ಪೊಲೀಸ್ ಅವತಾರದಲ್ಲಿ ಯೂಟರ್ನ್ ಬೆಡಗಿ!

Picture of Cinibuzz

Cinibuzz

Bureau Report

ತಮಿಳಿನಲ್ಲಿ ಕನ್ನಡತಿ ಶ್ರದ್ಧಾ ಶ್ರೀನಾಥ್ ಅವರು ಪೊಲೀಸ್ ಪಾತ್ರದ ಮೂಲಕ ಮೋಡಿ ಮಾಡಲು ರೆಡಿಯಾಗಿದ್ದಾರೆ. 2018ರಲ್ಲಿ ಬಿಡುಗಡೆಗೊಂಡಿದ್ದ ವಿಶಾಲ್ ಅಭಿನಯದ ಇರುಂಬು ತಿರೈ ಸಿನಿಮಾದ ಸೀಕ್ವೆಲ್ ಇರುಂಬು ತಿರೈ 2 ಸಿನಿಮಾದಲ್ಲಿ ಶ್ರದ್ಧಾ ಪೊಲೀಸ್ ಪಾತ್ರಕ್ಕೆ ಬಣ್ಣ ಹಚ್ಚಲಿದ್ದಾರೆ ಎಂಬ ಬಿಸಿ ಬಿಸಿ ಸುದ್ದಿ ಹರಿದಾಡುತ್ತಿದೆ. ಈ ಹಿಂದೆ ಪಿ.ಎಸ್. ಮಿತ್ರನ್ ಇರುಂಬು ತಿರೈ ಸಿನಿಮಾವನ್ನು ನಿರ್ದೇಶನ ಮಾಡಿದ್ದರು. ಚಿತ್ರದಲ್ಲಿ ವಿಶಾಲ್ ಜತೆ ಅರ್ಜುನ್ ಸರ್ಜಾ, ಸಮಂತಾ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದರು. ಸೈಬರ್ ಲೋಕದ ವಂಚನಾ ಜಾಲದ ಕಥೆ ಹೊಂದಿರುವ ಈ ಚಿತ್ರಕ್ಕೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆಯೂ ವ್ಯಕ್ತವಾಗಿತ್ತು. ಪ್ರಸ್ತುತ ಸಮಾಜದಲ್ಲಿ ನಡೆಯುತ್ತಿರುವ ಅಪರಾಧಗಳಿಗೆ ಕನ್ನಡಿ ಹಿಡಿಯುವ ಪ್ರಯತ್ನವನ್ನು ಈ ಚಿತ್ರದ ಮೂಲಕ ನಿರ್ದೇಶಕರು ಮಾಡಿದ್ದರು. ವಿಶಾಲ್ ಸೇನಾಧಿಕಾರಿಯ ಪಾತ್ರದಲ್ಲಿ ಮಿಂಚಿದ್ದರು ಕೂಡ. ಸದ್ಯ ಇರುಂಬು ತಿರೈ ಭರ್ಜರಿ ಯಶಸ್ಸಿನಿಂದಾಗಿ ಇರುಂಬು ತಿರೈ 2 ಸಿನಿಮಾ ನಿರ್ಮಾಣವಾಗಲಿದ್ದು, ವಿಶಾಲ್ ಗೆ ಕನ್ನಡತಿ ಶ್ರದ್ಧಾ ಜತೆಯಾಗಲಿದ್ದಾರೆ.

ತಮ್ಮ ವಿಭಿನ್ನ ನಟನೆಯ ಮೂಲಕ ತಮಿಳು ಪ್ರೇಕ್ಷಕರ ಮನಗೆದ್ದಿರುವ ಅವರು, ವಿಜಯ್ ಸೇತುಪತಿ, ಮಾಧವನ್ ಮುಖ್ಯಭೂಮಿಕೆಯಲ್ಲಿದ್ದ ವಿಕ್ರಂ ವೇದಾ ಸಿನಿಮಾದಲ್ಲೂ ನಟಿಸಿದ್ದರು. ಈ ಚಿತ್ರದ ನಟನೆ ಶ್ರದ್ಧಾಗೆ ಹೆಚ್ಚು ಖ್ಯಾತಿ ತಂದುಕೊಟ್ಟಿತ್ತು. ಮಲಯಾಳಂ ಚಿತ್ರನಟ ನವೀನ್ ಪೌಲಿ ಅಭಿನಯದಲ್ಲಿ ಮೂಡಿಬಂದಿದ್ದ ರಿಕ್ಕಿ ತಮಿಳು ಸಿನಿಮಾದಲ್ಲೂ ಶ್ರದ್ಧಾ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದರು. ಇದೀಗ ಪೊಲೀಸ್ ಪಾತ್ರದಲ್ಲಿ ಅವರ ಅಭಿನಯ ನೋಡಲು ಅಭಿಮಾನಿಗಳು ಕುತೂಹಲದಲ್ಲಿ ಕಾಯುತ್ತಿದ್ದಾರೆ.

 

ಇನ್ನಷ್ಟು ಓದಿರಿ

Scroll to Top