ಮಳೆಬಿಲ್ಲಿಗೆ ಮೋಸ ಮಾಡಿದಳಂತೆ!

Picture of Cinibuzz

Cinibuzz

Bureau Report

ಏಣಿ ಹತ್ತಿ ಮೇಲೆ ನಿಂತಮೇಲೆ ಅದೇ ಏಣಿಯನ್ನು ದಡಕ್ಕಂತಾ ಎಗ್ಗರಿಸಿ ಒದ್ದು ಬಿಡುವ ಚಾಳಿ ಚಿತ್ರರಂಗಕ್ಕೇನೂ ಹೊಸದಲ್ಲ. ಮೊದಮೊದಲ ಸಿನಿಮಾ ಯಾವುದಾದರೂ ಸರಿ ಛಾನ್ಸು ಸಿಕ್ಕರೆ ಸಾಕು ಎಂದು ಹಪಹಪಿಸುವ ಮಂದಿ ಆನಂತರ ತಾವು ಬಂದ ದಾರಿ, ಕೈಹಿಡಿದವರನ್ನು ಮರೆಯೋದು ಮೊದಲಿನಿಂದಲೂ ನಡೆದುಕೊಂಡೇ ಬಂದಿದೆ.

ಸಂಜನಾ ಆನಂದ್ ಅನ್ನೋ ಹುಡುಗಿ ಈಗ ಚಿತ್ರರಂಗದಲ್ಲಿ ಹೆಸರು ಮಾಡುತ್ತಿರುವ ನಟಿ. ದುನಿಯಾ ವಿಜಯ್ ಅವರಿಂದ ಹಿಡಿದು, ಚಿರಂಜೀವಿ ಸರ್ಜಾ ತನಕ ಸಾಕಷ್ಟು ಸ್ಟಾರ್ ನಟರ ಸಿನಿಮಾಗಳಲ್ಲೀಕೆ ಹೀರೋಯಿನ್ನು. ಆರಂಭದಲ್ಲಿ ಶಾರ್ಟ್ ಸಿನಿಮಾಗಳು, ಹೊಸಬರ ಸಿನಿಮಾಗಳಲ್ಲಿ ಅವಕಾಶ ಪಡೆದಿದ್ದವಳು ಸಂಜನಾ. ಈಗ ದೊಡ್ಡ ಜಾಗ ಸಿಗುತ್ತಿದ್ದಂತೇ ಹೊಸಬರನ್ನು ಕಂಡರೆ ಈಕೆಗೆ ಅಸಡ್ಡೆ ಶುರುವಾಗಿಬಿಟ್ಟಿದೆ.

ವಿಪ್ರೋ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ನಿಂಗಪ್ಪ ಎನ್ನುವವರು ನಿರ್ದೇಶಕನಾಗಬಯಸಿದ್ದ ತನ್ನ ಸಹೋದರ ಹಿರಿಯೂರು ನಾಗರಾಜ್’ಗಾಗಿ ಸಿನಿಮಾವೊಂದನ್ನು ನಿರ್ಮಿಸಿದ್ದಾರೆ. ‘ಮಳೆಬಿಲ್ಲು’ ಹೆಸರಿನ ಈ ಚಿತ್ರ ಸಂಜನಾ ಆನಂದ್ ನಾಯಕಿಯಾಗಿ ನಟಿಸಿದ ಮೊದಲ ಸಿನಿಮಾ. ಈ ಚಿತ್ರ ಆರಂಭಗೊಂಡು ತೆರೆಗೆ ಬರುವಷ್ಟರಲ್ಲಿ ಡಾ. ಡಿ.ಎಸ್. ಮಂಜುನಾಥ್ ನಿರ್ಮಾಣದಲ್ಲಿ ಬಂದ ‘ಕೆಮಿಸ್ಟ್ರಿ ಆಫ್ ಕರಿಯಪ್ಪ’ ಚಿತ್ರೀಕರಣಗೊಂಡು, ಬಿಡುಗಡೆಯಾಗಿ ಹಿಟ್ ಕೂಡಾ ಆಗಿದೆ. ಯಾವಾಗ ಕೆಮಿಸ್ಟ್ರಿ ಆಫ್ ಕರಿಯಪ್ಪ ಗೆದ್ದಿತೋ ಅದರಲ್ಲಿ ನಾಯಕಿಯಾಗಿ ನಟಿಸಿದ್ದ ಸಂಜನಾ ಆನಂದ್‌ಗೆ ಕೂಡಾ ಅದೃಷ್ಟ ಖುಲಾಯಿಸಿತ್ತು. ದುನಿಯಾ ವಿಜಯ್  ಕರೆದು ತಮ್ಮ ‘ಸಲಗ’ಕ್ಕೆ ಹೀರೋಯಿನ್ ಮಾಡಿದರು. ಕುಷ್ಕ ಸೇರಿದಂತೆ ಇನ್ನೂ ಒಂದಷ್ಟು ಸಿನಿಮಾಗಳಲ್ಲಿ ಛಾನ್ಸು ಸಿಕ್ಕಿತು. ಸದ್ಯ ನಿರ್ದೇಶಕ ಅನಿಲ್ ಮಂಡ್ಯ ಕೂಡಾ ಚಿರಂಜೀವಿ ಸರ್ಜಾಗಾಗಿ ನಿರ್ದೇಶಿಸುತ್ತಿರುವ ‘ಕ್ಷತ್ರಿಯ’ ಸಿನಿಮಾಗೆ ನಾಯಕಿಯನ್ನಾಗಿ ಆಯ್ಕೆ ಮಾಡಿಕೊಂಡಿದ್ದಾರೆ.

ಹೀಗೆ ಒಂದರ ಹಿಂದೊಂದು ಸಿನಿಮಾಗಳಲ್ಲಿ ಅವಕಾಶ ಸಿಗುತ್ತಿದ್ದಂತೇ ಆರಂಭದಲ್ಲಿ ಕರೆದು ಛಾನ್ಸು ಕೊಟ್ಟವರ ಕಡೆ ಸಂಜನಾ ಉದಾಸೀನ ಮಾಡುತ್ತಿದ್ದಾಳೆ ಅನ್ನೋ ಆರೋಪ ಕೇಳಿಬರುತ್ತಿದೆ. ಇದೇ ವಾರ ಮಳೆಬಿಲ್ಲು ರಾಜ್ಯಾದ್ಯಂತ ರಿಲೀಸಾಗುತ್ತಿದೆ. ಈ ಸಂದರ್ಭದಲ್ಲಿ ಇಡೀ ತಂಡ ಪ್ರಚಾರ ಪಡೆದುಕೊಳ್ಳಲು ಒದ್ದಾಡುತ್ತಿದ್ದರೆ ಸಂಜನಾ ಮಾತ್ರ ಯಾವ ಪಬ್ಲಿಸಿಟಿ, ಪ್ರೆಸ್ ಮೀಟುಗಳಲ್ಲೂ ಪಾಲ್ಗೊಳ್ಳದೇ ತಪ್ಪಿಸಿಕೊಳ್ಳುತ್ತಿದ್ದಾಳಂತೆ. ಅವರಮ್ಮ ಚಿತ್ರತಂಡದವರಿಗೆ ಕರೆ ಮಾಡಿ ‘ನನ್ ಮಗಳು ತುಂಬಾ ಬ್ಯುಸಿ ಇದಾಳೆ. ಅವಳು ಪಬ್ಲಿಸಿಟಿಗೆಲ್ಲಾ ಬರಲು ಸಾಧ್ಯವಿಲ್ಲ. ಇದು ಸಂಜನಾ ನಟಿಸಿರುವ ಮೊದಲ ಸಿನಿಮಾ ಅಂತಾ ಎಲ್ಲೂ ಹೇಳಬೇಡಿ’ ಎಂದೆಲ್ಲಾ ಮಾತಾಡಿದ್ದಾರಂತೆ.

ಎಂಥಾ ಅನ್ಯಾಯ ಅಲ್ಲವಾ? ತಿಂಗಳುಗಳ ಹಿಂದಷ್ಟೇ ‘ಬೇರೆ ಸಿನಿಮಾಗಳಲ್ಲಿ ಯಾವುದಾದರೂ ಛಾನ್ಸಿದ್ದರೆ ಹೇಳಿ. ನನ್ನ ನಂಬರ್ ಕೊಟ್ಟು ಹೆಲ್ಪ್ ಮಾಡಿ’ ಅಂತಾ ಇದೇ ಸಿನಿಮಾ ಟೀಮಿನವರ ಬಳಿ ಗೋಗರೆಯುತ್ತಿದ್ದ ಸಂಜನಾ ಈಗ ಏಕಾ ಏಕಿ ಅವರಿಗೇ ಕೈಕೊಡುವ ಮಟ್ಟಕ್ಕೆ ಬೆಳೆದುಬಿಟ್ಟಿದ್ದಾಳೆ. ಸಂಜನಾ ನಿಜಕ್ಕೂ ಪ್ರತಿಭಾವಂತೆ, ಸುಂದರವಾಗಿರುವ ಹುಡುಗಿ. ಆದರೆ ವ್ಯಕ್ತಿತ್ವವೊಂದು ಹೀಗಾಗಿ ಬಿಟ್ಟರೆ ಎಂಥಾ ಸೂಪರ್ ಸ್ಟಾರ್ ಸಿನಿಮಾದಲ್ಲಿ ಅವಕಾಶ ಸಿಕ್ಕರೂ ಬೆಳೆದು ನಿಲ್ಲೋದು ಕಷ್ಟ. ಚಿತ್ರರಂಗದ ಇತಿಹಾಸವನ್ನೊಮ್ಮೆ ತಿರುಗಿ ನೋಡಿ ಹೀಗೇ ಆಡಿದವರೆಲ್ಲಾ ಏನಾದರೂ ಅನ್ನೋದನ್ನು ಸ್ವತಃ ಸಂಜನಾ ಅರಿತುಕೊಳ್ಳಬೇಕಿರುವ ಜರೂರಿದೆ..

 

ಇನ್ನಷ್ಟು ಓದಿರಿ

Scroll to Top