(CINIBUZZ.INನ ಫೇಸ್ ಬುಕ್ ಪೇಜ್ Cinibuzz Kannada ಹೆಸರಿನಲ್ಲಿದೆ. ಮನರಂಜನಾ ಕ್ಷೇತ್ರಕ್ಕೆ ಸಂಬಂಧಿಸಿದ ಅಪರೂಪದ ವಿಚಾರಗಳು ನಿಮಗಿಲ್ಲಿ ಸಿಗಲಿವೆ. ಹೊಸ ಓದುಗರು ಪೇಜ್ ಲೈಕ್ & ಫಾಲೋ ಮಾಡಿ…)
ಕೊರೋನಾ ಎಂಟ್ರಿ ಕೊಡದೇ ಹೋಗಿದ್ದರೆ ಕಳೆದ ಮೇ ತಿಂಗಳಲ್ಲಿ ಪವನ್ ಕಲ್ಯಾಣ್ ನಟನೆಯ ತೆಲುಗು ಸಿನಿಮಾ ವಕೀಲ್ ಸಾಬ್ ರಿಲೀಸಾಗಬೇಕಿತ್ತು. ತೆರೆಗೆ ಬರಲು ರೆಡಿಯಿದ್ದೂ ಥೇಟರು ಓಪನ್ ಆಗಲಿ ಅಂತಾ ಕಾದಿರುವ ಬೇರೆಲ್ಲ ಭಾಷೆಯ ಸಿನಿಮಾಗಳಂತೆ, ವಕೀಲ್ ಸಾಬ್ ಕೂಡಾ ಕಾದು ಕೂತಿದ್ದಾರೆ.

ಈಗ ವಕೀಲ್ ಸಾಬ್ ಸಿನಿಮಾದ ಫೋಟೋವೊಂದು ಲೀಕ್ ಆಗಿದೆ! ಯಾವುದೇ ಸಿನಿಮಾದ ಪಬ್ಲಿಸಿಟಿಗಾಗಿ ಚಿತ್ರತಂಡವೇ ಖುದ್ದು ಆಯಾ ಸಿನಿಮಾಗಳ ಸ್ಟಿಲ್ ಫೋಟೋಗಳನ್ನು ಮೀಡಿಯಾಗೆ ನೀಡೋದು ವಾಡಿಕೆ. ಆದರೆ ವಕೀಲ್ ಸಾಬ್ ಚಿತ್ರದ ಈ ಫೋಟೋ ಅಫಿಷಿಯಲ್ಲಾಗಿ ಚಿತ್ರತಂಡದವರು ಬಿಟ್ಟಿರುವುದಲ್ಲ. ಸಿನಿಮಾದಲ್ಲಿ ಪವನ್ ಕಲ್ಯಾಣ್ ನ್ಯಾಯಾಲಯದಲ್ಲಿ ವಾದ ಮಾಡುತ್ತಿರುವ ದೃಶ್ಯವೊಂದನ್ನು ಕ್ಯಾಪ್ಚರ್ ಮಾಡಿ ಆನ್ ಲೈನಿನಲ್ಲಿ ಹರಿಬಿಟ್ಟಿದ್ದಾರೆ. ಸಿನಿಮಾಗಳ ಪಬ್ಲಿಸಿಟಿಗಾಗಿ ತಮ್ಮ ಚಿತ್ರದ ತುಣುಕನ್ನೋ, ಫೋಟೋವನ್ನೋ ತಾವೇ ಹೊರಹಾಕಿ, ಲೀಕ್ ಆಯ್ತು ಅಂತಾ ಗಿಮಿಕ್ ಮಾಡೋದು ಕನ್ನಡ ಸೇರಿದಂತೆ ಬಹುತೇಕ ಭಾಷೆಯ ಸಿನಿಮಾ ಮಂದಿಯ ಹಳೇ ವರಸೆ.

ಸಿನಿಮಾವೊಂದು ರಿಲೀಸಾದ ಕೆಲವೇ ಗಂಟೆಯೊಳಗೆ ಪೈರಸಿ ಕಾಪಿ ಕೂಡಾ ಆನ್ ಲೈನಲ್ಲಿ ಅಪ್ ಲೋಡ್ ಆಗುತ್ತದೆ. ವ್ಯವಸ್ಥಿತ ಜಾಲಗಳು ಇಂತಾ ಹೀನ ಕೆಲಸ ಮಾಡಿ ಕಾಸು ಮಾಡುವ ದಂಧೆ ಮಾಡುತ್ತಾ ಬಂದಿವೆ. ಈಗ ಪವನ್ ಕಲ್ಯಾನ್ ಅಭಿನಯದ ವಕೀಲ್ ಸಾಬ್ ಸಿನಿಮಾ ರಿಲೀಸಿಗೆ ಮುಂಚೆಯೇ ಪೈರಸಿಗೊಂಡಿದೆಯಾ? ಇಡೀ ಸಿನಿಮಾವನ್ನು ಬಿಡುವ ಸೂಚನೆಯಾಗಿ ಈ ಫೋಟೋವನ್ನು ಹೊರಬಿಟ್ಟಿದ್ದಾರಾ? ಎಂಬಿತ್ಯಾದಿಯಾಗಿ ತೆಲುಗು ದೇಶದಲ್ಲಿ ಗಾಳಿ ಸುದ್ದಿ ಹಬ್ಬಿದೆ. ಆದರೆ ಈ ಚಿತ್ರದ ನಿರ್ಮಾಪಕ ದಿಲ್ ರಾಜು ಆಗಲಿ, ನಿರ್ದೇಶಕ ವೇಣು ಶ್ರೀರಾಮ್ ಆಗಲಿ ಈ ಫೋಟೋ ಲೀಕ್ ಆಗಿರೋದರ ಬಗ್ಗೆ ಯಾವುದೇ ಸ್ಪಷ್ಟೀಕರಣ ನೀಡಿಲ್ಲ.











































