ಕನ್ನಡ ಚಿತ್ರರಂಗದಲ್ಲಿ ಭರವಸೆ ಮೂಡಿಸಿ, ಒಂದರ ಹಿಂದೆ ಒಂದು ಸಿನಿಮಾಗಳಲ್ಲಿ ನಟಿಸುತ್ತಿರುವ ಹುಡುಗಿ ನಿಶ್ವಿಕಾ ನಾಯ್ಡು. ಸದ್ಯ ಇದೇ ವಾರ ತೆರೆಗೆ ಬರುತ್ತಿರುವ ಜಂಟಲ್ ಮನ್ ಚಿತ್ರದಲ್ಲಿ ನಿಶ್ವಿಕಾ ಪ್ರಜ್ವಲ್ ಜೊತೆ ಜೋಡಿಯಾಗಿ ನಟಿಸಿದ್ದಾರೆ. ಈ ಚಿತ್ರದ ಬಗ್ಗೆ ಸ್ವತಃ ನಿಶ್ವಿಕಾ ಮಾತಾಡಿದ್ದಾರೆ…
ಜಂಟಲ್’ಮನ್ ಚಿತ್ರದಲ್ಲಿ ನಿಮ್ಮ ಪಾತ್ರ ಯಾವುದು? ಇದಕ್ಕಾಗಿ ಎಂಥಾ ತಯಾರಿ ಮಾಡಿಕೊಂಡಿದ್ದಿರಿ?
ಜಂಟಲ್’ಮನ್ ಚಿತ್ರದಲ್ಲಿ ನನ್ನ ಪಾತ್ರದ ಹೆಸರು ತಪಸ್ವಿನಿ. ಒಬ್ಬ ಡಯಟಿಷನ್ ಪಾತ್ರ, ಈ ಪಾತ್ರಕ್ಕಾಗಿ ನಾನು ಸ್ವಲ್ಪ ಸಣ್ಣ ಕೂಡ ಆಗಿದ್ದೇನೆ. ಬಹಳ ಡಿಫರೆಂಟ್ ಪಾತ್ರ ನಿರ್ವಹಿಸಿದ್ದೇನೆ. ಈ ಅವಕಾಶ ನೀಡಿದಂತಹ ಗುರು ಅವರಿಗೆ ಥ್ಯಾಂಕ್ಸ್ ಹೇಳಬಯಸುತ್ತೇನೆ. ವಿಮೆನ್ ಎಕ್ಸೆಲ್ ಮಾಫಿಯಾ ವಿಷಯದ ಕುರಿತು ಜನರಿಗೆ ತಿಳಿಸೋ ಪ್ರಯತ್ನ ಮಾಡಿದ್ದಾರೆ ನಿರ್ದೇಶಕ ಜಡೇಶ್ ಅವರು. ನಾನೂ ಸಹ!

ಪ್ರಜ್ವಲ್ ಅವರೊಟ್ಟಿಗೆ ಕೆಲಸ ಮಾಡಿದ ಅನುಭವ ಹೇಗಿತ್ತು?
ಪ್ರಜ್ವಲ್ ಅವರೊಂದಿಗೆ ಪಾತ್ರ ಮಾಡಿದ್ದು ಬಹಳ ಖುಷಿ ಕೊಟ್ಟಿದೆ. ಎಲ್ಲೂ ನನಗೆ ಅನ್’ಕಂಫರ್ಟ್ ಫೀಲ್ ಆಗ್ಲಿಲ್ಲ. ಬಹಳ ಕಾಮ್ ಆಗಿ ನನಗೆ ಆಕ್ಟಿಂಗ್ ಹೇಳಿಕೊಡ್ತಿದ್ರು. ಸಿನಿಮಾದ ಟೈಟಲ್ಲೇ ಹೇಳುವಂತೆ ನಿಜಕ್ಕೂ ಪ್ರಜ್ವಲ್ ಅವರು ಜಂಟಲ್’ಮನ್. ಸಿನಿಮಾದಲ್ಲಿ ಪ್ರಜ್ವಲ್ ಅವರ ಕ್ಯಾರೆಕ್ಟರ್ ತುಂಬಾ ನಿದ್ದೆ ಮಾಡುವಂತದ್ದು, ಆದರೆ ನಿಜವಾಗ್ಲೂ ಅವರು ನಿದ್ದೆ ಬಿಟ್ಟು ಶ್ರಮವಹಿಸಿ ಪಾತ್ರ ಮಾಡಿದ್ದಾರೆ.
ಈ ಚಿತ್ರದಲ್ಲಿ ನಿಮಗೆ ವಿಶೇಷ ಅನ್ನಿಸಿದ್ದರ ಬಗ್ಗೆ ಹೇಳಿ…
ಮಗು ಆರಾಧ್ಯ ತುಂಬಾ ಮುದ್ದಾಗಿ ನಟಿಸಿದ್ದಾಳೆ. ಸೆಟ್ ಅನ್ನೋದನ್ನೇ ಮರೆತು ಬಹಳ ಖುಷಿಯಾಗಿ ಆಟ ಆಡುತ್ತಾ ನಟಿಸಿದ್ದೇವೆ. ಸಿನಿಮಾದಲ್ಲಿ ಫೈಟ್‌ಗಳ ಬಹಳ ಚೆನ್ನಾಗಿ ಮೂಡಿಬಂದಿವೆ.

ಜಂಟಲ್ ಮನ್ ನೋಡುಗರಿಗೆ ಹೇಗೆ ಇಷ್ಟವಾಗಲಿದೆ?
ಗುರು ದೇಶಪಾಂಡೆ ಹಾಗೂ ಜಡೇಶ್ ಇಬ್ಬರೂ ಸಹ ಒಂದು ಸೂಕ್ಷ್ಮ ವಿಚಾರವನ್ನ ಬಹಳ ಅದ್ಭುತವಾಗಿ ನಿರ್ದೇಶಿಸಿ ನಿರ್ಮಿಸಿದ್ದಾರೆ. ಸೋಷಿಯಲ್ ಮೆಸೇಜ್ ನೀಡುವಂತಹ, ಹೆಣ್ಣು ಮಕ್ಕಳಿಗೆ ಎಚ್ಚರಿಗೆ ಮೂಡುವಂತಹ, ಎಲ್ಲರೂ ನೋಡುವಂತಹ ಚಿತ್ರ. ನಾವು ಹೇಳುವಂತಹ ಮೆಸೇಜ್ ಜನಕ್ಕೆ ತಲುಪಬೇಕು ಮತ್ತು ಅದು ಕ್ಲಿಯರ್ ಆಗಿರ್ಬೇಕು ಅವೆರಡೂ ಈ ಸಿನಿಮಾದಲ್ಲಿ ಮಾಡಿದ್ದೇವೆ. ಜನರಿಗೆ ಒಳ್ಳೆ ಮೆಸೇಜ್ ತಲುಪುತ್ತೆ ಅನ್ನೋ ನಂಬಿಕೆ ಇದೆ.
ಈ ಚಿತ್ರದಲ್ಲಿ ಸಂಚಾರಿ ವಿಜಯ್ ಅವರೊಟ್ಟಿಗೆ ಕೂಡಾ ನಟಿಸಿದ್ದೀರ ಅಲ್ವಾ?
ಸಂಚಾರಿ ವಿಜಯ್ ಅವರ ಬಗ್ಗೆ ನಾನು ಹೇಳುವಷ್ಟು ದೊಡ್ಡವಳಲ್ಲ. ಅವರೊಂದಿಗೆ ಪಾತ್ರ ಮಾಡಿರೋದು ಹೆಮ್ಮೆ ಇದೆ.

ಮ್ಯೂಸಿಕ್ ಬಗ್ಗೆ ಹೇಳಿ
ಅಜನೀಶ್ ಲೋಕನಾಥ್ ಅವರು ನನ್ನ ೩ನೇ ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ನಾನು ಎಲ್ಲೇ ಹೋದ್ರೂ ನನ್ನ ಹಾಡುಗಳ ಮೂಲಕ ಜನ ನನ್ನನ್ನ ಗುರುತಿಸುತ್ತಾರೆ. ನನಗೆ ೨ ಹಿಟ್ ಸಾಂಗ್ ನೀಡಿದ್ದಾರೆ ಅಜನೀಶ್ ಅವರು. ಈ ಚಿತ್ರದಲ್ಲಿ ಹಾಡುಗಳು ಬಹಳ ಚೆನ್ನಾಗಿ ಮೂಡಿಬಂದಿದೆ. ಇಡೀ ಟೀಂ ತುಂಬಾ ಕಷ್ಟಪಟ್ಟು – ಇಷ್ಟಪಟ್ಟು ಕೆಲಸ ಮಾಡಿದ್ದೇವೆ. ಇಡೀ ಟೀಂಗೆ ನಾನು ಥ್ಯಾಂಕ್ಸ್ ಹೇಳೊದಕ್ಕೆ ಇಷ್ಟ ಪಡ್ತೀನಿ. ಎಲ್ಲರೂ ಥಿಯೇಟರ್‌ಗೆ ಹೋಗಿ ಕನ್ನಡ ಸಿನಿಮಾ ನೋಡಿ, ಪ್ರೋತ್ಸಾಹ ನೀಡಿ.
ನಿರೂಪಣೆ: ಸುಮ ಜಿ











































