ಅಮ್ಮ ಹಾಸಿಗೆ ಹಿಡಿದಿದ್ದಾಗ ಸಿನಿಮಾನೇ ಬೇಡ ಅಂದಿದ್ದರು ಧೃವಾ ಸರ್ಜಾ!

Picture of Cinibuzz

Cinibuzz

Bureau Report

ಈಗ ಪೊಗರು ಸರಾಗ!

ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಎರಡು ವರ್ಷಗಳಿಗೊಂದು ಚಿತ್ರ ಮಾಡುತ್ತಾರೆಂಬ ಬಗ್ಗೆ ಅವರ ಅಭಿಮಾನಿಗಳೆಲ್ಲರಲ್ಲಿ ಪ್ರೀತಿ ತುಂಬಿದ ತಕರಾರೊಂದಿದೆ. ಆದರೆ ಕನಿಷ್ಠ ವರ್ಷಕ್ಕೊಂದಾದರೂ ಚಿತ್ರ ಮಾಡುವಂತೆ ಸಾಕ್ಷಾತ್ತು ಅಂಬರೀಶ್ ಅವರೇ ಕಿವಿ ಹಿಂಡಿದ್ದರಲ್ಲಾ? ಅದರಿಂದಾಗಿಯೇ ಧ್ರುವ ಬೇಗ ಬೇಗನೆ ಸಿನಿಮಾ ಮುಗಿಸಿಕೊಳ್ಳಲು ತಯಾರಾಗಿದ್ದಾರೆ. ಸದ್ಯ ಧೃವಾ ಸರ್ಜಾಗೆ ಎದುರಾಗಿದ್ದ ಅಡ್ಡಿ ಆತಂಕಗಳೆಲ್ಲಾ ದೂರವಾಗಿರೋದರಿಂದ ಪೊಗರು ಈಗ ಸರಾಗವಾಗಿ ಮುಂದುವರೆಯುತ್ತಿದೆ.

ಹಾಗೆ ನೋಡಿದರೆ ಕಳೆದ ವರ್ಷವೇ ಪೊಗರು ಮುಗಿಯಬೇಕಿತ್ತು. ದುರಂತವೆಂದರೆ ತಿಂಗಳುಗಳು ಸರಿದು ವರ್ಷವೊಂದು ಜಮೆಯಾಗುತ್ತಾ ಬಂದರೂ ಪೊಗರು ಚಿತ್ರದ ಸುಳಿವೇ ಇಲ್ಲದಂತಾಗಿತ್ತು.. ಇದರಿಂದ ನಿರಾಸೆಗೊಂಡವರೆಲ್ಲ ಕಾರಣ ಕೆದಕಲಾರಂಭಿಸಿದ್ದರು. ಸರಿಸುಮಾರು ಆರು ತಿಂಗಳು ಹಿಂದಿನ ವಿಚಾರವದು.  ಧ್ರುವ ಸರ್ಜಾ ಯಾಕೆ ಒಪ್ಪಿಕೊಂಡ ಸಿನಿಮಾವನ್ನು ಮುಗಿಸಲಾಗುತ್ತಿಲ್ಲ ಅಂತಾ ಸಿನಿಬಜ್ ಹುಡುಕಾಟ ನಡೆಸಿದಾಗ ಮನಕಲುಕುವ ವಿಚಾರವೊಂದು ಹೊರಬಿದ್ದಿತ್ತು. ಅದೇನೆಂದರೆ, ತಾಯಿಯನ್ನು ತುಂಬಾ ಹಚ್ಚಿಕೊಂಡು ಬೆಳೆದ ಹುಡುಗ ಧೃವ ಸರ್ಜಾ. ಯಾವುದೇ ಚಿತ್ರ ಮಾಡೋದಿರಲಿ, ಯಾವ ನಿರ್ಧಾರ ತೆಗೆದುಕೊಳ್ಳೋದಿದ್ದರೂ ಅಮ್ಮನ ಒಪ್ಪಿಗೆ, ಹಾರೈಕೆ ಪಡೆದೇ ಮುಂದುವರೆಯೋದು ಧೃವಾ ಪರಿಪಾಲಿಸಿಕೊಂಡು ಬಂದಿರೋ ರೂಢಿ. ಒಂದರ್ಥದಲ್ಲಿ ಅಮ್ಮ ಅಂದ್ರೆ ಧ್ರುವ ಪಾಲಿಗೆ ಪ್ರಪಂಚವಿದ್ದಂತೆ. ಅದೇ ರೀತಿ ಅಮ್ಮನ ಆಶೀರ್ವಾದದೊಂದಿಗೆ ಹೊಸಾ ಹುರುಪಿನಿಂದಲೇ ಅವರು ನಂದ ಕಿಶೋರ್ ನಿರ್ದೇಶನದ ಪೊಗರು ಚಿತ್ರಕ್ಕೆ ರೆಡಿಯಾಗಲಾರಂಭಿಸಿದ್ದರು. ಇದರಲ್ಲಿನ ಪಾತ್ರಗಳಿಗೆ ಎರಡು ಶೇಡ್ ಇದೆ. ಹದಿನೈದು ವರ್ಷದ ಹುಡುಗನಾಗಿಯೂ ಧ್ರುವ ಕಾಣಿಸಿಕೊಳ್ಳಬೇಕಿತ್ತು.

ಇದಕ್ಕಾಗಿ ಹೊಸ ದೈಹಿಕ ಕಸರತ್ತುಗಳನ್ನೂ ಕೂಡಾ ಧ್ರುವ ಆರಂಭಿಸಿದ್ದರು. ಆದರೆ ಇದೆಲ್ಲ ಚಾಲ್ತಿಯಲ್ಲಿರುವಾಗಲೇ ಧ್ರುವ ಅವರ ಅಮ್ಮ ಏಕಾಏಕಿ ಕಾಯಿಲೆಗೀಡಾಗಿದ್ದರು. ಎಲ್ಲ ಹುರುಪುಗಳೂ ಇಳಿದು ಹೋದಂತಾಗಿ ಅಮ್ಮನ ದೇಖಾರೇಕಿಗೆ ನಿಂತ ಧ್ರುವ ಒಂದಷ್ಟು ಕಾಲ ಅದರಲ್ಲಿಯೇ ಕಳೆದು ಹೋಗಿದ್ದರು. ನಂತರ ಅಮ್ಮ ಚೇತರಿಸಿಕೊಂಡರಾದರೂ ಪೊಗರು ಕಥೆಗೂ ಮುಂಚೆ ನಂದ ಕಿಶೋರ್ ನಿರ್ದೇಶನದಲ್ಲಿಯೇ ಮತ್ತೊಂದು ಚಿತ್ರದಲ್ಲಿ ನಟಿಸಲೂ ಮುಂದಾಗಿದ್ದರು. ಅಲ್ಲು ಅರ್ಜುನ್ ನಟಿಸಿದ್ದ ತೆಲುಗಿನ ಸರೈನುಡು ಚಿತ್ರದ ರಿಮೇಕ್ ಚಿತ್ರದಲ್ಲಿ ನಟಿಸಲು ಒಪ್ಪಿಕೊಂಡು ಅದರ ಕೆಲಸ ಕಾರ್ಯಗಳಲ್ಲಿ ತೊಡಗಿಕೊಳ್ಳಬೇಕೆನ್ನುವಷ್ಟರಲ್ಲಿ ಧ್ರುವಾಗೆ ಮತ್ತೊಂದು ಆಘಾತ ಕಾದಿತ್ತು!

ಪೊಗರು ಚಿತ್ರದ ಆರಂಭದ ಹಂತದಲ್ಲಿ ಅನಾರೋಗ್ಯಕ್ಕೀಡಾಗಿ ಚೇತರಿಸಿಕೊಂಡು ಮೊದಲಿನಂತಾಗಿದ್ದ ಧೃವಾ ತಾಯಿಗೆ ಸ್ಟ್ರೋಕ್ ಆಗಿತ್ತು. ಯಾರೇ ಆದರೂ ಇಂಥಾ ಆಘಾತವನ್ನು ಭರಿಸಿಕೊಳ್ಳೋದು ಕಷ್ಟ. ತಾಯಿಯನ್ನು ವಿಪರೀತ ಹಚ್ಚಿಕೊಂಡಿರೋ ಧ್ರುವ ತನ್ನ ಚಿತ್ರಕ್ಕಿಂತ ತಾಯಿಯೇ ಮುಖ್ಯ ಅಂದುಕೊಂಡು ಶುಶ್ರೂಷೆಯಲ್ಲಿ ತೊಡಗಿಕೊಂಡಿದ್ದರು. ಈಗ ಅವರ ತಾಯಿಯ ಆರೋಗ್ಯ ಆರಾಮಾಗಿದೆ. ಅಮ್ಮನ ಪಕ್ಕದಲ್ಲೇ ಇದ್ದು ಹಾರೈಕೆ ಮಾಡಿದ ಪ್ರತಿಫಲವಾಗಿ ಅವರೀಗ ನೆಮ್ಮದಿಗಾಯಿ ಓಡಾಡಿಕೊಂಡಿದ್ದಾರೆ. ಧೃವಾ ಕೂಡಾ ಮನಸು ನಿರಾಳ ಮಾಡಿಕೊಂಡು ಮತ್ತೆ ಬಣ್ಣ ಹಚ್ಚಿದ್ದಾರೆ. ಹೀಗಾಗಿ ಹೈದರಾ ಬಾದಿನ ರಾಮೋಜಿ ಸ್ಟುಡಿಯೋದಲ್ಲಿ ಪೊಗರು ಚಿತ್ರದ ಬಹುಮುಖ್ಯ ದೃಶ್ಯಗಳನ್ನೆಲ್ಲಾ ಚಿತ್ರೀಕರಿಸಿಕೊಂಡು ಬಂದಿದ್ದಾರೆ.

ಇನ್ನಷ್ಟು ಓದಿರಿ

Scroll to Top