ಪರ್ಸನಲ್ ಲೈಫು ಯಾವತ್ತು ಪರ್ಸನಲ್ ಆಗಿರಬೇಕು: ದೀಪಿಕಾ ಪಡುಕೋಣೆ

Picture of Cinibuzz

Cinibuzz

Bureau Report

ವಯಸ್ಸಿಗೆ ಬಂದ ಹುಡುಗನಿಗೇ ಆಗಲಿ, ಹುಡುಗಿಗೇ ಆಗಲಿ ಮದುವೆಯಾಗುವವರೆಗೂ ಇನ್ನೂ ಮದುವೆ ಆಗಿಲ್ವಾ ಅನ್ನೋ ರಿಲೇಟಿವ್ಸ್ ನ ವಯ್ಯಾರದ ಪ್ರಶ್ನೆ ಮಂಡೆ ಬಿಸಿಯಾಗುವಂತೆ ಮಾಡುತ್ತದೆ. ಅಷ್ಟಕ್ಕೆ ಬಿಡದೇ ಮದುವೆಯಾದ ಮೂರೇ ತಿಂಗಳಿಗೆ ಏನಾದ್ರೂ ಸಂತೋಷದ ವಿಚಾರ ಅನ್ನುತ್ತಾ ಅದಾಗಲೇ ಮಗುವಿನ ಕುರಿತಾಗಿ ಕೇಳಲು ಶುರುಮಾಡಿರುತ್ತಾರೆ. ಈಗೀಗ ಇದು ಕಾಮನ್ನು ಕೂಡ. ಇದು ಸಾಮಾನ್ಯರ ಸಂಗತಿಯಾದರೆ, ಇನ್ನೂ ಸೆಲೆಬ್ರೆಟಿಗಳ ವಿಚಾರವಂತೂ ಹೇಳತೀರದು. ಇಂತಹ ಇರುಸು ಮುರುಸಿನ ಪ್ರಶ್ನೆಗಳನ್ನು ಸೆಲೆಬ್ರೆಟಿಗಳಿಗೆ ಮಾಧ್ಯಮ ಮಿತ್ರರು ಪಬ್ಲಿಕ್ಕಿನಲ್ಲಿ ಕೇಳಿ ಕೆಂಡಕಾರುವಂತೆ, ತಲೆ ತಗ್ಗಿಸುವಂತೆ ಸಿಟ್ಟೆದ್ದರೆ ರೇಗಾಡುವಂತೆ ಮಾಡುತ್ತಲೇ ಇರುತ್ತಾರೆ. ಇದರಿಂದ ಯಾವ ಸೆಲೆಬ್ರೆಟಿಗಳು ಹೊರತಾಗಿಲ್ಲ.

ಇತ್ತೀಚಿಗೆ ಕಾನ್‌ ಅಂತರಾಷ್ಟ್ರೀಯ ಚಿತ್ರೋತ್ಸವದಲ್ಲಿ ಗಿಳಿಹಸಿರಿನ ಉದ್ದನೆಯ ಉಡುಪು ತೊಟ್ಟು ಮಿಂಚಿದ್ದ ದೀಪಿಕಾಳ ಚಿತ್ರವನ್ನು ತುಸು ಮಾರ್ಪಡಿಸಿ ರಣವೀರ್ ತಮ್ಮ ಇನ್‌ಸ್ಟಾಗ್ರಾಂನಲ್ಲಿ ಹಾಕಿದ್ದೇ ತಡ, ಪ‍ರಿಚಿತರು ಸೇರಿದಂತೆ ಅಭಿಮಾನಿಗಳು ಸಾಲುಸಾಲಾಗಿ ಏನಾದ್ರೂ ಸಿಹಿ ಸುದ್ದಿಯಾ! ಎಂದು ಕೇಳಲು ಶುರುವಿಟ್ಟುಕೊಂಡಿದ್ದರು.  ಒಬ್ಬ ಅಭಿಮಾನಿಯಂತೂ ದೀಪಿಕಾ ಗರ್ಭಿಣಿಯಾಗಿದ್ದಾರೆ. ಈ ಒಂಬತ್ತು ತಿಂಗಳು ನಮ್ಮ ದೀಪಿಕಾಳನ್ನು ಚೆನ್ನಾಗಿ ನೋಡಿಕೊಳ್ಳಿ ಎಂದೂ ರಣವೀರ್‌ಗೆ ತಾನೇ ಚೆಕಪ್ ಮಾಡಿ ರಿಪೋರ್ಟ್ ಕೊಟ್ಟವನಂತೆ ಸಲಹೆ ನೀಡಿದ್ದ. ಮದುವೆಯಾದಾಗಿನಿಂದಲೂ ಇಂತಹ ಗಾಳಿಸುದ್ದಿಗಳಿಗೆ ಬೇಸತ್ತಿರುವ ಡಿಪ್ಪಿ ಕಡೆಗೂ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.

ನನ್ನ ಜೀವನದಲ್ಲಿ ಇತರ ಹೆಣ್ಣುಮಕ್ಕಳಂತೆ ಯಾವತ್ತಾದರೂ ಒಂದು ದಿನ ತಾಯ್ತನವನ್ನು ಅನುಭವಿಸುವುದು ಖಚಿತ. ಆದರೆ, ತಾಯ್ತನದ ನೆಪದಲ್ಲಿ ಹೆಣ್ಣಿಗೆ ಪದೇ ಪದೇ ಇಂಥಹ ಇರುಸು ಮುರುಸಿನ ಪ್ರಶ್ನೆಗಳನ್ನು ಕೇಳುವುದು ಸರಿಯಲ್ಲ. ಮುಖ್ಯವಾಗಿ ದಂಪತಿಗಳ ಮೇಲೆ ಈ ವಿಷಯದ ಕುರಿತಾಗಿ ಒತ್ತಡ ಹೇರುವುದು ತರವಲ್ಲ. ಯಾವತ್ತು ಜನರು ಮಹಿಳೆಗೆ ಗರ್ಭಿಣಿಯಾಗುವುದು ಮತ್ತು ತಾಯ್ತನಕ್ಕೆ ಸಂಬಂಧಿಸಿದಂತೆ ವಿಷಯಗಳ ಕುರಿತಾಗಿ ಪ್ರಶ್ನಿಸುವುದನ್ನು ಬಿಡುತ್ತಾರೋ ಅಂದು ಸಮಾಜದಲ್ಲಿ ಬದಲಾವಣೆಯಾಗುತ್ತದೆ’ ಪರ್ಸನಲ್ ಲೈಫು ಯಾವತ್ತು ಪರ್ಸನಲ್ ಆಗಿರಬೇಕೆಂಬ ಸಾಮಾನ್ಯ ಜ್ಞಾನ ನಮ್ಮವರಿಗೆ ಇಲ್ಲದೇ ಹೋಗಿರುವುದು ದುರಂತ ಎಂದು ದೀಪಿಕಾ ಪಡುಕೋಣೆ ವಿಷಾದ ವ್ಯಕ್ತಪಡಿಸಿದ್ದಾರೆ.

ಇನ್ನಷ್ಟು ಓದಿರಿ

Scroll to Top