ಬಲು ಕುತೂಹಲ ಹುಟ್ಟಿಸಿರುವ ಬಬ್ರೂ ಟ್ರೇಲರ್!

Picture of Cinibuzz

Cinibuzz

Bureau Report

ಬೆಳದಿಂಗಳ ಬಾಲೆ, ಹೂಮಳೆ, ಮುಂಗಾರಿನ ಮಿಂಚು, ಇಷ್ಟಕಾಮ್ಯ ಇದೇ ಮುಂತಾದ ಚಿತ್ರಗಳಲ್ಲಿ ಅಭಿನಯಿಸಿರುವ ನಟಿ ಸುಮನ್ ನಗರ್‌ಕರ್, ತಮ್ಮದೇ ಹೆಸರಿನಲ್ಲಿ ಪ್ರೊಡಕ್ಷನ್ಸ್ ಹೌಸ್ ಶುರು ಮಾಡಿದ್ದು, “ಬಬ್ರೂ” ಚಿತ್ರದ ಮೂಲಕ ನಿರ್ಮಾಪಕಿಯಾಗಿರುವ ಅವರು ಕೂಡ ಈ ಚಿತ್ರದಲ್ಲಿ ನಟನೆಯನ್ನೂ ಮಾಡಿದ್ದಾರೆ. ವಿಶೇಷವೆಂದರೆ, “ಬಬ್ರೂ’ ಚಿತ್ರದ ಸಂಪೂರ್ಣ ಚಿತ್ರೀಕರಣ ಅಮೆರಿಕಾದಲ್ಲೇ ನಡೆದಿದ್ದು, ಕನ್ನಡದ ಮತ್ತು ವಿದೇಶದ ಹಲವು ಕಲಾವಿದರು ಚಿತ್ರದ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಪೋಸ್ಟ್ ಪ್ರೊಡಕ್ಷನ್ ಕೆಲಸಗಳನ್ನು ಮುಗಿಸಿ ತೆರೆಗೆ ಬರಲು ಸಿದ್ದವಾಗಿರುವ ಬಬ್ರೂ ಚಿತ್ರದ ಟ್ರೇಲರ್ ಕೂಡ ಈಗಾಗಲೇ ಯುಟ್ಯೂಬ್‌ನಲ್ಲಿ ಸದ್ದು ಮಾಡುತ್ತಿದ್ದು, ಬಿಡುಗಡೆ ನಂತರ ಚಿತ್ರರಸಿಕರ ಮನಗೆಲ್ಲುವಂತಿದೆ.

ಸುಜಯ್ ರಾಮಯ್ಯ “ಬಬ್ರೂ’ ಚಿತ್ರಕ್ಕೆ ಮೊದಲ ಬಾರಿಗೆ ಆಕ್ಷನ್-ಕಟ್ ಹೇಳಿದ್ದಾರೆ. ಚಿತ್ರದಲ್ಲಿ ಸುಮನ್ ನಗರ್‌ಕರ್, ಮಹೀ ಹೀರೇಮಠ, ರೇ ತೋಸ್ತಾಡೊ, ಸನ್ನಿ ಮೋಜ, ಗಾನಭಟ್, ಪ್ರಕೃತಿ ಕಶ್ಯಪ್ ಮೊದಲಾದವರು ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಚಿತ್ರಕ್ಕೆ ಸುಮುಖ-ಸುಜಯ್ ರಾಮಯ್ಯ ಛಾಯಾಗ್ರಹಣವಿದೆ. ವರುಣ್ ಶಾಸ್ತ್ರೀ ಸಂಭಾಷಣೆ ಬರೆದಿದ್ದು, ಮೈಸೂರಿನ ಪೂರ್ಣಚಂದ್ರ ತೇಜಸ್ವಿ “ಬಬ್ರೂ’ ಚಿತ್ರದ ಹಾಡುಗಳಿಗೆ ಸಂಗೀತ ಸಂಯೋಜಿಸಿದ್ದಾರೆ.

ಡಾ. ರಾಜಕುಮಾರ್ ಅಭಿನಯದ “ಬಬ್ರುವಾಹನ’ ಚಿತ್ರದ ಪ್ರೇರಣೆಯಿಂದ ಬಬ್ರೂ ಎಂಬ ಹೆಸರಿಡಲಾಗಿದೆ. ಬಬ್ರೂ ಎಂಬುದು ಚಿತ್ರದಲ್ಲಿ ಬರುವ ಕಾರಿನ ಹೆಸರಾಗಿದೆ. ಇಬ್ಬರು ಭಾರತೀಯರು ಪರಿಚಯವಾಗಿ ಬಳಿಕ “ಬಬ್ರೂ’ ಎನ್ನುವ ಕಾರಿನಲ್ಲಿ ಮೆಕ್ಸಿಕೋದಿಂದ ಕೆನಡಾವರೆಗೆ ಪ್ರಯಾಣ ಬೆಳೆಸುತ್ತಾರೆ. ಈ ವೇಳೆ ರೈತನೊಬ್ಬ ಕಾರಿಗೆ ಸೇರಿಕೊಳ್ಳುತ್ತಾನೆ. ಕಾಕತಾಳೀಯವೆನ್ನುವಂತೆ ಆ ಕಾರು ಪೊಲೀಸರಿಗೂ, ದುರುಳರಿಗೂ ಬೇಕಾಗಿರುತ್ತದೆ. ಅದು ಏಕೆ, ಹೇಗೆ ಅನ್ನೋದೇ ಈ ಚಿತ್ರ. ಚಿತ್ರದಲ್ಲಿ ರೋಮ್ಯಾನ್ಸ್ ಇಲ್ಲದಿದ್ದರೂ, ಸಸ್ಪೆನ್ಸ್ ಮತ್ತು ಥ್ರಿಲ್ಲರ್ ಕಥಾ ಹಂದರವನ್ನು ಹೊಂದಿದ್ದು, ಪ್ರೇಕ್ಷಕರಿಗೆ ಮೆಚ್ಚುಗೆ ಆಗಲಿದೆ ನಿರ್ಮಾಪಕಿ ಸುಮನ್ ನಗರ್‌ಕರ್ ಹೇಳಿದ್ದಾರೆ.

ಇನ್ನಷ್ಟು ಓದಿರಿ

Scroll to Top