೇಗೆ? ಸಾಮಾನ್ಯವಾಗಿ ದೇಶದ ಇಂಥ ಪರಮೋಚ್ಛ ಗೌರವ ಲಭಿಸಿದಾಗ ಲೇಖಕರು, ಪ್ರಕಾಶಕರು ಸಂಭ್ರಮಿಸಿ ಮಾಧ್ಯಮಗಳ ಮುಂದೆ ಹಂಚಿಕೊಳ್ಳುವುದು ವಾಡಿಕೆ ಅಲ್ಲವೇ? ಆದರೆ ಈ ಕೃತಿಯ ಲೇಖಕರು ಮಾತ್ರ ಗೌರವ ಬಂದಿದ್ದನ್ನೇ ಎಲ್ಲಿಯೂ ಬಹಿರಂಗವಾಗಿ ಹೇಳಿಕೊಳ್ಳದೆ, ಸಂಭ್ರಮಿಸದೆ, ಯಾರ ಸಂಪರ್ಕಕ್ಕೂ ಸಿಗದೆ ಮೌನಕ್ಕೆ ಶರಣಾಗಿದ್ದಾರೆ. ಮಾಧ್ಯಮದವರು ಪುಸ್ತಕದ ಪುಟಗಳನ್ನಾಗಲಿ, ಒಂದು ಸಣ್ಣ ಆಯ್ದ ಭಾಗವನ್ನಾಗಲಿ ಕೇಳಿದಾಗಲೂ ಒದಗಿಸದೆ, ಸಂದರ್ಶನಕ್ಕೂ ಮುಖಕೊಡದೆ ಅಂತರ ಕಾಯ್ದುಕೊಂಡಿದ್ದರ ಹಿಂದೆ ಇರುವುದು ಬಿಚ್ಚಿಡಲಾಗದ ಮುಜುಗರವೇ ಅಥವಾ ತೆರೆಮರೆಯ ಬೇರೇನಾದರೂ ಲೆಕ್ಕಾಚಾರವೇ?
ಕಳೆದ ಮೂರ್ನಾಲ್ಕು ವರ್ಷಗಳಿಂದ ಒಂದೇ ಕರಡನ್ನು ಹೊಸ ರೂಪದಲ್ಲಿ ತಂದು ಜ್ಯೂರಿ ಸಮಿತಿಗೆ ಸಲ್ಲಿಸಲಾಗುತ್ತಿದೆಯೇ ಎಂಬ ಅನುಮಾನ ಇದೀಗ ದಟ್ಟವಾಗುತ್ತಿದೆ. ಈ ಕೃತಿ ನಿಜವಾಗಿಯೂ ಮಾರುಕಟ್ಟೆಯಲ್ಲಿ ಅಧಿಕೃತವಾಗಿ ಮುದ್ರಣಗೊಂಡು ಓದುಗರ ಕೈಸೇರಿದ ನೈಜ ಪುಸ್ತಕವೇ ಅಥವಾ ಕೇವಲ ಶೈಕ್ಷಣಿಕ ಪದವಿಗಾಗಿ ಸಿದ್ಧಪಡಿಸಲಾದ ಪಿಎಚ್‌ಡಿ ಸಂಶೋಧನಾ ಪ್ರಬಂಧವೇ? ಕೇವಲ ಡಿಜಿಟಲ್ ರೂಪದಲ್ಲಿ ಒಂದೆರಡು ಜೆರಾಕ್ಸ್ ಪ್ರತಿಗಳನ್ನು ಸಿದ್ಧಪಡಿಸಿ, ಕಮಿಟಿಗೆ ಸಲ್ಲಿಸುವ ಉದ್ದೇಶಕ್ಕಾಗಿಯೇ ಹೆಂಡತಿಯ ಹೆಸರಿನಲ್ಲಿ ಪ್ರಕಾಶನ ಸಂಸ್ಥೆ ರೂಪಿಸಲಾಯಿತೇ ಎಂಬ ಪ್ರಶ್ನೆಗಳು ಸಾಹಿತ್ಯ ವಲಯದಲ್ಲಿ ತೀವ್ರವಾಗಿ ತೂರಿಬರುತ್ತಿವೆ. ಅಷ್ಟೇ ಅಲ್ಲ, ನಿಯಮಾವಳಿಗಳ ಅನ್ವಯ ಒಂದೇ ಕೃತಿಯನ್ನು ಪದೇಪದೇ ಕಳುಹಿಸುವುದು ಸರಿಯೇ? ಪ್ರತಿ ವರ್ಷ ಕೇವಲ ಐಎಸ್‌ಬಿಎನ್ ಕೋಡ್ ಹಾಗೂ ಮುಖಪುಟದ ಶೀರ್ಷಿಕೆಯನ್ನು ಮಾರ್ಪಡಿಸಿ, ಪ್ರಕಟಣಾ ವರ್ಷವನ್ನು ಬದಲಾಯಿಸುತ್ತಾ ಸತತ ಮೂರು-ನಾಲ್ಕು ವರ್ಷಗಳಿಂದ ಅದೇ ಪ್ರಬಂಧವನ್ನು ಪ್ರಶಸ್ತಿ ಸಮಿತಿಗೆ ಮರುಕಳಿಸಿ ಕಳುಹಿಸಲಾಗಿತ್ತೇ? ಒಂದೊಮ್ಮೆ ಇದು ನಿಜವೇ ಆಗಿದ್ದರೆ, ನಿಯಮಗಳ ಕಣ್ತಪ್ಪಿಸಿ ಜ್ಯೂರಿಗಳ ಮುಂದೆ ತರಲು ಸಾಧ್ಯವಾಗಿದ್ದು ಹೇಗೆ?
ಹಿಂದಿನ ವರ್ಷಗಳಲ್ಲಿ ಆಯ್ಕೆ ಸಮಿತಿಯಲ್ಲಿದ್ದ ಹಿರಿಯ ಸದಸ್ಯರು ಹಾಗೂ ತೀರ್ಪುಗಾರರು ಈ ಕೃತಿಯನ್ನು ಗಮನಿಸಿದ್ದರು ಎನ್ನಲಾದ ವಿಚಾರವೂ ಈಗ ಕುತೂಹಲ ಕೆರಳಿಸಿದೆ. ಈ ಹಿಂದೆ ಸಮಿತಿಯಲ್ಲಿದ್ದ ಹಿರಿಯ ಸದಸ್ಯರೊಬ್ಬರ ಅನುಭವದ ಪ್ರಕಾರ, ಇಡೀ ಭಾರತದಿಂದ ಬಂದಿದ್ದ ಸುಮಾರು 72 ಕೃತಿಗಳ ಪೈಕಿ ಈ ಕೃತಿಯೂ ಬಂದಿತ್ತಾದರೂ, ಭಾಷೆಯ ಗಟ್ಟಿತನ ಹಾಗೂ ಚಲನಚಿತ್ರದ ಕುರಿತಾದ ವಾಸ್ತವಿಕ ಪರಿಕಲ್ಪನೆಗಳ ಕೊರತೆಯ ಕಾರಣದಿಂದ ಅದನ್ನು ಪರಿಗಣಿಸಿರಲಿಲ್ಲ ಎನ್ನಲಾಗಿದೆ. ಆ ಸಂದರ್ಭದಲ್ಲಿ ಮುಂಬೈನ ಪ್ರಭಾವಿ ರಾಜಕೀಯ ವಲಯದಿಂದ ಹಾಗೂ ಕೇಂದ್ರ ವಾರ್ತಾ ಮತ್ತು ಪ್ರಸಾರ ಇಲಾಖೆಯ ಅಧಿಕಾರಿಗಳ ಮಟ್ಟದಿಂದ ಸಮಿತಿಯ ಮೇಲೆ ಒತ್ತಡ ಹೇರುವ ಪ್ರಯತ್ನಗಳು ನಡೆದಿದ್ದವೇ? ನಂತರದ ವರ್ಷಗಳ ಸಮಿತಿಯಲ್ಲೂ ಇದು ಪುರಸ್ಕೃತಗೊಳ್ಳಲಿಲ್ಲ ಎಂದಮೇಲೆ, ಈ ಬಾರಿ ಇದ್ದಕ್ಕಿದ್ದಂತೆ ಸಮಿತಿಯ ಒಲವು ಇದರ ಪರವಾಗಿ ತಿರುಗಿದ್ದು ಹೇಗೆ? ಇದರ ಹಿಂದೆ ವ್ಯವಸ್ಥಿತವಾದ ಪ್ರಭಾವ ಅಥವಾ ಅಧಿಕಾರಶಾಹಿ ಲಾಬಿಯ ಕೈವಾಡವಿತ್ತೇ ಎಂಬ ಸಂಶಯಗಳು ಸಹಜವಾಗಿಯೇ ಉದ್ಭವಿಸುತ್ತಿವೆ.
‘ಸಿನಿಬಜ್’ ಪ್ರಶ್ನೆಗಳೇನು?
ಡಾ. ಪ್ರದೀಪ ಕುಮಾರ ಶೆಟ್ಟಿ ಕೆಂಚನೂರು ಬರೆದಿರುವ ಮಹಾನ್ ಕೃತಿಗೆ ಅವಾರ್ಡು ಬಂದಿದೆ, ನಿಜ. ಈ ಕೃತಿ ನಿಯಮದ ಪ್ರಕಾರ 2024ರ ಡಿಸೆಂಬರ್ 31ರ ಒಳಗೆ ಮುದ್ರಣಗೊಂಡಿರಬೇಕಿತ್ತು. ಅದಕ್ಕೆ ಸೂಕ್ತ ದಾಖಲೆಗಳನ್ನು ಕೂಡಾ ಒದಗಿಸಬೇಕು. ಸದರಿ ಪ್ರದೀಪ ಕುಮಾರ ಏನೇನು ದಾಖಲೆಗಳನ್ನು ಸರ್ಕಾರಕ್ಕೆ ಸಲ್ಲಿಸಿದ್ದಾರೋ ಗೊತ್ತಿಲ್ಲ. ಆದರೆ ಇವರ ಪ್ರಶಸ್ತಿ ಪುರಸ್ಕೃತ ಮೇರು ಕೃತಿಗೆ ರಾಜಾ ರಾಮಮೋಹನ್ ರಾಯ್ ರಾಷ್ಟ್ರೀಯ ಐಎಸ್‌ಬಿಎನ್ ಸಂಸ್ಥೆಯಿಂದ ಐಎಸ್‌ಬಿಎನ್ ಅಲಾಟ್ ಆಗಿರುವ ದಿನಾಂಕ 16.08.2025. ಅಂದರೆ, 2024ರ ಸಾಲಿನಲ್ಲಿ ಮುದ್ರಣಗೊಂಡಿರುವ ಕೃತಿಗೆ ಹೇಗೆ 2025ರಲ್ಲಿ ಐಎಸ್‌ಬಿಎನ್ ಬಂದಿದ್ದು? ಇದಲ್ಲದೇ ಅದೇ ಐಎಸ್‌ಬಿಎನ್ ಅಪ್ಲಿಕೇಷನ್‌ನಲ್ಲಿ ಪ್ರಕಾಶಕರ ಹೆಸರನ್ನು ಕೂಡಾ ಪ್ರದೀಪ್ ಕುಮಾರ್ ತಮ್ಮ ಹೆಸರನ್ನೇ ಡಿಕ್ಲೇರ್ ಮಾಡಿಕೊಂಡಿದ್ದಾರೆ. ಇಲ್ಲಿ ತಮ್ಮ ಪತ್ನಿ ಹೋಗಿ ಮಿರರ್ ಪುಸ್ತಕದ ಹೆಸರಲ್ಲಿ ಅವಾರ್ಡು ತೆಗೆದುಕೊಂಡಿದ್ದಾರೆ. ಇದು ಹೇಗೆ? ಸತ್ಯವನ್ನು ಯಾರಿಂದಲೂ ಮುಚ್ಚಿಡಲು ಸಾಧ್ಯವಿಲ್ಲ. ಒಂದು ವೇಳೆ ಕೆಂಚನೂರರ ಈ ಪ್ರಶಸ್ತಿಪುರಸ್ಕೃತ ಕೃತಿ ಮುದ್ರಣವಾಗಿದ್ದು ಹೌದೆಂದಾದರೆ ಯಾವ ಮುದ್ರಣಾಲಯದಲ್ಲಿ, ಯಾವ ಇಸವಿ, ಯಾವ ತಿಂಗಳು ಎಷ್ಟು ಪ್ರತಿಗಳನ್ನು ಮುದ್ರಿಸಲಾಗಿದೆ? ಮುದ್ರಿತ ಪುಸ್ತಕಗಳನ್ನು ಯಾವ ಯಾವ ಮಳಿಗೆಗೆ ಎಷ್ಟೆಷ್ಟು ಪ್ರತಿ ಮಾರಾಟಕ್ಕೆ ನೀಡಿದ್ದಾರೆ? ಇದೂ ಅಲ್ಲದೆ ಅನಿಕೇತನ ಹೆಸರಿನ ಪ್ರಕಾಶನ ಸಂಸ್ಥೆ 2021ರಲ್ಲಿ ಪ್ರಕಟಿಸಿರುವ ಇದೇ ಡಾ. ಪ್ರದೀಪ ಕೆಂಚನೂರು ಹೆಸರಲ್ಲಿ ಮುದ್ರಣಗೊಂಡಿರುವ ‘ಕನ್ನಡ ಸಿನಿಮಾದ ಸೈದ್ಧಾಂತಿಕತೆ ಮತ್ತು ಸಾಂಸ್ಕೃತಿಕ ಪ್ರಶ್ನೆಗಳು’ (ISBN No. 9789354736117) ಹೆಸರಿನ ಕೃತಿಯಲ್ಲಿರುವ ಬೆನ್ನುಡಿಯ ಯಥಾವತ್ತು ಪಠ್ಯ, ಈಗ ನ್ಯಾಷನಲ್ ಅವಾರ್ಡಿಗೆ ಕಾರಣವಾಗಿರುವ ‘ನಾನಿರುವುದೆ ನಿಮಗಾಗಿ ನಾಡಿರುವುದೆ ನಮಗಾಗಿ’ ಕೃತಿಯ ಬೆನ್ನುಪುಟದಲ್ಲಿ ಒಂದೇ ಒಂದು ಸಾಲು ಕೂಡಾ ಬದಲಾಗದೆ ಯಥಾವತ್ತು ಪ್ರಕಟಗೊಂಡಿರುವುದು ಹೇಗೆ? ಯಾರಾದರೂ ಕೃತಿಕಾರರು ತಮ್ಮ ಎಲ್ಲ ಕೃತಿಗಳಿಗೂ ಒಂದೇ ಬೆನ್ನುಡಿ ಮುದ್ರಿಸೋ ವಾಡಿಕೆಯೇನಾದರೂ ಇದೆಯಾ?
ಇವನ್ನೆಲ್ಲಾ ಸೂಕ್ಷ್ಮವಾಗಿ ಗಮನಿಸಿದರೆ, ಡಾ. ಪ್ರದೀಪ ಕುಮಾರ ಶೆಟ್ಟರು ಏನೋ ಅಂದಾದುಂದಿ ಮಾಡಿಯೇ ನ್ಯಾಷನಲ್ ಅವಾರ್ಡು ಪಡೆದಿದ್ದಾರಾ ಅನ್ನೋದು ಸದ್ಯ ಸಿನಿಬಜ್ ವ್ಯಕ್ತಪಡಿಸುತ್ತಿರುವ ಅನುಮಾನ. ಅವಾರ್ಡುಗಳು ಯೋಗ್ಯರಿಗೆ ದಕ್ಕಬೇಕು ಅನ್ನೋದಷ್ಟೇ ನಮ್ಮ ಉದ್ದೇಶ. 2024ರ ಸಾಲಿನಲ್ಲಿ ಪ್ರಕಟಗೊಂಡಿದ್ದ ಗಿರೀಶ್ ಕಾಸರವಳ್ಳಿ ಅವರ ಆತ್ಮಕತೆ ‘ಬಿಂಬ ಬಿಂಬನ’ ನಿಜಕ್ಕೂ ಕನ್ನಡದ ಮೌಲಿಕ ಕೃತಿ. ಇದಲ್ಲದೇ ಸಿನಿಮಾ ಪತ್ರಕರ್ತರ ಕೃತಿಗಳೂ ಆ ವರ್ಷ ಪ್ರಕಟಗೊಂಡಿದ್ದವು. ಅದನ್ನೆಲ್ಲಾ ಕಣ್ಣುತಪ್ಪಿಸಿ ಕೆಂಚನೂರು ಪ್ರಶಸ್ತಿ ಪಡೆಯುತ್ತಾರೆ ಅಂದರೆ, ಅದಕ್ಕೊಂದು ಘನತೆ ಇರಬೇಕಿತ್ತಲ್ಲವೇ? ಯಾವತ್ತೋ ಬರೆದ ಥೀಸಿಸ್ ಅನ್ನು ವರ್ಷಕ್ಕೊಮ್ಮೆ ಬೇರೆ ಹೆಸರಿನಲ್ಲಿ ನಾಲ್ಕು ಪ್ರತಿ ಮುದ್ರಿಸಿ, ಅದನ್ನು ಪ್ರಶಸ್ತಿ ಸಮಿತಿಗೆ ಕಳುಹಿಸಿ, ಪ್ರಶಸ್ತಿಯನ್ನೂ ಪಡೆಯುತ್ತಾರೆ ಅಂದರೆ, ಅದು ಪಡೆದವರ ತಪ್ಪಾ? ಆಯ್ಕೆ ಮಾಡಿದವರ ಉದಾಸೀನವಾ? ಸದ್ಯಕ್ಕೆ ಇವೆಲ್ಲಾ ಅನುಮಾನ ಮತ್ತು ಪ್ರಶ್ನೆಗಳ ರೂಪದಲ್ಲಿ ಉಸಿರೆತ್ತಿವೆ. ಇವೆಲ್ಲಕ್ಕೂ ಉತ್ತರ ಸಿಗುವ ದಿನಗಳು ದೂರವಿಲ್ಲ!
ಒಟ್ಟಿನಲ್ಲಿ ಸಿನಿಬಜ್ ಎತ್ತಿರುವ ಪ್ರಶ್ನೆಗಳು ಪ್ರಶ್ನೆಗಳಾಗಿಯೇ ಉಳಿದುಹೋಗಬಾರದು. ಈ ಕುರಿತು ಸೂಕ್ತ ತನಿಖೆಯಾಗಬೇಕು. ಇದು ನ್ಯಾಯಾಲಯದ ಮಟ್ಟದಲ್ಲಿ ತೀರ್ಮಾನವಾಗಬೇಕು. ಅದು ಸಾಧ್ಯವಾಗುತ್ತದೆ ಅನ್ನೋ ಆಶಾಭಾವನೆ ನಮ್ಮದು…!
ಅರುಣ್ ಕುಮಾರ್ ಜಿ
(ಈ ವರದಿ ಯಾವುದೇ ವ್ಯಕ್ತಿಯ ಮಾನಹಾನಿ ಮಾಡುವ ಉದ್ದೇಶ ಹೊಂದಿಲ್ಲ.)












































