ಬಾಲಿವುಡ್ ನಟಿ ಕೊಯ್ನಾ ಮಿತ್ರಾ ಅವರಿಗೆ ಚೆಕ್ ಬೌನ್ಸ್ ಕಂಟಕ ಎದುರಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೆಟ್ರೋಪಾಲಿಟನ್ ಕೋರ್ಟ್ ಅವರಿಗೆ ಆರು ತಿಂಗಳು ಜೈಲು ಶಿಕ್ಷೆ ವಿಧಿಸಿದೆ. ವರದಿಗಳ ಪ್ರಕಾರ ಸಂತ್ರಸ್ತೆಗೆ 4.64 ಲಕ್ಷ ರೂ. ನೀಡುವಂತೆ ಆದೇಶಿಸಿದೆ.

ಮಾಡೆಲ್ ಪೂನಮ್ ಸೇಥಿ ಅವರ ಬಳಿ ಕೊಯ್ನಾ 22 ಲಕ್ಷ ರೂ. ಪಡೆದುಕೊಂಡಿದ್ದರು. ಕೊಯ್ನಾ ಹಣ ವಾಪಸ್ಸು ನೀಡುವಾಗ 19 ಲಕ್ಷ ರೂ. ಮಾತ್ರ ನೀಡಿದ್ದರು. ಉಳಿದ 3 ಲಕ್ಷ ರೂ.ನ ಚೆಕ್ ಬೌನ್ಸ್ ಆಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿ ಕೊಯ್ನಾ ವಿರುದ್ಧ 2013ರಲ್ಲಿ ಪೂನಮ್ ಸೇಥಿ ಚೆಕ್ ಬೌನ್ಸ್ ಪ್ರಕರಣ ದಾಖಲಿಸಿದ್ದರು. ಇದನ್ನು ಅಲ್ಲಗಳೆದಿದ್ದ ಕೊಯ್ನಾ, ಕೋರ್ಟ್ ಮೆಟ್ಟಿಲೇರಿದ್ದರು. ಪೂನಮ್ ಸೇಥಿ ಅವರಿಗೆ ಹಣದ ಅವಶ್ಯಕತೆ ಇತ್ತು. ಹಾಗಾಗಿ, ಅವರು ನನ್ನ ಚೆಕ್ ಬುಕ್ ಕದ್ದು, ಹಣ ತೆಗೆಯುವ ಪ್ರಯತ್ನ ಮಾಡಿದ್ದರು. ಆದರೆ, ಈ ವಾದವನ್ನು ಕೋರ್ಟ್ ಒಪ್ಪಿರಲಿಲ್ಲ. ಈ ಹಿನ್ನೆಲೆಯಲ್ಲಿ ಅವರಿಗ ಆರು ತಿಂಗಳು ಜೈಲು ಶಿಕ್ಷೆ ವಿಧಿಸಿದೆ. ಕೊಯ್ನಾ ಮಾತ್ರ ಈ ಬಗ್ಗೆ ಅಸಮಾಧಾನ ಹೊರ ಹಾಕಿದ್ದಾರೆ. ‘ಕೊನೆಯ ದಿನದ ವಾದಕ್ಕೆ ನನ್ನ ಪರ ವಕೀಲರು ಬಂದಿರಲಿಲ್ಲ. ನ್ಯಾಯಾಧೀಶರು ನಮ್ಮ ವಾದವನ್ನು ಸರಿಯಾಗಿ ಕೇಳಿಸಿಕೊಂಡಿಲ್ಲ. ಹಾಗಾಗಿ, ಈ ತೀರ್ಪು ಸರಿಯಿಲ್ಲ,’ ಎಂದಿದ್ದಾರೆ ಕೊಯ್ನಾ.











































