Kalyani_1 copy

ಬಿ.ಎಂ. ಗಿರಿರಾಜ್ ಸಾರಥ್ಯದ ಹೊಸ ಸಿನಿಮಾದ ಹಾಡುಗಳು ಬಿಡುಗಡೆ!

Picture of Cinibuzz

Cinibuzz

Bureau Report

ಕನ್ನಡ ಚಿತ್ರರಂಗದಲ್ಲಿ ‘ಜಟ್ಟ’ ಹಾಗೂ ‘ಮೈತ್ರಿ’ಯಂತಹ ವಿಭಿನ್ನ ಹಾಗೂ ಚಿಂತನೆಗೆ ಹಚ್ಚುವ ಸಿನಿಮಾಗಳ ಮೂಲಕ ಕಲಾತ್ಮಕ ಹಾಗೂ ಮನರಂಜನಾ ಲೋಕದಲ್ಲಿ ತನ್ನದೇ ಆದ ಮುದ್ರೆ ಒತ್ತಿರುವ ನಿರ್ದೇಶಕ ಬಿ.ಎಂ. ಗಿರಿರಾಜ್ ಮತ್ತೊಂದು ವಿನೂತನ ಕಥೆಯೊಂದಿಗೆ ಸಿದ್ಧರಾಗಿದ್ದಾರೆ. ಲೇಖಕ ಬಸವ ರೆಡ್ಡಿ ಅವರ ಆಕರ್ಷಕ ಕಥೆಗೆ ದೃಶ್ಯರೂಪ ನೀಡಿರುವ ಗಿರಿರಾಜ್, ಈ ಬಾರಿ ‘ಕಲ್ಯಾಣಿ’ ಎನ್ನುವ ವಿಭಿನ್ನ ಹಂದರದ ಚಿತ್ರದೊಂದಿಗೆ ಪ್ರೇಕ್ಷಕರನ್ನು ರಂಜಿಸಲು ಬರುತ್ತಿದ್ದಾರೆ.

ಸದ್ದಿಲ್ಲದೆ ಸೆಟ್ಟೇರಿದ್ದ ಈ ಚಿತ್ರವು ಸದ್ಯ ತನ್ನ ಎಲ್ಲಾ ಹಂತಗಳ ಚಿತ್ರೀಕರಣ ಹಾಗೂ ಪೋಸ್ಟ್ ಪ್ರೊಡಕ್ಷನ್ ಕೆಲಸಗಳನ್ನು ಯಶಸ್ವಿಯಾಗಿ ಮುಗಿಸಿಕೊಂಡು ತೆರೆಗೆ ಬರಲು ಅಣಿಯಾಗಿದೆ. ಇದರ ನಡುವೆಯೇ ಮಾಧ್ಯಮಗಳ ಎದುರು ಬಂದಿರುವ ಚಿತ್ರತಂಡ, ಸಿನಿಮಾದ ಆಡಿಯೋವನ್ನು ಅದ್ದೂರಿಯಾಗಿ ಬಿಡುಗಡೆಗೊಳಿಸುವುದರ ಜೊತೆಗೆ ಚಿತ್ರದ ಇಂಟರೆಸ್ಟಿಂಗ್ ಸಂಗತಿಗಳನ್ನು ಹಂಚಿಕೊಂಡಿದೆ.

ಎರಡು ಸಂಸ್ಕೃತಿಗಳ ಮುಖಾಮುಖಿ: ನವಿರಾದ ಒಲವಿನ ಕಥೆ

ಚಿತ್ರದ ಅನಾವರಣದ ಕುರಿತು ಮಾತನಾಡಿರುವ ನಿರ್ದೇಶಕ ಬಿ.ಎಂ. ಗಿರಿರಾಜ್, “ಇದು ನವಿರಾದ ಒಲವಿನ ಕಥೆಯನ್ನು ಮುನ್ನೆಲೆಯಲ್ಲಿಟ್ಟುಕೊಂಡು ರೂಪಿಸಿರುವ ಸಿನಿಮಾ. ಇದರೊಂದಿಗೆ ನಂಬಿಕೆ, ಸ್ನೇಹ ಹಾಗೂ ವ್ಯಕ್ತಿಯ ಅಸ್ಮಿತೆ (ಐಡೆಂಟಿಟಿ)ಯ ವಿಷಯಗಳು ಈ ಸಿನಿಮಾದ ತಿರುಳಾಗಿವೆ. ಉತ್ತರ ಭಾರತದಿಂದ ದಕ್ಷಿಣಕ್ಕೆ ಬರುವ ಹುಡುಗಿ ಹಾಗೂ ದಕ್ಷಿಣ ಭಾರತದ ಹುಡುಗನ ಎರಡು ಪ್ರಧಾನ ಪಾತ್ರಗಳ ಮೂಲಕ ಎರಡು ಭಿನ್ನ ಸಂಸ್ಕೃತಿಗಳ ಮುಖಾಮುಖಿಯನ್ನು ಈ ಚಿತ್ರದಲ್ಲಿ ಕಟ್ಟಿಕೊಡುವ ಪ್ರಾಮಾಣಿಕ ಪ್ರಯತ್ನ ಮಾಡಿದ್ದೇವೆ. ಇಲ್ಲಿಯವರೆಗೆ ನಾನು ಮಾಡಿದ ಸಿನಿಮಾಗಳಿಗಿಂತ ಇದು ಸಂಪೂರ್ಣ ವಿಭಿನ್ನವಾಗಿದೆ” ಎಂದು ಸಿನಿಮಾದ ಆಳವನ್ನು ಬಿಚ್ಚಿಟ್ಟಿದ್ದಾರೆ.

ಕನ್ನಡ ಚಿತ್ರರಂಗದಲ್ಲಿ ಸುಮಾರು ಮೂರು ದಶಕಗಳ ಸುದೀರ್ಘ ಅನುಭವವಿರುವ ಹಾಗೂ 45ಕ್ಕೂ ಹೆಚ್ಚು ಸಿನಿಮಾಗಳಿಗೆ ಕಾರ್ಯಕಾರಿ ನಿರ್ಮಾಪಕರಾಗಿ ಕೆಲಸ ಮಾಡಿರುವ ಕುಮಾರಸ್ವಾಮಿ ಆರ್. ಅವರು ‘ಆರ್. ಕೆ. ಸಿನೆಮಾಸ್’ ಬ್ಯಾನರ್ ಅಡಿಯಲ್ಲಿ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ.

ಕಲ್ಯಾಣಿಯ ಸಂಗೀತ ಲೋಕ: ಆಲ್ ಓಕೆ ಹಾಗೂ ಪೃಥ್ವಿ ಭಟ್ ಧ್ವನಿಯ ಮ್ಯಾಜಿಕ್

‘ಕಲ್ಯಾಣಿ’ ಚಿತ್ರದ ಹಾಡುಗಳು ಸದ್ಯ ಸಂಗೀತ ಪ್ರಿಯರ ಗಮನ ಸೆಳೆಯುತ್ತಿವೆ. ಬಿ.ಜೆ. ಭರತ್ ಅವರ ಸಮ್ಮೋಹಕ ಸಂಗೀತ ಸಂಯೋಜನೆಯಲ್ಲಿ ಮೂಡಿಬಂದಿರುವ ಈ ಚಿತ್ರದ ಹಾಡುಗಳು ವಿಭಿನ್ನ ಶೈಲಿಯಲ್ಲಿವೆ. ವಿಶೇಷವೆಂದರೆ, ಚಿತ್ರದ ಒಂದು ಹಾಡಿನಲ್ಲಿ ವರಕವಿ ದ.ರಾ. ಬೇಂದ್ರೆಯವರ ಸಾಹಿತ್ಯವಿದ್ದರೆ, ಮತ್ತೊಂದು ಹಾಡಿಗೆ ವಿಜಯ್ ಈಶ್ವರ್ ಸಾಹಿತ್ಯ ಒದಗಿಸಿದ್ದಾರೆ.

ಇನ್ನು ಸಿನಿಮಾದ ಮತ್ತೊಂದು ವಿಶೇಷ ಆಕರ್ಷಣೆಯೆಂದರೆ, ‘ನಿನ್ನ ಲುಕ್ಕು ಫ್ಯಾಂಟಾಸ್ಟಿಕ್ಕು…’ ಎಂಬ ರ್ಯಾಪ್ ಶೈಲಿಯ ಗೀತೆ. ಜನಪ್ರಿಯ ರ್ಯಾಪ್ ಗಾಯಕ ಆಲ್ ಓಕೆ (ಅಲೋಕ್) ಈ ಹಾಡಿಗೆ ಸಾಲುಗಳನ್ನು ಬರೆದು, ಧ್ವನಿ ನೀಡುವುದರ ಜೊತೆಗೆ ತೆರೆಮೇಲೆ ಭರ್ಜರಿಯಾಗಿಯೂ ಹೆಜ್ಜೆಹಾಕಿದ್ದಾರೆ. ಇದರೊಂದಿಗೆ ಖ್ಯಾತ ಗಾಯಕಿ ಪೃಥ್ವಿ ಭಟ್ ಕೂಡ ಕಲ್ಯಾಣಿಯ ನವೀನ ಗೀತೆಗಳಿಗೆ ಜೀವ ತುಂಬಿದ್ದಾರೆ. ಹಿರಿಯ ನಿರ್ದೇಶಕ ಶಶಾಂಕ್ ಅವರು ಈ ಚಿತ್ರದ ಆಡಿಯೋವನ್ನು ರಿಲೀಸ್ ಮಾಡಿ ಇಡೀ ತಂಡಕ್ಕೆ ಶುಭ ಹಾರೈಸಿದ್ದಾರೆ.

ರಂಗಭೂಮಿಯಲ್ಲಿ ಈಗಾಗಲೇ ಸಕ್ರಿಯವಾಗಿ ಗುರುತಿಸಿಕೊಂಡಿರುವ ಭರವಸೆಯ ಯುವ ನಟ ಸಾಮ್ರಾಟ್ ಶೆಟ್ಟಿ ಈ ಚಿತ್ರದ ಮೂಲಕ ನಾಯಕನಾಗಿ ಸ್ಯಾಂಡಲ್‌ವುಡ್‌ಗೆ ಕಾಲಿಡುತ್ತಿದ್ದಾರೆ. ಇವರೊಂದಿಗೆ ಉತ್ತರ ಭಾರತದ ನಟಿ ಸಿಮ್ರನ್ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಉಳಿದಂತೆ ರಾಹುಲ್ ಜೇಟ್ಲಿ, ಶಮಂತ್ ರಾವ್, ಪಿ.ಡಿ. ಸತೀಶ್ ಚಂದ್ರ, ಯಮುನಾ ಶ್ರೀನಿಧಿ, ವಿಜಯ್ ಚೆಂಡೂರು, ಶೈಲೇಂದ್ರ, ರಂಗು ಸಮರ್ಪಣ್ ಸೇರಿದಂತೆ ದೊಡ್ಡ ಮಟ್ಟದ ರಂಗಭೂಮಿ ಕಲಾವಿದರ ಬಳಗವೇ ಚಿತ್ರದಲ್ಲಿದೆ.

ಭಟ್ಕಳ, ಉಡುಪಿ ಹಾಗೂ ಬೆಂಗಳೂರಿನ ನಿಸರ್ಗ ಹಾಗೂ ನಗರದ ಸುಂದರ ತಾಣಗಳಲ್ಲಿ ಈ ಚಿತ್ರದ ಬಹುತೇಕ ಚಿತ್ರೀಕರಣ ನಡೆಸಲಾಗಿದೆ. ಪ್ರಶಾಂತ ಲಾಗರ ಅವರ ಜೀವಂತಿಕೆ ತುಂಬಿದ ಕ್ಯಾಮೆರಾ ಕಣ್ಣುಗಳು ಹಾಗೂ ಅರ್ಜುನ್ ಕಿಟ್ಟು ಅವರ ಹದವಾದ ಸಂಕಲನ ಚಿತ್ರಕ್ಕಿದೆ. ಎಲ್ಲಾ ಅಂದುಕೊಂಡಂತೆ ಸಾಗಿದರೆ, ಇದೇ ನವೆಂಬರ್ ಅಥವಾ ಡಿಸೆಂಬರ್ ತಿಂಗಳ ವೇಳೆಗೆ ‘ಕಲ್ಯಾಣಿ’ ದೊಡ್ಡ ಪರದೆಗೆ ಲಗ್ಗೆಯಿಟ್ಟು ಪ್ರೇಕ್ಷಕರನ್ನು ರಂಜಿಸಲು ಸಜ್ಜಾಗುತ್ತಿದ್ದಾಳೆ!

ಇನ್ನಷ್ಟು ಓದಿರಿ

Scroll to Top