ಗೋಲ್ಡನ್ ಸ್ಟಾರ್ ಗಣೇಶ್ ಈಗ ಚೌಕಿದಾರ

Picture of Cinibuzz

Cinibuzz

Bureau Report

ರಥಾವರ, ತಾರಕಾಸುರದಂಥ ಭಿನ್ನ ನೆಲೆಗಟ್ಟಿನ ಸಿನಿಮಾಗಳನ್ನು ಕನ್ನಡ ಚಿತ್ರರಂಗಕ್ಕೆ ಕೊಟ್ಟವರು ನಿರ್ದೇಶಕ ಚಂದ್ರಶೇಖರ ಬಂಡಿಯಪ್ಪ. ಯಾರೂ ಮುಟ್ಟದ ಕಥಾವಸ್ತುಗಳನ್ನು ಆಯ್ದುಕೊಳ್ಳೋದು ಚಂದ್ರಶೇಖರ್ ಸ್ಪೆಷಾಲಿಟಿ.  ರಥಾವರದಲ್ಲಿ ಮಂಗಳಮುಖಿಯರ ಸಮುದಾಯದ ರೋಚಕ ಒಳಗುಟ್ಟುಗಳನ್ನು ಕಣ್ಣಿಗೆ ಕಟ್ಟುವಂತೆ ಕಟ್ಟಿಕೊಟ್ಟವರು ಚಂದ್ರಶೇಖರ್. ಆ ನಂತರ ತಾರಕಾಸುರದಲ್ಲಿ ಹಾಲಕ್ಕಿ ಜನಾಂಗವನ್ನು ಟಚ್ ಮಾಡಿದ್ದರು. ಈಗ ಬಂಡಿಯಪ್ಪ ಮತ್ತೊಂದು ಸಿನಿಮಾಗೆ ತಯಾರಿ ನಡೆಸುತ್ತಿದ್ದಾರೆ.

ಈ ಬಾರಿ ಹೆಚ್ಚು ಪ್ರಚಲಿತದಲ್ಲಿರುವ `ಚೌಕಿದಾರ’ ಪದವನ್ನು ತಮ್ಮ ಸಿನಿಮಾದ ಶೀರ್ಷಿಕೆಯನ್ನಾಗಿಸಿಕೊಂಡಿದ್ದಾರೆ. ಚೌಕಿದಾರನಾಗಿ ಗೋಲ್ಡನ್ ಸ್ಟಾರ್ ಗಣೇಶ್ ನಟಿಸುತ್ತಿದ್ದಾರೆ. ಚಂದ್ರಶೇಖರ್ ಬಂಡಿಯಪ್ಪ ಮತ್ತು ಗಣೇಶ್ ಕಾಂಬಿನೇಷನ್ನು ಅಂದಕೂಡಲೇ ಈ ಬಾರಿ ಯಾವ ಸಬ್ಜೆಕ್ಟನ್ನು ಕೈಗೆತ್ತಿಕೊಂಡಿದ್ದಾರೆ ಅನ್ನೋ ಪ್ರಶ್ನೆ ಹುಟ್ಟೋದು ಸಹಜ. ಅದೂ ಪ್ರತೀ ಚಿತ್ರಕ್ಕೂ ಏನಾದರೊಂದು ಮ್ಯಾಜಿಕ್ ಮಾಡುವ ಚಂದ್ರಶೇಖರ್ `ಚೌಕಿದಾರ’ನಿಗಾಗಿಯೂ ಹೊಸತೇನನ್ನೋ ಆಲೋಚಿಸಿದ್ದಾರೆ. ಗೋಲ್ಡ್ ಗಣಿ ಈವರೆಗೂ ಕಾಣಿಸಿಕೊಳ್ಳದ ವಿಶೇಷ ಪಾತ್ರವನ್ನು ಇಲ್ಲಿ ನಿಭಾಯಿಸಲಿದ್ದಾರೆ. ಐವತ್ತೈದು ವರ್ಷದ ಹಿರಿಯನಾಗಿ ಗಣೇಶ್ ಇಲ್ಲಿ ಬಣ್ಣ ಹಚ್ಚಲಿದ್ದಾರೆ.

ಗಣೇಶ್ ಹೀರೋ ಆಗಿ ಅದಾಗಲೇ ಹತ್ತನ್ನೆರಡು ವರ್ಷಗಳು ಕಳೆದುಹೋದವು. ಲವರ್ ಬಾಯ್ ಇಮೇಜಿನಿಂದ ಹೊರಬರಲು ಗಣೇಶ್ ಈವರೆಗೂ ಸಾಕಷ್ಟು ಪ್ರಯತ್ನವನ್ನೂ ಮಾಡಿದ್ದಾರೆ. ಸರಿಸುಮಾರು ಇಪ್ಪತ್ತು ವರ್ಷಗಳಿಂದ ಟೀವಿ, ಸಿನಿಮಾ ಅಂತಾ ಬಣ್ಣದ ಬದುಕಿನಲ್ಲಿರುವ ಗಣೇಶ್ ಇವತ್ತಿಗೆ ಅನುಭವೀ ನಟ.  ಲವ್ವು, ರೊಮ್ಯಾನ್ಸುಗಳೆಲ್ಲಾ ಗಣೇಶ್ ಪಾಲಿಗೆ ಅಕ್ಷರಶಃ ಹಳತಾಗಿವೆ. ದೊಡ್ಡ ಮಟ್ಟದ ಗೆಲುವು, ಕೈತುಂಬಾ ಅವಕಾಶ, ಅಂದುಕೊಂಡಿದ್ದಕ್ಕಿಂತಾ ಒಂದು ಹಿಡಿ ಹೆಚ್ಚೆನ್ನುವಷ್ಟು ವರಮಾನ. ಹೆಂಡತಿ, ಮಕ್ಕಳು, ಆಸ್ತಿ… ಹೀಗೆ ಸಂತೃಪ್ತ ಜೀವನಕ್ಕೆ ಬೇಕಾದ ಎಲ್ಲವೂ ಗೋಲ್ಡನ್ ಸ್ಟಾರ್‍ಗೆ ದಕ್ಕಿದೆ. ಇವೆಲ್ಲವೂ ಆದ ನಂತರ ಒಬ್ಬ ಕಲಾವಿದ ಬಯಸೋದು “ಭಿನ್ನ ಬಗೆಯ ಪಾತ್ರಗಳಲ್ಲಿ ಕಾಣಿಸಿಕೊಳ್ಳಬೇಕು.  ಮಾಡಿದಂಥವೇ ಪಾತ್ರಗಳನ್ನು ರಿಪೀಟ್ ಮಾಡಬಾರದು. ತನ್ನನ್ನು ಆರಾಧಿಸುವ ಅಭಿಮಾನಿಗಳನ್ನೂ ತೃಪ್ತಗೊಳಿಸಬೇಕು’’ ಎಂಬುದಾಗಿ. ಈ ನಿಟ್ಟಿನಲ್ಲಿ ನೋಡಹೋದರೆ ಗಣೇಶ್ ಅಭಿನಯದಲ್ಲಿ ತಯಾರಾಗುತ್ತಿರುವ ಗಿಮಿಕ್ ಮತ್ತು ಗೀತಾ ಸಿನಿಮಾಗಳ ಕುರಿತಾಗಿ ಬೇರೆಯದ್ದೇ ನಿರೀಕ್ಷೆಗಳಿವೆ. ಈ ನಡುವೆ ಚಂದ್ರಶೇಖರ ಬಂಡೀಯಪ್ಪ ಗಣೇಶ್ ಅವರನ್ನು `ಚೌಕಿದಾರ’ನಾಗಿ ತೆರೆಗೆ ತರಲು ತಯಾರಿ ನಡೆಸುತ್ತಿದ್ದಾರೆ. ಈ ಇಬ್ಬರ ಕಾಂಬಿನೇಷನ್ ಹೊಸ ಸೃಷ್ಟಿಗೆ ಕಾರಣವಾಗಲಿ…

 

ಇನ್ನಷ್ಟು ಓದಿರಿ

Scroll to Top