ಮನಸ್ಸಿಗಿಳಿಯುವ ಆಸ್ಟಿನ್ನ ಮಹನ್ಮೌನ!

Picture of Cinibuzz

Cinibuzz

Bureau Report

ಪ್ತತೀ ಹುಡುಗಾನೂ ಪ್ರಪಂಚ ಗೆಲ್ಬೇಕು ಅಂತಾ ಹೊರಡ್ತಾನೆ. ಹೋಗೋ ದಾರೀಲಿ ಒಬ್ಬ ಹುಡುಗಿ ಸಿಗ್ತಾಳೆ. ಪ್ರಪಂಚ ಗೆಲ್ಲೋಕೆ ಮುಂಚೆ ಇವಳನ್ನ ಗೆಲ್ಬೇಕು ಅನ್ಕೋತಾನೆ… ಆ ಹೊತ್ತಲ್ಲಿ ಅವಳೇ ಅವನ ಪ್ರಪಂಚ ಆಗಿಬಿಡ್ತಾಳೆ…. – ಇದು ಆಸ್ಟಿನ್‌ನ ಮಹನ್ಮೌನ ಚಿತ್ರದಲ್ಲಿ ಬರುವ ಆರಂಭದ ಸಂಭಾಷಣೆ. ಈ ಮಾತನ್ನು ಅಕ್ಷರಶಃ ಪಾಲಿಸುವವನು ಆಸ್ಟಿನ್.

ಈಗೆಲ್ಲಾ ಪ್ರಸ್ತುತ ಕಾಲಘಟ್ಟದ ಕಥೆಗಳನ್ನು ಕಟ್ಟುವುದು ಕಷ್ಟದ ಕೆಲಸ. ಎಂಥದ್ದೇ ಕಥೆಯನ್ನು ಹೊಸೆದರೂ ಅಲ್ಲಿ ಲಾಜಿಕ್ಕು, ಅದೂ ಇದೂ ಅಂತಾ ನೂರೆಂಟು ತಲೆನೋವುಗಳು ಎದುರಾಗುತ್ತವೆ. ಏನೇ ಮಾಡಿದರೂ, ತಪ್ಪುಗಳು ಘಟಿಸುತ್ತವೆ. ಇವೆಲ್ಲದರ ಜೊತೆಗೆ ಅತೀ ಬುದ್ಧಿವಂತರ ಜಾಯಮಾನ ಇದಾಗಿರುವುದರಿಂದ ಇವತ್ತಿನ ದಿನಮಾನಕ್ಕೆ ಹೊಂದುವ ಕಥೆ, ಸಿನಿಮಾ ರೂಪಿಸಿವುದು ಕಷ್ಟದ ಕೆಲಸ. ಬಹುಶಃ ಇದೇ ಕಾರಣಕ್ಕೆ ಸಿನಿಮಾ ರಂಗ ಹಿಂದಿಂದಕ್ಕೆ ಜಾರುತ್ತಿದೆ. ಈಗೀಗ ಬರುತ್ತಿರುವ ಬಹುತೇಕ ಸಿನಿಮಾಗಳು ಹತ್ತಿಪ್ಪತ್ತು ವರ್ಷಗಳ ಹಿಂದಿನ ಕಥೆಯನ್ನೇ ಹೇಳುತ್ತಿವೆ. ಸದ್ಯ ಆಸ್ಟಿನ್‌ನ ಮಹನ್ಮೌನ ಕೂಡಾ ಒಂದೆರಡು ದಶಕದ ಹಿಂದಿನ ಕಥೆಯನ್ನು ಹೊತ್ತು ಬಂದಿದೆ.

ಸಮುದ್ರ, ಚರ್ಚು, ಕ್ರೈಸ್ತ ಮನೆತನಗಳ ಸುತ್ತ ಮುತ್ತ ನಡೆಯುವ ಪ್ರೀತಿ, ಪ್ರೇಮ ಮತ್ತು ಅದಕ್ಕೆ ಎದುರಾಗುವ ವಿವರಗಳನ್ನು ನಿರ್ದೇಶಕ ಮತ್ತು ನಾಯಕನಟನೂ ಆಗಿರುವ ವಿನಯ್ ಕುಮಾರ್ ವೈದ್ಯನಾಥನ್ ಬಿಚ್ಚಿಟ್ಟಿದ್ದಾರೆ. ಕಾಂಪೌಂಡು ಜಿಗಿದು ಬಂದು ಕಿಟಕಿಯಲ್ಲಿ ಬಂದು ಹುಡುಗಿಯನ್ನು ಮಾತಾಡಿಸುವ ಕಾಲಘಟ್ಟವನ್ನು ವಿನಯ್‌ ಕಣ್ಣಿಗೆ ಕಟ್ಟುವಂತೆ ಚಿತ್ರಿಸಿದ್ದಾರೆ.

ಈ ಕಥೆಯ ಆತ್ಮ ಇರುವುದು ಜಾಸ್ಮಿನ್ ಎಂಬ ಹುಡುಗಿಯ ಅಂತರಂಗದಲ್ಲಿ. ಅವಳಿಗೊಂದು ಮನಸಿದೆ, ಅದರಲ್ಲಿ ಆಸ್ಟಿನ್ ಎಂಬ ಪ್ರೇಮಿಯಿದ್ದಾನೆ. “ಮದುವೆಯಾದರೆ ನಿನ್ನನ್ನೇ” ಎಂದು ಅವನು ಕೊಟ್ಟ ಮಾತು ಅವಳ ಉಸಿರಾಗಿದೆ. ಇನ್ನೊಂದೆಡೆ, ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸುವ ಅಪ್ಪ. ಆದರೆ, ಆತನ ಪ್ರೀತಿಗೆ ಅಡ್ಡಗೋಡೆಯಾಗಿ ನಿಂತಿದೆ ‘ಒಣಪ್ರತಿಷ್ಠೆ’ ಎಂಬ ಹಠ. ಮಗಳು ತಾನು ತೋರಿಸಿದವನನ್ನೇ ವರಿಸಬೇಕೆಂಬ ಫ್ಯೂಡಲ್ ಮೆಂಟಾಲಿಟಿ… ಅವಳು ಅಪ್ಪನನ್ನು ಬಿಟ್ಟು ಓಡಿಹೋಗಲಾರಳು, ಇತ್ತ ಪ್ರೇಮಿಯನ್ನು ಮರೆಯಲೂ ಸಾಧ್ಯವಿಲ್ಲ. ಕಟ್ಟಕಡೆಯದಾಗಿ ಅಪ್ಪನ ಇಚ್ಚೆಯಂತೆ ಮದುವೆಯಾಗುವ ಜಾಸ್‌ ಜೀವನ ಏನಾಗುತ್ತದೆ? ಕಟ್ಟಿಕೊಂಡವನನ್ನು ಬಿಟ್ಟುಬಂದು ಆಸ್ಟಿನ್‌ಗೆ ಆಸರೆಯಾಗುತ್ತಾಳಾ? ಅಥವಾ ಆಸ್ಟಿನ್‌ ಬೇರೊಬ್ಬಳನ್ನು ವರಿಸುತ್ತಾನಾ? ಇದರ ನಡುವೆ ನಡೆಯುವ ಟ್ವಿಸ್ಟುಗಳೇನು? ಎಂಬಿತ್ಯಾದಿ ವಿಚಾರಗಳ ಜೊತೆಗೆ ಏರ್ಪಡುವ ಭಾವನೆಗಳ ತೀವ್ರ ಸಂಘರ್ಷ ಆಸ್ಟಿನ್‌ನ ಮಹನ್ಮೌನ!
ನಾಯಕ ಆಸ್ಟಿನ್ ಪಾತ್ರದಲ್ಲಿ ವಿನಯ್ ಕುಮಾರ್ ವೈದ್ಯನಾಥನ್ ಯಾವುದೇ ಬಿಲ್ಡಪ್ ಇಲ್ಲದೆ ತೀರಾ ಸಹಜವಾಗಿ ಮನಸ್ಸಿಗೆ ಹತ್ತಿರವಾಗುತ್ತಾರೆ.. ಸಿನಿಮಾವೊಂದು ಬಯಸುವ ಯಾವ ಉತ್ಪ್ರೇಕ್ಷೆಯೂ ಇಲ್ಲಿಲ್ಲ ಬಲ ರಾಜವಾಡಿ, ರಾಘು ರಾಮನಕೊಪ್ಪ ಅವರಂತಹ ಅನುಭವಿ ಕಲಾವಿದರು ತಮ್ಮ ಪಾತ್ರಗಳಿಗೆ ನ್ಯಾಯ ಒದಗಿಸಿದ್ದಾರೆ. ಈ ಸಿನಿಮಾ ಒಂದು ಸುಂದರ ಕವಿತೆಯಂತೆ ಶುರುವಾಗುತ್ತದೆ. ಆದರೆ, ಕೊನೆಯ ಎರಡು ಸಾಲುಗಳನ್ನು ಬರೆಯದೆ ಕವಿ ಪೆನ್ನು ಕೆಳಗಿಟ್ಟಂತೆ ಭಾಸವಾಗುತ್ತದೆ.

ಮೊದಲಾರ್ಧ ಪ್ರೀತಿ, ಮಮತೆಯ ಸುತ್ತ ನಿಧಾನವಾಗಿ ಸಾಗಿದರೆ, ದ್ವಿತೀಯಾರ್ಧದಲ್ಲಿ ಕಥೆ ವೇಗ ಪಡೆದು, ಕುತೂಹಲದ ಉತ್ತುಂಗಕ್ಕೆ ಏರುತ್ತದೆ. ಇನ್ನೇನು ಉತ್ತರ ಸಿಗಬೇಕು, ಕಥೆಗೊಂದು ಅಂತ್ಯ ಕಾಣಬೇಕು ಎನ್ನುವಾಗಲೇ, ಪರದೆಯ ಮೇಲೆ “ಮುಂದುವರೆಯಲಿದೆ” ಎಂಬ ಅಕ್ಷರಗಳು ಮೂಡುತ್ತವೆ. ಹೀಗಾಗಿ, ‘ಆಸ್ಟಿನ್ನ ಮಹನ್ಮೌನ’ ಚಿತ್ರಮಂದಿರದಿಂದ ಹೊರಬರುವಾಗ ಒಂದು ಸಿಹಿ-ಕಹಿ ಅನುಭವ ನಿಮ್ಮದಾಗುತ್ತದೆ. ಗತಕಾಲದ ಪ್ರೇಮಕಥೆಯೊಂದನ್ನು ನೋಡಿದ ಸಮಾಧಾನ ಒಂದೆಡೆಯಾದರೆ, ಕಥೆ ಪೂರ್ಣಗೊಳ್ಳಲಿಲ್ಲವಲ್ಲ ಎಂಬ ಅಸಮಾಧಾನ ಇನ್ನೊಂದೆಡೆ. ನೀವು ತಾಳ್ಮೆಯಿಂದ ಎರಡನೇ ಭಾಗಕ್ಕಾಗಿ ಕಾಯಬಲ್ಲವರಾದರೆ, ಹಳೆಯ ಕಾಲದ ಪ್ರೀತಿಯನ್ನು ಅನುಭವಿಸಲು ಇಷ್ಟಪಡುವವರಾದರೆ, ಈ ‘ಮಹಾನ್ ಮೌನ’ದ ಮಾತುಗಳನ್ನು ಒಮ್ಮೆ ಕೇಳಿಬನ್ನಿ.

ಇನ್ನಷ್ಟು ಓದಿರಿ

Scroll to Top