ಬರೀ ಕನ್ನಡ ಮಾತ್ರವಲ್ಲ, ಬೇರೆ ಭಾಷೆಯ ಉತ್ತಮ ಸಿನಿಮಾಗಳನ್ನು ನೋಡಿ ಪ್ರೋತ್ಸಾಹಿಸುವ ವಿಚಾರದಲ್ಲಿ ‘ಬಾದ್‌ಶಾ’ ಕಿಚ್ಚ ಸುದೀಪ್ ಸದಾ ಒಂದು ಹೆಜ್ಜೆ ಮುಂದೆ. ಅವರೊಬ್ಬ ಅದ್ಭುತ ನಟ ಮಾತ್ರವಲ್ಲ, ಸಿನಿಮಾವನ್ನು ಪ್ರೀತಿಸುವ ಅಪ್ಪಟ ಪ್ರೇಕ್ಷಕ ಕೂಡ. ಇದೀಗ, OTTಯಲ್ಲಿ ಬಿಡುಗಡೆಯಾಗಿ ಉತ್ತಮ ಪ್ರತಿಕ್ರಿಯೆ ಗಳಿಸುತ್ತಿರುವ ತಮಿಳಿನ ‘ಟೂರಿಸ್ಟ್ ಫ್ಯಾಮಿಲಿ’ ಚಿತ್ರವನ್ನು ವೀಕ್ಷಿಸಿದ ಕಿಚ್ಚ, ಚಿತ್ರತಂಡದ ಬೆನ್ನು ತಟ್ಟಿದ್ದಾರೆ.

ಈಗಾಗಲೇ ಹಲವು ಗಣ್ಯರ ಪ್ರಶಂಸೆ ಗಳಿಸಿರುವ ಈ ಚಿತ್ರಕ್ಕೆ ಸುದೀಪ್ ಅವರ ಮೆಚ್ಚುಗೆಯ ಮಾತುಗಳು ಮತ್ತಷ್ಟು ಬಲ ನೀಡಿವೆ.
ಸಿನಿಮಾದ ಬಗ್ಗೆ ಟ್ವೀಟ್ ಮಾಡಿರುವ ಸುದೀಪ್ “ಇತ್ತೀಚೆಗೆ ನಾನು ನೋಡಿದ ಚಿತ್ರಗಳಲ್ಲಿ ‘ಟೂರಿಸ್ಟ್ ಫ್ಯಾಮಿಲಿ’ ಅತ್ಯುತ್ತಮ ಸ್ಕ್ರಿಪ್ಟ್ ಮತ್ತು ಮೇಕಿಂಗ್ ಹೊಂದಿರುವ ಸಿನಿಮಾ. ಖಂಡಿತವಾಗಿಯೂ ಇದು ಕಥೆ ಹೇಳುವ ಶೈಲಿಯಲ್ಲಿ ಮೈಲಿಗಲ್ಲು ಸೃಷ್ಟಿಸಿದೆ. ಈ ಸಿನಿಮಾ ನನ್ನನ್ನು ಸಂಪೂರ್ಣವಾಗಿ ಹಿಡಿದಿಟ್ಟುಕೊಂಡಿತು. ಪ್ರತಿಯೊಂದು ಪಾತ್ರಕ್ಕೂ ತನ್ನದೇ ಆದ ಪ್ರಾಮುಖ್ಯತೆ ಇದೆ. ನಟರೆಲ್ಲರೂ ಅಚ್ಚುಕಟ್ಟಾಗಿ ತಮ್ಮ ಪಾತ್ರಗಳಿಗೆ ಜೀವ ತುಂಬಿದ್ದಾರೆ. ಚಿತ್ರದ ಪಾತ್ರವರ್ಗದ ಆಯ್ಕೆ ಮತ್ತು ಸಂಗೀತ ಚಿತ್ರದ ದೊಡ್ಡ ಶಕ್ತಿ.ʼʼ ಎಂದು ತಮ್ಮ ಅಭಿಪ್ರಾಯವನ್ನು ಮುಕ್ತವಾಗಿ ತಿಳಿಸಿದ್ದಾರೆ.
ಅಭಿಷೇಕ್ ಜೀವಂತ್ ನಿರ್ದೇಶನದ ಈ ಚಿತ್ರದಲ್ಲಿ ಶಶಿಕುಮಾರ್, ಸಿಮ್ರಾನ್, ಯೋಗಿ ಬಾಬು, ಮತ್ತು ರಮೇಶ್ ತಿಲಕ್ ಪ್ರಮುಖ ಪಾತ್ರಗಳಲ್ಲಿದ್ದಾರೆ. ಮಿಲಿಯನ್ ಡಾಲರ್ ಪ್ರೊಡಕ್ಷನ್ಸ್ ನಿರ್ಮಿಸಿರುವ ಈ ಚಿತ್ರವು ಕಡಿಮೆ ಬಜೆಟ್‌ನಲ್ಲಿ ತಯಾರಾಗಿದ್ದರೂ, ವಿಶ್ವಾದ್ಯಂತ ₹80 ಕೋಟಿಗೂ ಅಧಿಕ ಕಲೆಕ್ಷನ್ ಮಾಡುವ ಮೂಲಕ ಇತ್ತೀಚಿನ ದಿನಗಳಲ್ಲಿ ಅತಿ ಹೆಚ್ಚು ಲಾಭ ಗಳಿಸಿದ ಚಿತ್ರಗಳಲ್ಲಿ ಒಂದೆನಿಸಿದೆ.
ಒಟ್ಟಿನಲ್ಲಿ, ಒಳ್ಳೆಯ ಸಿನಿಮಾಗಳು ಎಲ್ಲೇ ಇದ್ದರೂ ಅದನ್ನು ಗುರುತಿಸಿ ಪ್ರಶಂಸಿಸುವ ಕಿಚ್ಚನ ಗುಣಕ್ಕೆ ಅಭಿಮಾನಿಗಳು ಸೋಷಿಯಲ್ ಮೀಡಿಯಾದಲ್ಲಿ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.










































