ಸೂಸ್ತೆ ಸುಮಾರ್ ಏಸ್ತೆ ಢಮಾರ್ ಸುಮಂತುಡು!

Picture of Cinibuzz

Cinibuzz

Bureau Report

ಸುಮಂತ್ ಶೈಲೇಂದ್ರ ಅನ್ನೋ ನಟ ಗೊತ್ತಲ್ಲ? ನಿರ್ಮಾಪಕ ಶೈಲೇಂದ್ರ ಬಾಬು ಸುಪುತ್ರ! ಆಟ ಅನ್ನೋ ಸಿನಿಮಾದ ಮೂಲಕ ಆರಂಭಿಸಿ ದಿಲ್ ವಾಲಾ, ತಿರುಪತಿ ಎಕ್ಸ್’ಪ್ರೆಸ್, ಬೆತ್ತನಗೆರೆ, ಭಲೇ ಜೋಡಿ ಮತ್ತು ಲೀ ತನಕ ಅರ್ಧ ಡಜನ್ ಸಿನಿಮಾ ಮಾಡಿದರೂ ಕನ್ನಡದ ಪ್ರೇಕ್ಷಕರಿಗೆ ಇನ್ನೂ ನೆಟ್ಟಗೆ ಪರಿಚಯವಾಗಿಲ್ಲ. ಪುತ್ರ ವ್ಯಾಮೋಹದಿಂದ ನಿರ್ಮಾಪಕ ಶೈಲೇಂದ್ರ ಬಾಬು ಕನ್ನಡದಲ್ಲೇ ಐದು ಸಿನಿಮಾಗಳನ್ನು ನಿರ್ಮಿಸಿದರು. ಇಲ್ಲಿನ ಜನ ಯಾಕೋ ನನ್ನ ಮಗನ್ನ ಸರಿಯಾಗಿ ಸ್ವೀಕರಿಸುತ್ತಿಲ್ಲ. ‘ನನ್ನ ಬಿಡ್ಡ ಏನಿದ್ದರೂ ತೆಲುಗಿಗೇ ಸರಿ’ ಅಂತಾ ಬ್ರಾಂಡ್ ಬಾಬು ಅನ್ನೋ ಸಿನಿಮಾವನ್ನು ತೆಲುಗಿನಲ್ಲಿ ತೆಗೆದರು. ಅದೂ ಬರಕತ್ತಾಗಲಿಲ್ಲ. ಕಡೆಗೆ ಮದುವೆ ಮಾಡಿದಮೇಲಾದರೂ ಲಕ್ಕು ಬದಲಾಗಬಹುದೇನೋ ಅಂತಾ ಸುಮಂತನಿಗೆ ಮ್ಯಾರೇಜು ಮಾಡಿ ಮುಗಿಸಿದರು.

ಇತ್ತೀಚೆಗೆ ಸುಮಂತ್ ಶೈಲೇಂದ್ರನಿಗೆ ಕಥೆ ಒಪ್ಪಿಸಿ ಸಿನಿಮಾವೊಂದನ್ನು ಶುರು ಮಾಡಲು ಚಿತ್ರತಂಡವೊಂದು ನಿರ್ಧರಿಸಿತ್ತು. ಇನ್ನೇನು ಮುಹೂರ್ತಕ್ಕೆ ನಾಲ್ಕು ದಿನ ಇದೆ ಎನ್ನುವಾಗ ಸುಮಂತು ‘ನಾನು ಈ ಪಿಚ್ಚರಲ್ಲಿ ಮಾಡಲ್ಲ’ ಅಂದುಬಿಟ್ಟನಂತೆ. ‘ಎಂದುಕಪ್ಪಾ?’ ಎಂದು ಕೇಳಲಾಗಿ ‘ಈ ಸಿನಿಮಾದಲ್ಲಿ ಫಿಕ್ಸ್ ಆಗಿರೋ ಹೀರೋಯಿನ್’ಗೆ ಶ್ಯಾನೆ ವಯಸ್ಸಾಗಿಬಿಟ್ಟಿದೆ. ನನಗವಳು ಸೆಟ್ಟಾಗ್ತಿಲ್ಲ’ ಅಂದುಬಿಟ್ಟಿತಂತೆ ಸುಮಂತು.

ನೋಡಲು ಅಷ್ಟು ಚುರುಕಾಗಿ ಕಾಣದ ಸುಮಂತ್ ಏಕಾ ಏಕಿ ಹೀಗಂದಿದ್ದು ನೋಡಿದ ಆ ಚಿತ್ರತಂಡದವರು ‘ಸುಮಂತ್ ಗಾರು ಸೂಸ್ತೆ ಸುಮಾರು, ಏಸ್ತೆ ಢಮಾರು’ ಅಂತಾ ಅಂದುಕೊಂಡು ಎದ್ದುಬಂದರಂತೆ!!

ಇನ್ನಷ್ಟು ಓದಿರಿ

Scroll to Top