ಸರಿಯಾಗಿ ಹತ್ತುವರ್ಷದ ಹಿಂದೆ… ಅಂದರೆ ೨೦೦೯ರಲ್ಲಿ ಅಂಬಾರಿ ಎನ್ನುವ ಸಿನಿಮಾವೊಂದು ತೆರೆಗೆ ಬಂದಿತ್ತು. ನೆತ್ತಿಗೆ ಮುತ್ತಿಕ್ಕುವಂತಾ ಮುದ್ದಾದ ಹಾಡುಗಳು, ಕಣ್ಣಿಗೆ ತಂಪೆರೆಯುವಂಥಾ ದೃಶ್ಯವೈಭವ, ಆ ವರೆಗೆ ಯಾರೂ ಮುಟ್ಟಿರದ ಕಥಾವಸ್ತು… ಹೀಗೆ ಹತ್ತು ಹಲವು ಕಾರಣಗಳಿಗಾಗಿ ‘ಅಂಬಾರಿ’ ಪ್ರೇಕ್ಷಕರನ್ನು ಸೆಳೆದಿತ್ತು. ಮೊದಲ ಸಿನಿಮಾಗೇ ಅಷ್ಟು ಚೆಂದದ ಪ್ರಾಡಕ್ಟನ್ನು ಸೃಷ್ಟಿಸಿದ್ದ ನಿರ್ದೇಶಕ ಎ.ಪಿ. ಅರ್ಜುನ್ ಅವರಿಗೆ ಆಗ ಬರೀ ಇಪ್ಪತ್ಮೂರು ವರ್ಷ ವಯಸ್ಸು!

ಆರಂಭದ ಅಂಬಾರಿಯಲ್ಲೇ ಗೆದ್ದು ಕೈ ಬೀಸಿದ ಅರ್ಜುನ್ ನಂತರ ಅದ್ಧೂರಿ, ರಾಟೆ ಮತ್ತು ಐರಾವತ ಸಿನಿಮಾಗಳನ್ನು ನಿರ್ದೇಶಿಸಿದರು. ಸದ್ಯ ಅರ್ಜುನ್ ನಿರ್ದೇಶನ ಐದನೇ ಸಿನಿಮಾ ಕಿಸ್ ತೆರೆಗೆ ಬರಲು ತಯಾರಾಗಿ ನಿಂತಿದೆ. ಇದೇ ತಿಂಗಳ ಇಪ್ಪತ್ತೇಳನೇ ತಾರೀಖು ಜಗತ್ತಿನಾದ್ಯಂತ ಕಿಸ್ ರಿಲೀಸಾಗುತ್ತಿದೆ. ತೀರಾ ಸಣ್ಣ ವಯಸ್ಸಿಗೇ ಸ್ಟಾರ್‌ಗಳನ್ನು ಹುಟ್ಟುಹಾಕಿದ, ಸೂಪರ್ ಸ್ಟಾರ್ ನಟನ ಸಿನಿಮಾ ನಿರ್ದೇಶಿಸಿದ ಮತ್ತು ಅದರ ಜೊತೆ ಜೊತೆಗೇ ತಾನೂ ಬೆಳೆದ ಕೀರ್ತಿ ಅರ್ಜುನ್ ಅವರದ್ದು. ಈಗ ಕಿಸ್ ಮೂಲಕ ‘ಎ.ಪಿ. ಅರ್ಜುನ್ ಫಿಲಂಸ್’ ನಿರ್ಮಾಣ ಸಂಸ್ಥೆಯನ್ನೂ ಆರಂಭಿಸಿದ್ದಾರೆ.

ಹತ್ತು ವರ್ಷಗಳಲ್ಲಿ ಇಷ್ಟೆಲ್ಲಾ ಸಾಧನೆ ಮಾಡಿರುವ ಅರ್ಜುನ್’ಗೆ ಈಗ ವಯಸ್ಸು ಮೂವತ್ಮೂರು. ‘ಬೇಗ ಮದುವೆಯಾಗು’ ಅಂತಾ ಮನೆಯಲ್ಲಿ ಪೀಡಿಸುತ್ತಿದ್ದಾರಂತೆ. ಕಳೆದ ಮೂರು ವರ್ಷಗಳಿಂದ ‘ಕಿಸ್’ನಲ್ಲೇ ಮುಳುಗಿರುವುದರಿಂದ ಮದುವೆಯತ್ತ ಗಮನ ಕೊಡಲು ಸಾಧ್ಯವಾಗಿರಲಿಲ್ಲವಂತೆ. ‘ಈ ಚಿತ್ರ ತೆರೆಗೆ ಬಂದು, ‘ಕಿಸ್’ ಕೆಲಸ ಮುಗಿಯಿತು ಅನ್ನುತ್ತಿದ್ದಂತೇ ಮೊದಲು ಮದುವೆಯಾಗಿಬಿಡ್ತೀನಿ’ ಅಂತಾ ಸ್ವತಃ ಎ.ಪಿ. ಅರ್ಜುನ್ ಘೋಷಿಸಿದ್ದಾರೆ.

ಕಿಸ್ ಹೆಸರು ಅರ್ಜುನ್ ಅವರ ಗೆಲುವಿನ ಖಾತೆಗೆ ಜಮೆಯಾಗಲಿ. ಮನೆಯವರ ಬಯಕೆಯಂತೆ ಮದುವೆಯಾಗಿ, ಮಡದಿಯೂ ಜೊತೆಯಾಗಲಿ..!











































