ಬಿಗ್ ಬಾಸ್ ಖ್ಯಾತಿಯ ನಟ ಭುವನ್ ಪೊನ್ನಣ್ಣ ಅಭಿನಯದ ರಾಂಧವ ಸಿನಿಮಾ ರಿಲೀಸ್ ಗೂ ಮುನ್ನವೇ ಸಾಕಷ್ಟು ಹೈಪ್ ಸೃಷ್ಟಿಸಿದೆ. ಆಗಸ್ಟ್ 9ರಂದು ರಾಂಧವ ಬಿಡುಗಡೆಯಾಗಲಿದ್ದು, ಚಿತ್ರದ ಎರಡು ಹಾಡುಗಳು ಈಗಾಗಲೇ ರಿಲೀಸ್ ಆಗಿ ಬರಪೂರ ಮೆಚ್ಚುಗೆಯನ್ನು ಗಳಿಸಿದೆ. ಸದ್ಯ ರಾಂಧವ ಚಿತ್ರತಂಡ ಎಲ್ಲ ಹಾಡುಗಳನ್ನು ಪ್ರೇಕ್ಷಕರ ಮುಂದಿಡಲು ಸಿದ್ಧವಾಗಿದ್ದು, ಸದ್ಯದಲ್ಲಿಯೇ ರಾಂಧವ ಆಡಿಯೋ ರಿಲೀಸ್ ಆಗುವ ಸಾಧ್ಯತೆ ಇದೆ. ಕನ್ನಡ ಮತ್ತು ತೆಲುಗು ಭಾಷೆಗಳಲ್ಲಿ ಗಾಯಕರಾಗಿ ಗುರುತಿಸಿಕೊಂಡಿರುವ ಶಶಾಂಕ್ ಶೇಷಗಿರಿ ರಾಂಧವ ಚಿತ್ರದ ಮೂಲಕ ಚೊಚ್ಚಲ ಬಾರಿಗೆ ಸಂಗೀತ ಸಂಯೋಜನೆ ಮಾಡಿದ್ದಾರೆ.
ರಾಂಧವ ಚಿತ್ರದಲ್ಲಿ ಒಟ್ಟು ಆರು ಹಾಡುಗಳಿದ್ದು, ಒಂದಕ್ಕೊಂದು ಭಿನ್ನವಾಗಿರುವಂತೆ ಸಂಯೋಜನೆ ಮಾಡಲಾಗಿದೆಯಂತೆ. ಈಗಾಗಲೇ ರಾಂಧವ ಟೈಟಲ್ ಟ್ರ್ಯಾಕ್ ಬಿಡುಗಡೆಯಾಗಿದ್ದು, ಅದನ್ನು ಭರ್ಜರಿ ಚೇತನ್ ಕುಮಾರ್ ಬರೆದಿದ್ದಾರೆ. ಅಲ್ಲದೇ ಕನ್ನಡದ ಕುರಿತಾಗಿಯೂ ಒಂದು ಹಾಡು ರಿಲೀಸ್ ಆಗಿದೆ. ಅದನ್ನು ಕೇಶವಚಂದ್ರ ಎಂಬುವವರು ಬರೆದಿದ್ದಾರೆ. ಇನ್ನು ರಾಜ ರಾಣಿಯ ಕುರಿತಾದ ಹಾಡೊಂದು ಇರಲಿದ್ದು, ವಿ. ನಾಗೇಂದ್ರ ಪ್ರಸಾದ್ ಬರೆದಿದ್ದಾರೆ. ಅಮ್ಮನ ಕುರಿತಾಗಿ ಸಂಟಿಮೆಂಟ್ ಹಾಡೊಂದು ಇರಲಿದ್ದು, ಅದನ್ನು ಗೌಸ್ ಪೀರ್ ಬರೆದಿದ್ದಾರೆ. ಚೊಚ್ಚಲ ನಿರ್ದೇಶನದಲ್ಲಿಯೇ ಸಾಕಷ್ಟು ಪ್ರಯೋಗಗಳನ್ನು ಶಶಾಂಕ್ ಮಾಡಿದ್ದು, ಹನ್ನೊಂದು ಬಗೆಯ ಸಂಗೀತ ಪರಿಕರಗಳನ್ನು ಬಳಕೆ ಮಾಡಿರುವುದು ವಿಶೇಷವಾಗಿದೆ.
ಭುವನ್ ಪೊನ್ನಣ್ಣ ಅವರಿಗೆ ಅಪೂರ್ವಾ ಶ್ರೀನಿವಾಸ್ ನಾಯಕಿಯಾಗಿದ್ದಾರೆ. ಉಳಿದಂತೆ ಯಮುನಾ, ವಾಣಿಶ್ರೀ, ಜಹಾಂಗೀರ್, ಪ್ರಮುಖ ಪಾತ್ರದಲ್ಲಿದ್ದಾರೆ. ಭುವನ್ ಮೂರು ಶೇಡ್ ನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಸದ್ಯ ಭುವನ್ ಅವರ ಎರಡು ಪಾತ್ರಗಳು ರಿವೀಲ್ ಆಗಿದ್ದು, ಉಳಿದೊಂದು ಪಾತ್ರಕ್ಕಾಗಿ ರಿಲೀಸ್ ಆಗುವವರೆಗೂ ಕಾಯಬೇಕಿದೆ. ರಾಂಧವ ಸಿನಿಮಾವನ್ನು ಸುಕೃತಿ ಚಿತ್ರಾಲಯ ಬ್ಯಾನರ್ ನಲ್ಲಿ ಸನತ್ ಕುಮಾರ್ ನಿರ್ಮಾಣ ಮಾಡಿದ್ದಾರೆ.











































