ದಿಗಂತ್ ಶುರು ಮಾಡಿದ ಗೋಲ್ಡ್ ವ್ಯವಹಾರ!

Picture of Cinibuzz

Cinibuzz

Bureau Report

ದೂದ್ ಪೇಡ ಅಂತಲೇ ಫೇಮಸ್ಸಾಗಿ ಬರ್ಫಿ, ಪುಲ್ಲಾವ್ ನಂತಾ ತಿನಿಸುಗಳ ಹೆಸರಿನ ಸಿನಿಮಾಗಳನ್ನು ಮಾಡಿರುವ ಹೀರೋ ದಿಗಂತ್ ಈಗ ಮಾರಿ ಗೋಲ್ಡ್’ನಲ್ಲಿ ನಟಿಸುತ್ತಿದ್ದಾರೆ. ಆದರೆ ಇದು ತಿನ್ನುವ ಬಿಸ್ಕೇಟ್ ಅಲ್ಲ, ಗೋಲ್ಡ್ ಬಿಸ್ಕೇಟಿಗೆ ಸಂಬಂಧಪಟ್ಟ ಸಿನಿಮಾ ಅನ್ನೋದು ನಿರ್ದೇಶಕ ರಾಘವೇಂದ್ರ ನಾಯಕ್ ವಿವರಣೆ.

ಸಡನ್ನಾಗಿ ಗೋಲ್ಡ್ ಬಿಸ್ಕೇಟು ಸಿಕ್ಕಿಬಿಟ್ಟರೆ ಏನೇನಾಗುತ್ತದೆ? ಅನ್ನೋದರ ಸುತ್ತ ಸಸ್ಪೆನ್ಸ್ ಥ್ರಿಲ್ಲರ್, ಕಾಮಿಡಿ, ಲವ್ವು ಹೀಗೆ ಎಲ್ಲವನ್ನೂ ಸೇರಿಸಿ ಮಾರಿ ಗೋಲ್ಡ್ ರೂಪಿಸಲಾಗುತ್ತಿದೆ. ಈ ಚಿತ್ರದ ನಿರ್ದೇಶಕ ರಾಘವೇಂದ್ರ ಎಂ. ನಾಯಕ್ ಸಾಕಷ್ಟು ವರ್ಷಗಳಿಂದ ಚಿತ್ರರಂಗದಲ್ಲಿದ್ದಾರೆ. ನಿರ್ದೇಶನ ವಿಭಾಗದಲ್ಲಿ ಪಳಗಿರುವ ರಾಘವೇಂದ್ರ ಈ ಸಲ ದಿಗಂತ್’ಗೆ ಹೇಳಿಮಾಡಿಸಿದಂತಾ ಕಥೆಯನ್ನು ರೆಡಿಮಾಡಿಕೊಂಡಿದ್ದಾರೆ.

ಸದ್ಯ ಗಾಳಿಪಟ-೨, ಹುಟ್ಟುಹಬ್ಬದ ಶುಭಾಶಯಗಳು ಸಿನಿಮಾಗಳಲ್ಲಿ ನಟಿಸುತ್ತಿರುವ ದಿಗಂತ್ ಈಗ ಮೊದಲಿನಂತೆ ಯಾವ್ಯಾವುದೋ ಸಿನಿಮಾಗಳನ್ನು ಒಪ್ಪಿಕೊಳ್ಳುತ್ತಿಲ್ಲ. ಅಳೆದು ತೂಗಿ ಕಥೆ ತುಂಬಾ ಚೆಂದವಿದ್ದರೆ ಮಾತ್ರ ಓಕೆ ಎನ್ನುತ್ತಿದ್ದಾರೆ. ಈ ನಿಟ್ಟಿನಲ್ಲಿ ಮಾರಿ ಗೋಲ್ಡ್ ವಿಶಿಷ್ಟವಾಗಿ ಮೂಡಿಬರಲಿದೆ.

ಕನ್ನಡ ಚಿತ್ರರಂಗದ ಕ್ರಿಯಾಶೀಲ ಮ್ಯೂಸಿಕ್ ಡೈರೆಕ್ಟರ್ ವೀರ್ ಸಮರ್ಥ ಈ ಚಿತ್ರಕ್ಕೆ ಸಂಗೀತ ಸಂಯೋಜಿಸುತ್ತಿದ್ದಾರೆ. ಕೆ.ಎಸ್. ಚಂದ್ರಶೇಖರ್ ಕ್ಯಾಮೆರಾ ಕೆಲಸ ಮಾಡಲಿದ್ದಾರೆ. ಈ ಹಿಂದೆ ಗುಣವಂತ ಸಿನಿಮಾವನ್ನು ನಿರ್ದೇಶಿಸಿದ್ದ ರಘುವರ್ಧನ್ ಮಾರಿಗೋಲ್ಡ್ ನಿರ್ಮಾಪಕರಾಗಿದ್ದಾರೆ. ಇನ್ನೇನು ಶೂಟಿಂಗ್ ಆರಂಭಿಸುವ ಚಿತ್ರತಂಡ ಬೆಂಗಳೂರು, ಚಿತ್ರದುರ್ಗ, ಶಿವಮೊಗ್ಗ ಮುಂತಾದೆಡೆ ಚಿತ್ರೀಕರಣ ನಡೆಸಲಿದೆ.

ಇನ್ನಷ್ಟು ಓದಿರಿ

Scroll to Top