ಸಿಲಿಕಾನ್ ಸಿಟಿ ಬೆಂಗಳೂರನ್ನು ಇಡೀ ವಿಶ್ವವೇ ಬೆಚ್ಚಿ ಬೆರಗಾಗಿ ನೋಡುವಂತೆ ಮಾಡಿದ ಕೀರ್ತಿಯಲ್ಲಿ ಪಾಲು ಹೊಂದಿರುವ ಸಂಸ್ಥೆ ಇನ್ಫೋಸಿಸ್. ಈ ಕಂಪನಿಯ ಸಹ ಸಂಸ್ಥಾಪಕ ಎನ್. ಆರ್. ನಾರಾಯಣ ಮೂರ್ತಿ ಮತ್ತು ಅವರ ಪತ್ನಿ ಸುಧಾ ಮೂರ್ತಿ ಸಾಕಷ್ಟು ವಿಚಾರಗಳಿಂದ ಮಾದರಿ ದಂಪತಿಯೇ ಸರಿ. ಅವರ ಸಾಧನೆ, ತ್ಯಾಗ, ಸೇವಾ ಮನೋಭಾವನೆಯನ್ನು ಕನ್ನಡಿಗರಿಗೆ ಬಿಡಿಸಿ ಹೇಳುವ ಅವಶ್ಯಕತೆಯೇನಿಲ್ಲ. ಇಂತಹ ಮೇರುವ್ಯಕ್ತಿತ್ವಗಳ ಬಯೋಪಿಕ್ ಸಿನಿಮಾ ಶೀಘ್ರದಲ್ಲಿ ತೆರೆಯ ಮೇಲೆ ಬರಲಿದೆ.

ಖ್ಯಾತ ಚಿತ್ರ ನಿರ್ಮಾಪಕ ದಂಪತಿಗಳಾದ ಅಶ್ವಿನಿ ಅಯ್ಯರ್ ತಿವಾರಿ ಮತ್ತು ನಿತೇಶ್ ತಿವಾರಿ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದು, ನಾರಾಯಣ ಮೂರ್ತಿ ದಂಪತಿಗಳ ಮನವೊಲಿಸಲು ಸಹ ಯಶಸ್ವಿಯಾಗಿದ್ದಾರೆ ಎನ್ನಲಾಗುತ್ತಿದೆ. ಇನ್ನು ಇವರ ವ್ಯಕ್ತಿತ್ವಕ್ಕೆ ತಕ್ಕುದಾದ ಪಾತ್ರವರ್ಗಗಳನ್ನು ಆಯ್ಕೆ ಮಾಡಲು ಸದ್ಯದಲ್ಲಿಯೇ ಆಡಿಷನ್ ಕರೆಯಲಿದ್ದು ಅಧಿಕೃತ ಮಾಹಿತಿ ಸದ್ಯದಲ್ಲಿಯೇ ಹೊರಬೀಳಲಿದೆ.











































