ಕಾಲಿವುಡ್ ಸೂಪರ್ ಸ್ಟಾರ್ ವಿಶಾಲ್ ಒಡೆತನದ ಪ್ರೊಡಕ್ಷನ್ ಹೌಸ್ ‘ವಿಶಾಲ್ ಫಿಲ್ಮ್ ಫ್ಯಾಕ್ಟರಿ’ ವಿರುದ್ಧ ತೆರಿಗೆ ಇಲಾಖೆ ಕಾನೂನು ಸಮರ ಸಾರಿದೆ. ಈ ಸಂಸ್ಥೆಯ ಉದ್ಯೋಗಿಗಳ ಸಂಬಳದಿಂದ ಕಡಿತಗೊಳಿಸಿರುವ ಟಿಡಿಎಸ್ ಹಣವನ್ನು ಕಳೆದ ಐದು ವರ್ಷದಿಂದ ಸರ್ಕಾರಕ್ಕೆ ಪಾವತಿಸಿಲ್ಲ ಎನ್ನುವ ಆರೋಪ ಕೇಳಿ ಬಂದಿದ್ದು, ಈ ಸಂಬಂಧ ಆದಾಯ ತೆರೆಗೆ ಇಲಾಖೆ ಚೆನ್ನೈನ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಕೋರ್ಟ್- IIನಲ್ಲಿ ವಿಶಾಲ್ ವಿರುದ್ಧ ಧಾವೆ ಹೂಡಿತ್ತು.

ಈ ಪ್ರಕರಣದ ವಿಚಾರಣೆಗೆ ಹಾಜರಾಗುವಂತೆ ಕೋರ್ಟ್ ನೀಡಿದ ನೋಟಿಸ್ಗೆ ವಿಶಾಲ್ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ. ವಿಚಾರಣೆಗೂ ಹಾಜರಾಗಿರಲಿಲ್ಲ. ವಿಚಾರಣೆಗೆ ಪದೇ ಪದೆ ಗೈರು ಆಗುತ್ತಿರುವ ವಿಶಾಲ್ ವಿರುದ್ಧ ಗರಂ ಆಗಿರುವ ನ್ಯಾಯಾಧೀಶೆ ಎಸ್.ಮಲರ್ ಮತಿ ಜಾಮೀನು ರಹಿತ ಬಂಧನದ ವಾರೆಂಟ್ ಹೊರಡಿಸಿದ್ದಾರೆ.











































