ಕಿಚ್ಚ ಸುದೀಪ್ ಅಭಿನಯದ ಬಹುನಿರೀಕ್ಷೆಯ ಪೈಲ್ವಾನ್ ಚಿತ್ರದ ಮೊದಲ ಹಾಡು ಬಿಡುಗಡೆಯಾಗಿದೆ. ಈಗಾಗಲೇ ಟೀಸರ್ ಮತ್ತು ಪೋಸ್ಟರ್ ಗಳ ಮೂಲಕ ಸದ್ದು ಮಾಡುತ್ತಿರುವ ಪೈಲ್ವಾನ್ ತನ್ನ ಥೀಮ್ ಸಾಂಗ್ ಮೂಲಕ ಅಭಿಮಾನಿಗಳಿಗೆ ಮತ್ತಷ್ಟು ಭರವಸೆ ಮೂಡಿಸಿದೆ. ‘ಪೈಲ್ವಾನ್ ತೋಳು ನೋಡು ಉಕ್ಕು, ಒಂದೇ ಏಟು ಸಾಕು, ದೇವ್ರೆ ನಿಂಗೆ ದಿಕ್ಕು, ಬಂದ ನೋಡು ಪೈಲ್ವಾನ್’ ಎನ್ನುವ ಸಾಲುಗಳಿಂದ ಪ್ರಾರಂಭವಾಗುವ ಈ ಹಾಡು ಅಭಿಮಾನಿಗಳನ್ನು ಹುಚ್ಚೆದ್ದು ಕುಣಿಯುವಂತೆ ಮಾಡಿದೆ.
ಕುಸ್ತಿ ಅಖಾಡಕ್ಕೆ ಕಿಚ್ಚನ ಜಬರ್ದಸ್ತ್ ಎಂಟ್ರಿಗೆ ನೋಡುಗರು ನಿಬ್ಬೆರಗಾಗಿ ನೋಡುವಂತಾಗಿದೆ. ಅಂದಹಾಗೆ ಈ ಹಾಡಿಗೆ ಅರ್ಜುನ್ ಜನ್ಯ ಸಂಗೀತ ಸಂಯೋಜನೆ ಮಾಡಿದ್ದಾರೆ. ಐದು ಹಾಡುಗಳಿಗೆ ಬಳಕೆಯಾಗಬಹುದಾದ ಡಿಫರೆಂಟ್ ಟ್ಯೂನ್ ಗಳನ್ನು ಪೈಲ್ವಾನ್ ಒಂದು ಹಾಡಿಗೆ ಬಳಸಿರುವುದು ಅರ್ಜುನ್ ಜನ್ಯಾ ಅವರ ಕಾರ್ಯಕ್ಷಮತೆಯನ್ನು ಪ್ರತಿನಿಧಿಸುತ್ತಿದೆ. ವ್ಯಾಸ ರಾಜ್ ಕಂಠದಲ್ಲಿ ಈ ಹಾಡು ಮೂಡಿಬಂದಿದ್ದು, ವಿ ನಾಗೇಂದ್ರ ಪ್ರಸಾದ್ ಈ ಹಾಡಿಗೆ ಸಾಹಿತ್ಯ ಬರೆದಿದ್ದಾರೆ. ಕೃಷ್ಣ ಸಾರಥ್ಯದಲ್ಲಿ ಮೂಡಿ ಬಂದಿರುವ ‘ಪೈಲ್ವಾನ್’ ಸಿನಿಮಾದ ಎಲ್ಲಾ ಹಾಡುಗಳು ಇದೇ ತಿಂಗಳು 27ಕ್ಕೆ ಕೋಟೆ ನಾಡು ಚಿತ್ರದುರ್ಗದಲ್ಲಿ ಬಿಡುಗಡೆಯಾಗಲಿದೆ.











































