Aravindaswamy copy

ಹಿಂದಿ ಹಮಾರಾ ರಾಷ್ಟ್ರಭಾಷೆ ನಹೀ ಹೈ ಅಂದರು ಅರವಿಂದಸ್ವಾಮಿ!

Picture of Cinibuzz

Cinibuzz

Bureau Report

‘ಹಿಂದಿ ನಮ್ಮ ರಾಷ್ಟ್ರಭಾಷೆ ಹೌದಾ, ಅಲ್ಲವಾ?’ ಎಂಬ ಚರ್ಚೆ ಇವತ್ತಿನದಲ್ಲ; ಭಾರತದ ಒಕ್ಕೂಟ ವ್ಯವಸ್ಥೆಯ ಇತಿಹಾಸದುದ್ದಕ್ಕೂ ಮುನ್ನೆಲೆಗೆ ಬರುತ್ತಲೇ ಇರುವ ಗಂಭೀರ ಪ್ರಶ್ನೆ ಇದು. ಆದರೆ ಸಾಂವಿಧಾನಿಕವಾಗಿ ಭಾರತಕ್ಕೆ ಯಾವುದೇ ಒಂದು ‘ರಾಷ್ಟ್ರಭಾಷೆ’ ಇಲ್ಲ, ಬದಲಿಗೆ ಒಕ್ಕೂಟದ ಆಡಳಿತಾತ್ಮಕ ಭಾಷೆಯಾಗಿ ಹಿಂದಿ ಮತ್ತು ಇಂಗ್ಲಿಷ್ ಇವೆ ಹಾಗೂ ಸಂವಿಧಾನದ ಎಂಟನೇ ಪರಿಚ್ಛೇದದಲ್ಲಿರುವ ಕನ್ನಡ ಸೇರಿದಂತೆ ಎಲ್ಲಾ ಪ್ರಮುಖ ಭಾಷೆಗಳೂ ಸಮಾನ ಸ್ಥಾನಮಾನ ಹೊಂದಿರುವ ಅಧಿಕೃತ ಭಾಷೆಗಳಾಗಿವೆ ಎಂಬ ವಾಸ್ತವ ಹಲವರಿಗೆ ಇನ್ನೂ ಅರಿವಾಗಿಲ್ಲ. ದುರಂತವೆಂದರೆ, ಈ ಸತ್ಯಾಸತ್ಯತೆಯನ್ನು ಅರಿಯಬೇಕಾದ ಮತ್ತು ಜನಸಾಮಾನ್ಯರಿಗೆ ತಲುಪಿಸಬೇಕಾದ ಜನಪ್ರಿಯ ಮಾಧ್ಯಮವಾದ ಚಿತ್ರರಂಗದ ಬಹುತೇಕ ಮಂದಿ ಮಾತ್ರ “ಯಾವ ಭಾಷೆ ಯಾರದ್ದಾದರೆ ನಮಗೇನು, ನಮ್ಮ ವ್ಯವಹಾರ ನಡೆದರೆ ಸಾಕು” ಎಂಬ ಉಡಾಫೆಯಲ್ಲೇ ಮುಳುಗಿದ್ದಾರೆ. ಇವತ್ತು ಕನ್ನಡ ಚಿತ್ರರಂಗದ ನೂರು ಜನರನ್ನು ಸಾಲಿನಲ್ಲಿ ನಿಲ್ಲಿಸಿ ಪ್ರತ್ಯೇಕವಾಗಿ ‘ನಮ್ಮ ರಾಷ್ಟ್ರಭಾಷೆ ಯಾವುದು?’ ಎಂದು ಕೇಳಿದರೆ, ಬಹುಶಃ ಬಹುತೇಕರು ತುಸು ಯೋಚನೆಯೂ ಮಾಡದೆ ‘ಹಿಂದಿ’ ಎಂದೇ ಒದರಬಹುದು. ಇದು ಕೇವಲ ಮಾಹಿತಿಯ ಕೊರತೆಯಷ್ಟೇ ಅಲ್ಲ, ಭಾಷಿಕ ಪ್ರಜ್ಞೆಯ ದಾರಿದ್ರ್ಯವೂ ಹೌದು.
ಕನ್ನಡದ ಗಡಿ ಮೀರಿ ಭಾರತೀಯ ಚಿತ್ರರಂಗದ ಬೇರೆ ಬೇರೆ ಭಾಷೆಗಳಲ್ಲೂ ತಮ್ಮ ಪ್ರತಿಭೆಯಿಂದ ಛಾಪು ಮೂಡಿಸಿರುವ ಪ್ರಕಾಶ್ ರೈ ಅಥವಾ ಕಿಶೋರ್‌ ಅವರಂಥ ಬೆರಳೆಣಿಕೆಯ ನಟರು ಮಾತ್ರ ಇವತ್ತು ಪ್ರಚಲಿತ ವಿದ್ಯಮಾನಗಳಿಗೆ, ಸಾಮಾಜಿಕ ಸ್ಥಿತ್ಯಂತರಗಳಿಗೆ ಸ್ಪಂದಿಸುವ ಎದೆಗಾರಿಕೆ ಉಳಿಸಿಕೊಂಡಿದ್ದಾರೆ. ಯಾರ ಹಂಗೂ ಇಲ್ಲದೆ, ಕಳೆದುಕೊಳ್ಳುವ ಭೀತಿಯೂ ಇಲ್ಲದೆ, “ಇದ್ದದ್ದನ್ನು ಇದ್ದ ಹಾಗೆ ಹೇಳುವ” ದಿಟ್ಟತನವನ್ನು ಇವರು ತೋರುತ್ತಾರೆ. ಈ ವಿಷಯದಲ್ಲಿ ತಮಿಳು ಚಿತ್ರರಂಗವನ್ನು ಗಮನಿಸಿದರೆ ಅಲ್ಲಿನ ಕಲಾವಿದರಲ್ಲಿ ಎದ್ದುಕಾಣುವ ಭಾಷಿಕ ಮತ್ತು ಸಾಮಾಜಿಕ ಪ್ರಜ್ಞೆ ಬೆರಗು ಮೂಡಿಸುತ್ತದೆ. ತಮ್ಮ ನೆಲ, ಜಲ, ಭಾಷೆಯ ಹಕ್ಕು ಮತ್ತು ಅಸ್ಮಿತೆಯ ವಿಚಾರ ಬಂದಾಗ ಅಲ್ಲಿನ ನಾಯಕರು ಯಾವುದೇ ಮುಲಾಜು, ರಾಜಕೀಯ ಲಾಭ-ನಷ್ಟದ ಲೆಕ್ಕಾಚಾರ ಅಥವಾ ಮಾರುಕಟ್ಟೆಯ ಅಂಜಿಕೆಯಿಲ್ಲದೆ ನೇರವಾಗಿ ಧ್ವನಿ ಎತ್ತುತ್ತಾರೆ.

ಇತ್ತೀಚೆಗೆ ಖ್ಯಾತ ನಟ ಅರವಿಂದ್ ಸ್ವಾಮಿ ಗೋಪಿನಾಥ್‌ ಅವರ ಪಾಡ್‌ಕಾಸ್ಟ್ ಸಂದರ್ಶನವೊಂದರಲ್ಲಿ, “ಹಿಂದಿ ನಮ್ಮ ರಾಷ್ಟ್ರೀಯ ಭಾಷೆಯಾಗಲು ಸಾಧ್ಯವೇ ಇಲ್ಲ. ನಾನೂ ಚಿಕ್ಕವನಿದ್ದಾಗ ಶಾಲಾ ಪಠ್ಯಪುಸ್ತಕದ ಪ್ರಭಾವದಿಂದ ‘ಹಿಂದಿ ಹಮಾರಾ ರಾಷ್ಟ್ರಭಾಷಾ ಹೈ’ ಎಂದು ಗಿಳಿಪಾಠ ಒಪ್ಪಿಸುತ್ತಿದ್ದೆ. ಆದರೆ ಪ್ರಜ್ಞೆ ಬೆಳೆದಂತೆ, ಸತ್ಯ ಅರ್ಥವಾದ ಮೇಲೆ ಯಾವ ಭಾಷೆಯ ಸ್ಥಾನಮಾನ ಏನು ಎಂಬುದು ಸ್ಪಷ್ಟವಾಯಿತು” ಎಂದು ಯಾವುದೇ ಹಿಂಜರಿಕೆಯಿಲ್ಲದೆ ಬಿಚ್ಚುಮನಸ್ಸಿನಿಂದ ಹೇಳಿಕೊಂಡಿದ್ದಾರೆ. ಈ ಮಾತು ಕೇವಲ ಅವರ ವೈಯಕ್ತಿಕ ಅನಿಸಿಕೆಯಲ್ಲ, ಒಕ್ಕೂಟ ತತ್ವದ ಮೂಲ ಸತ್ವವನ್ನು ಎತ್ತಿಹಿಡಿಯುವ ಪ್ರಬುದ್ಧ ನಿಲುವು. ಭಾರತದ ವೈವಿಧ್ಯತೆಯೇ ಅದರ ಶಕ್ತಿ ಎಂದಮೇಲೆ, ಒಂದು ಭಾಷೆಯನ್ನು ಇಡೀ ದೇಶದ ಮೇಲೆ ಹೇರುವುದು ಪ್ರಜಾಪ್ರಭುತ್ವದ ಆಶಯಕ್ಕೆ ವಿರುದ್ಧವಾದುದು ಎಂಬ ಗ್ರಹಿಕೆ ಪ್ರತಿಯೊಬ್ಬ ಸಾರ್ವಜನಿಕ ವ್ಯಕ್ತಿಗೂ ಇರಬೇಕಾದುದು ಕನಿಷ್ಠ ಜವಾಬ್ದಾರಿ.

ನವೆಂಬರ್ ತಿಂಗಳು ಬಂದಾಗ ಕೆಂಪು-ಹಳದಿ ಶಾಲು ಹೊದ್ದು, ವೇದಿಕೆಗಳ ಮೇಲೆ ಹಾರ-ತುರಾಯಿ ಹಾಕಿಸಿಕೊಂಡು, ಮೆರವಣಿಗೆಗಳಲ್ಲಿ ಕೈಬೀಸಿ ಜೈಕಾರ ಹಾಕಿದಾಕ್ಷಣ ಕನ್ನಡ ಪ್ರೇಮ ಮೆರೆದಂತಾಗುವುದಿಲ್ಲ. ಭಾಷಾ ಪ್ರೇಮ ಎನ್ನುವುದು ಕ್ಯಾಲೆಂಡರ್‌ನ ಒಂದು ತಿಂಗಳಿಗೆ ಮಾತ್ರ ಸೀಮಿತವಾಗುವ ಆಚರಣೆಯಲ್ಲ; ಅದು ದಿನನಿತ್ಯದ ಬದುಕಿನಲ್ಲಿ, ಭಾಷೆಯ ಹಕ್ಕುಗಳ ರಕ್ಷಣೆಯಲ್ಲಿ ಮತ್ತು ಒಕ್ಕೂಟ ವ್ಯವಸ್ಥೆಯೊಳಗೆ ಕನ್ನಡದ ಘನತೆಯನ್ನು ಕಾಪಾಡುವ ನಿಲುವಿನಲ್ಲಿ ಪ್ರಕಟವಾಗಬೇಕಾದ ಬದ್ಧತೆ. ಕನ್ನಡ ಚಿತ್ರರಂಗದ ಬೆಳ್ಳಿಪರದೆಯ ಕಲಾವಿದರು ಇಂಥ ತೋರಿಕೆಯ ಆಡಂಬರದಿಂದ ಹೊರಬಂದು, ಅರವಿಂದ್ ಸ್ವಾಮಿಯಂಥವರ ಪ್ರಬುದ್ಧತೆಯಿಂದ, ದಿಟ್ಟತನದಿಂದ ಕಲಿಯಬೇಕಾದದ್ದು ಬೆಟ್ಟದಷ್ಟಿದೆ. ಸಿನೆಮಾದ ಮಾರುಕಟ್ಟೆ ದೊಡ್ಡದಾಗುತ್ತಿರುವ ಈ ಕಾಲಘಟ್ಟದಲ್ಲಿ, ಕನ್ನಡಿಗರ ಭಾಷಿಕ ಪ್ರಜ್ಞೆಯೂ ಅಷ್ಟೇ ಗಟ್ಟಿಯಾಗಿ ಧ್ವನಿಸಬೇಕಿದೆ…
-ಅರುಣ್‌ ಕುಮಾರ್‌ ಜಿ

ಇನ್ನಷ್ಟು ಓದಿರಿ

Scroll to Top