ಇಂಥಾ ಸ್ಥಿತಿ ಬರಬಾರದಿತ್ತು….

Picture of Cinibuzz

Cinibuzz

Bureau Report

ʻಸಲ್ಮಾನ್‌ ಬಿಟ್ಟರೆ ಬೇರೆ ಯಾರೂ ಸಹಾಯ ಮಾಡೋದಿಲ್ಲ. ನನಗೆ ಗೊತ್ತು ಮತ್ತೆ ಮತ್ತೆ ನಾನು ಹಣ ಕೇಳುತ್ತಿದ್ದೇನೆ. ಕೇಳದೇ ಬೇರೆ ವಿಧಿಯಿಲ್ಲ. ಬೇಸರ ಮಾಡಿಕೊಳ್ಳದೆ ಮತ್ತೊಂದು ಬಾರಿ ಸಹಕರಿಸಿʼ ಅಂತಾ ಮಾಧ್ಯಮಗಳ ಮೂಲಕ ಪೂಜಾ ಸಲ್ಲುಗೆ ಅಹವಾಲು ಕಳಿಸಿದ್ದಾಳೆ. ಸಲ್ಲು ಈ ಸಲವೂ ಸಹಾಯ ನೀಡಲು ಮುಂದಾಗುತ್ತಾರಾ?!

ಸಿನಿಮಾರಂಗ ಮಾತ್ರವಲ್ಲ, ಯಾವುದೇ ಕ್ಷೇತ್ರವಿರಲಿ ಹಣ, ವರ್ಚಸ್ಸು ಇದ್ದವರಿಗಷ್ಟೇ ಬೆಲೆ. ನಾಳೆಗಳ ಚಿಂತೆ ಇಲ್ಲದೆ ದುಡಿದದ್ದನ್ನೆಲ್ಲಾ ಖಾಲಿ ಮಾಡಿಕೊಂಡರೆ ಕಷ್ಟದ ದಿನಗಳಲ್ಲಿ ಯಾರೂ ಕೈ ಹಿಡಿಯೋದಿಲ್ಲ. ಕೆಲವೇ ವರ್ಷಗಳ ಹಿಂದೆ, ಬಾಲಿವುಡ್ಡಿನ ಅಂಗಳದಲ್ಲಿ ಲವಲವಿಕೆಯಿಂದ ಓಡಾಡಿಕೊಂಡಿದ್ದ ನಟಿಯೊಬ್ಬಳು, ಇವತ್ತು ಏನೇನೂ ಇಲ್ಲದೆ, ಅನಾರೋಗ್ಯವನ್ನಷ್ಟೇ ಜೊತೆಯಾಗಿಸಿಕೊಂಡು ಉಸಿರಾಡುತ್ತಿದ್ದಾಳೆ.

1990ರ ದಶಕದಲ್ಲಿ ಬಂದ ಸಲ್ಮಾನ್‌ ಖಾನ್‌ ನಟನೆಯ ʻವೀರಗತಿʼ ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದವಳು ಪೂಜಾ ದದ್ವಾಲ್‌. ಆ ನಂತರ ಇನ್ನೊಂದಿಷ್ಟು ಸಿನಿಮಾ, ಸೀರಿಯಲ್ಲುಗಳಲ್ಲಿ ಪೂಜಾ ಪಾತ್ರ ನಿರ್ವಹಿಸಿದ್ದಳು. ಈಕೆಯ ಬದುಕಲ್ಲಿ ಅದೇನೇನು ಯಡವಟ್ಟುಗಳು ಸಂಭವಿಸಿದವೋ? ಗಂಡ ಯಾಕೆ ಬಿಟ್ಟುನಡೆದನೋ? ಜೊತೆಗಿದ್ದವರೆಲ್ಲಾ ಏನಾದರೂ ಗೊತ್ತಿಲ್ಲ. ಆದರೆ, ಸದ್ಯ ಈಕೆಯ ಪರಿಸ್ಥಿತಿ ಮಾತ್ರ ಅಕ್ಷರಶಃ ನರಕವಾಗಿದೆ.

ಎರಡು ವರ್ಷಗಳ ಮುಂಚೆ ಪೂಜಾ ಮುಂಬೈನ ಆಸ್ಪತ್ರೆಯೊಂದರಲ್ಲಿ ನಿತ್ರಾಣ ಸ್ಥಿತಿಯಲ್ಲಿ ಮಲಗಿದ್ದಳು. ಆಕೆಗೆ ಶ್ವಾಸಕೋಶದ ಸಮಸ್ಯೆ ಎದುರಾಗಿತ್ತು. ಆಸ್ಪತ್ರೆಯ ಬಿಲ್‌ ಪಾವತಿ ಮಾಡಲೂ ಪೂಜಾ ಬಳಿ ಹಣವಿರಲಿಲ್ಲ. ʻಯಾರಾದರೂ ಸಹಾಯ ಮಾಡಿʼ ಅಂತಾ ಬೇಡಿದ್ದಳು. ವಿಷಯ ತಿಳಿದ ಸಲ್ಮಾನ್ ಖಾನ್‌ ತನ್ನ ʻಬೀಯಿಂಗ್‌ ಹ್ಯೂಮೆನ್ʼ‌ ಸಂಸ್ಥೆಯಿಂದ ಒಂದಿಷ್ಟು ಹಣ ಕಳಿಸಿಕೊಟ್ಟದ್ದ.‌ ಅದಾದ ಮೇಲೆ ಪೂಜಾ ಏನಾದಳು? ಹೇಗಿದ್ದಾಳೆ? ಎನ್ನುವ ಯಾವ ಸುದ್ದಿಯೂ ಇರಲಿಲ್ಲ.

ಈಗ ಮತ್ತೆ ಪೂಜಾ ಕಾಣಿಸಿಕೊಂಡಿದ್ದಾಳೆ; ಮತ್ತದೇ ಆಸ್ಪತ್ರೆಯ ಹಾಸಿಗೆಯಲ್ಲಿ. ಮೊದಲೇ ಟೀಬಿ ಕಾಯಿಲೆಯಿಂದ ಬಳಲುತ್ತಿದ್ದ ಪೂಜಾಗೆ ಕೊರೋನಾ ಸೋಂಕು ತಗುಲಿದೆಯಂತೆ. ಹಣಕಾಸಿನ ನೆರವಿಗಾಗಿ ಮತ್ತೆ ಕೈ ಚಾಚಿದ್ದಾಳೆ. ಯಾವತ್ತಿನಂತೆ ಯಾರೂ ನೆರವು ನೀಡಲು ಮುಂದೆ ಬಂದಿಲ್ಲ. ʻಸಲ್ಮಾನ್‌ ಬಿಟ್ಟರೆ ಬೇರೆ ಯಾರೂ ಸಹಾಯ ಮಾಡೋದಿಲ್ಲ. ನನಗೆ ಗೊತ್ತು ಮತ್ತೆ ಮತ್ತೆ ನಾನು ಹಣ ಕೇಳುತ್ತಿದ್ದೇನೆ. ಕೇಳದೇ ಬೇರೆ ವಿಧಿಯಿಲ್ಲ. ಬೇಸರ ಮಾಡಿಕೊಳ್ಳದೆ ಮತ್ತೊಂದು ಬಾರಿ ಸಹಕರಿಸಿʼ ಅಂತಾ ಮಾಧ್ಯಮಗಳ ಮೂಲಕ ಪೂಜಾ ಸಲ್ಲುಗೆ ಅಹವಾಲು ಕಳಿಸಿದ್ದಾಳೆ. ಸಲ್ಲು ಈ ಸಲವೂ ಸಹಾಯ ನೀಡಲು ಮುಂದಾಗುತ್ತಾರಾ?!

ಇನ್ನಷ್ಟು ಓದಿರಿ

Scroll to Top