ಯಶ್ ತಾಯಿಯ ಮೇಲೆ ಪೊಲೀಸ್ ಎಫ್ ಐ ಆರ್!

Picture of Cinibuzz

Cinibuzz

Bureau Report

ಕೆಜಿಎಫ್ ಸಿನಿಮಾದ ಮೂಲಕ ಇಡೀ ಭಾರತವೇ ಒಮ್ಮೆ ಕನ್ನಡದ ಇಂಡಸ್ಟ್ರಿಯ ಕಡೆ ತಿರುಗಿ ನೋಡುವಂತೆ ಮಾಡಿದವರು ರಾಕಿಂಗ್ ಸ್ಟಾರ್ ಯಶ್. ಈ ಮಧ್ಯೆ ಅವರ ಕೆಲ ಇಲ್ಲಸಲ್ಲದ ತಕರಾರು ಆ ಎಲ್ಲ ಹೆಗ್ಗಳಿಕೆಗೆ ಮಸಿ ಬಳಿಯುವಂತಾಗಿದೆ. ಅಲ್ಲದೇ ತೀರಾ ಕೆಳಮಟ್ಟಕ್ಕೆ ಅಭಿಮಾನಿಗಳು ಥಿಂಕ್ ಮಾಡುವಂತಾಗಿದೆ.

ಇತ್ತೀಚಿಗೆ ಕೋರ್ಟ್ ತೀರ್ಪಿನ ಅನ್ವಯ ಯಶ್ ಬನಶಂಕರಿಯಲ್ಲಿದ್ದ ಬಾಡಿಗೆ ಮನೆಯನ್ನು ಕೊಡಬೇಕಿದ್ದ ಬಾಡಿಗೆಯ ಜತೆಗೆ ಓನರ್ ಗೆ ರವಾನಿಸಿದ್ದಾರೆಂಬ ಸುದ್ದಿ ಹರಡಿಕೊಂಡಿತ್ತು. ರಾಕಿಂಗ್ ಸ್ಟಾರ್ ಅಭಿಮಾನಿಗಳು ಇನ್ನಾದರೂ ಬಾಡಿಗೆ ವಿವಾದ ಮುಗಿಯಿತೆಂದು ನಿಟ್ಟುಸಿರು ಬಿಡುವಷ್ಟರಲ್ಲಿ ಮತ್ತೆ ಯಶ್ ಮನೆಯವರೇ ಹೊಸ ಕಿರಿಕ್ ಮಾಡಿ ಖಾಲಿ ಮಾಡಿಕೊಂಡು ಹೋಗುವಾಗ ಬಳುವಳಿ ಎಂಬಂತೆ ಮನೆಯನ್ನು ಅಲ್ಲಲ್ಲಿ ಧ್ವಂಸ ಮಾಡಿ ಹೋಗಿರುವ ಸುದ್ದಿಯೂ ಹೊರಬಿದ್ದಿತ್ತು.

ಮನೆ ಖಾಲಿ ಮಾಡುವ ಸಮಯದಲ್ಲಿ ಮನೆಯ ವಸ್ತುಗಳ ಮೇಲೆ ಹಾನಿ ಮಾಡಿದ್ದಾರೆ ಎಂದು ಮಾಲೀಕರಾದ ಡಾ.ವನಜಾ ಗಿರಿನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಇದರ ವಿರುದ್ಧ ಐಪಿಸಿ ಕಲಂ 427 ಅಡಿ ಕೇಸ್‌ ದಾಖಲಾಗಿದ್ದು, ಯಶ್ ತಾಯಿ ವಿರುದ್ಧ ಎಫ್ ಐ ಆರ್ ದಾಖಲಾಗಿದೆ. ಮನೆಯಲ್ಲಿದ್ದ ಇದ್ದ ಲೈಟು, ಬಾಗಿಲು, ಪೂಜಾ ಕೊಠಡಿ, ಫ್ಯಾನ್, ಡೆಕೋರೇಷನ್ ಲ್ಯಾಂಪ್ ಸೇರಿದಂತೆ ಅನೇಕ ವಸ್ತುಗಳನ್ನು ಬಿಚ್ಚಿಕೊಂಡು ಹೋಗಿದ್ದಾರೆ ಎಂದು ಮಾಲೀಕರು ದೂರಿನಲ್ಲಿ ತಿಳಿಸಿದ್ದಾರೆ.

ರಾಕಿಂಗ್ ಸ್ಟಾರ್ ಯಶ್ ಮತ್ತು ಕುಟುಂಬ ಅದೃಷ್ಟದ ಮನೆಯೆಂಬ ಮೋಹಕ್ಕೆ ಬಿದ್ದು, ವ್ಯವದಾನವಿಲ್ಲದೇ, ಮೈ ಮೇಲೆ ಪ್ರಜ್ಞೆಯಿಲ್ಲದೆ ಕಾನೂನು ಉಲ್ಲಂಘನೆಯಾಗಬಹುದಾದ ಕೃತ್ಯಗಳನ್ನೇ ಮಾಡುತ್ತಿರುವುದು ತೀರಾ ಮುಜುಗರದ ಸಂಗತಿ. ಅವಾರ್ಡು, ಫಂಕ್ಷನ್ನು, ಸಿನಿಮಾ ಅಂತ ಓಡಾಡುವುದು ಬಿಟ್ಟು, ಇದ್ಯಾವುದೋ ಕ್ಷುಲ್ಲಕ ಸಂಗತಿಯಿಂದ ಪೊಲೀಸ್ ಠಾಣೆಗೆ ಅಲೆಯುವ ಪರಿಸ್ಥಿತಿಯನ್ನು ರಾಕಿಂಗ್ ಸ್ಟಾರ್ ಬೇಕಂತಲೇ ಕ್ರಿಯೇಟ್ ಮಾಡಿಕೊಳ್ಳುತ್ತಿರುವುದು ಯಾಕೋ? ಇದು ಹೀಗೆಯೇ ಮುಂದುವರೆದರೆ ರಾಕಿಂಗ್ ಸ್ಟಾರ್ ಯಶ್ ಅವರ ಹೆಸರಿಗೆ ಕಳಂಕ ಬಡಿದು ಶನಿ ಹೆಗಲೇರುವುದರಲ್ಲಿ ಸಂಶಯವಿಲ್ಲ.

ಇನ್ನಷ್ಟು ಓದಿರಿ

Scroll to Top