ಮನೆಯಲ್ಲಿರೋ ಹಿರಿಯರೂ ಮಾತನಾಡೋದಕ್ಕೂ,ಮನೆಯಲ್ಲಿರೋ ಪಿಳ್ಳೆ ಪಿಸ್ಕಾಗಳೆಲ್ಲ ಆಡೋದಕ್ಕೂ ಸರಿ ಹೋಯ್ತು. ನಮ್ಮ ಕಾಲದಲ್ಲಿ ಹಿಂಗಿರಲಿಲ್ಲಪ್ಪ. ಮನೆ ಹೆಣ್ಣು ಮಕ್ಕಳು ಮನೆ ಬಿಟ್ಟು ಹೊರಗೆ ಹೋಗದಕ್ಕೂ ನೂರು ಸಾರಿ ಕೇಳಬೇಕಿತ್ತು. ನಾವೆಲ್ಲಾ ಟ್ರಿಪ್ಪು ಅಂತ ಹೋಗಿದ್ದು ಒಂದ್ಸಾರಿ ಧರ್ಮಸ್ಥಳಕ್ಕೆ ಮತ್ತೊಂದು ಸಾರಿ ತಿರುಪತಿಗೆ. ಅಂತ ಹೇಳಿದಾಗಲಂತೂ ಇದನ್ನು ಆಲಿಸುವ ಯುವ ಸಮುದಾಯಕ್ಕೆ ಇದೆಂಥಾ ಗೋಳಪ್ಪ ಅಂತಾನೂ ಅನ್ನಿಸಿರಲೇಬೇಕಲ್ವೇ. ಆದರೆ ವಿಚಾರ ಮಾಡಿ ನೋಡಿದ್ರೆ ಹಾಗಿದ್ರೆ ಎಷ್ಟು ಅಂದವಿರುತ್ತಿತ್ತು. ಚೆಂದವಿರುತ್ತಿತ್ತು. ಯಾಕಂದ್ರೆ ಆಗಿನ ಕಾಲಕ್ಕೂ, ಈಗಿನ ಕಾಲಕ್ಕೂ ಬಹಳಷ್ಟು ವ್ಯತ್ಯಾಸವಿದೆ. ತಲೆ ಹೋಗುವಂತಹ ವಿಚಾರವಾದರೂ ಮಾತುಕತೆಯಲ್ಲಿಯೇ ಮುಗಿಸುತ್ತಿದ್ದ ಕಾಲ ಹೋಗಿ, ಸುಮ್ಮನೆ ಹಾರನ್ ಮಾಡಿದರೆಂದು, ನೋಡಿ ನಕ್ಕಳೆಂದು, ಕೈ ಬಿಟ್ಟಳೆಂದು ಇತ್ಯಾದಿ ಇತ್ಯಾದಿಗಳಿಗೆಲ್ಲಾ ರಕ್ಷಪಾತಗಳಾಗುವ ಸಂಭವವೇ ಹೆಚ್ಚಾಗುತ್ತಿದೆ. ಕ್ಷುಲ್ಲಕ ಕಾರಣಗಳಿಗಾಗಿ ಕೊಲೆ, ರಕ್ತಪಾತಗಳೇ ಘಟಿಸುತ್ತಿರುವುದು ಯುವ ಜನಾಂಗವು ಎಷ್ಟರಮಟ್ಟಿಗೆ ಅಧೋಗತಿಗೆ ಇಳಿಯುತ್ತಿದ್ದೇವೆಂಬ ಅರಿವಾಗುತ್ತದೆ. ನಮಗ್ಯಾಕಪ್ಪ ಊರ ಉಸಾಬರಿ ಅಂತ ಸುಮ್ಮನಿದ್ದರೂ ಕಾಣದ ಖೆಡ್ಡಾಕ್ಕೆ ಬೀಳುವ ಸಂಭವವೇ ಹೆಚ್ಚಾಗುತ್ತಿದೆ ಇರಲಿ ಬಿಡಿ.

ಯಾಕಪ್ಪ ಇಷ್ಟೆಲ್ಲಾ ಪೀಠಿಕೆ ಅಂದುಕೊಂಡ್ರಾ ಹೀಗೆ ದಾರಿ ತಪ್ಪುತ್ತಿರುವ ಯುವ ಜನಾಂಗಕ್ಕೊಂದು ಸಂದೇಶವನ್ನು ನೀಡುವ ಸಲುವಾಗಿ ರೆಡಿಯಾಗಿರುವ ಸಿನಿಮಾ ತ್ರಯ. ಇತ್ಯಾದಿ ಇತ್ಯಾದಿ ಕಾರಣಗಳಿಗಾಗಿ ಪಾರ್ಟಿ ಅಂತ ಮಾಡುವ ಸಂದರ್ಭದಲ್ಲಿ ಅಗತ್ಯಕ್ಕಿಂತ ಹೆಚ್ಚೇನಾದರೂ ಕುಡಿದಾಗ ಮತ್ತಿನಲ್ಲಿ ಆಗಬಹುದಾದ ಆಪತ್ತನ್ನು ಎಳೆ ಎಳೆಯಾಗಿ ಬಿಚ್ಚುಡುವ ಪ್ರಯತ್ನವನ್ನು ಮಾಡಿದ್ದಾರೆ ತ್ರಯ ಚಿತ್ರತಂಡ. ಇದು ಪಕ್ಕಾ ಯೂಥ್ ಓರಿಯೆಂಟೆಡ್ ಸಿನಿಮಾವಾಗಿದ್ದು, ಇಂದಿನ ಯುವಜನಾಂಗವೂ ನೋಡಲೇಬೇಕಾದ ಸಿನಿಮಾವಾಗಿರುವುದಂತೂ ಗ್ಯಾರೆಂಟಿ. ಯುವ ಜನಾಂಗದ ಜವಾಬ್ದಾರಿಗಳೇನು? ನಾವೇಕೆ ದಾರಿ ತಪ್ಪುತ್ತಿದ್ದೇವೆ? ಎಲ್ಲಿ ತಪ್ಪುತ್ತಿದ್ದೇವೆ? ಏನು ಮಾಡುತ್ತಿದ್ದೇವೆ? ಎಂಬ ಸಾಕಷ್ಟು ಗೊಂದಲಗಳಿಗೆ ತ್ರಯ ಉತ್ತರಿಸಲಿದೆ. ತ್ರಯ ಸಿನಿಮಾ ನಾಳೆ ರಿಲೀಸ್ ಆಗಲಿದೆ.
ಇನ್ನು ಈ ಸಿನಿಮಾದಲ್ಲಿರುವ ತಾಂತ್ರಿಕ ವರ್ಗದವರಾಗಿರಬಹುದು, ತಾರಾಂಗಣವಾಗಿರಬಹುದು ಬಹುತೇಕರು ಎಲ್ಲರದೂ ಇದು ಕನ್ನಡದಲ್ಲಿ ಚೊಚ್ಚಲ ಸಿನಿಮಾವಾಗಿದೆ. ನಿರ್ದೇಶಕ ಕೃಷ್ಣ ಸಾಯಿ ತಮಿಳಿನ ಸಿನಿಮಾರಂಗದಲ್ಲಿದ್ದವರು. ತ್ರಯ ಸಿನಿಮಾ 2 ಸ್ಟೇಟ್ಸ್ ಬ್ಯಾನರ್ ನಲ್ಲಿ ನಿರ್ಮಾಣ ವಾಗುತ್ತಿದ್ದು, ನಿರ್ಮಾಪಕರೇ ತ್ರಯದ ಕಥೆಯನ್ನು ಹೆಣೆದಿರುವುದು ವಿಶೇಷವಾಗಿದೆ. ಯತೀಶ್ ಮಹದೇವ್ ಸಂಗೀತ ಸಂಯೋಜನೆ ಮಾಡಿದ್ದು, ಆರ್.ಕೆ.ಪ್ರತಾಪ್ ಛಾಯಾಗ್ರಹಣ ಮಾಡಿದ್ದಾರೆ. ಇನ್ನು ತ್ರಯದಲ್ಲಿ ಸಂಯುಕ್ತ ಹೊರನಾಡು, ಶಂಕರ್ ಶ್ರೀಹರಿ, ರಜನಿ ಭಾರದ್ವಜ್, ಮದನ್ ಗೌಡ, ನಿಮಿಶಾ, ಅಮೋಘ್ ರಾಹುಲ್, ನೀತು ಬಾಲ, ಕೃಷ್ಣ ಹೆಬ್ಬಾಳೆ, ಮಂದೀಪ್ ರೈ, ವಿಜಯ್ ಚೆಂಡೂರ್ ಇದ್ದಾರೆ. ನಾಳೆ ರಾಜ್ಯದಾಂದ್ಯಂತ ಸಿನಿಮಾ ರಿಲೀಸ್ ಆಗಲಿದ್ದು, ಮಿಸ್ ಮಾಡದೇ ನೋಡಿ ಬನ್ನಿ.











































