ತಮಿಳಿಗೂ ಡಬ್ ಆಗಲಿದೆ ಟಕ್ಕರ್!

Picture of Cinibuzz

Cinibuzz

Bureau Report

ಎಸ್.ಎಲ್.ಎನ್. ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ಕೆ.ಎನ್. ನಾಗೇಶ್ ಕೋಗಿಲು ನಿರ್ಮಾಣ ಮಾಡಿರುವ ಸಿನಿಮಾ ಟಕ್ಕರ್. ಈ ಚಿತ್ರವನ್ನು ವಿ. ರಘುಶಾಸ್ತ್ರಿ ನಿರ್ದೆಶನ ಮಾಡಿದ್ದಾರೆ. ಈ ಸಿನಿಮಾದಲ್ಲಿ ಮನೋಜ್ ಕುಮಾರ್ ಚೊಚ್ಚಲ ಬಾರಿಗೆ ನಾಯಕನಾಗಿ ನಟಿಸಿದ್ದಾರೆ. ರಂಜನಿ ರಾಘವನ್ ನಾಯಕಿಯಾಗಿ ಜತೆಯಾಗಿದ್ದಾರೆ. ಟಕ್ಕರ್ ಟೀಸರನ್ನು ನಿರ್ದೇಶಕ ದಿನಕರ್ ತೂಗುದೀಪ್ ಬಿಡುಗಡೆಗೊಳಿಸಿದ್ದು, ಚಾಲೆಂಜಿಂಗ್ ಸ್ಟಾರ್ ಕೂಡ ಟೀಸರನ್ನು ನೋಡಿ ಮೆಚ್ಚಿದ್ದರು. ದರ್ಶನ್ ಅವರ ಕುಟುಂಬದ ಮನೋಜ್ ಕುಮಾರ್ ಅವರ ಬಗ್ಗೆ ಈಗಾಗಲೇ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ಟಕ್ಕರ್ ರಿಲೀಸ್ ಗೂ ಮುನ್ನವೇ ಮತ್ತೆರಡು ಸಿನಿಮಾಗಳನ್ನು ಮನೋಜ್ ಒಪ್ಪಿದ್ದು, ಸದ್ಯದಲ್ಲೇ ಆ ಸಿನಿಮಾಗಳು ಆರಂಭವಾಗಲಿದೆ.

ಸದ್ಯದ ಸುದ್ದಿ ಏನಂದ್ರೆ ಟಕ್ಕರ್ ಕನ್ನಡದೊಂದಿಗೆ ತಮಿಳಿನಲ್ಲೂ ಏಕಕಾಲದಲ್ಲಿ ಬಿಡುಗಡೆಯಾಗಲು ಸಜ್ಜಾಗುತ್ತಿದೆ. ಯೆಸ್.. ಜಾಗತಿಕ ಸಮಸ್ಯೆಯ ಸುತ್ತ ಚಿತ್ರದ ಕಥೆ ಹೆಣೆದಿರುವುದರಿಂದ ತಮಿಳಿನಲ್ಲಿಯೂ ಈ ಚಿತ್ರವನ್ನು ಡಬ್ಬಿಂಗ್ ಮಾಡಿ ಬಿಡುಗಡೆಗೊಳಿಸಲು ನಿರ್ಮಾಪಕ ನಾಗೇಶ್ ಕೋಗಿಲು ತೀರ್ಮಾನಿಸಿದ್ದು, ಈಗಾಗಲೇ ಈ ನಿಟ್ಟಿನ ಕೆಲಸ ಕಾರ್ಯಗಳು ಆರಂಭವಾಗಿದೆ ಎಂದು ನಿರ್ಮಾಪಕ ನಾಗೇಶ್ ಕೋಗಿಲು ತಿಳಿಸಿದ್ದಾರೆ.

ಮೊಬೈಲ್ ಮತ್ತು ಇಂಟರ್ ನೆಟ್ ನಿಂದ ಏನೆಲ್ಲಾ ಅನಾಹುತಗಳು ಸಂಭವಿಸುತ್ತಿವೆ, ಮಹಿಳೆಯರಿಗೆ ಅದು ಹೇಗೆ ಮಾರಕವಾಗುತ್ತಿದೆ ಎಂಬ ಅಂಶವನ್ನಿಟ್ಟುಕೊಂಡು ಟಕ್ಕರ್ ಚಿತ್ರವನ್ನೂ ರೂಪಿಸಲಾಗಿದ್ದು, ಪಕ್ಕಾ ಆ್ಯಕ್ಷನ್, ಸೆಂಟಿಮೆಂಟ್ ಜತೆಗೆ ಮಾಸ್ ಸಿನಿಮಾವಾಗಿ ಟಕ್ಕರ್ ತಯಾರಾಗಿದೆ. ವಿಶೇಷವೆಂದರೆ ಮೂವತ್ತು ನಿಮಿಷದ ಗ್ರಾಫಿಕ್ಸ್ ಇದ್ದು ಅದಕ್ಕಾಗಿ ನುರಿತ ತಂಡ ಈಗಾಗಲೇ ಕಾರ್ಯ ನಿರ್ವಹಿಸಿದೆಯಂತೆ. ಇನ್ನು ಟಕ್ಕರ್ ತಾರಾಂಗಣದಲ್ಲಿ ಈಟಿವಿ ಶ್ರೀಧರ್, ಶಂಕರ್ ಅಶ್ವಥ್, ಸುಮಿತಾ, ಭಜರಂಗಿ ಲೋಕಿ, ಸಾಧು ಕೋಕಿಲ, ಜೈ ಜಗದೀಶ್ ಇದ್ದಾರೆ. ಕದ್ರಿ ಮಣಿಕಾಂತ್ ಸಂಗೀತ, ಡಾ. ವಿ. ನಾಗೇಂದ್ರ ಪ್ರಸಾದ್ ಸಾಹಿತ್ಯ, ಡಿಫರೆಂಟ್ ಡ್ಯಾನಿ ಸಾಹಸ, ವಿಲಿಯಮ್ಸ್ ಡೇವಿಡ್ ಛಾಯಾಗ್ರಹಣ, ಕೆ.ಎಂ. ಪ್ರಕಾಶ್ ಸಂಕಲನ, ಮೋಹನ್ ನೃತ್ಯ ಸಂಯೋಜನೆ, ಈಶ್ವರಿ ಕುಮಾರ್ ಕಲಾ ನಿರ್ದೇಶನ, ಗುರುರಾಜ್ ದೇಸಾಯಿ ಸಂಭಾಷಣೆ ಚಿತ್ರಕ್ಕಿದೆ.

ಇನ್ನಷ್ಟು ಓದಿರಿ

Scroll to Top