ಶಿವಣ್ಣನ ಮಗಳು ನಿರುಪಮಾ ನಿರಾತಂಕವಾಗಿದ್ದಾರೆ!

Picture of Cinibuzz

Cinibuzz

Bureau Report

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರ ಮಗಳು ನಿರುಪಮಾಗೆ ಆರೋಗ್ಯ ಸರಿ ಇಲ್ಲವಂತೆ.. ಅದೂ ಇದೂ ಅಂತಾ ಇಲ್ಲಸಲ್ಲದ ರೂಮರುಗಳು ಹರಡುತ್ತಿವೆ. ಈ ಬಗ್ಗೆ ಸಿನಿಬಜ಼್ ವಿಚಾರಿಸಲಾಗಿ ವಾಸ್ತವ ವಿಚಾರ ತಿಳಿಯುವಂತಾಗಿದೆ.
ಕಳೆದ ಹದಿನೈದು ದಿನಗಳಿಂದ ನಿರುಪಮಾ ಅನಾರೋಗ್ಯಕ್ಕೀಡಾಗಿ ಆಸ್ಪತ್ರೆಯಲ್ಲಿ ದಾಖಲಾಗಿರೋದು ನಿಜ. ಈಗಾಗಲೇ ಎಂಬಿಬಿಎಸ್ ಮುಗಿಸಿರುವ ನಿರುಪಮಾ ಮೈಸೂರಿನಲ್ಲಿ ಪ್ಲಾಸ್ಟಿಕ್ ಸರ್ಜರಿಯಲ್ಲಿ ಎಂ.ಎಸ್. ಮಾಡುತ್ತಿದ್ದಾರೆ. ಕಳೆದ ಎರಡು ವರ್ಷಗಳ ಹಿಂದಷ್ಟೇ ದಿಲೀಪ್ ಅವರೊಟ್ಟಿಗೆ ನಿರುಪಮಾ ಮದುವೆ ಅದ್ದೂರಿಯಾಗಿ ನೆರವೇರಿತ್ತು. ಮದುವೆಯಾದ ನಂತರವೂ ಓದು ಮುಂದುವರೆಸಿದ ಈಕೆ  ಅಂತಿಮ ಪರೀಕ್ಷೆಯಿದ್ದ ಕಾರಣ ಸಿಕ್ಕಾಪಟ್ಟೆ ಸ್ಟ್ರೆಸ್’ಗೆ ಒಳಗಾಗಿದ್ದರಂತೆ. ಅದು ದೇಹದಲ್ಲಿನ ಶುಗರ್ ಲೆವೆಲ್ ಕಡಿಮೆಯಾಗಲು ಕಾರಣವಾಗಿತ್ತಂತೆ. ರಕ್ತದಲ್ಲಿನ ಶುಗರ್ ಲೆವೆಲ್ಲು ತೀರಾ ಕಡಿಮೆಯಾಗಿ ಪ್ರಜ್ಞಾಶೂನ್ಯರಾಗಿದ್ದರಂತೆ. ಹೀಗಾಗಿ ಅವರನ್ನು ಕೊಲಂಬಿಯಾ ಏಷ್ಯಾ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಈಗ ನಿರುಪಮಾ ಆರೋಗ್ಯ ಸ್ಥಿತಿಯಲ್ಲಿ ಚೇತರಿಕೆ ಕಂಡುಬಂದಿದ್ದು. ಯಾವುದೇ ಸಮಸ್ಯೆಯಿಲ್ಲ ಎಂದು ಡಾಕ್ಟರುಗಳು ತಿಳಿಸಿದ್ದಾರಂತೆ.
ಸಿನಿಮಾ ತಾರೆಯರ ಮನೆ, ಮಕ್ಕಳಿಗೆ ಏನೇ ಸಣ್ಣ ಸಮಸ್ಯೆಯಾದರೂ ಅದೂ ಒಬ್ಬರಿಂದ ಒಬ್ಬರ ಬಾಯಿಗೆ ಸಿಕ್ಕು ಮತ್ತಿನ್ನೇನೋ ಸುದ್ದಿಯಾಗುವುದು ಸಹಜ. ಆದರೆ ಅಂಥವಕ್ಕೆಲ್ಲಾ ಆಸ್ಪದ ಕೊಡಬಾರದೆಂದರೆ ಸ್ವತಃ ಅವರೇ ವಾಸ್ತವ ಸಂಗತಿಯನ್ನು ಹೇಳಿಬಿಡಬೇಕು. ಆದರೆ ಆರೋಗ್ಯದ ವಿಚಾರವಾಗಿ ಶಿವರಾಜ್ ಕುಮಾರ್ ಇತ್ತೀಚೆಗಷ್ಟೇ ವಿದೇಶಕ್ಕೆ ಹೋಗಿ ಬಂದಿದ್ದರು. ಈಗ ಅವರ ಮಗಳಿಗೆ ಅನಾರೋಗ್ಯ ಎಂದಾಗ ಎಂಥ ತಂದೆಗಾದರೂ ಸಹಜವಾಗೇ ಆತಂಕವಾಗಿರುತ್ತದೆ. ಈ ನಡುವೆ ಇಲ್ಲಸಲ್ಲದ ಗಾಳಿ ಸುದ್ದಿಗಳು ಹರಿದಾಡಿವೆ. ಶಿವಣ್ಣನ ಅಭಿಮಾನಿಗಳು ಯವುದಕ್ಕೂ ತಲೆ ಕೆಡಿಸಿಕೊಳ್ಳದೆ, ತಮ್ಮ ಅಭಿಮಾನಿ ನಟ ಮತ್ತವರ ಕುಟುಂಬ ನೆಮ್ಮದಿಯಿಂದಿರಲಿ ಅಂತಾ ಒಮ್ಮೆ ಹಾರೈಸಿದರೆ ಸಾಕು…

ಇನ್ನಷ್ಟು ಓದಿರಿ

Scroll to Top