ಅಕ್ಟೋಬರ್ 30ಕ್ಕೆ ಬರಲಿದೆ ಟೀಸರ್…

Picture of Cinibuzz

Cinibuzz

Bureau Report

ರೋಜ಼್, ಮಾಸ್ ಲೀಡರ್, ವಿಕ್ಟರಿ-೨ ಸಿನಿಮಾಗಳಿಗೆ ಬಂಡವಾಳ ಹೂಡುವ ಮುಖಾಂತರ ನಿರ್ಮಾಪಕರೆನಿಸಿಕೊಂಡವರು ತರುಣ್ ಶಿವಪ್ಪ. ಹೀರೋಗಳ ಡೇಟ್ಸು, ಶೂಟಿಂಗು, ವ್ಯಾಪಾರಗಳ ಹೊರತಾಗಿ ಸಿನಿಮಾಗಳ ಬಗ್ಗೆ ಅಭಿರುಚಿ, ಕನಸು ಹೊಂದಿರುವ ತರುಣ್ ಶಿವಪ್ಪ ತಾವು ನಿರ್ಮಿಸುವ ಸಿನಿಮಾಗಳು ವ್ಯವಹಾರಗಳಾಚೆಗೆ ಜನಮೆಚ್ಚುಗೆ ಪಡೆಯಲೇಬೇಕು ಎಂದು ಹಂಬಲಿಸೋ ವ್ಯಕ್ತಿ. ಹೀಗಾಗಿ ಸಿನಿಮಾ ಶುರುವಿನಿಂದ ಹಿಡಿದು ಬಿಡುಗಡೆಯ ತನಕ ಪ್ರತಿಯೊಂದು ವಿಚಾರದಲ್ಲೂ ಹೊಸತನವಿರಬೇಕು ಎಂದು ಬಯಸುತ್ತಾರೆ. ಇದರ ಪ್ರತಿಫಲವಾಗಿ ತರುಣ್ ಟ್ಯಾಕೀಸ್ ಬ್ಯಾನರಿನಲ್ಲಿ ನಿರ್ಮಾಣವಾಗುವ ಸಿನಿಮಾಗಳು ಏನಾದರೊಂದು ಸುದ್ದಿಯಲ್ಲಿದ್ದೇ ಇರುತ್ತವೆ.

ಸದ್ಯ ತರುಣ್ ಶಿವಪ್ಪ ಮತ್ತು ಮಾನಸ ತರುಣ್ ನಿರ್ಮಿಸುತ್ತಿರುವ ಚಿತ್ರ ಖಾಕಿ. ಚಿರಂಜೀವಿ ಸರ್ಜಾ ನಟನೆಯ ಈ ಸಿನಿಮಾವನ್ನು ನವೀನ್ ರೆಡ್ಡಿ ನಿರ್ದೇಶಿಸುತ್ತಿದ್ದಾರೆ. ದಿ ಪವರ್ ಆಫ್ ಕಾಮನ್ ಮ್ಯಾನ್ ಎನ್ನುವ ಅಡಿಬರಹ ಹೊಂದಿರುವ ಸಿನಿಮಾ ಚಿರಂಜೀವಿ ಸರ್ಜಾ ವೃತ್ತಿ ಬದುಕಿಗೆ ದೊಡ್ಡ ತಿರುವು ನೀಡೋದು ಗ್ಯಾರೆಂಟಿ ಅಂತಾ ಗಾಂಧಿನಗರದ ತುಂಬಾ ಟಾಕ್ ಕ್ರಿಯೇಟ್ ಆಗಿದೆ. ತಾನ್ಯಾ ಹೋಪ್ ಈ ಚಿತ್ರದ ನಾಯಕಿ. ಕೇಬಲ್ ಆಪರೇಟರ್ ಯುವಕನಿಂದ ಕತೆ ಆರಂಭಗೊಂಡು ಯಾರೂ ಊಹೆ ಮಾಡಲಾರದ ತಿರುವುಗಳ ಸುತ್ತ ಖಾಕಿ ಬೆಸೆದುಕೊಂಡಿದೆ ಅನ್ನೋ ಮಾಹಿತಿಯಿದೆ. ಈಗಾಗಲೇ ಬಿಡುಗಡೆಗೊಂಡಿರುವ ಖಾಕಿಯ ಪೋಸ್ಟರುಗಳೇ ಈ ಸಿನಿಮಾದಲ್ಲಿ ಜನರಿಗೆ ಹತ್ತಿರವಾಗುವ ಅಂಶಗಳಿವೆ ಅನ್ನೋದನ್ನು ಸಾರಿ ಹೇಳಿವೆ. ಈ ಕುತೂಹಲ ಇಮ್ಮಡಿಗೊಳಿಸುವಂತಾ ಖಾಕಿಯ ಟೀಸರ್ ಇದೇ ಅಕ್ಟೋಬರ್ ೩೦ಕ್ಕೆ ಅನಾವರಣಗೊಳ್ಳುತ್ತಿದೆ.

ಬಾಲಾ ಛಾಯಾಗ್ರಹಣ, ವಿನೋದ್ ಸಾಹಸ, ಕೆ.ಎಂ. ಪ್ರಕಾಶ್ ಸಂಕಲನ, ಮೋಹನ್ ಬಿ ಕೆರೆ ಕಲಾ ನಿರ್ದೇಶನ, ಮಾಸ್ತಿ, ಗುರುರಾಜ ದೇಸಾಯಿ ಸಂಭಾಷಣೆ, ಋತ್ವಿಕ್ ಸಂಗೀತ ಸೇರಿದಂತೆ ಎಲ್ಲ ಹೆಸರು ಮಾಡಿರುವ ತಂತ್ರಜ್ಞರು ಖಾಕಿಯಲ್ಲಿ ಒಟ್ಟು ಸೇರಿದ್ದಾರೆ. ಈ ಚಿತ್ರದ ನಿರ್ದೇಶಕ ನವೀನ್ ರೆಡ್ಡಿ ಅವರ ಪಾಲಿಗಿದು ಚೊಚ್ಚಲ ಸಿನಿಮಾ. ಆದರೆ ಈ ಹಿಂದೆ ಇದೇ ತರುಣ್ ಟಾಕೀಸ್ ನಿರ್ಮಿಸಿದ್ದ ರೋಜ಼್ ಮತ್ತು ಮಾಸ್ ಲೀಡರ್ ಸಿನಿಮಾಗಳಲ್ಲಿ ಸಹ ನಿರ್ದೇಶಕರಾಗಿ ಕಾರ್ಯ ನಿರ್ವಹಿಸಿದ್ದರು. ಅದಲ್ಲದೇ ಗೋಲ್ಡನ್ ಸ್ಟಾರ್ ಗಣೇಶ್ ನಟಿಸಿದ್ದ ಸಂಗಮ ಮತ್ತು ಕೂಲ್ ಚಿತ್ರಗಳೂ ಸೇರಿದಂತೆ ಸಾಕಷ್ಟು ಸಿನಿಮಾಗಳಿಗೆ ಕೆಲಸ ಮಾಡಿ ನಿರ್ದೇಶನದ ಪಟ್ಟುಗಳನ್ನು ಕಲಿತಿದ್ದಾರೆ. ಪ್ರತಿಯೊಬ್ಬ ಪ್ರಜೆ ಕೂಡಾ ತಮ್ಮ ರಕ್ಷಣೆಯನ್ನು ತಾವೇ ಹೇಗೆ ಮಾಡಿಕೊಳ್ಳಬಹುದು ಎಂಬುದರ ಸುತ್ತ ವಿದ್ಯಾಧರ್ ಹೆಣೆದಿರುವ ಕಥೆಯನ್ನು ನವೀನ್ ರೆಡ್ಡಿ ರೋಚಕವಾಗಿ ರೂಪಿಸಿದ್ದಾರೆ. ಅದರ ಸ್ಯಾಂಪಲ್ ಈಗ ಬಿಡುಗಡೆಗೊಳ್ಳುವ ಟೀಸರಿನಲ್ಲಿ ರಿವೀಲ್ ಆಗಲಿದೆ!

ಇನ್ನಷ್ಟು ಓದಿರಿ

Scroll to Top