ಚೌಕಿದಾರ್ ಚಿತ್ರದ ‘ಓ ಮೈ ಬ್ರೋ… ರಿಯಲಿ ಬ್ರೋ… ಲವ್ವಲ್ ಗೆದ್ದೋರು ಒಬ್ರೋ ಇಬ್ರೋ’ ಹಾಡು ಈಗ ತುಂಬಾನೇ ಫೇಮಸ್ ಆಗಿದೆ. ಸಚಿನ್ ಬಸ್ರೂರ್ ಸಂಗೀತಕ್ಕೆ ಡಾ. ವಿ. ನಾಗೇಂದ್ರ ಪ್ರಸಾದ್ ಬರೆದಿರುವ ಸಾಲುಗಳಲ್ಲಿರುವ ಪದಪದವೂ ಹುಡುಗರ ಎದೆಗೆ ಬಾಣ-ಈಟಿಯ ರೂಪದಲ್ಲಿ ನೇರವಾಗಿ ನಾಟಿದಂತಿದೆ. ಈ ಕಾರಣಕ್ಕೇ ಈ ಹಾಡು ಯೂಟ್ಯೂಬಲ್ಲೇ ಒಂದು ಮಿಲಿಯನ್ ವ್ಯೂಸ್ ಪಡೆದಿದೆ.

ಸಾಮಾನ್ಯಕ್ಕೆ ಲವ್ ಫೇಲ್ಯೂರ್ ಸಾಂಗುಗಳಲ್ಲಿ ಹೀರೋ ಜೊತೆಗೆ ಸ್ನೇಹಿತರು ಮಾತ್ರ ಕಾಣಿಸಿಕೊಳ್ಳುತ್ತಾರೆ. ಚೌಕಿದಾರ್ ಚಿತ್ರದ ಈ ಹಾಡಲ್ಲಿ ಅಪ್ಪನ ಪಾತ್ರದಲ್ಲಿರುವ ಸಾಯಿಕುಮಾರ್ ಕೂಡಾ ಪೃಥ್ವಿ ಅಂಬರ್ ಜೊತೆಗೆ ಸ್ಟೆಪ್ಪು ಹಾಕಿದ್ದಾರೆ. ಹಾಡಿನ ಸಾಲುಗಳು ಸಲೀಸಾಗಿ ನಾಲಿಗೆಯಲ್ಲಿ ನಿಲ್ಲುವಂತಿವೆ. ಒಂದು ಸಲ ಕೇಳಿದರೆ ಮತ್ತೆ ಮತ್ತೆ ಕೇಳಬೇಕು ಅನ್ನಿಸುತ್ತದೆ.

ಗಣೇಶ ಹಬ್ಬದ ಸಂದರ್ಭದಲ್ಲಿ ಬಂದು ಗೆದ್ದ ಹಾಡುಗಳು ಆ ಚಿತ್ರಗಳ ದೊಡ್ಡ ಗೆಲುವಿಗೂ ಕಾರಣವಾದ ಸಾಕಷ್ಟು ಉದಾಹರಣೆಗಳಿವೆ. ಈ ನಿಟ್ಟಿನಲ್ಲಿ ಬ್ರೋ ಹಾಡು ಆರ್ಕೇಸ್ಟ್ರಾಗಳಲ್ಲಿ ಪ್ಲೇ ಆಗಲು ಈ ಹಾಡು ಹೇಳಿ ಮಾಡಿಸಿದಂತಿದೆ.
ಕ್ಲಾಸ್ ಸಿನಿಮಾಗಳ ಮೂಲಕ ಲವರ್ ಬಾಯ್ ಆಗಿ ಕಾಣಿಸಿಕೊಳ್ಳುತ್ತಿದ್ದ ಪೃಥ್ವಿ ಅಂಬರ್ ಮೊದಲ ಬಾರಿಗೆ ರಗಡ್ ಗೆಟಪ್ ನಲ್ಲಿ ಕಾಣಿಸಿಕೊಂಡಿದ್ದಾರೆ. ರೋಸ್ ಹಿಡಿಯುತ್ತಿದ್ದ ಪೃಥ್ವಿ ಕೈಗೆ ಲಾಂಗ್ ಕೊಟ್ಟು ನಿರ್ದೇಶಕ ಚಂದ್ರಶೇಖರ್ ಬಂಡಿಯಪ್ಪ ರಕ್ತಹರಿಸಿದ್ದಾರೆ. ಸಂಕ್ರಾಂತಿ ಹಬ್ಬದ ವಿಶೇಷವಾಗಿ ಚೌಕಿದಾರ್ ಸಿನಿಮಾದ ಟೀಸರ್ ಅನಾವರಣಗೊಂಡಿದೆ. ಹಿಂದೆಂದೂ ಕಾಣದ ಲುಕ್ ನಲ್ಲಿ ಪೃಥ್ವಿ ಪ್ರತ್ಯಕ್ಷರಾಗಿದ್ದಾರೆ. ರಕ್ತಸಿಕ್ತ ಅವತಾರವೆತ್ತಿರುವ ಅವರ ಹೊಸ ಲುಕ್ ಸಿನಿರಸಿಕರಿಗೆ ಕಿಕ್ ಕೊಟ್ಟಿದೆ.
ಕನ್ನಡ ಹಾಗೂ ತೆಲುಗು ಎರಡು ಭಾಷೆಯಲ್ಲಿ ಬಿಡುಗಡೆಯಾಗಿರುವ ಹಾಡನ್ನು ಜನ ತುಂಬಾ ಪ್ರೀತಿಯಿಂದ ಸ್ವೀಕರಿಸಿದ್ದಾರೆ. ಈ ಸಿನಿಮಾದಲ್ಲಿ ಖಾಕಿ ಲುಕ್ ನಲ್ಲಿ ಸುಧಾರಾಣಿ ಖದರ್ ತೋರಿಸಿದ್ದಾರೆ. ಹಿರಿಯ ನಟ ಸಾಯಿ ಕುಮಾರ್ ಪೃಥ್ವಿ ತಂದೆ ಪಾತ್ರದಲ್ಲಿ ಗಮನಸೆಳೆಯುತ್ತಾರೆ. ಧರ್ಮ, ಹಿರಿಯ ನಟಿ ಶ್ವೇತಾ ತಾರಾ ಬಳಗದಲ್ಲಿದ್ದಾರೆ.
ಪೃಥ್ವಿ ಅಂಬರ್ ಗೆ ಜೋಡಿಯಾಗಿ ಅಭಿನಯಿಸಿರುವ ಧನ್ಯ ರಾಮ್ ಕುಮಾರ್ ಡಿ ಗ್ಲಾಮರ್ ಆಗಿ ಕಾಣಿಸಿಕೊಂಡಿದ್ದಾರೆ. ಸಚಿನ್ ಬಸ್ರೂರ್ ಸಂಗೀತ ಟೀಸರ್ ನಲ್ಲಿ ಗಮನಸೆಳೆಯುತ್ತಿದೆ. ಕಲ್ಲಹಳ್ಳಿ ಚಂದ್ರಶೇಖರ್ ನಿರ್ಮಾಣ ಮಾಡುತ್ತಿದ್ದಾರೆ. ವಿದ್ಯಾದೇವಿ ನಿರ್ಮಾಣದಲ್ಲಿ ಸಾಥ್ ಕೊಡುತ್ತಿದ್ದಾರೆ.
ವಿ.ನಾಗೇಂದ್ರ ಪ್ರಸಾದ್, ಪ್ರಮೋದ್ ಮರವಂತೆ, ಸಂತೋಷ್ ನಾಯಕ್ ಹಾಡುಗಳಿಗೆ ಸಾಹಿತ್ಯ ಬರೆದಿದ್ದಾರೆ. ಸಿದ್ದು ಕಂಚನಹಳ್ಳಿ ಛಾಯಾಗ್ರಹಣ, ರವಿ ವರ್ಮಾ ಸಾಹಸ ನಿರ್ದೇಶನ ಸಿನಿಮಾಗಿದೆ. ‘ಚೌಕಿದಾರ್’ ಬಹುಭಾಷೆಯಲ್ಲಿ ಮೂಡಿ ಬರುತ್ತಿದ್ದು, ಪೃಥ್ವಿರಾಜ್ ಧಘಾರಿ ಸಹ ನಿರ್ದೇಶನದಲ್ಲಿ ಚಿತ್ರ ತಯಾರಾಗಿದೆ. ಅತಿ ಶೀಘ್ರದಲ್ಲಿ ಚೌಕಿದಾರ್ ತೆರೆಗೆ ತರಲು ಚಿತ್ರತಂಡ ಯೋಜನೆ ಹಾಕಿಕೊಂಡಿದೆ. ಟೀಸರ್ ಮತ್ತು ಹಾಡುಗಳನ್ನು ನೋಡುತ್ತಿದ್ದರೇ ನಿರ್ದೇಶಕ ಚಂದ್ರಶೇಖರ್ ಬಂಡಿಯಪ್ಪ ಯಾವುದೋ ಹೊಸ ಕಥೆಯನ್ನು ಹರವಿಡಲು ಹೊರಟಿರುವುದು ಗೊತ್ತಾಗುತ್ತಿದೆ.











































