ಗ್ರೀನ್ ಚಿಲ್ಲಿ ಎಂಟರ್ ಟೈನ್ಮೆಂಟ್ಸ್ ಲಾಂಛನದಲ್ಲಿ ಪವನ್ ಕುಮಾರ್ ನಿರ್ಮಾಣದ ಬಡ್ಡಿಮಗನ್ ಲೈಫು ಚಿತ್ರ ಬಿಡುಗಡೆಗೆ ತಯಾರಾಗಿದೆ. ಈ ಚಿತ್ರದಲ್ಲಿ ಬಡ್ಡಿ ಸೀನಪ್ಪನ ಪಾತ್ರ ನಿರ್ವಹಿಸಿರುವವರು ಬಲ ರಾಜವಾಡಿ. ಈ ವರೆಗೆ ಕಾಣಿಸಿಕೊಳ್ಳದಂಥಾ ಪಾತ್ರದಲ್ಲಿ ರಾಜ್ ಇಲ್ಲಿ ಕಾಣಿಸಿಕೊಂಡಿದ್ದಾರೆ. ಅದೇನೆಂದು ಅವರೇ ಹೇಳಿದ್ದಾರೆ. ಓದಿ…
ಈ ಚಿತ್ರದಲ್ಲಿ ನಾನು ಬಡ್ಡಿ ಸೀನಪ್ಪನ ಪಾತ್ರವನ್ನ ನಿರ್ವಹಿಸಿದ್ದೇನೆ. ಈ ಚಿತ್ರದ ನಿರ್ದೇಶಕ ಪವನ್ ಪ್ರಸಾದ್ ಅವರು ಈ ಪಾತ್ರದ ಬಗ್ಗೆ ವಿವರಿಸಿ ನೀವೇ ಈ ಪಾತ್ರವನ್ನು ಮಾಡಬೇಕು ಎಂದು ಹೇಳಿದರು. ಇಡೀ ಸಿನಿಮಾದ ಕೇಂದ್ರ ಬಿಂದು ಈ ಪಾತ್ರ. ಹೆಸರೇ ಸೂಚಿಸಿದಂತೆ ಬಡ್ಡಿ ವ್ಯವಹಾರ, ರಿಯಲ್‌ಎಸ್ಟೇಟ್ ಮಾಡುವಂತಹ ಪಾತ್ರ ನನ್ನದು. ತುಂಬು ಕುಟುಂಬ, ಒಬ್ಬ ಮಗಳು, ಬಹಳ ಪ್ರೀತಿಯಿಂದ ಎಲ್ಲ ರೀತಿಯ ಸ್ವಾತಂತ್ರ್ಯ ಕೊಟ್ಟು ಬೆಳೆಸಿರುತ್ತಾನೆ. ಇಡೀ ಊರಲ್ಲಿ ಬಡ್ಡಿ ಸೀನಪ್ಪ ಎಂದರೆ ಎಲ್ಲರೂ ಹೆದರುತ್ತಿರುತ್ತಾರೆ. ಏಕೆಂದರೆ ಎಲ್ಲರೂ ಅವನ ಋಣದಲ್ಲಿರುತ್ತಾರೆ. ಹಾಗಾಗಿ ಬಡ್ಡಿ ಸೀನಪ್ಪ ಅಂದ್ರೆ ಒಂದು ಗತ್ತು-ಗಮ್ಮತ್ತು ಇರುವಂತಹ ವ್ಯಕ್ತಿ. ಹೀಗೆ ಒಂದು ದಿನ ಎದುರುಗಡೆ ಹುಡುಗ ಇವನ ಮಗಳನ್ನು ಪ್ರೀತಿಸಿ ಓಡಿ ಹೋದಾಗ ಬಡ್ಡಿ ಸೀನಪ್ಪನಿಗೆ ಆಗುವ ತಲ್ಲಣವನ್ನು ಅದ್ಭುತವಾಗಿ ಸಿನಿಮಾದಲ್ಲಿ ತೋರಿಸಿದ್ದಾರೆ.

ಇಷ್ಟೊಂದು ಮೆರೆಯುತ್ತಿದ್ದಂತಹ ಬಡ್ಡಿ ಸೀನಪ್ಪ ಹಳ್ಳಕ್ಕೆ ಬಿದ್ದಾಗ ಅವನಿಂದ ತೊಂದರೆಗಳನ್ನು ಅನುಭವಿಸಿದವರು, ಆಘಾತಕ್ಕೊಳಗಾಗಿದ್ದಂತಹ ಇಡೀ ಊರು ಜನ ಯಾ ರೀತಿಯಲ್ಲಿ ಛೇಡಿಸಬಹುದು, ಹಂಗಿಸಬಹುದು ಈ ಸಂದರ್ಭಗಳನ್ನು ರೂಪಕವಾಗಿ ಸಿನಿಮಾವನ್ನು ಕಟ್ಟಿಕೊಟ್ಟಿದ್ದಾರೆ.

ನಾಯಕನಾಗಿ ಸಚಿನ್ ಶ್ರೀಧರ್ ನಾಯಕಿಯಾಗಿ ಐಶ್ವರ್ಯ ರಾವ್ ಬಹಳ ಅದ್ಭುತವಾಗಿ ಸಹಜವಾಗಿ ನಟಿಸಿದ್ದಾರೆ. ಇಬ್ಬರೂ ಸಹ ಹೊಸ ನಟರು. ಆದರೆ ಎಲ್ಲೂ ಅವರ ಅಭಿನಯ ಹೊಸದು ಅನ್ನಿಸುವುದಿಲ್ಲ. ಅರ್ಧ ಸಿನಿಮಾ ಆದ ನಂತರ ಇಡೀ ಸಿನಿಮಾ ನಮ್ಮನ್ನು ಆವರಿಸುತ್ತಾ ಹೋಗುತ್ತೆ. ಪವನ್ ಹಾಗೂ ಪ್ರಸಾದ್ ಒಳ್ಳೆಯ ಯುವ ನಿರ್ದೇಶಕರು. ಪ್ರಸಾದ್ ಅದ್ಭುತವಾದ ಕಥೆ, ನಿರೂಪಣೆ ಮತ್ತು ಅದಕ್ಕೆ ಜೀವ ತುಂಬುವಂತಹ ಕೆಲಸ ಮಾಡಿದ್ದಾರೆ. ಪವನ್ ಎಡಿಟಿಂಗ್ ಸೌಂಡಿಂಗ್ ರೀತಿಯ ತಾಂತ್ರಿಕ ವಿಭಾಗಗಳಲ್ಲಿ ಒಳ್ಳೆ ಕೆಲಸ ಮಾಡಿದ್ದಾರೆ. ಇವರಿಬ್ಬರ ಸಂಗಮ ಅದ್ಭುತವಾಗಿರುವಂತದ್ದು.

ಸಿದ್ಧಸೂತವನ್ನು ಮೀರಿ ಸಿನಿಮಾದ ವ್ಯಾಕರಣವನ್ನು ಮೀರದೆ ಬಹಳ ಚೆನ್ನಾಗಿ ಸಿನಿಮಾಕಟ್ಟಿಕೊಟ್ಟಿದ್ದಾರೆ. ರಾಮರಾಮರೆ ಖ್ಯಾತಿಯ ಲಲಿತ್ ಬಹಳ ಚೆನ್ನಾಗಿ ಛಾಯಾಗ್ರಹಣ ಮಾಡಿದ್ದಾರೆ. ಆಶಿಕ್ ಅರುಣ್ ಸಂಗೀತ ಬಹಳ ಚೆನ್ನಾಗಿ ಮೂಡಿಬಂದಿದೆ. ಇಡೀ ಸಿನಿಮಾ ಮೈಸೂರಿನ ತಪ್ಪಲಿನ ಒಂದು ಊರಲ್ಲಿ ಶೂಟಿಂಗ್ ಮಾಡಿದ್ದೇವೆ. ಪೂರ್ಣಚಂದ್ರ ತೇಜಸ್ವಿಯವರ ಏನ್ ಚಂದಾನೆ ತಕ್ಕೊ ಅವರ್ ಮನೆ ದೋಸೆ ತಳಾನೆ ತೂತಾಗೋದೆ ಈ ಹಾಡು ಇಡೀ ಸಿನಿಮಾದ ಒಂದು ಕಟೆಂಟ್ ಅಂತ ಹೇಳಬಹುದು. ಈಗಾಗಲೇ ಈ ಹಾಡನ್ನು ಎಲ್ಲರೂ ಕೇಳಿರಬಹುದು. ನವೀನ್ ಸಜ್ಜು ಈ ಹಾಡನ್ನು ಹಾಡಿದ್ದಾರೆ. ವೀರು ಅವರು ಇದಕ್ಕೆ ಸಾಹಿತ್ಯ ಬರೆದಿದ್ದಾರೆ. ನೀವು ಕೇಳಿರುವುದಕ್ಕಿಂತ ಈ ಹಾಡು ಅತ್ಯುತ್ತಮವಾಗಿ ಮೂಡಿಬಂದಿದೆ. ಯುವಕರು ಮಾಡಿರುವಂತಹ ಸಿನಿಮಾ ಇದು, ಈ ಸಿನಿಮಾ ನೋಡಿ ಪ್ರೋತ್ಸಾಹ ನೀಡಿ…
ನಿರೂಪಣೆ: ಸುಮ .ಜಿ











































