ಕಳೆದ ಐದು ವರ್ಷಗಳಿಂದ ಮೈಸೂರನ್ನು ಕೇಂದ್ರವಾಗಿರಿಸಿಕೊಂಡು ಸಿನಿಮಾ ಕ್ಷೇತ್ರದಲ್ಲಿ ನಿರಂತರವಾಗಿ ಸಕ್ರಿಯವಾಗಿರುವ ‘ಮೈಸೂರು ಸಿನಿಮಾ ಸೊಸೈಟಿ’, ಇದೀಗ ರಾಜಧಾನಿ ಬೆಂಗಳೂರಿನಲ್ಲಿ ಸಿನಿಮಾ ಪ್ರೇಮಿಗಳಿಗೆ ಹಬ್ಬದ ವಾತಾವರಣ ಸೃಷ್ಟಿಸಿತ್ತು. ಇದೇ 2026ರ ನವೆಂಬರ್ 21 ಮತ್ತು 22ರಂದು ಬೆಂಗಳೂರಿನ ಎಫ್.ಕೆ.ಸಿ.ಸಿ.ಐ (FKCCI) ಆವರಣದಲ್ಲಿರುವ ‘ಸರ್.ಎಂ. ವಿಶ್ವೇಶ್ವರಯ್ಯ ಆಡಿಟೋರಿಯಂ’ನಲ್ಲಿ ‘ಗಂಧದಗುಡಿ ಸಿನಿಹಬ್ಬ’ ಎಂಬ ಹೆಸರಿನಲ್ಲಿ ಎರಡು ದಿನಗಳ ಅದ್ಧೂರಿ ಕಿರುಚಿತ್ರೋತ್ಸವವನ್ನು ಯಶಸ್ವಿಯಾಗಿ ಆಯೋಜಿಸಲಾಗಿತ್ತು. ಕನ್ನಡ ಚಿತ್ರರಂಗದ ‘ರೋರಿಂಗ್ ಸ್ಟಾರ್’ ಶ್ರೀಮುರಳಿ, ನಟಿ ಕಾರುಣ್ಯಾ ರಾಮ್, ಹಿರಿಯ ನಟ ಶ್ರೀನಿವಾಸ ಮೂರ್ತಿ ಸೇರಿದಂತೆ ಹಲವು ತಾರೆಯರು ಮತ್ತು ಗಣ್ಯರು ಸೇರಿ ಈ ಸಿನಿಹಬ್ಬಕ್ಕೆ ಚಾಲನೆ ನೀಡಿದರು.

ಎರಡು ದಿನಗಳ ಕಾಲ ನಡೆದ ಈ ಚಿತ್ರೋತ್ಸವದಲ್ಲಿ, ಅಂತಿಮ ಹಂತಕ್ಕೆ ಆಯ್ಕೆಯಾಗಿದ್ದ ಸುಮಾರು 30ಕ್ಕೂ ಹೆಚ್ಚು ವಿಭಿನ್ನ ಬಗೆಯ ಕಿರುಚಿತ್ರಗಳು ಪ್ರದರ್ಶನಗೊಂಡು ಸಿನಿಪ್ರಿಯರ ಮನಗೆದ್ದವು. ಸಮಾರೋಪ ಸಮಾರಂಭದಲ್ಲಿ ತೀರ್ಪುಗಾರರ ಆಯ್ಕೆಯಂತೆ ಸುಮಾರು 12 ವಿಭಾಗಗಳಲ್ಲಿ ಅತ್ಯುತ್ತಮ ಸಾಧನೆ ಮಾಡಿದ ಕಿರುಚಿತ್ರಗಳಿಗೆ ಪ್ರಶಸ್ತಿ ಪ್ರದಾನ ಮಾಡಿ ಪ್ರೋತ್ಸಾಹಿಸಲಾಯಿತು. ಇದೇ ವೇದಿಕೆಯಲ್ಲಿ ಕನ್ನಡ ಚಿತ್ರರಂಗಕ್ಕೆ ಅಪಾರ ಕೊಡುಗೆ ನೀಡಿದ ಹಿರಿಯ ನಟಿ ಶ್ರೀಮತಿ ಸುಧಾರಾಣಿ ಅವರಿಗೆ ‘ಜೀವಮಾನದ ಸಾಧನೆ’ ಪ್ರಶಸ್ತಿ ನೀಡಿ ಗೌರವಿಸಿದ್ದು ಇಡೀ ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿತ್ತು. ಸಮಾರೋಪ ಸಮಾರಂಭಕ್ಕೆ ಮಾಜಿ ಡಿಸಿಎಂ ಡಾ. ಸಿ. ಎನ್. ಅಶ್ವಥ ನಾರಾಯಣ್, ಖ್ಯಾತ ನಿರ್ದೇಶಕರಾದ ಪ್ರವೀಣ್ ಕೃಪಾಕರ್, ನಂದಕಿಶೋರ್, ಚೇತನ್ ಕುಮಾರ್, ಮಯೂರ್ ರಾಘವೇಂದ್ರ, ನಟಿಯರಾದ ಹರಿಣಿ ಶ್ರೀಕಾಂತ್, ಐಶ್ವರ್ಯಾ ನಾಗ್, ರೆಮೋಲಾ, ಸಂಗೀತ ನಿರ್ದೇಶಕ ಅನೂಪ್ ಸೀಳಿನ್ ಹಾಗೂ ‘ಮೈಸೂರು ಸಿನಿಮಾ ಸೊಸೈಟಿ’ ಅಧ್ಯಕ್ಷ ಚೇತನ್ ಸೇರಿದಂತೆ ಸಿನಿಮಾ ಮತ್ತು ರಾಜಕೀಯ ರಂಗದ ಗಣ್ಯರ ದಂಡೇ ಹರಿದುಬಂದಿತ್ತು.
ಕಾರ್ಯಕ್ರಮದಲ್ಲಿ ಮಾತನಾಡಿದ ಮಾಜಿ ಡಿಸಿಎಂ ಡಾ. ಸಿ. ಎನ್. ಅಶ್ವಥ ನಾರಾಯಣ್ ಅವರು, “ಸಿನಿಮಾ ಎಂಬುದು ಸಮಾಜ ಮತ್ತು ಜನರ ಮನಸ್ಸಿನ ಮೇಲೆ ತೀವ್ರ ಪರಿಣಾಮ ಬೀರುವ ಅತ್ಯಂತ ಪ್ರಭಾವಶಾಲಿ ಮಾಧ್ಯಮ. ನಮ್ಮಲ್ಲಿ ಚಿತ್ರರಂಗವನ್ನು ಮತ್ತಷ್ಟು ವಿಸ್ತರಿಸಲು ವಿಪುಲ ಅವಕಾಶಗಳಿವೆ. ನಮ್ಮ ನೆಲದ ಸಂಸ್ಕೃತಿ, ಜನಪದ ಮತ್ತು ಸಾಹಿತ್ಯವನ್ನು ಇಡೀ ವಿಶ್ವಕ್ಕೆ ಸಿನಿಮಾ ಮೂಲಕ ತಲುಪಿಸಬಹುದು. ‘ಮೈಸೂರು ಸಿನಿಮಾ ಸೊಸೈಟಿ’ ಇಂತಹ ಪರಿಣಾಮಕಾರಿ ಮಾಧ್ಯಮವನ್ನು ಬಳಸಿಕೊಂಡು ಸಮಾಜಮುಖಿ ಕೆಲಸಗಳನ್ನು ಮಾಡಲು ಹೊರಟಿರುವುದು ನಿಜಕ್ಕೂ ಶ್ಲಾಘನೀಯ” ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
‘ಜೀವಮಾನ ಸಾಧನೆ ಪ್ರಶಸ್ತಿ’ ಸ್ವೀಕರಿಸಿ ಭಾವುಕರಾಗಿ ಮಾತನಾಡಿದ ಹಿರಿಯ ನಟಿ ಸುಧಾರಾಣಿ, “ಮೈಸೂರು ಮತ್ತು ಸಿನಿಮಾ ಈ ಎರಡಕ್ಕೂ ಮೊದಲಿನಿಂದಲೂ ಒಂದು ಅವಿನಾಭಾವ ಹಾಗೂ ನಿಕಟ ಸಂಬಂಧವಿದೆ. ಅಂತಹ ‘ಮೈಸೂರು ಸಿನಿಮಾ ಸೊಸೈಟಿ’ ಮೂಲಕ ಇಂಥದ್ದೊಂದು ದೊಡ್ಡ ಗೌರವ ಸಿಗುತ್ತಿರುವುದಕ್ಕೆ ತುಂಬಾ ಖುಷಿಯಾಗುತ್ತಿದೆ. ನಾನು ಬಣ್ಣ ಹಚ್ಚಿದ ಪ್ರತಿಯೊಂದು ಪಾತ್ರವೂ ನನಗೆ ಜೀವ ತುಂಬಿದೆ, ನನ್ನ ಜೀವನಕ್ಕೆ ಹೊಸ ಅಧ್ಯಾಯವನ್ನು ಕೊಟ್ಟಿದೆ. ಬಾಲನಟಿಯಾಗಿ ಚಿತ್ರರಂಗಕ್ಕೆ ಬಂದು ನಲವತ್ತು ವರ್ಷಗಳೇ ಕಳೆದರೂ, ಪ್ರೇಕ್ಷಕರಿಂದ ಸಿಗುತ್ತಿರುವ ಪ್ರೀತಿ, ಅಭಿಮಾನ ದಿನೇ ದಿನೇ ಹೆಚ್ಚಾಗುತ್ತಲೇ ಇದೆ. ಅದಕ್ಕೆ ನಾನು ಯಾವಾಗಲೂ ಚಿರಋಣಿ. ಈ ಪ್ರೀತಿಯನ್ನು ಉಳಿಸಿ, ಕಾಪಾಡಿಕೊಂಡು ಹೋಗಬೇಕಾದ ದೊಡ್ಡ ಜವಾಬ್ದಾರಿ ನಮ್ಮ ಮೇಲಿದೆ” ಎಂದರು.
ಇದೇ ವೇಳೆ ಮಾತನಾಡಿದ ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ದೇಶಕ ಪ್ರವೀಣ್ ಕೃಪಾಕರ್, “ಸಮಾಜದ ಆರೋಗ್ಯಕರ ಬೆಳವಣಿಗೆಗೆ ಸಿನಿಮಾ ಸೊಸೈಟಿಗಳು ಪೂರಕವಾಗಿ ಕೆಲಸ ಮಾಡುತ್ತಿವೆ. ಇಂತಹ ಸೊಸೈಟಿಗಳಿಂದ ಸದಭಿರುಚಿಯ ಪ್ರೇಕ್ಷಕ ವರ್ಗ ಸೃಷ್ಟಿಯಾಗುತ್ತಿರುವುದು ಅತ್ಯಂತ ಸಕಾರಾತ್ಮಕ ಬೆಳವಣಿಗೆ. ಹೊಸಬರ ಕಿರುಚಿತ್ರಗಳನ್ನು ಗುರುತಿಸಿ, ಅವುಗಳಿಗೆ ಸೂಕ್ತ ವೇದಿಕೆ ಕಲ್ಪಿಸಿಕೊಡುತ್ತಿರುವ ‘ಮೈಸೂರು ಸಿನಿಮಾ ಸೊಸೈಟಿ’ಯ ಕಾರ್ಯ ನಿಜಕ್ಕೂ ಪ್ರಶಂಸನೀಯ. ಕನ್ನಡ ಚಿತ್ರಗಳನ್ನು ಮತ್ತು ಸದಭಿರುಚಿಯ ಪ್ರೇಕ್ಷಕರನ್ನು ಬೆಳೆಸುವ ನಿಟ್ಟಿನಲ್ಲಿ ಇಂತಹ ಸಂಸ್ಥೆಗಳ ಅಗತ್ಯ ಬಹಳಷ್ಟಿದೆ. ಇಂಥ ವೇದಿಕೆಗಳ ಮೂಲಕ ನೂರಾರು ಹೊಸ ಕಲಾವಿದರು ಹಾಗೂ ತಂತ್ರಜ್ಞರಿಗೆ ಮನ್ನಣೆ ಮತ್ತು ಮಾನ್ಯತೆ ಸಿಗುತ್ತಿದೆ. ನಾವೆಲ್ಲರೂ ಈ ವೇದಿಕೆಯನ್ನು ಸಮರ್ಥವಾಗಿ ಬಳಸಿಕೊಳ್ಳಬೇಕಿದೆ. ಕೇವಲ ಸಿನಿಮಾಕ್ಕಾಗಿಯೇ ಮೀಸಲಾಗಿರುವ ಈ ಸಂಸ್ಥೆಯ ಕಾರ್ಯಕ್ರಮಗಳು ಹೀಗೆಯೇ ನಿರಂತರವಾಗಿ ನಡೆಯಲಿ” ಎಂದು ಹಾರೈಸಿದರು. ಒಟ್ಟಿನಲ್ಲಿ, ಹೊಸ ಪ್ರತಿಭೆಗಳಿಗೆ ವೇದಿಕೆಯಾಗಿ, ಹಿರಿಯರಿಗೆ ಗೌರವ ಸಲ್ಲಿಸುವ ಮೂಲಕ ‘ಗಂಧದಗುಡಿ ಸಿನಿಹಬ್ಬ’ ಸಿನಿಪ್ರಿಯರ ಮನದಲ್ಲಿ ಅಚ್ಚಳಿಯದೆ ಉಳಿಯಿತು.












































