ಸ್ಯಾಂಡಲ್ ವುಡ್ ನಲ್ಲಿ ಮೂಡಿಬರುತ್ತಿರುವ ಎಲ್ಲ ಚಿತ್ರಗಳು ವಿಭಿನ್ನವಾದ ಟೈಟಲ್ ಗಳ ಮೂಲಕವೇ ಮೂಡಿಬರುತ್ತಿದೆ. ಅಲ್ಲದೇ ಸಿನಿಮಾಗಳಿಗೆ ಟೈಟಲ್ ಇಡುವುದೇ ಒಂದು ಫ್ಯಾಷನ್ ಆಗಿರುವಂತೆ ಚಿತ್ರವಿಚಿತ್ರವಾದ ಟೈಟಲ್ ಗಳು ಅನೌನ್ಸ್ ಕೂಡ ಆಗುತ್ತಿದೆ. ಅಂತಹುದೇ ಮಾದರಿಯ ಟೈಟಲಿಟ್ಟಿಕೊಂಡು ಹೊಸ ಸಿನಿಮಾ ಸೆಟ್ಟೇರಿದ್ದು, ನಾಗೇಂದ್ರ ಅರಸ್ ನಿರ್ದೇಶನ ಮಾಡಲಿದ್ದಾರೆ.
ಚಿತ್ರಕ್ಕೆ ಕಂಡ್ಹಿಡಿ ನೋಡೋಣ ಎಂದು ಟೈಟಲಿಟ್ಟಿದ್ದು, ಹೆಸರೇ ಸೂಚಿಸುವಂತೆ ಹಾಸ್ಯಮಯ ಸಿನಿಮಾ ಎಂಬುದು ಕನ್ ಫರ್ಮ್ ಆಗಿದೆ. ಆದರೆ ಹಾಸ್ಯದ ಜತೆಗೆ ಆ್ಯಕ್ಷನ್, ಸಸ್ಪೆನ್ಸ್, ಥ್ರಿಲ್ಲರ್ ಕಥೆಯನ್ನು ಹೇಳಲು ನಾಗೇಂದ್ರ ಅರಸ್ ಹೊರಟಿದ್ದಾರೆ. ಈ ಚಿತ್ರವು ದಿವ್ಯ ಚಂದ್ರ ಹಾಗೂ ಯೋಗೇಶ್ ಗೌಡ ಅವರ ನಿರ್ಮಾಣದಲ್ಲಿ ಮೂಡಿಬರುತ್ತಿದ್ದು, ನಾಗೇಂದ್ರ ಅರಸ್ ನಿರ್ದೇಶನದ ಜತೆಗೆ ಸಂಕಲನದ ಜವಾಬ್ದಾರಿಯನ್ನು ಹೊತ್ತಿದ್ದಾರೆ. ಮೇಲಾಗಿ ಚಿತ್ರದಲ್ಲಿ ಅವರದೂ ಒಂದು ಪಾತ್ರವಿದೆಯಂತೆ.

ಇನ್ನು ಸೈಕೋ ಶಂಕರ ಚಿತ್ರದ ಮೂಲಕ ನಾಯಕನಾಗಿ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಟ್ಟ ಪ್ರಣವ್ ಈ ಚಿತ್ರದಲ್ಲಿ ನಾಯಕನಾಗುವ ಜತೆಗೆ ಕಥೆ ಚಿತ್ರಕಥೆಯ ಹೊಣೆಯನ್ನು ಹೊತ್ತಿದ್ದಾರೆ. ಒಬ್ಬ ಮದ್ಯಮ ಕುಟುಂಬದಲ್ಲಿ ಹುಟ್ಟಿ ಐಶಾರಾಮಿಯ ಕನಸುಗಳ ಕಾಣುವ ಹುಡುಗನಾಗಿ ಪ್ರಣವ್ ಮುಖ್ಯ ಭೂಮಿಕೆಯಲ್ಲಿ ಅಭಿನಯಿಸಿದ್ದಾರೆ. ಸಿನಿಮಾ ರಿಪೋರ್ಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಆದರ್ಶ್ ಈ ಚಿತ್ರದಲ್ಲಿ ಸೆಕೆಂಡ್ ಹೀರೋ ಆಗಿ ಕಾಣಿಸಿಕೊಂಡಿದ್ದಾರೆ. ಇನ್ನು ದುರ್ಗಾಶಕ್ತಿ ಖ್ಯಾತಿಯ ಜಯಸಿಂಹ ಮುಸುರಿ ಅವರು ಪ್ರಮುಖ ಪಾತ್ರದಲ್ಲಿ ನಟಿಸಲಿದ್ದಾರಂತೆ. ಉಳಿದಂತೆ ಹಿರಿಯ ನಟಿ ಗಿರಿಜಾ ಲೋಕೇಶ್, ವಿಜಯ್ ಚಂಡೂರ್, ಅರುಣ್ ಹಾಗೂ ಪ್ರಿಯಾಂಕ ಮಲಾಲಿ, ಮಾಣಿಕ್ಯ ಹಾಗೂ ಶಿಲ್ಪ ಬರಿಕೆ ಮುಂತಾದವರು ಚಿತ್ರದ ತಾರಾಗಣದಲ್ಲಿ ಇದ್ದಾರೆ. ಇನ್ನು ನಿರ್ದೇಶಕ ಜೋಗಿ ಪ್ರೇಮ್ ಚಿತ್ರದ ತಾಯಿ ಸೆಂಟಿಮೆಂಟ್ ಹಾಡೊಂದನ್ನು ಹಾಡಿರುವುದು ಕಂಡ್ಹಿಡಿ ನೋಡೋಣ ಚಿತ್ರಕ್ಕೆ ಪ್ಲಸ್ ಪಾಯಿಂಟ್ ಕೂಡ.











































