ದೆಹಲಿಯಲ್ಲಿ ನಡೆಯಬೇಕಿದ್ದ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳಲು ಸೋನಾಕ್ಷಿ 24 ಲಕ್ಷ ರುಪಾಯಿ ಪಡೆದುಕೊಂಡು ಕಾರ್ಯಕ್ರಮದಲ್ಲಿ ಪಾಲ್ಗೊಂಡಿರಲಿಲ್ಲ ಎಂಬ ವಂಚನೆ ಆರೋಪದ ಮೇಲೆ ಬಾಲಿವುಡ್ ಖ್ಯಾತ ನಟಿ ಸೋನಾಕ್ಷಿ ಸಿನ್ಹಾ ವಿರುದ್ಧ ಕಾರ್ಯಕ್ರಮ ಆಯೋಜಕರು ದೂರು ನೀಡಿದ್ದಾರೆ.
— Baby Bedi (@sonakshisinha) July 12, 2019
ಈ ಸಂಬಂಧ ಗುರುವಾರ ಮುಂಬೈನ ಜುಹು ಪೊಲೀಸ್ ಠಾಣೆಯ ಅಧಿಕಾರಿಗಳ ನೆರವಿನೊಂದಿಗೆ ಉತ್ತರ ಪ್ರದೇಶದ ಪೊಲೀಸರು ಸೋನಾಕ್ಷಿ ಸಿನ್ಹಾ ಅವರ ಫ್ಲಾಟಿಗೆ ಭೇಟಿ ಕೊಟ್ಟು ಆಕೆಯ ವಿರುದ್ಧ ದಾಖಲಾಗಿರುವ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹೇಳಿಕೆಯನ್ನು ದಾಖಲಿಸಿಕೊಂಡು ತೆರಳಿದ್ದರು. ಆದರೆ ಪೊಲೀಸರ ಭೇಟಿಯ ವೇಳೆ ಸೋನಾಕ್ಷಿ ಸಿನ್ಹಾ ಫ್ಲಾಟಿನಲ್ಲಿರಲಿಲ್ಲ. ಮಾರನೇ ದಿನವೂ ಭೇಟಿ ನೀಡಿದರೂ ಉಪಯೋಗವಾಗಿಲ್ಲವೆಂದು ಪೊಲೀಸರು ಆರೋಪಿಸಿದ್ದಾರೆ. ಇದಕ್ಕೆ ಸೋನಾಕ್ಷಿ ಸಿನ್ಹಾ ಆಪ್ತರು ಈ ಎಲ್ಲ ಆರೋಪಗಳನ್ನು ತಳ್ಳಿ ಹಾಕಿದ್ದು, ಇದೆಲ್ಲವೂ ಅವರ ಹೆಸರಿಗೆ ಮಸಿ ಬಳಿಯಲು ಮಾಡಲಾಗಿದೆ ಎಂದು ಸಂಶಯ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಟ್ವಿಟರ್ ನಲ್ಲಿ ಪ್ರತಿಕ್ರಿಯಿಸಿರುವ ಸೋನಾಕ್ಷಿ ಸಿನ್ಹಾ, “ಈ ರೀತಿಯ ಆರೋಪಗಳನ್ನು ಮಾಡುವ ಮೂಲಕ ಮಾಧ್ಯಮಗಳಲ್ಲಿ ನನ್ನ ಹೆಸರಿಗೆ ಮಸಿ ಬಳಿಯಬಹುದೆಂದು ಕಾರ್ಯಕ್ರಮದ ಆಯೋಜಕರು ಯೋಚಿಸಿದ್ದಾರೆ. ನನ್ನ ವಿರುದ್ಧ ತನಿಖೆ ಕೈಗೊಂಡಿರುವ ಅಧಿಕಾರಿಗಳಿಗೆ ನಾನು ಸಂಪೂರ್ಣ ಸಹಕಾರವನ್ನು ನೀಡುತ್ತೇನೆ. ಈ ರೀತಿಯ ವಿಚಾರಗಳನ್ನು ಮಾಧ್ಯಮಗಳು ಪ್ರಸಾರ ಮಾಡದಂತೆ ನಾನು ಬೇಡಿಕೊಳ್ಳುತ್ತೇನೆ” ಎಂದು ಮನವಿ ಮಾಡಿದ್ದಾರೆ.











































