ಭಾವಗೀತೆಗಳಿಗೆ ಭಾವ ತುಂಬಿ ಹಾಡಿ ಕನ್ನಡಿಗರ ಮನಸೂರೆಗೊಳಿಸಿರುವ ಕನ್ನಡದ ಕನ್ನಡದ ಗಾಯಕಿ ಎಂ.ಡಿ. ಪಲ್ಲವಿ. ಅಲ್ಲದೇ ಸಿ. ಅಶ್ವಥ್ ಅವರ ಟ್ರೂಪಿನಲ್ಲಿಯೂ ಗುರುತಿಸಿಕೊಂಡಿದ್ದ ಎಂ.ಡಿ. ಪಲ್ಲವಿ ಬಹುತೇಕ ರಿಯಾಲಿಟಿ ಶೋಗಳು, ಖಾಸಗಿ ಕಾರ್ಯಕ್ರಮಗಳಲ್ಲೂ ಹೋಸ್ಟ್ ಆಗಿಯೂ ಕಾರ್ಯನಿರ್ವಹಿಸಿದ್ದಾರೆ. ಸಿನಿಮಾ ಗೀತೆಗಳಿಗೂ ಧ್ವನಿಯಾಗಿದ್ದಾರೆ.

ಇದೀಗ ಎಂ.ಡಿ. ಪಲ್ಲವಿ ಅವರ ಪಾಲಿಗೆ ರಾಷ್ಟ್ರ ಪ್ರಶಸ್ತಿಯ ಗರಿಯೊಂದು ಲಭಿಸಿದೆ. ಇತ್ತೀಚಿಗೆ ಉಸ್ತಾದ್ ಬಿಸ್ಮಿಲ್ಲಾ ಖಾನ್ ಯುವ ಪುರಸ್ಕಾರ 2018 ಪ್ರಶಸ್ತಿ ಘೋಷಣೆಯಾಗಿದ್ದು 32 ಪ್ರತಿಭೆಗಳಿಗೆ ಈ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ. ಈ ಪಟ್ಟಿಗೆ ಎಂ.ಡಿ. ಪಲ್ಲವಿ ಕೂಡ ಸೇರಿದ್ದು, ಪ್ರಶಸ್ತಿಗೆ ಭಾಜನರಾಗಿದ್ದಾರೆ. ಸಂಗೀತ ನಾಟಕ ಅಕಾಡೆಮಿಯಿಂದ ಈ ಪ್ರಶಸ್ತಿ ನೀಡಲಾಗುತ್ತಿದೆ. 40 ವರ್ಷದ ಕೆಳಗಿನ ಸಾಧಕರಿಗೆ ಈ ಪ್ರಶಸ್ತಿ ಕೊಟ್ಟು ಗೌರವಿಸಲಾಗುತ್ತದೆ. ಪ್ರಶಸ್ತಿ ಜೊತೆಗೆ 25 ಸಾವಿರ ಪ್ರೋತ್ಸಾಹ ಧನವನ್ನೂ ನೀಡಲಾಗುತ್ತದೆ. ಈ ಹಿಂದೆ ಪಲ್ಲವಿ ದುನಿಯಾ ಚಿತ್ರದ ನೋಡಯ್ಯಾ ಕ್ವಾಟೆ ಲಿಂಗವೇ ಹಾಡಿಗೂ ರಾಷ್ಟ್ರ ಪ್ರಶಸ್ತಿಯನ್ನು ಪಡೆದಿದ್ದರು.











































