ಸ್ಯಾಂಡಲ್ವುಡ್ನಲ್ಲಿ ಈಗಾಗಲೇ ಪ್ಲಾಸ್ಟಿಕ್ ಹಾವಳಿ, ಅರಣ್ಯ ನಾಶ, ಜಲ ಹಾಗೂ ವಾಯು ಮಾಲಿನ್ಯದಂತಹ ಪರಿಸರ ಕಾಳಜಿಯ ಹತ್ತಾರು ಸಿನಿಮಾಗಳು ಬಂದು ಹೋಗಿವೆ. ಆದರೆ, ಯಾರೂ ಅಷ್ಟಾಗಿ ಗಮನಹರಿಸದ, ಆದರೆ ದಿನೇ ದಿನೇ ಭೂಮಿಗೆ ಮಾರಕವಾಗುತ್ತಿರುವ ‘ಗಾಜಿನ’ ಬಳಕೆ ಮತ್ತು ಅದರ ದುಷ್ಪರಿಣಾಮಗಳ ಸುತ್ತ ಹೆಣೆದಿರುವ ಹೊಸ ಪ್ರಯತ್ನವೇ ‘ಗಾಜು’. ಕೆಲ ವರ್ಷಗಳ ಹಿಂದೆ ಕಿರುಚಿತ್ರವಾಗಿ ಬಿಡುಗಡೆಯಾಗಿ ಸಿನಿಪ್ರಿಯರ ಮೆಚ್ಚುಗೆ ಗಳಿಸಿದ್ದ ಈ ಕಥೆ, ಇದೀಗ ಪೂರ್ಣ ಪ್ರಮಾಣದ ಸಿನಿಮಾವಾಗಿ ಹಿರಿತೆರೆಗೆ ಬರಲು ಸಜ್ಜಾಗಿದೆ. ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ಮೂಲದ ಸಾಮಾಜಿಕ ಹೋರಾಟಗಾರರಾದ ಡಾ. ಸಿ. ಎನ್. ಮಂಜುನಾಥ್ (ದಂಡೋರ ಮಂಜಣ್ಣ) ಅವರು ಸಮಾಜಕ್ಕೆ ಒಂದೊಳ್ಳೆ ಸಂದೇಶ ನೀಡುವ ಉದ್ದೇಶದಿಂದ ಈ ಚಿತ್ರಕ್ಕೆ ಬಂಡವಾಳ ಹೂಡಿ ನಿರ್ಮಿಸಿದ್ದಾರೆ. ವೆಂಕಟೇಶ್ ಗಿರಿಕ್ಷೇತ್ರ ಅವರು ಕಥೆ, ಚಿತ್ರಕಥೆ, ಸಾಹಿತ್ಯ ಹಾಗೂ ಸಂಭಾಷಣೆ ಬರೆದು ನಿರ್ದೇಶನದ ಜವಾಬ್ದಾರಿ ಹೊತ್ತಿದ್ದಾರೆ.

ಬಹುತೇಕ ಪೋಸ್ಟ್ ಪ್ರೊಡಕ್ಷನ್ ಕೆಲಸಗಳನ್ನು ಮುಗಿಸಿ ಬಿಡುಗಡೆಗೆ ಸಜ್ಜಾಗಿರುವ ‘ಗಾಜು’ ಚಿತ್ರದ ಟ್ರೇಲರ್ ಇತ್ತೀಚೆಗಷ್ಟೇ ಅದ್ಧೂರಿಯಾಗಿ ಅನಾವರಣಗೊಂಡಿತು. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಮಾಜಿ ಅಧ್ಯಕ್ಷ ಭಾ. ಮ. ಹರೀಶ್ ಅವರು ಟ್ರೇಲರ್ ಬಿಡುಗಡೆ ಮಾಡಿ, ಹೊಸಬರ ಈ ವಿಭಿನ್ನ ಪ್ರಯತ್ನಕ್ಕೆ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಮಾತನಾಡಿದ ನಿರ್ಮಾಪಕ ಡಾ. ಸಿ. ಎನ್. ಮಂಜುನಾಥ್, “ನಾವು ಮೂಲತಃ ರೈತಾಪಿ ಹಿನ್ನೆಲೆಯಿಂದ ಬಂದವರು. ಪರಿಸರದ ಮೇಲಿನ ಪ್ರೀತಿ ಹಾಗೂ ಸಾಮಾಜಿಕ ಕಳಕಳಿಯಿಂದ ಈ ಸಿನಿಮಾ ನಿರ್ಮಿಸಿದ್ದೇವೆ. ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿರುವ ಗಾಜಿನ ಬಳಕೆ ಮತ್ತು ಅದರಿಂದಾಗುತ್ತಿರುವ ಅನಾಹುತಗಳನ್ನು ಮನಮುಟ್ಟುವಂತೆ ತೋರಿಸಿದ್ದೇವೆ. ಎಲ್ಲಾ ವರ್ಗದ ಪ್ರೇಕ್ಷಕರಿಗೂ ಈ ಚಿತ್ರ ಖಂಡಿತ ಇಷ್ಟವಾಗಲಿದೆ” ಎಂಬ ಭರವಸೆ ವ್ಯಕ್ತಪಡಿಸಿದರು.
ಚಿತ್ರದ ಆಶಯದ ಬಗ್ಗೆ ವಿವರಿಸಿದ ನಿರ್ದೇಶಕ ವೆಂಕಟೇಶ್ ಗಿರಿಕ್ಷೇತ್ರ, “ಬಳಸಿದ ಗಾಜಿನ ಉತ್ಪನ್ನಗಳ ಸಮರ್ಥ ವಿಲೇವಾರಿ ಮತ್ತು ಮರುಬಳಕೆ ಸರಿಯಾಗಿ ಆಗುತ್ತಿಲ್ಲ. ಇದರಿಂದಾಗಿ ಗಾಜು ಪರಿಸರಕ್ಕೆ ಹಾಗೂ ಮೂಕ ಪ್ರಾಣಿ-ಪಕ್ಷಿ ಸಂಕುಲಕ್ಕೆ ದೊಡ್ಡ ಕಂಟಕವಾಗಿ ಪರಿಣಮಿಸುತ್ತಿದೆ. ಇದೇ ಗಂಭೀರ ವಿಷಯವನ್ನು ಗ್ರಾಮೀಣ ಸೊಗಡಿನ ಕಥೆಯೊಂದಿಗೆ ತೆರೆಮೇಲೆ ತಂದಿದ್ದೇವೆ. ವಿಶೇಷವೆಂದರೆ, ಬೇಲೂರು ಮತ್ತು ಚನ್ನರಾಯಪಟ್ಟಣದ ಸುತ್ತಮುತ್ತಲಿನ ಹಳ್ಳಿಗಳಲ್ಲಿ, ಅಲ್ಲಿನ ಸ್ಥಳೀಯ ಗ್ರಾಮೀಣ ಪ್ರತಿಭೆಗಳನ್ನೇ ಬಳಸಿಕೊಂಡು ಈ ಚಿತ್ರವನ್ನು ಚಿತ್ರೀಕರಿಸಿದ್ದೇವೆ. ನಮ್ಮ ಈ ಪ್ರಯತ್ನಕ್ಕೆ ಎಲ್ಲೆಡೆಯಿಂದ ಮೆಚ್ಚುಗೆ ವ್ಯಕ್ತವಾಗುತ್ತಿದ್ದು, ಅತಿ ಶೀಘ್ರದಲ್ಲೇ ಚಿತ್ರವನ್ನು ತೆರೆಗೆ ತರಲಿದ್ದೇವೆ” ಎಂದರು.
ಸದ್ಯ ಬಿಡುಗಡೆಯಾಗಿರುವ ಟ್ರೇಲರ್ ನೋಡಿದರೆ, ಎಲ್ಲೆಂದರಲ್ಲಿ ಗಾಜುಗಳನ್ನು ಒಡೆಯುವುದರಿಂದ ಪರಿಸರಕ್ಕೆ, ಜನಸಾಮಾನ್ಯರಿಗೆ ಮತ್ತು ಪ್ರಾಣಿ-ಪಕ್ಷಿಗಳಿಗೆ ಎಷ್ಟೆಲ್ಲಾ ತೊಂದರೆಯಾಗುತ್ತದೆ ಎಂಬುದನ್ನು ಕಣ್ಣಿಗೆ ಕಟ್ಟುವಂತೆ ತೋರಿಸಲಾಗಿದೆ. ಎಲ್ಲಕ್ಕಿಂತ ಮುಖ್ಯವಾಗಿ, ಈ ಗಾಜಿನ ಬಳಕೆಯ ವಿರುದ್ಧ ಪುಟ್ಟ ಬಾಲಕನೊಬ್ಬ ಸಿಡಿದೇಳುವ ಪರಿ ಮತ್ತು ಆ ಹುಡುಗನ ಹೋರಾಟದಿಂದ ಸಮಾಜದಲ್ಲಿ ಏನೆಲ್ಲಾ ಬದಲಾವಣೆಗಳಾಗುತ್ತವೆ ಎಂಬ ಕುತೂಹಲಕಾರಿ ಎಳೆ ಟ್ರೇಲರ್ನಲ್ಲಿ ಗಮನ ಸೆಳೆಯುತ್ತಿದೆ.
ಚಿತ್ರದ ತಾರಾಗಣದಲ್ಲಿ ಹಿರಿಯ ನಟರಾದ ರಾಮಕೃಷ್ಣ, ಬಲರಾಜವಾಡಿ ಅವರೊಂದಿಗೆ ಮಾಸ್ಟರ್ ವಿಸ್ಮಯ್ ವೆಂಕಟೇಶ್, ಅಪ್ಪಣ್ಣ ರಾಮದುರ್ಗ, ವಾಣಿ, ಮಿಲ್ಟ್ರಿ ಮಂಜು, ಸಂತೋಷ್ ಮೊದಲಾದವರು ಪ್ರಮುಖ ಪಾತ್ರಗಳಿಗೆ ಜೀವ ತುಂಬಿದ್ದಾರೆ. ತಾಂತ್ರಿಕವಾಗಿಯೂ ಚಿತ್ರ ಶ್ರೀಮಂತವಾಗಿದ್ದು, ನಾಗೇಂದ್ರ ರಂಗಾರಿ ಅವರ ಛಾಯಾಗ್ರಹಣ, ಸೂರ್ಯೋದಯ ಅವರ ಸಂಕಲನ ಚಿತ್ರಕ್ಕಿದೆ. ರಿತ್ವಿಕ್ ಮುರಳೀಧರ್ ಅವರ ಸಂಗೀತ ಹಾಗೂ ಮಸ್ತಾನ್ ಅವರ ನೃತ್ಯ ನಿರ್ದೇಶನ ಚಿತ್ರದ ಮೆರುಗನ್ನು ಹೆಚ್ಚಿಸಿದೆ. ಒಟ್ಟಿನಲ್ಲಿ, ವಿಭಿನ್ನ ಕಥಾಹಂದರದ ಮೂಲಕ ಸಿನಿಪ್ರಿಯರ ಕುತೂಹಲ ಕೆರಳಿಸಿರುವ ‘ಗಾಜು’, ಬೆಳ್ಳಿತೆರೆಯ ಮೇಲೆ ಯಾವ ರೀತಿ ಮೋಡಿ ಮಾಡಲಿದೆ ಎಂಬುದನ್ನು ಕಾದು ನೋಡಬೇಕಿದೆ.












































