ಕೆಡಿ ಜೊತೆ ಕಿಚ್ಚ ನಿಲ್ಲೋದು ಕನ್ಫರ್ಮ್!

Picture of Cinibuzz

Cinibuzz

Bureau Report

ಈಗ ಬಂದೆ ಆಗ ಬಂದೆ ಅಂತಾ ಬರೀ ಬಾಯಿಮಾತಲ್ಲಿ ಹೇಳ್ತಾನೇ ಬರುತ್ತಿರುವ ಕೆಡಿ ಕಾದವರ ಎದುರು ಕಣ್ಣಾಮುಚ್ಚಾಲೆ ಆಡುತ್ತಲೇ ಇದ್ದಾನೆ. ಸಿನಿಮಾ ಶುರು ಮಾಡಿದ ದಿನದಿಂದ ಹಿಡಿದು ರಿಲೀಸ್ ತನಕ ಒಂದಲ್ಲಾ ಒಂದು ಕೆಲಸ ಚಾಲ್ತಿಯಲ್ಲೇ ಇಡೋದು ನಿರ್ದೇಶಕ ಪ್ರೇಮ್ ಶೈಲಿ. ಸದ್ಯ ಸ್ವಿಡ್ಜರ್ಲೆಂಡಿನಲ್ಲಿ ಸಾಂಗ್ ಶೂಟಿಂಗ್ ಮಾಡಲು ಚಿತ್ರತಂಡ ತೆರಳಿದೆ. ಧ್ರುವ ಸರ್ಜಾ, ರೀಷ್ಮಾ ನಾಣಯ್ಯ, ಸಂಜಯ್ ದತ್ತು, ಶಿಲ್ಪಾ ಶೆಟ್ಟಿ ಜೊತೆಗೆ ತುಂಬಾ ಜನ ನಟಿಸುತ್ತಿದ್ದಾರೆ.

ಜಗತ್ತಿನ ಯಾವ ಭಾಷೆಯ ಯಾವ ಸೂಪರ್ ಸ್ಟಾರ್ ಬಂದರೂ ಕನ್ನಡಿಗರಿಗೆ ಅದೊಂದು ವಿಚಾರವೇ ಅನ್ನಿಸೋದಿಲ್ಲ. ಎಲ್ಲ ಮಹಾನುಭಾವರನ್ನೂ ನೋಡಿ, ನೇವರಿಸಿ ಕಳಿಸಿರುವ ನೆಲ ನಮ್ಮದು. ಇಲ್ಲೇನಿದ್ದರೂ ನಮ್ಮವರಿಗಷ್ಟೇ ಬೆಲೆ. ಕೆಡಿ ಪಾಲಿಗೆ ಅಂಥದ್ದೊಂದು ಬೆಲೆ ಈಗ ದಕ್ಕಿದೆ! ನಮ್ಮ ನೆಲದ ಸೂಪರ್ ಸ್ಟಾರ್ ಅನ್ನಿಸಿಕೊಂಡು, ಇಡೀ ಇಂಡಿಯಾದ ತುಂಬಾ ಹೆಸರು ಮಾಡಿರುವ ಹೆಮ್ಮೆಯ ನಟ ಸುದೀಪ್ ಈಗ ಕೆಡಿ ಕೈ ಹಿಡಿಯಲಿದ್ದಾರೆ.

ಕೆಡಿ ಸಿನಿಮಾದಲ್ಲಿ ಬಾದ್ಶಾ ಸುದೀಪ ಪ್ರಮುಖ ಮತ್ತು ಅತಿಥಿ ಪಾತ್ರದಲ್ಲಿ ನಟಿಸುವುದು ಪಕ್ಕಾ ಆಗಿದೆ. ಪ್ರೇಮ್ ಟೀಮು ಫಾರಿನ್ನಿಂದ ಬಂದ ಕೂಡಲೇ ಸುದೀಪ್ ಕೆಡಿ ಶೂಟಿಂಗ್ನಲ್ಲಿ ಪಾಲ್ಗೊಳ್ಳಲಿದ್ದಾರೆ. ಹೈದ್ರಾಬಾದಿನಲ್ಲಿ ನಡೆಯಲಿರುವ ಕಿಚ್ಚನ ಭಾಗದ ಚಿತ್ರೀಕರಣಕ್ಕಾಗಿ ವಿಶೇಷ ಸಿದ್ಧತೆ ಕೂಡಾ ನಡೆಯುತ್ತಿದೆ.


ಈ ಹಿಂದೆ ದಿ ವಿಲನ್ ಸಿನಿಮಾದಲ್ಲಿ ಪ್ರೇಮ್ ಜೊತೆ ಕೆಲಸ ಮಾಡಿದ್ದ ಕಿಚ್ಚ ಎರಡನೇ ಸಲ ಜೊತೆಯಾಗಿದ್ದಾರೆ. ಇಷ್ಟು ಮಾತ್ರವಲ್ಲ, ಆಕ್ಷನ್ ಪ್ರಿನ್ಸ್ ಧ್ರುವ ಮತ್ತು ಕಿಚ್ಚನ ನಡುವೆ ತುಂಬಾನೇ ಉತ್ತಮ ಬಾಂಧವ್ಯವಿದೆ. ಚೀಪ್ ಗಿಮಿಕ್ಕುಗಳನ್ನು ಮಾಡದ, ಚಿಲ್ಲರೆ ರಾಜಕೀಯಗಳಿಗೆ ತಲೆ ಹಾಕದ, ಗಂಭೀರ ಸ್ವಭಾವದ ಗುಣವಂತರಿಬ್ಬರು ಈ ಸಲ ತೆರೆ ಮೇಲೆ ಒಟ್ಟು ಸೇರುತ್ತಿದ್ದಾರೆ.


ಕನ್ನಡ ಚಿತ್ರರಂಗದಲ್ಲಿ ಒಗ್ಗಟ್ಟಿಲ್ಲ. ಹೀರೋಗಳ ನಡುವೆ ಉತ್ತಮ ಬಾಂಧವ್ಯವಿಲ್ಲ ಎನ್ನುವ ಮಾತನ್ನು ಪದೇ ಪದೇ ಸುಳ್ಳಾಗಿಸಿದವರು ಬಾದ್ಶಾ ಸುದೀಪ್. ಸಿನಿಮಾ ಇರಲಿ, ಕ್ರಿಕೆಟ್ಟೇ ಆಗಲಿ, ಹಿರಿಯಣ್ಣನಂತೆ ಎಲ್ಲರನ್ನೂ ಜೊತೆ ಸೇರಿಸಿಕೊಂಡು ಸಾಗುವ ಸ್ನೇಹಮಯಿ ಸುದೀಪ್. ಈ ಸಲ ತಮಗಿಂತಾ ಕಿರಿಯ ಹೀರೋ ಧೃವಾ ಜೊತೆ ನಟಿಸುವ ಮೂಲಕ ಮತ್ತೊಮ್ಮೆ ತಮ್ಮ ದೊಡ್ಡತನ ಮೆರೆಯುತ್ತಿದ್ದಾರೆ. ಈ ಮೂಲಕ ಕೆಡಿ ಖದರ್ ಇಮ್ಮಡಿಗೊಂಡಿದೆ…!

ಇನ್ನಷ್ಟು ಓದಿರಿ

Scroll to Top