ಮೊದಲೆಲ್ಲ ವರ್ಷಕ್ಕೊಂದು ಸಿನಿಮಾ ಮಾಡುತ್ತಿದ್ದ ಸೂರಿ ಈಗ ಮೂರು ವರ್ಷವಾದರೂ ಕಾಣಿಸಿಕೊಂಡಿರಲಿಲ್ಲ. ಬ್ಯಾಡ್ ಮ್ಯಾನರ್ಸ್ ಮತ್ತು ಸೋಮು ಸೌಂಡ್ ಇಂಜಿನಿಯರ್ ಎಂಬೆರಡು ಸಿನಿಮಾಗಳು ಕೊಟ್ಟ ಏಟು ಸೂರಿಯ ಸದ್ದಡಗಿಸಿದ್ದವು. ಬೇರೆ ಯಾರೇ ನಿರ್ದೇಶಕರು ಮೂರು ವರ್ಷಗಳ ಕಾಲ ಮಂಗಮಾಯವಾದರೆ, ಆ ಹೊತ್ತಿಗೆ ಅವರ ಜಾಗಕ್ಕೆ ಬೇರೆ ಡೈರೆಕ್ಟರುಗಳು ಬಂದು ಕೂತಿರುತ್ತಾರೆ. ಆದರೆ ಸೂರಿ ʻಅಣ್ಣʼ ಇನ್ನೂ ʻಬ್ರ್ಯಾಂಡ್ʼ ಉಳಿಸಿಕೊಂಡಿದ್ದಾರೆ. ಸೂರಿ ಶೈಲಿಯಲ್ಲಿ ಸಿನಿಮಾ ಮಾಡುವವರು ಇನ್ನೂ ಇಲ್ಲಿ ಹುಟ್ಟಿಕೊಂಡಿಲ್ಲ!

ಈಗ ಸೂರಿ ಮತ್ತೆ ಬಂದಿದ್ದಾರೆ. 2025ರಲ್ಲಿ ತೆರೆಕಂಡ ಸಿನಿಮಾಗಳಲ್ಲಿ ಪಕ್ಕಾ ಮಾಸ್ ಹೀರೋ ಅನ್ನಿಸಿಕೊಂಡು ಕಾಲರ್ ಎತ್ತಿ ನಿಂತವರು ಸೂರ್ಯ ಪ್ರಖ್ಯಾತ್. ಜಿಸಿ ಎನ್ನುವ ಸಿನಿಮಾ ಅಷ್ಟು ಖಡಕ್ಕಾಗಿತ್ತು. ರಾಶಿ ರಾಶಿ ಹುಡುಗರು ಚಿತ್ರರಂಗಕ್ಕೆ ಬರುತ್ತಿದ್ದರೂ ಅವರ ನಡುವೆ ʻಹೀರೋ ಅಂದರೆ ಇವನುʼ ಅಂತ ಆಯ್ಕೆ ಮಾಡಿಕೊಳ್ಳುವ ಪ್ರತಿಭೆ ಸೂರಿಗಿದೆ. ಈ ಕಾರಣಕ್ಕೇ ದುನಿಯಾ ವಿಜಿ ಅವರಿಂದ ಹಿಡಿದು ಅನೇಕ ಹೊಸ ಕಲಾವಿದರು ಸೂರಿಯ ಮೂಲಕ ದೊಡ್ಡ ಮಟ್ಟದಲ್ಲಿ ಚಿತ್ರರಂಗಕ್ಕೆ ಪರಿಚಯಗೊಂಡಿದ್ದಾರೆ. ಸೂರಿ ಕೈಗೆ ಸೂರ್ಯ ಸಿಕ್ಕಿದ್ದಾರೆ. ಇಬ್ಬರ ಕಾಂಬಿನೇಷನ್‌ನಲ್ಲಿ ʻಕಾಗೆ ಬಂಗಾರʼ ಶುರುವಾಗಿದೆ.
ದುನಿಯಾ ಸೂರಿ ಕನ್ನಡ ಚಿತ್ರರಂಗದ ಸ್ಟಾರ್ ಡೈರೆಕ್ಟರ್ ಅನ್ನೋದರಲ್ಲಿ ಯಾವ ಅನುಮಾನವೂ ಇಲ್ಲ. ದುನಿಯಾ ಮೂಲಕ ವಿಜಯ್, ಶ್ರೀನಗರ ಕಿಟ್ಟಿ ಅವರನ್ನು ಸ್ಟಾರ್ ಪಟ್ಟಕ್ಕೆ ಕೂರಿಸಿದ ಸೂರಿ, ನಡುನಡುವೆ ಹೊಸಬರ ಜೊತೆ ಕೆಲಸ ಮಾಡಿದ್ದಾರೆ. ಪುನೀತ್ ರಾಜ್‌ಕುಮಾರ್ ಮತ್ತು ಶಿವರಾಜ್‌ಕುಮಾರ್ ಹೊರತುಪಡಿಸಿ ಬೇರೆ ಯಾವ ಸ್ಟಾರ್ ನಟರ ಸಹವಾಸಕ್ಕೂ ಸೂರಿ ಹೋಗಿಲ್ಲ. ಹಾಗೆ ನೋಡಿದರೆ, ಡೈರೆಕ್ಟರ್ ಆಗುವ ಮುಂಚೆಯೇ ದರ್ಶನ್ ಸಿನಿಮಾಗೆ ಡೈಲಾಗ್ ಬರೆದಿದ್ದವರು ಸೂರಿ. ಇನ್ನೂ ಅನೇಕ ಹೀರೋಗಳ ಒಡನಾಟ ಇಟ್ಟುಕೊಂಡಿದ್ದವರು. ಆದರೆ ಅವರೊಂದಿಗೆ ಸಿನಿಮಾ ಮಾಡುವ ಕೆಲಸಕ್ಕಂತೂ ಚಾಲನೆ ಸಿಕ್ಕಿರಲಿಲ್ಲ.

ಇತ್ತೀಚೆಗೆ ನಡೆದ ಕಾಗೆ ಬಂಗಾರ ಚಿತ್ರದ ಮುಹೂರ್ತದಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ಕ್ಲಾಪ್ ಮಾಡಲು ಬಂದಿದ್ದರು. ಸೂರಿಗೆ ಪರಮಾಪ್ತರಾದ ಯೋಗರಾಜ್ ಭಟ್ಟರು ಬ್ಯಾಕ್ ಟು ಬ್ಯಾಕ್ ಗಣೇಶ್ ಜೊತೆ ಸಿನಿಮಾ ಮಾಡಿದವರು. ಮನಸ್ಸು ಮಾಡಿದ್ದರೆ ಆ ಹೊತ್ತಿಗೇ ಸೂರಿ ಕೂಡ ಗಣೇಶ್ ಜೊತೆ ಸೇರಬಹುದಿತ್ತು. ಅದಾಗಿರಲಿಲ್ಲ! ಈಗ ಸೂರಿ ಸಿನಿಮಾಗೆ ಕ್ಲಾಪ್ ಮಾಡೋಕೆ ಗಣೇಶ್ ಬಂದಿದ್ದು ಹೇಗೆ ಅಂತ ನೋಡಿದರೆ, ಆಶ್ಚರ್ಯಕರ ವಿಚಾರವೊಂದು ಕೇಳಿಬರುತ್ತಿದೆ!

ಹಿಂದೆ ಮಾಡಿದ್ದ ಕೆಂಡಸಂಪಿಗೆಯ ಮುಂದುವರಿದ ಭಾಗ ʻಕಾಗೆ ಬಂಗಾರʼ ಅನ್ನೋದೇನೋ ಸರಿ. ಈ ಕಾಗೆ ಬಂಗಾರದ ಮುಂದುವರಿದ ಚಿತ್ರವೂ ಬರಲಿದೆಯಂತೆ. ಆ ಸಿನಿಮಾದ ಸಣ್ಣದೊಂದು ಲಿಂಕ್ ಈ ಸಿನಿಮಾದಲ್ಲೇ ಇರಲಿದೆಯಂತೆ. ತಮಿಳಿನ ಕಮಲ್ ಹಾಸನ್ ಅವರ ವಿಕ್ರಮ್ ಸಿನಿಮಾದಲ್ಲಿ ಕೊನೆಗೆ ರೋಲೆಕ್ಸ್ ಪಾತ್ರದಲ್ಲಿ ಸೂರ್ಯ ಬರುವಂತೆ, ಇಲ್ಲೂ ಒಂದು ಪಾತ್ರವಿದೆಯಂತೆ! ಆ ಪಾತ್ರದಲ್ಲಿ ಬರೋದು ಯಾರು ಗೊತ್ತಾ? ಇದೇ ಗೋಲ್ಡನ್ ಸ್ಟಾರ್, ಕ್ಷಮಿಸಿ ʻಗೋಲ್ಡನ್ ಮೆಗಾ ಸ್ಟಾರ್ʼ ಗಣೇಶ್!
ಅಲ್ಲಿಗೆ ಸೂರಿಯ ಮುಂದಿನ ಸಿನಿಮಾ ಗಣೇಶ್ ಜೊತೆಗೆ ಅನ್ನೋದು ಇವತ್ತಿನ ಮಟ್ಟಿಗೆ ಗ್ಯಾರಂಟಿ ಆಗಿದೆ!












































