ನಿರ್ಮಾಪಕನ ಕಣ್ಣೀರು!
ಒಂದು ಸಿನಿಮಾ ಮಾಡೋಕೆ ನಿರ್ಮಾಪಕ ವರ್ಷಗಟ್ಟಲೆ ಓಡಾಡ್ತಾನೆ. ಹಣ ಹಾಕ್ತಾನೆ, ಸಾಲ ಮಾಡ್ತಾನೆ, ಕೆಲವೊಮ್ಮೆ ಆಸ್ತಿ ಕೂಡ ಮಾರ್ತಾನೆ. ಸಿನಿಮಾ ಮುಗೀತು, ರಿಲೀಸ್ ದಿನ ಬಂತು ಅಂದಾಗ ಅವನಿಗೆ ನೆಮ್ಮದಿ ಸಿಗುತ್ತೆ ಅಂದುಕೊಳ್ಳಬೇಡಿ. ಅಸಲಿ ಟೆನ್ಷನ್ ಅಲ್ಲಿಂದಲೇ ಶುರು! ಬೆಳಿಗ್ಗೆ ಥಿಯೇಟರ್ ಮುಂದೆ ನಿಂತು ‘ನನ್ನ ಸಿನಿಮಾ ರಿಲೀಸ್ ಆಯ್ತು’ ಅಂತ ಖುಷಿಪಡುವ ನಿರ್ಮಾಪಕ, ಸಂಜೆ ಹೊತ್ತಿಗೆ ಫೋನ್ ಹಿಡಿದು ಶೋಗಾಗಿ ಪರದಾಡ್ತಿರ್ತಾನೆ. ಯಾವ ಥಿಯೇಟರ್‌ನಲ್ಲಿ ಎಷ್ಟು ಶೋ ಉಳಿಯುತ್ತೆ? ನಾಳೆ ಬುಕ್ಕಿಂಗ್ ಓಪನ್ ಆಗುತ್ತಾ? ಟಿಕೆಟ್ ಮಾರಾಟದ ಲೆಕ್ಕ ಸಿಗುತ್ತಾ? ಪ್ರತಿ ಶುಕ್ರವಾರ ಸಂಜೆ ಹೊತ್ತಿಗೆ ಕೇಳಿಬರುವ ಆ ನಿರ್ಮಾಪಕನ ಅಳು ನಮ್ಮ ಸಂಘ–ಸಂಸ್ಥೆಗಳಿಗೆ ಕೇಳಿಸೋದಿಲ್ವಾ?
ನಿರ್ಮಾಪಕರ ಸಂಘ ಇದೆ. ನಿರ್ದೇಶಕರ ಸಂಘ ಇದೆ. ವಿತರಕರ ಸಂಘ ಇದೆ. ವಾಣಿಜ್ಯ ಮಂಡಳಿ ಇದೆ. ಇನ್ನೂ ಹಲವು ಸಂಘ–ಸಂಸ್ಥೆಗಳಿವೆ. ಸಿನಿಮಾ ರಿಲೀಸ್ ಸಮಯದಲ್ಲಿ ನಿರ್ಮಾಪಕ ಸಂಕಷ್ಟದಲ್ಲಿದ್ದಾಗ ಇವರೆಲ್ಲ ಎಲ್ಲಿರ್ತಾರೆ? ಸಮಸ್ಯೆ ಬಂದರೆ ಯಾರಿಗೆ ಫೋನ್ ಮಾಡಬೇಕು? ಮಾಡಿದರೆ ಯಾರು ಎತ್ತುತ್ತಾರೆ? ಎತ್ತಿದರೂ ಪರಿಹಾರ ಯಾವಾಗ ಸಿಗುತ್ತೆ?
ಇಷ್ಟೆಲ್ಲ ಸಂಘ–ಸಂಸ್ಥೆಗಳು ಮೊದಲು ಮಾಡಬೇಕಾದ ಕೆಲಸ ಏನು ಗೊತ್ತಾ? ಸಿನಿಮಾ ಬಿಡುಗಡೆ ಅಂದರೆ ಏನು, ಅದು ಹೇಗೆ ನಡೆಯುತ್ತೆ ಅನ್ನೋದನ್ನು ನಿರ್ಮಾಪಕನಿಗೆ ತಿಳಿಸೋದು. ವಿತರಕರ ಜೊತೆ ಯಾವ ಒಪ್ಪಂದ ಮಾಡಿಕೊಳ್ಳಬೇಕು? ಥಿಯೇಟರ್ ಹೇಗೆ ನಿಗದಿಯಾಗುತ್ತೆ? ಶೋ ಟೈಮ್ ಯಾರು ತೀರ್ಮಾನಿಸ್ತಾರೆ? ಆನ್‌ಲೈನ್ ಬುಕ್ಕಿಂಗ್ ಯಾವಾಗ ತೆರೆಯುತ್ತೆ? ಪ್ರತಿ ಶೋನ ಕಲೆಕ್ಷನ್ ಲೆಕ್ಕ ಯಾರಿಂದ ಬರುತ್ತೆ? ಶೋ ಕಡಿತವಾದರೆ ಯಾರನ್ನು ಕೇಳಬೇಕು? ಇವುಗಳ ಬಗ್ಗೆ ತಿಂಗಳಿಗೊಮ್ಮೆ ಕಾರ್ಯಾಗಾರ ಮಾಡಬೇಕಿತ್ತು. ಹೊಸ ನಿರ್ಮಾಪಕರನ್ನು ಕೂರಿಸಿಕೊಂಡು ಒಂದೊಂದನ್ನೂ ವಿವರಿಸಬೇಕಿತ್ತು. ಆದರೆ ಅಂಥ ಕೆಲಸಗಳೇ ಕಾಣಿಸದೇ ಎಷ್ಟೋ ವರ್ಷಗಳಾಯ್ತು ಅನ್ಸುತ್ತೆ. ಸಂಘ–ಸಂಸ್ಥೆಗಳು ಕುಂಭಕರ್ಣನ ನಿದ್ದೆಗೆ ಜಾರಿದ್ವಾ?
ಮೊನ್ನೆ ವಾಣಿಜ್ಯ ಮಂಡಳಿಯಲ್ಲಿ ಇನ್ಮುಂದೆ ಸಿನಿಮಾಗಳನ್ನು ಪರ್ಸೆಂಟೇಜ್ ಆಧಾರದಲ್ಲಿ ಬಿಡುಗಡೆ ಮಾಡೋ ವಿಚಾರವಾಗಿ ಪತ್ರಿಕಾಗೋಷ್ಠಿ ಆಯ್ತು. ಬಾಡಿಗೆ ಹಣದ ಹೊರೆ ತಪ್ಪಬಹುದು ಅನ್ನೋ ನಿರೀಕ್ಷೆ ನಿರ್ಮಾಪಕರಿಗಿದೆ. ಆದರೆ ಸಣ್ಣ ಕನ್ನಡ ಸಿನಿಮಾ ನಿರ್ಮಾಪಕನ ಪ್ರಶ್ನೆ ಬೇರೆ ಇದೆ: ಪರ್ಸೆಂಟೇಜ್‌ನಲ್ಲಿ ರಿಲೀಸ್ ಅಂದರೆ ನಮ್ಮ ಸಿನಿಮಾಗೆ ಥಿಯೇಟರ್ ಕೊಡ್ತಾರಾ? ಕೊಟ್ಟರೂ ಜನ ಬರೋ ಸಮಯದಲ್ಲಿ ಶೋ ಕೊಡ್ತಾರಾ?
ಪ್ರತಿ ವಾರ ಯಾವುದಾದರೂ ಭಾಷೆಯ ದೊಡ್ಡ ಸ್ಟಾರ್ ಸಿನಿಮಾ ಇದ್ದೇ ಇರುತ್ತೆ. ಪ್ರದರ್ಶಕರಿಗೆ ಕೊನೆಗೆ ಕಲೆಕ್ಷನ್ ಆಗಬೇಕು. ಅದು ಯಾವ ಭಾಷೆಯ ಸಿನಿಮಾ ಅನ್ನೋದಕ್ಕಿಂತ ಯಾವ ಸಿನಿಮಾಗೆ ಜನ ಬರ್ತಾರೆ ಅನ್ನೋದನ್ನೇ ಅವರು ನೋಡಬಹುದು. ಹಾಗಿದ್ದಾಗ ಸಣ್ಣ ಕನ್ನಡ ಸಿನಿಮಾಗೆ ಪ್ರದರ್ಶನದ ಅವಕಾಶ ಹೇಗೆ ಸಿಗುತ್ತೆ? ಬೆಳಗಿನ ಒಂದು ಶೋ ಕೊಟ್ಟು, ‘ಅವಕಾಶ ಕೊಟ್ಟಿದ್ದೀವಿ’ ಅಂದರೆ ಸಾಕಾ? ಜನರಿಗೆ ಸಿನಿಮಾ ಇಷ್ಟವಾಗಿದೆ ಅನ್ನೋ ಮಾತು ಹರಡೋ ಮುಂಚೆಯೇ ಶೋ ತೆಗೆದರೆ, ಆ ಚಿತ್ರ ಬದುಕೋದು ಹೇಗೆ?
ಈ ಪ್ರಶ್ನೆಗಳಿಗೆ ಪತ್ರಿಕಾಗೋಷ್ಠಿಯಲ್ಲಿ ಹೇಳಿದ ಘೋಷಣೆ ಮಾತ್ರ ಉತ್ತರ ಆಗಲ್ಲ. ನಿರ್ಮಾಪಕ, ವಿತರಕ, ಪ್ರದರ್ಶಕರ ನಡುವೆ ಸ್ಪಷ್ಟವಾದ ಒಪ್ಪಂದ ಬೇಕು. ಯಾವ ಥಿಯೇಟರ್‌ನಲ್ಲಿ ಯಾವ ಸಮಯದ ಶೋ ಸಿಗುತ್ತೆ, ಪ್ರದರ್ಶನ ಎಷ್ಟು ದಿನ ಮುಂದುವರಿಯುತ್ತೆ, ಪ್ರತಿ ಶೋನ ಟಿಕೆಟ್ ಮಾರಾಟದ ಲೆಕ್ಕ ಯಾವಾಗ ಬರುತ್ತೆ, ಹಣದ ಪಾವತಿ ಹೇಗೆ ಆಗುತ್ತೆ—ಇವೆಲ್ಲ ಮೊದಲೇ ನಿರ್ಮಾಪಕನಿಗೆ ಗೊತ್ತಿರಬೇಕು. ಸಮಸ್ಯೆ ಬಂದರೆ ಅದೇ ದಿನ ಮಾತನಾಡಿ ಬಗೆಹರಿಸುವವರು ಇರಬೇಕು.
ಹೋಗಲಿ, ಇತ್ತೀಚೆಗೆ ಈ ಸಂಘ–ಸಂಸ್ಥೆಗಳು ನಿರ್ಮಾಪಕರಿಗಾಗಿ ಮಾಡಿದ್ದ ಕೆಲಸವಾದರೂ ಏನು? ಯಾರಿಗಾದರೂ ಗೊತ್ತಾ? ಕೆಲಸ ಮಾಡಿದ್ದರೆ ಸದಸ್ಯರ ಮುಂದೆ ವಿವರ ಇಡಲಿ. ಎಷ್ಟು ನಿರ್ಮಾಪಕರ ಬಿಡುಗಡೆ ಸಮಸ್ಯೆ ಬಗೆಹರಿಸಿದರು? ಎಷ್ಟು ಸಣ್ಣ ಸಿನಿಮಾಗಳಿಗೆ ನ್ಯಾಯವಾದ ಶೋ ಸಿಗುವಂತೆ ಮಾತಾಡಿದರು? ಎಷ್ಟು ಜನರಿಗೆ ರಿಲೀಸ್ ಪ್ರಕ್ರಿಯೆ ಅರ್ಥ ಮಾಡಿಕೊಟ್ಟರು?
ಚುನಾವಣೆ ಬಂದಾಗ ಮಾತ್ರ ಸಡಗರ ಕಾಣುತ್ತೆ. ಹತ್ತಾರು ಪಾರ್ಟಿ, ಸಭೆ, ಫೋನ್ ಕಾಲ್, ಮತ ಕೇಳೋ ಓಡಾಟ! ಗೆದ್ದ ಮೇಲೆ ಮತ್ತೆ ಅದೇ ಮುಖಗಳು ಒಂದಲ್ಲೊಂದು ಸಂಘದಲ್ಲಿ ಕೂತಿರುತ್ತವೆ. “ಈ ಸಲ ನಾನು, ಮುಂದಿನ ಸಲ ನೀನು” ಅನ್ನೋ ಹಾಗೆ ಹುದ್ದೆಗಳು ಬದಲಾಗ್ತಾ ಹೋದರೆ ನಿರ್ಮಾಪಕನ ಕಷ್ಟ ಬದಲಾಗುತ್ತಾ? ಅಲ್ಲಿ ಕೂತಿರುವವರಿಗೆ ಇವತ್ತಿನ ಸಿನಿಮಾ ಬಿಡುಗಡೆ ಹೇಗೆ ನಡೆಯುತ್ತೆ ಅನ್ನೋದು ನಿಜವಾಗಿಯೂ ಗೊತ್ತಾ?
ಸಂಘಗಳಿಗೆ ದೊಡ್ಡ ಕೆಲಸದಿಂದಲೇ ಶುರು ಮಾಡಬೇಕೆಂದಿಲ್ಲ. ತಿಂಗಳಿಗೊಂದು ಕಾರ್ಯಾಗಾರ ಮಾಡಿ. ರಿಲೀಸ್ ಆಗುವ ಸಿನಿಮಾಗಳ ನಿರ್ಮಾಪಕರಿಗೆ ಪ್ರಕ್ರಿಯೆ ವಿವರಿಸಿ. ಪ್ರತಿ ಶುಕ್ರವಾರ ಅವರ ಸಮಸ್ಯೆ ಕೇಳೋಕೆ ಒಬ್ಬ ಜವಾಬ್ದಾರಿಯುತ ವ್ಯಕ್ತಿಯನ್ನು ನೇಮಿಸಿ. ಪರ್ಸೆಂಟೇಜ್ ಪದ್ಧತಿಯಲ್ಲಿ ಸಣ್ಣ ಕನ್ನಡ ಸಿನಿಮಾಗೆ ಥಿಯೇಟರ್ ಮತ್ತು ಶೋ ಹೇಗೆ ಸಿಗುತ್ತೆ ಅನ್ನೋದಕ್ಕೆ ಸ್ಪಷ್ಟ ಉತ್ತರ ಕೊಡಿ.
ಶುಕ್ರವಾರ ಬೆಳಿಗ್ಗೆ ಸಿನಿಮಾ ಬಿಡುಗಡೆ ಮಾಡಿದ ನಿರ್ಮಾಪಕ ಸಂಜೆ ಹೊತ್ತಿಗೆ ಒಬ್ಬನೇ ಕುಳಿತು ಅಳುವ ಪರಿಸ್ಥಿತಿ ಬರಬಾರದು. ಅವರ ಜೊತೆ ನಿಲ್ಲಬೇಕಾದ ಸಂಘ–ಸಂಸ್ಥೆಗಳಿಗೆ ಆ ಅಳು ಕೇಳಿಸಬೇಕು. ಕೇಳಿಸಿದ ಮೇಲೆ ಕೆಲಸವೂ ಆಗಬೇಕು. ಸಿನಿಮಾ ಬಿಡುಗಡೆಯ ದಿನವೇ ನಿರ್ಮಾಪಕನ ಜೊತೆ ನಿಲ್ಲದ ಸಂಘ, ಮತ್ತೆ ಯಾವ ದಿನ ನಿಲ್ಲುತ್ತೆ?












































